ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕರಾವಳಿ ಭಾಗದ ಮುಸ್ಲಿಂ ಸಮುದಾಯದ ನಾಯಕಿ, ಆಯಿಷಾ ಫರ್ಝಾನ ಯು ಟಿ ಅವರನ್ನು ಕೆಪಿಸಿಸಿ ಮಾಧ್ಯಮ ವಕ್ತಾರೆಯಾಗಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ನೇಮಕಗೊಳಿಸಿದ್ದಾರೆ.
ಆಯಿಶ ಫರ್ಝಾನ ಯು ಟಿ ಅವರು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆಯಲ್ಲಿ ಹೆಚ್ಚು ಪ್ರಚಾರದಲ್ಲಿರುವುದನ್ನು ಗಮನಿಸಿ, ಕಾಂಗ್ರೆಸ್ ಪಕ್ಷದ ವಿಚಾರಧಾರೆಗಳನ್ನು, ಹಾಗೂ ಸರ್ಕಾರದ ಯೋಜನೆಗಳನ್ನು ಮಾಧ್ಯಮಗಳಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಹಿನ್ನೆಲೆಯಲ್ಲಿ ಆಯಿಷಾ ಫರ್ಝಾನ ಇವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿ, ನೇಮಕ ಪತ್ರವನ್ನು ಕೆಪಿಸಿಸಿ ಕಚೇರಿಯಲ್ಲಿ ವಿತರಿಸಿದ್ದಾರೆ.
ಈ ಜವಾಬ್ದಾರಿಯನ್ನು ವಹಿಸಿಕೊಂಡು ಕೆಪಿಸಿಸಿಯ ಸಂವಹನ ಮತ್ತು ಮಾಧ್ಯಮ ಮುಖ್ಯಸ್ಥರು ನೀಡುವ ಸಲಹೆ ಹಾಗೂ ಮಾರ್ಗದರ್ಶನಗಳ ಅನ್ವಯ ಕಾರ್ಯಪ್ರವೃತರಾಗಿ ಪಕ್ಷ ಬಲವರ್ದನೆಗೆ ಸಹಕಾರಿ ನೀಡುವಂತೆ ಯುಟಿ ಫರ್ಝಾನ ಅವರಿಗೆ ತಿಳಿಸಿದ್ದಾರೆ.