ಅನ್ನಭಾಗ್ಯ | ಕೇಂದ್ರ ಆಹಾರ ನಿಗಮದ ಇ-ಹರಾಜಿಗೆ ನೀರಸ ಪ್ರತಿಕ್ರಿಯೆ: ಕಾಂಗ್ರೆಸ್‌-ಬಿಜೆಪಿ ನಡುವೆ ವಾಗ್ವಾದ

Date:

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದು, ಐದು ಕೆಜಿ ಅಕ್ಕಿ ಬದಲು ತಲಾ 170 ರೂ. ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಷಯ ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ.

ಅನ್ನಭಾಗ್ಯ ಯೋಜನೆ ಜಾರಿಗೆ ಅಗತ್ಯವಿರುವಷ್ಟು ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೇಂದ್ರ ಆಹಾರ ನಿಗಮವು ನಿರಾಕರಿಸಿತ್ತು. ಈಗ ಇ ಹರಾಜು ಮೂಲಕ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ. ಆದರೆ, ಇ ಹರಾಜಿನಲ್ಲಿ ಅಕ್ಕಿ ಖರೀದಿಸಲು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಅಕ್ಕಿ ವ್ಯರ್ಥವಾದರೂ ಜನರ ಹಸಿವು ನೀಗಿಸಬಾರದೆಂಬುದು ಬಿಜೆಪಿ ಧೋರಣೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌, “ಕರ್ನಾಟಕಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರ ಆಹಾರ ನಿಗಮದ ಹರಾಜು ಪ್ರಕ್ರಿಯೆಯಲ್ಲಿ ಅಕ್ಕಿ ಖರೀದಿಗೆ ಖಾಸಗಿ ಕಂಪೆನಿಗಳು ಆಸಕ್ತಿಯೇ ತೋರುತ್ತಿಲ್ಲ. ನಮ್ಮ ಸರ್ಕಾರ 34 ರೂಪಾಯಿಗಳ ಖರೀದಿ ದರಕ್ಕೆ ಕೇಳಿದರೂ ನಿರಾಕರಿಸಿದ ಕೇಂದ್ರ ಸರ್ಕಾರ ಖಾಸಗಿಯವರಿಗೆ 31 ರೂಪಾಯಿಗಳಿಗೆ ನೀಡಲು ಸಿದ್ಧವಾದರೂ ಖರೀದಿದಾರರು ಮುಂದೆ ಬರುತ್ತಿಲ್ಲ. ಹುಳು ಹಿಡಿದು ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ ಬಿಜೆಪಿಯದ್ದು. ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.

“ಪಡಿತರ ವಿತರಣಾ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್, ಅನ್ನಭಾಗ್ಯ ಜಾರಿಗೆ ತಂದಿದ್ದು ಕಾಂಗ್ರೆಸ್, ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ಬರುವಾಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್‌. ಆದರೆ, ಬಿಜೆಪಿ ನಾಯಕರು “ಮೋದಿ ಅಕ್ಕಿ“ ಎಂದು ಬೊಬ್ಬೆ ಹೊಡೆಯುತ್ತಿರುವುದು ನೋಡಿದರೆ ಮೋದಿಯೇ ತಮ್ಮ ಜಮೀನಿನಲ್ಲಿ ಉತ್ತಿ, ಬಿತ್ತಿ, ಬೆಳೆದು ಅಕ್ಕಿ ತಂದುಕೊಡುತ್ತಿರುವಂತೆ ಭಾಸವಾಗುತ್ತಿದೆ. ಗರೀಬ್ ಕಲ್ಯಾಣ್ ಯೋಜನೆ ಡಿಸೆಂಬರ್ ನಂತರ ಸ್ಥಗಿತಗೊಳ್ಳಲಿದೆ, ಆಗ ಯಾರ ಅಕ್ಕಿ ಎಂದು ಬೊಬ್ಬೆ ಹೊಡೆಯುತ್ತಾರೆ?” ಎಂದು ಲೇವಡಿ ಮಾಡಿದೆ.

