ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?

Date:

Advertisements

ಬಾಬಾ ಬಾಲಕನಾಥ ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ ಉತ್ತರ ಪ್ರದೇಶದಿಂದ ಬಂದು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದುತ್ವದ ಪ್ರತಿಪಾದನೆಯಲ್ಲಿ ಆದಿತ್ಯನಾಥರನ್ನೇ ಮಾದರಿಯನ್ನಾಗಿಟ್ಟುಕೊಂಡಿರುವ ಬಾಲಕನಾಥ, ಬೆಂಕಿಯುಗುಳುವ ಭಾಷಣಗಳಿಗೆ ಖ್ಯಾತಿ ಪಡೆದವರು. ದ್ವೇಷ ಬಿತ್ತುವ ಭಾಷಣಗಳಿಗೆ ಹೆಸರಾದವರು. ಆದಿತ್ಯನಾಥರಂತೆ ಅವರಿಗೂ ಆರ್‌ಎಸ್ಎಸ್‌ ಬೆಂಬಲವಿದೆ. ಹಾಗಾಗಿ ಯೋಗಿ ಬಾಲಕನಾಥ ರಾಜಸ್ಥಾನದ ಮುಖ್ಯಮಂತ್ರಿ ಆದರೂ ಅಚ್ಚರಿಯೇನಿಲ್ಲ.

ಪಂಚರಾಜ್ಯಗಳ ಚುನಾವಣೆಯ ನಂತರ ಕಾಂಗ್ರೆಸ್ ತಾನು ಗೆದ್ದಿದ್ದ ತೆಲಂಗಾಣದಲ್ಲಿ ಮುಖ್ಯಮಂತ್ರಿಯನ್ನಾಗಿ ರೇವಂತ್ ರೆಡ್ಡಿಯನ್ನು ಪ್ರತಿಷ್ಠಾಪಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ರಾಜ್ಯಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ, ಯಾವ ರಾಜ್ಯದಲ್ಲೂ ಇನ್ನೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ. ಮೂರೂ ರಾಜ್ಯಗಳಲ್ಲಿ ಹಲವರ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರ ಪೈಕಿ ‘ರಾಜಸ್ಥಾನ ಯೋಗಿ’ಯೂ ಒಬ್ಬರಾಗಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಸುಂಧರಾ ರಾಜೇ, ದಿಯಾ ಕುಮಾರಿ, ಗಜೇಂದ್ರ ಶೇಖಾವತ್, ಓಂ ಬಿರ್ಲಾ ಮುಂತಾದವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ, ಒಂದು ಮೂಲದ ಪ್ರಕಾರ, ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಅನೂಹ್ಯವಾಗಿ ವರ್ತಿಸುವ ಬಿಜೆಪಿ, ಈ ಬಾರಿ ರಾಜಸ್ಥಾನದಲ್ಲಿ ಯೋಗಿಯೊಬ್ಬರಿಗೆ ಮುಖ್ಯಮಂತ್ರಿ ಪಟ್ಟ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

Advertisements

ಬಿಜೆಪಿ ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಮಾಡಿದೆ. ಆದಿತ್ಯನಾಥರಿಗೂ ರಾಜಸ್ಥಾನದ ಯೋಗಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ಯೋಗಿ ಬಾಲಕನಾಥರಿಗೂ ಹಲವು ಸಾಮ್ಯತೆಗಳಿವೆ. ಇಬ್ಬರೂ ಕಾವಿಧಾರಿಗಳು. ಇಬ್ಬರೂ ನಾಥ ಪಂಥ ಮಠದ ಮಠಾಧಿಪತಿಗಳು. ಇಬ್ಬರೂ ಉಗ್ರ ಹಿಂದುತ್ವದ ಪ್ರತಿಪಾದಕರು. ಎಲ್ಲಕ್ಕಿಂತ ಮುಖ್ಯವಾಗಿ, ಇಬ್ಬರೂ ಸರ್ವ ಸಂಗ ಪರಿತ್ಯಾಗಿಗಳಾಗಿದ್ದೂ ಚುನಾವಣೆಗೆ ನಿಂತು ಗೆದ್ದವರು. ಇಬ್ಬರೂ ಆರ್‌ಎಸ್‌ಎಸ್‌ ಜೊತೆ ಉತ್ತಮ ನಂಟು ಹೊಂದಿದವರು.

