ಕೇಂದ್ರ ಸರ್ಕಾರವು ಕರ್ನಾಟಕದ ತೆರಿಗೆ ಪಾಲನ್ನು ನೀಡುವುದರಲ್ಲಿ ತಾರತಮ್ಯ ಎಸಗಿರುವುದನ್ನು ಖಂಡಿಸಿ ವಿಧಾನಸಭೆಯಲ್ಲಿ ಗುರುವಾರ ರಾಜ್ಯ ಸರ್ಕಾರ ಖಂಡನಾ ನಿರ್ಣಯ ಅಂಗೀಕರಿಸಿತು.
ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ತೆರಿಗೆ ತಾರತಮ್ಯದ ವಿರುದ್ಧ ನಿರ್ಣಯ ಮಂಡಿಸಿ, “ರಾಜ್ಯಕ್ಕೆ ಸಮ ಪ್ರಮಾಣದಲ್ಲಿ ತೆರಿಗೆಯ ಪಾಲು ನೀಡದೆ ಕೇಂದ್ರ ಸರ್ಕಾರವು ಅನ್ಯಾಯ ಎಸಗುತ್ತಿದೆ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ. ತೆರಿಗೆಯಲ್ಲಿ ಪಾಲು ನೀಡದೆ ರಾಜ್ಯದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಇದನ್ನು ವಿರೋಧಿಸಿ ರಾಜ್ಯದ ನಾಗರಿಕರ ಪರವಾಗಿ ಈ ನಿರ್ಣಯ ತೆಗೆದುಕೊಂಡಿದ್ದೇವೆ” ಎಂದು ಅಂಕಿಅಂಶ ಸಮೇತ ಸದನಕ್ಕೆ ತಿಳಿಸಿದರು.
ಸಚಿವರು ನಿರ್ಣಯ ಮಂಡಿಸುತ್ತಿದ್ದಂತೆಯೇ ಒಮ್ಮೆಲೆ ಆಘಾತಕ್ಕೊಳಗಾದ ವಿಪಕ್ಷ ಬಿಜೆಪಿಯ ನಾಯಕರು, ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
“ಇಂದಿನ ಕಲಾಪದ ಅಜೆಂಡಾದಲ್ಲಿ ಉಲ್ಲೇಖಿಸದೆ ಈ ನಿರ್ಣಯ ಅಂಗೀಕರಿಸಲಾಗಿದೆ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರವು ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇದು ಹೇಡಿಗಳ ಸರ್ಕಾರ. ಸಿದ್ದರಾಮಯ್ಯನವರು ವಿಷ ಕಾರುತ್ತಿರುವ ಮನಸ್ಥಿತಿ ಇದು” ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಏರುಧ್ವನಿಯಲ್ಲಿ ಗದ್ದಲ ಎಬ್ಬಿಸಿದರು.
ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಗದಗಳನ್ನು ಹರಿದೆಸೆದು ಆಕ್ರೋಶ ಹೊರಹಾಕಿದರು. ಬಿಜೆಪಿಯವರ ಗದ್ದಲದ ನಡುವೆಯೇ ಸಭಾಧ್ಯಕ್ಷ ಯು ಟಿ ಖಾದರ್ ಅವರು ನಿರ್ಣಯವನ್ನು ಅಂಗೀಕರಿಸಿದರು.
ಇದಲ್ಲದೇ, ಕೇಂದ್ರ ಸರ್ಕಾರವು ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಸದನದಲ್ಲಿ ಸರ್ಕಾರ ನಿರ್ಣಯ ಅಂಗೀಕರಿಸಿದೆ.
ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒತ್ತಾಯಿಸುವುದಾಗಿ ಸರ್ಕಾರ ನಿರ್ಣಯ ಅಂಗೀಕರಿಸುವ ವೇಳೆ ತಿಳಿಸಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ಮರಳಿದ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ
ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. 10 ನಿಮಿಷಗಳ ಬಳಿಕ ಆರಂಭಗೊಂಡರೂ ಕೂಡ ಸದನದಲ್ಲಿ ವಿಪಕ್ಷಗಳು ಬಾರದಿರುವುದರಿಂದ ಸದನ ನಡೆಸುವುದು ಸೂಕ್ತವಲ್ಲ ಎಂದು ಕಂದಾಯ ಸಚಿವ ಅಭಿಪ್ರಾಯ ತಿಳಿಸಿದ್ದರಿಂದ, ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಸದನವನ್ನು ನಾಳೆ (ಫೆ.23) ಬೆಳಗ್ಗೆ 9.30ಕ್ಕೆ ಮುಂದೂಡಿದರು.
