ಆಂಧ್ರಪ್ರದೇಶದಲ್ಲಿ ‘ವ್ಯೂಹಂ’ ಸಿನಿಮಾ ಸದ್ಯ ವಿವಾದಕ್ಕೆ ಸಿಲುಕಿದೆ. ಚಿತ್ರವನ್ನು ನಿರ್ದೇಶನ ಮಾಡಿರುವ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮವೊಂದರ ಚರ್ಚಾ ಕಾರ್ಯಕ್ರಮದಲ್ಲಿ ರಾಮ್ ಗೋಪಾಲ್ ವರ್ಮಾ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, “ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
My interview on Saakshi channel at 1 pm today about CONTRACT KILLERS Sreenivas rao and Tv 5 Sambashiva rao pic.twitter.com/XYOMgGdFLQ
— Ram Gopal Varma (@RGVzoomin) December 28, 2023
ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ, ಆಂಧ್ರದ ಮಾಜಿ ಸಿಎಂ, ದಿವಂಗತ ಜಗನ್ ಮೋಹನ್ ರೆಡ್ಡಿ ಹಾಗೂ ಈಗಿನ ಮುಖ್ಯಮಂತ್ರಿ ಅವರ ಮಗ ಜಗನ್ಮೋಹನ್ ರೆಡ್ಡಿ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಸಿನಿಮಾದಲ್ಲಿ ತೆಲುಗುದೇಶಂ ಪಕ್ಷದ ಮುಖಂಡ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಖಳನಾಯಕನ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ಟಿಡಿಪಿ ಸದಸ್ಯರ ಆರೋಪ. ಈ ಕಾರಣದಿಂದಾಗಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್‌ನಲ್ಲಿ ನಟರಾದ ಪವನ್ ಕಲ್ಯಾಣ್, ಚಿರಂಜೀವಿ ಅವರ ಪಾತ್ರವನ್ನೂ ಕೂಡ ಸೃಷ್ಟಿಸಲಾಗಿದೆ.
ಈ ವಿವಾದದ ಬಗ್ಗೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ್ದ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು, ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು ನೀಡಿದ್ದಾರೆ.
— Ram Gopal Varma (@RGVzoomin) December 27, 2023
ಈ ನಡುವೆ ನಿನ್ನೆ ರಾಮ್ ಗೋಪಾಲ್ ವರ್ಮಾ ಕಚೇರಿಯ ಬಳಿ ಸೇರಿ ಟಿಡಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಹೈದರಾಬಾದ್‌ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿದ್ದ ಕಾರ್ಯಕರ್ತರು, ವ್ಯೂಹಂ ಸಿನಿಮಾದ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.
ಆಂಧ್ರಪ್ರದೇಶ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ಈ ವಿವಾದ ಎಬ್ಬಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಜೈಲಿಗೆ ಹೋಗಿ ಬಂದಿದ್ದ ದೃಶ್ಯವನ್ನೂ ಸೇರಿಸಲಾಗಿದೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದು ಆರೋಪಿಸಿರುವ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದ್ದು ಈ ಚಿತ್ರದ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, “ಈ ರಾಜಕೀಯ ಕಿತ್ತಾಟಗಳು ಏನೇ ಇದ್ದರೂ, ಈ ಸಿನಿಮಾವನ್ನು ತಾವು ಬಿಡುಗಡೆ ಮಾಡಿಯೇ ಮಾಡುತ್ತೇನೆ. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ಜನರು ಎಲ್ಲವನ್ನೂ ತೀರ್ಮಾನ ಮಾಡಲಿ” ಎಂದು ತಿಳಿಸಿದ್ದಾರೆ.
ಡಿ.29ರಂದು ‘ವ್ಯೂಹಂ’ ಸಿನಿಮಾ ಬಿಡುಗಡೆಯಾಗಲಿದೆ. ಈ ನಡುವೆ ಇದಕ್ಕೆ ತಡೆ ಕೋರುವಂತೆ ಆಗ್ರಹಿಸಿ ಟಿಡಿಪಿ ಪಕ್ಷದ ಮುಖಂಡರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.