ಬಾಲಕನಾಥ

ಬಾಲಕನಾಥ, ರಾಜಸ್ಥಾನದ ಆಲ್ವಾರ್‌ನ ರೈತ ದಂಪತಿ ಸುಭಾಷ್ ಯಾದವ್ ಮತ್ತು ಊರ್ಮಿಳಾ ದೇವಿ ಅವರ ಒಬ್ಬನೇ ಮಗ. ಅವರು ಬಾಬಾ ಮಸ್ತನಾಥ ಡೇರಾದ ಅನುಯಾಯಿಗಳು. ತಮ್ಮ ಆರನೇ ವಯಸ್ಸಿಗೇ ಮನೆ ಬಿಟ್ಟ ಬಾಲಕನಾಥ, ಹರಿಯಾಣದ ಮಹೇಂದ್ರಗಢದಲ್ಲಿರುವ ಮಸ್ತ ನಾಥ ಪೀಠದ ಮುಖ್ಯಸ್ಥರಾಗಿದ್ದ ಮಹಂತ ಚಂದ್ರನಾಥರ ಉತ್ತರಾಧಿಕಾರಿಯಾದರು. ಚಂದ್ರನಾಥರ ನಿಧನದ ನಂತರ ಬಾಲಕನಾಥ್ ಮಸ್ತ ನಾಥ ಪೀಠದ ಉಪಮುಖ್ಯಸ್ಥರಾದರು. ಬಾಲಕನಾಥ ಬಾಬಾ ಮಸ್ತ ನಾಥ ಮಠದ ಎಂಟನೇ ಮಹಂತ. 12ನೇ ತರಗತಿ ಓದಿದ್ದರೂ ಬಾಲಕನಾಥ, ಮಸ್ತ ನಾಥ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ. ಮಹಂತ ಚಂದ್ರನಾಥ ಕೂಡ ಆಲ್ವಾರ್‌ನ ಸಂಸದರಾಗಿದ್ದರು. ಅವರ ನಿಧನದ ನಂತರ ಅವರ ಹೆಜ್ಜೆ ಹಾದಿಯಲ್ಲಿಯೇ ಬಾಲಕನಾಥ ಕೂಡ ರಾಜಕೀಯ ಪ್ರವೇಶಿಸಿದ್ದರು. 2019ರಲ್ಲಿ ಬಾಲಕನಾಥ ಆಲ್ವಾರ್ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

39 ವರ್ಷದ ಬಾಬಾ ಬಾಲಕನಾಥ, ಆಲ್ವಾರ್‌ನ ತಿಜಾರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಇಮ್ರಾನ್ ಖಾನ್ ಅವರನ್ನು 6173 ಮತಗಳಿಂದ ಸೋಲಿಸಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಮಾಡಲೆಂದೇ ಅವರನ್ನು ಕಣಕ್ಕಿಳಿಸಲಾಗಿದೆ ಎನ್ನುವ ಮಾತುಗಳೂ ಇವೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಆಗಲಿ, ಬಾಲಕನಾಥರಾಗಲಿ ಅಧಿಕೃತವಾಗಿ ಏನೂ ಹೇಳುತ್ತಿಲ್ಲ.

