ಬಿಜೆಪಿಗೆ ಸೇರಿದ ಸುಮಾರು ಎರಡು ಕೋಟಿಯಷ್ಟು ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು ನಗರದ ಬಿನ್ನಿಮಿಲ್ ಹತ್ತಿರದ ಎ.ಪಿ.ಎಂ.ಸಿ ಬಳಿ ಇರುವ ಸ್ಥಿರ ಕಣ್ಗಾವಲು ಪಡೆಯ ಚೆಕ್ ಪೋಸ್ಟ್ನಲ್ಲಿ ಈ ಹಣವನ್ನು ಅಧಿಕಾರಿಗಳು ಏಪ್ರಿಲ್ 20ರಂದು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, “ಕಾರಿನಲ್ಲಿ ಸಾಗಿಸುತ್ತಿದ್ದ ಸೂಕ್ತ ದಾಖಲೆ ಇಲ್ಲದ 2 ಕೋಟಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದೆ.
The SST team of chamrajpet, Bangalore intercepted a car carrying cash of 2 crore at 4:05 PM on 20.04.24 and intimated the same to the income tax officials.
— Chief Electoral Officer, Karnataka (@ceo_karnataka) April 21, 2024
ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದ್ದು, ಪಕ್ಷದ ಹಣ ಎನ್ನುವ ಹಿನ್ನೆಲೆಯಲ್ಲಿ ಈ ಕುರಿತು ಆದಾಯ ತೆರಿಗೆ ಇಲಾಖೆಯವರು ಆದಾಯ ತೆರಿಗೆ ಕಾಯ್ದೆಯ ಅನ್ವಯ ಸದರಿ ಹಣವನ್ನು ಸ್ವೀಕರಿಸಲು ಬರುವುದಿಲ್ಲ ಎಂದು ಹಿಂಬರಹ ನೀಡಿರುತ್ತಾರೆ ಎಂದು ಆಯೋಗವು ಮಾಹಿತಿ ನೀಡಿದೆ.
ಇದನ್ನು ಓದಿದ್ದೀರಾ? ಸಿದ್ದರಾಮಯ್ಯರಿಂದ ಕನ್ನಡಿಗರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ: ಬಿ ಎಸ್ ಯಡಿಯೂರಪ್ಪ
ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಾಹನ ಚಲಾಯಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಸಹ ಪ್ರಯಾಣಿಕ ಗಂಗಾಧರ್ ಎಂಬುವವರ ಮೇಲೆ ಐಪಿಸಿ ಸೆಕ್ಷನ್ 1860 (171E, 171F, 171B, 171C); ಪ್ರಜಾ ಪ್ರತಿನಿಧಿ ಕಾಯ್ದೆಯ 1950, 1951 & 1989 (U/s-123) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು, ಹಣವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
