ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವ ವಿಚಾರದ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ಬಿಜೆಪಿ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಈ ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರು ಪತ್ರ ಅಭಿಯಾನ ಆರಂಭಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂಚೆಯ ಮೂಲಕ ಪತ್ರ ಕಳುಹಿಸಲು ಆರಂಭಿಸಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಉಡುಪಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಶೋಭಾ ಕರಂದ್ಲಾಜೆಯವರನ್ನು ಮೀನುಗಾರ ಮುಖಂಡರಿಂದ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ಆರಂಭಗೊಂಡಿದೆ.
ನೀವು ಕಳೆದ 10 ವರ್ಷಗಳಲ್ಲಿ ಏನು ಮಾಡಿದ್ದೀರಾ? ನಿಮಗೆ ಮತ ಹಾಕಿದ್ದೀವಲ್ವಾ? ನಿಮ್ಮ ಸಾಧನೆ ಏನು?
ಕರಾವಳಿ ಬೈಪಾಸ್ – ಮಲ್ಪೆ ರಾ.ಹೆ. ಕಾಮಗಾರಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೀನುಗಾರ ಮುಖಂಡರು@ShobhaBJP @BJP4Karnataka @INCKarnataka @JanataDal_S @siddaramaiah @CMofKarnataka pic.twitter.com/mg182iXcub
— eedina.com (@eedinanews) February 16, 2024
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೂ ಬಿಜೆಪಿ ಕಾರ್ಯಕರ್ತರು ಪತ್ರ ಬರೆದಿದ್ದಾರೆ. ಎರಡು ಬಾರಿ ಸಂಸದೆಯಾಗಿ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಅವರಿಗೆ ಈ ಬಾರಿ ಟಿಕೆಟ್ ಬೇಡ ಎಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ಪತ್ರಗಳನ್ನು ಕಾರ್ಯಕರ್ತರು ಬರೆದು ಅಂಚೆ ಮೂಲಕ ಕಳುಹಿಸಿದ್ದಾರೆ. ಇದೇ ವೇಳೆ ಉತ್ತಮ ಅಭ್ಯರ್ಥಿ ಅಥವಾ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಪಟ್ಟುಹಿಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಚಾರಕ್ಕೆ ಆಗಮಿಸಿಲ್ಲ ಎಂಬುವುದು ಕಾರ್ಯಕರ್ತರ ಅಸಮಾಧಾನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಗಳೆಲ್ಲ ಕಾಂಗ್ರೆಸ್ ಕೈ ವಶವಾಗಿತ್ತು. ಇದರಿಂದ ಕಾರ್ಯಕರ್ತರು ಶೋಭಾ ವಿರುದ್ಧ ಕಿಡಿಕಾರಿದ್ದರು.
ಈ ನಡುವೆ ಚಿಕ್ಕಮಗಳೂರು ಉಡುಪಿ ಲೋಕಸಭಾ ಟಿಕೆಟ್‌ಗಾಗಿ ಸಿ.ಟಿ ರವಿ ಹಾಗೂ ಶೋಭಾ ಬೆಂಬಲಿಗರ ನಡುವೆ ಬಣ ರಾಜಕೀಯ ಶುರುವಾಗಿದೆ. ಸಿ.ಟಿ ರವಿ ಅವರಿಗೆ ಟಿಕೆಟ್ ನೀಡುವಂತೆ ಮತ್ತೊಂದು ಅಭಿಯಾನವನ್ನು ಆರಂಭಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕ್ಷೇತ್ರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಬಿಜೆಪಿ ಕಾಯಕರ್ತರು ಸಿ ಟಿ ರವಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು.

ಇನ್ನು, ಕೇಂದ್ರ ಸಚಿವೆ ಶೋಭಾ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸಿ ಟಿ ರವಿ, “1995ರ ನಂತರ ಪಕ್ಷದಲ್ಲಿ ನಾನು ಯಾವುದನ್ನೂ ಕೇಳಿ ಪಡೆದಿಲ್ಲ. ಪತ್ರ ಚಳುವಳಿಯ ಮಾಹಿತಿ ನನಗಿಲ್ಲ. ನಮ್ಮ ಪಕ್ಷದ ಟಿಕೆಟ್ ಕೊಡುವ ಮಾನದಂಡ ಬೇರೆಯೇ ಇದೆ. ಈಗಾಗಲೇ ಬಿಜೆಪಿ ವತಿಯಿಂದ ಇಂಟರ್‌ನಲ್ ಮತ್ತು ಎಕ್ಸ್ಟರ್ನಲ್ ಸರ್ವೆ ನಡೆಯುತ್ತಿದೆ. ಹಲವಾರು ಏಜೆನ್ಸಿ ಮೂಲಕ ಸರ್ವೆ ನಡೆಯುತ್ತಿದೆ. ಸರ್ವೆ ವರದಿಯ ಆಧಾರದ ಮೇಲೆ ಟಿಕೆಟ್ ಫೈನಲ್ ಮಾಡಲಾಗುತ್ತದೆ. ಸರ್ವೆ ಬಳಿಕ ಯಾರಿಗೆ ಟಿಕೆಟ್ ಕೊಡಬೇಕೆಂದು ತೀರ್ಮಾನಿಸಲಾಗುತ್ತದೆ. ಆದರೆ ನಾನಂತೂ ಟಿಕೆಟ್ ಆಕಾಂಕ್ಷಿಯಲ್ಲ” ಎಂದು ಹೇಳುವ ಮೂಲಕ ತಮಗೂ ಪತ್ರ ಚಳವಳಿಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
“ನಮ್ಮ ಗುರಿ ಒಂದೇ. ಮತ್ತೆ ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು. ಮೂರನೇ ಬಾರಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಗುರಿ, ಯಾರೇ ಅಭ್ಯರ್ಥಿಯಾದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ” ಎಂದು ಸಿ ಟಿ ರವಿ ತಿಳಿಸಿದ್ದಾರೆ. ತಮ್ಮ ವಿರುದ್ಧದ ಪತ್ರ ಚಳವಳಿಯ ಬಗ್ಗೆ ಶೋಭಾ ಕರಂದ್ಲಾಜೆ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