ಯೋಗಿ ಆದಿತ್ಯನಾಥ್ ತಮ್ಮ 26ನೇ ವಯಸ್ಸಿಗೇ ಸಂಸದರಾಗಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಅವರು 1998ರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲಿಯೇ ಗೆಲುವು ಕಂಡಿದ್ದರು. ನಂತರ 1999, 2004, 2009, 2014ರಲ್ಲಿಯೂ ಲೋಕಸಭೆಗೆ ಆಯ್ಕೆಯಾಗಿದ್ದರು. ಈಗ ಆರು ವರ್ಷಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಬಾಲಕನಾಥರಿಗೆ ಆದಿತ್ಯನಾಥರ ಬಗ್ಗೆ ಅಪಾರ ಅಭಿಮಾನ, ಮೆಚ್ಚುಗೆ. ಯೋಗಿ ಆದಿತ್ಯನಾಥ ತನಗೆ ದೊಡ್ಡಣ್ಣ ಇದ್ದಂತೆ ಎಂದಿರುವ ಬಾಲಕನಾಥ, ಅವರ ‘ಬುಲ್ಡೋಜರ್ ರಾಜ್’ ಅನ್ನು ಮೆಚ್ಚಿ ಮಾತನಾಡಿದ್ದರು. ಮೊನ್ನಿನ ಬಾಲಕನಾಥರ ಚುನಾವಣಾ ಪ್ರಚಾರದ ಬ್ಯಾನರ್‌ಗಳಲ್ಲಿ ಯೋಗಿ ಆದಿತ್ಯನಾಥರ ಫೋಟೋಗಳನ್ನೂ ಅಳವಡಿಸಲಾಗಿತ್ತು. ಯುಪಿಯಲ್ಲಿ ಆದಿತ್ಯನಾಥ ಪವಾಡ ಮಾಡಿದ್ದಾರೆ. ಅದರಂತೆ, ರಾಜಸ್ಥಾನದಲ್ಲೂ ಹಿಂದುಗಳ ರಕ್ಷಣೆಗೆ ಯೋಗಿ ಬಾಲಕನಾಥ ಬೇಕು ಎಂದು ಬಿಜೆಪಿ ಪ್ರಚಾರ ಮಾಡಿತ್ತು.

ಯೋಗಿ ಬಾಲಕನಾಥ

ಬಾಲಕನಾಥರ ತಿಜಾರಾ ಸೇರಿದಂತೆ ರಾಜಸ್ಥಾನ ಮೇವಾತ್‌ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮೇವಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಾಲಕನಾಥರ ತಿಜಾರಾ ಕ್ಷೇತ್ರದಲ್ಲಿ ಮುಸ್ಲಿಮರು ಹಾಗೂ ದಲಿತರ ಮತಗಳೇ ಅಧಿಕ. ನಂತರದ ಸ್ಥಾನದಲ್ಲಿ ಯಾದವರು ಬರುತ್ತಾರೆ. ಬಾಲಕನಾಥರು ಯಾದವ ಸಮುದಾಯದವರಾದ್ದರಿಂದ ಅವರ ಹಿಂಬಾಲಕರು ಯಾದವರ ಮತಗಳು ಗುರುವಿಗೇ ಬರುವಂತೆ ವಿಶೇಷ ಮುತುವರ್ಜಿ ವಹಿಸುತ್ತಾರೆ.

ಬಾಬಾ ಬಾಲಕನಾಥ ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ ಉತ್ತರ ಪ್ರದೇಶದಿಂದ ಬಂದು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದುತ್ವದ ಪ್ರತಿಪಾದನೆಯಲ್ಲಿ ಆದಿತ್ಯನಾಥರನ್ನೇ ಮಾದರಿಯನ್ನಾಗಿಟ್ಟುಕೊಂಡಿರುವ ಬಾಲಕನಾಥ, ಬೆಂಕಿಯುಗುಳುವ ಭಾಷಣಗಳಿಗೆ ಖ್ಯಾತಿ ಪಡೆದವರು. ದ್ವೇಷ ಬಿತ್ತುವ ಭಾಷಣಗಳಿಗೆ ಹೆಸರಾದವರು. ಕಾಂಗ್ರೆಸ್‌ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್, ಮುಸ್ಲಿಮರಿಗೆ ಮಾತ್ರ ಕೆಲಸ ಮಾಡುವವರು. ಅವರದ್ದು ಫತ್ವಾ ಆಡಳಿತ ಎನ್ನುವುದು ಬಾಲಕನಾಥರ ಆಪಾದನೆ. ‘ತಿಜಾರಾದ ಹಿಂದುಗಳು ಸುರಕ್ಷಿತವಾಗಿರಬೇಕು ಎಂದರೆ, ನೀವು ನನಗೆ ಮತ ಹಾಕುವುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಶಾಸಕನಾಗಿ ನಿಮಗೆ ಒಬ್ಬ ಖಾನ್ ಬೇಕೇ ಅಥವಾ ನಿಮ್ಮ ಸೇವೆ ಮಾಡುವ ಸಾಧು ಬೇಕೇ..’ ಇದು ಅವರ ಚುನಾವಣಾ ಭಾಷಣದ ಶೈಲಿ.

