2024ರ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯ ದಿನ ಬಾಲ ರಾಮ(ರಾಮಲಲ್ಲಾ)ನನ್ನು ಪೂಜೆ, ಮಂತ್ರ, ವಿಧಿವಿಧಾನಗಳ ಮೂಲಕ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.
ಈ ಕುರಿತಂತೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಉದ್ಘಾಟನೆ ದಿನದಂದು ಗರ್ಭಗುಡಿಯೊಳಗೆ ಕೇವಲ ಐದು ಮಂದಿಗೆ ಮಾತ್ರ ಪ್ರವೇಶ ಇರಲಿದೆ ಎಂದು ವರದಿಯಾಗಿದೆ.
ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಐವರು ಭಾಗವಹಿಸಲಿದ್ದಾರೆ. ಆ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ್ ಲಲ್ಲಾನ ವಿಗ್ರಹದ ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯುವ ಸಮಯದಲ್ಲಿ ಗರ್ಭಗುಡಿಯಲ್ಲಿ ಮೋದಿ ಜೊತೆ ನಾಲ್ಕು ಮಂದಿ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ವರದಿಗಳು ಬಿತ್ತರವಾಗುತ್ತಿದೆ.
BIG BREAKING NEWS 🚨 Only five people including PM Modi, CM Yogi Adityanath, RSS chief Mohan Bhagwat, UP Governor Anandiben Patel & the Chief Priest will be present inside sanctum sanctorum or Garbha Griha during the consecration ceremony of Shri Ram idol in Ayodhya temple.
At… pic.twitter.com/ArHYhsfT74
— Times Algebra (@TimesAlgebraIND) December 29, 2023
ಪ್ರಧಾನಿ ಜೊತೆಗೆ ಉತ್ತರ ಪ್ರದೇಶದ ಗವರ್ನರ್ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಮಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ಅವರು ಮಾತ್ರ ಉಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ. ಅಲ್ಲದೇ, ಈ ಸಂದರ್ಭದಲ್ಲಿ ಗರ್ಭಗುಡಿಯನ್ನು ಪರದೆಯಿಂದ ಮುಚ್ಚಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಪರ್ಯಾಸ ಏನೆಂದರೆ, ದೇಶದ ಮೊದಲ ಪೌರ ಎಂಬ ಗೌರವ ಹೊಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪಟ್ಟಿಯಿಂದ ಬಿಟ್ಟಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೂ ಕೂಡ ಕಾರಣವಾಗಿದೆ.
2023ರ ಮೇ 28ರಂದು ಉದ್ಘಾಟನೆಗೊಂಡಿದ್ದ ಸಂಸತ್ತಿನ ನೂತನ ಕಟ್ಟಡ ‘ಸೆಂಟ್ರಲ್ ವಿಸ್ಟಾ’ದ ಉದ್ಘಾಟನೆಯಿಂದಲೂ ಕೂಡ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಹೊರಗಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದ ವಿಪಕ್ಷಗಳು, ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
ರಾಮಮಂದಿರದ ಗರ್ಭಗುಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರವೇಶಕ್ಕೆ ಅವಕಾಶ ಇಲ್ಲದಿರುವುದರಿಂದ ಈಗ ಅದೇ ರೀತಿಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
Again they excluded President Draupadi Murmu ji.
Is it because she comes from Tribal community? https://t.co/IU1XawfGA0
— Mahua Moitra Fans (@MahuaMoitraFans) December 29, 2023
ಈ ಬಗ್ಗೆ ಪ್ರಶ್ನಿಸಿರುವ ನೆಟ್ಟಿಗರು, “ಮತ್ತೆ ಅವರು ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ಹೊರಗಿಡಲಾಗಿದೆ. ಆಕೆ ಬುಡಕಟ್ಟು ಸಮುದಾಯದಿಂದ ಬಂದವರು ಎಂಬ ಕಾರಣಕ್ಕೆ ಈ ರೀತಿ ನಡೆದುಕೊಳ್ಳಲಾಗುತ್ತಿದೆಯೇ?” ಎಂದು ಪ್ರಶ್ನಿಸತೊಡಗಿದ್ದಾರೆ.
ಈ ನಡುವೆ ಕೆಲವರು, “ಜ.22ರಂದು ಗರ್ಭಗುಡಿಯೊಳಗೆ ಪ್ರವೇಶಿಸುವ ಐವರಲ್ಲಿ ಆರ್‍ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ ಇರಲಿದ್ದಾರೆ ಎಂಬ ಸುದ್ದಿ ಓದಿದೆ. ಒಂದು ವೇಳೆ ಅದು ನಿಜವೇ ಆಗಿದ್ದರೆ, ರಾಷ್ಟ್ರಪತಿಗಿಂತಲೂ ದೊಡ್ಡ ಹುದ್ದೆಯಲ್ಲಿ ಅವರಿದ್ದಾರೆಯೇ? ಮಹಿಳೆ ಎಂಬ ಕಾರಣಕ್ಕೋ ಅಥವಾ ಬುಡಕಟ್ಟು ಸಮುದಾಯದಿಂದ ಬಂದರು ಎಂಬ ಕಾರಣಕ್ಕೋ? ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲಿ” ಎಂದು ಆಗ್ರಹಿಸಿದ್ದಾರೆ.