ಹೊಟ್ಟೆ ತುಂಬಿದ ಗಿರಾಕಿಗಳಾದ ಬಿಜೆಪಿ ಅವರಿಗೆ ಹಸಿವಿನ ಸಂಕಟ ಗೊತ್ತಿಲ್ಲ

“ಇ-ಹರಾಜು ಮೂಲಕ ಕೇಂದ್ರ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡುತ್ತಿದೆ.‌ ನಾವು ಕೊಡಲು ಒಪ್ಪಿದ ಮೊತ್ತಕ್ಕಿಂತ ಕಡಿಮೆ‌ ಮೊತ್ತದಲ್ಲಿ ಅಕ್ಕಿ ಮಾರಾಟ ಮಾಡಲು ಹರಾಜು ಕರೆದಿದ್ದರೂ ಅಕ್ಕಿಯನ್ನು ಕೇಳುವವರೇ ಗತಿಯಿಲ್ಲ. ಇದರ ಬದಲು ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಬಹುದಿತ್ತು. ಕನಿಷ್ಠ ಪಕ್ಷ ಇದರಿಂದ ರಾಜ್ಯದ ಬಡವರ ಹೊಟ್ಟೆಯಾದರೂ ತುಂಬುತಿತ್ತು” ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಕೇಂದ್ರಕ್ಕೆ ಒಂದು ಕೆಜಿ ಅಕ್ಕಿಗೆ ₹34 ಕೊಡಲು ನಾವು ಒಪ್ಪಿದ್ದೆವು. ಆದರೆ, ನಮಗೆ ಅಕ್ಕಿ‌ ನಿರಾಕರಿಸಿದ ಕೇಂದ್ರ ಸರ್ಕಾರ ಎಫ್‌ಸಿಐ ಮೂಲಕ‌ ಕೆಜಿಗೆ ₹31.75ರ ಬೆಲೆ ನಿಗದಿ ಪಡಿಸಿ ಖಾಸಗಿಯವರಿಗೆ ಮಾರಲು ಇ-ಹರಾಜು ಕರೆದಿದೆ. ಇದು ರಾಜ್ಯ ಬಿಜೆಪಿ ನಾಯಕರ ದೃಷ್ಟಿಯಲ್ಲಿ ದ್ರೋಹ ಎನಿಸುವುದಿಲ್ಲವೇ? ಈ ಬಗ್ಗೆ ಮಾತಾಡಲು ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.

“ಕೇಂದ್ರ ಅಕ್ಕಿ ರಾಜಕೀಯ ಮಾಡಿ ಬಡವರ ಅನ್ನ ಕಸಿದು ಕ್ರೌರ್ಯ ತೋರಿಸಿದೆ. ಕೇಂದ್ರ‌ ಅಕ್ಕಿ ಕೊಡದಿದ್ದರೂ ನಾವು ಬಡವರನ್ನು ಉಪವಾಸ ಕೆಡವುದಿಲ್ಲ.‌ ಈಗಾಗಲೇ ಅಕ್ಕಿಯ ಬದಲು ಹಣ ನೀಡುತ್ತಿದ್ದೇವೆ. ಹೊಟ್ಟೆ ತುಂಬಿದ ಗಿರಾಕಿಗಳಾದ ಬಿಜೆಪಿ ಅವರಿಗೆ ಹಸಿವಿನ ಸಂಕಟ ಗೊತ್ತಿಲ್ಲ. ಇ‌ನ್ನಾದರೂ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸಲಿ” ಎಂದು ಸವಾಲು ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಜೆಟ್‌ನಲ್ಲಿ ಪ್ರಣಾಳಿಕೆಗೆ ಒತ್ತು ನೀಡದೆ ಓಲೈಕೆ ರಾಜಕಾರಣ ಮಾಡಲಾಗಿದೆ: ಬಿಜೆಪಿ ಆರೋಪ

ರಾಜ್ಯದ ರೈತರಿಂದ ಅಕ್ಕಿ ಖರೀದಿಸಿ ಎಂದರೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ; ಬಿಜೆಪಿ ಟೀಕೆ