ಬಾಲಕನಾಥರಿಗೆ ಗೆಲ್ಲಲು ಯಾದವರ ಜೊತೆಗೆ ದಲಿತರ ಮತಗಳು ಬೇಕೇ ಬೇಕು. ಅದಕ್ಕಾಗಿ ಬಾಲಕನಾಥ ಹಲವು ತಂತ್ರಗಳನ್ನೂ ಹೂಡಿದ್ದರು; ‘ಬಾಬಾಸಾಹೇಬ್ ಅಂಬೇಡ್ಕರ್ ನಂತರ ನಿಮ್ಮ ಸಮುದಾಯದಲ್ಲಿ ಕಾನೂನು ಮಂತ್ರಿ ಆದವರೆಂದರೆ, ಅದು ಅರ್ಜುನ್ ಸಿಂಗ್ ಮೇಘವಾಲ್. ಅವರನ್ನು ಮಂತ್ರಿ ಮಾಡಿದ್ದು ಮೋದಿ..’ ಎನ್ನುವ ಮೂಲಕ ಅವರು ದಲಿತರ ಮತಬುಟ್ಟಿಗೆ ಕೈಹಾಕಿದ್ದರು. ಬಿಜೆಪಿ ರಾಜಸ್ಥಾನದಲ್ಲಿ ಗೆಲ್ಲಲು ಮೋದಿ ಕಾರಣ ಎಂದಿರುವ ಈತ, ಬಾಬಾ ರಾಮ್‌ದೇವ್‌ಗೂ ಆಪ್ತರು.

ಈ ಸುದ್ದಿ ಓದಿದ್ದೀರಾ: ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ

ತಮ್ಮ ಪ್ರತಿ ಭಾಷಣದ ಅಂತ್ಯದಲ್ಲಿ ಅವರು ಜೈಶ್ರೀರಾಮ್, ಬಾಬಾಸಾಹೇಬ್ ಅಮರ್ ರಹೇ, ಭಾರತ್ ಮಾತಾಕಿ ಜೈ ಘೋಷಣೆಗಳನ್ನು ಕೂಗುತ್ತಿದ್ದರು. ಅಭಿವೃದ್ಧಿಯ ಬಗ್ಗೆ ಅವರು ಮಾತನಾಡಿದ್ದು ಅಪರೂಪ.

ಈಗ ಬಾಲಕನಾಥ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮುಖ್ಯಮಂತ್ರಿಯೂ ಆಗುವ ಪ್ರಯತ್ನದಲ್ಲಿದ್ದಾರೆ.
ಆದಿತ್ಯನಾಥರಂತೆ ಅವರಿಗೂ ಆರ್‌ಎಸ್ಎಸ್‌ ಬೆಂಬಲವಿದೆ. ಹಾಗಾಗಿ ಯೋಗಿ ಬಾಲಕನಾಥ ರಾಜಸ್ಥಾನದ ಮುಖ್ಯಮಂತ್ರಿ ಆದರೂ ಅಚ್ಚರಿಯೇನಿಲ್ಲ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

Download Eedina App Android / iOS

X