ಅಕ್ಕಿ ವಿಚಾರವಾಗಿ ಕಾಂಗ್ರೆಸ್‌ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು, “ಗರೀಬ್ ಕಲ್ಯಾಣ್ ಅನ್ನ ಯೋಜನೆ”ಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿ, ಪ್ರತಿಯೊಬ್ಬರಿಗೂ ಉಚಿತವಾಗಿ ಅಕ್ಕಿ ದೊರೆಯುವಂತೆ ಮಾಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಪುಷ್ಟಿ ನೀಡಿತು. ಆದರೆ, ಆ ಅಕ್ಕಿಯನ್ನು ತಮ್ಮದೆಂದು ಲೇಬಲ್ ಹಚ್ಚಿಕೊಂಡಿದ್ದು ಮಾತ್ರ ಸಿದ್ದರಾಮಯ್ಯ ಅವರು ಸರ್ಕಾರ” ಎಂದು ಆರೋಪಿಸಿದೆ.

“ಈ ಚುನಾವಣೆ ಪೂರ್ವದಲ್ಲಿ ಜನತೆಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಸೇರಿ, ಒಟ್ಟು 15 ಕೆಜಿ ಅಕ್ಕಿ ರಾಜ್ಯದ ಜನತೆಗೆ ತಲುಪಬೇಕಾಗಿತ್ತು. ಆದರೆ, ಈಗ ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ ತಲುಪುತ್ತಿದೆ. 10 ಕೆಜಿ ಅಕ್ಕಿ ನೀಡಬೇಕಾಗಿದ್ದ ರಾಜ್ಯ ಸರ್ಕಾರ, ಕೇವಲ ₹170 ನೀಡಿ “ಕೈ” ತೊಳೆದುಕೊಳ್ಳುತ್ತಿದೆ. ಅಂದರೆ, ₹17ಕ್ಕೆ ಕೆಜಿ ಅಕ್ಕಿ, ಖರೀದಿಸುವ ಸಂದಿಗ್ಧ ಸ್ಥಿತಿ ಫಲಾನುಭವಿಗಳದ್ದಾಗಿದೆ. ₹17ಕ್ಕೆ ಕೆಜಿ ಅಕ್ಕಿ ಎಲ್ಲಿ ಸಿಗುತ್ತದೆ ಎಂಬುದನ್ನು ಸಿದ್ದರಾಮಯ್ಯ ಅವರು ಸ್ವಲ್ಪ ರಿಸರ್ಚ್ ಮಾಡಿ ತಿಳಿಸಬೇಕು” ಎಂದು ಬಿಜೆಪಿ ಟೀಕಿಸಿದೆ.

“ಅನ್ನಭಾಗ್ಯದ ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ವರದಿಗಳು ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತಿವೆ. ಆದರೆ, ಅಕ್ಕಿ ಕಳ್ಳಸಾಗಾಣಿಕೆಯನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೇ, ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಣೆಯಲ್ಲಿಯೂ ಸಹ ಸರ್ಕಾರ ಕಮಿಷನ್ ಹೊಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ” ಎಂದು ಆರೋಪಿಸಿದೆ.

“ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅನಾವಶ್ಯಕವಾಗಿ ಬೊಬ್ಬೆ ಹೊಡೆದಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ, ರಾಜ್ಯದಲ್ಲಿಯೇ ರೈತರಿಂದ ಅಕ್ಕಿ ಖರೀದಿಸಿ ಎಂದರೇ ಮೀನಾಮೇಷ ಎಣಿಸಿತ್ತು‌. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿದರೆ, ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಹೊಡೆಯಬಹುದೆಂಬ ದುರಾಲೋಚನೆ ಸಿದ್ದರಾಮಯ್ಯ ಅವರ ಸರ್ಕಾರದ್ದಾಗಿತ್ತು. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವನ್ನು ಬಾಯಿಗೆ ಬಂದಂತೆ ಕಾಂಗ್ರೆಸ್‌ ಟೀಕಿಸುತ್ತಿದೆ” ಎಂದು ಬಿಜೆಪಿ ಕಿಡಿಕಾರಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...

ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ

ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ...