ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯಲಿರುವ ಕಂಬಳಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಬ್ರಿಜ್ ಭೂಷಣ್ ಆಗಮನವನ್ನು ಕಂಬಳ ಸಮಿತಿಯು ರದ್ದುಪಡಿಸಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ ರಾಜ್ಯ ರಾಜಧಾನಿ ಸಜ್ಜಾಗುತ್ತಿದೆ. ಈ ನಡುವೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಸದ್ಯ ಈಗ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಬ್ರಿಜ್ ಭೂಷಣ್ ಪತ್ರ ಬರೆದು ತಿಳಿಸಿದ್ದಾರೆ. ಬ್ರಿಜ್ ಭೂಷಣ್ ಕಂಬಳಕ್ಕೆ ಆಗಮಿಸುವ ಬಗ್ಗೆ ಖಾತ್ರಿ ನೀಡಿರಲಿಲ್ಲ ಎಂದು ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ಕುಮಾರ್ ರೈ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಕಂಬಳ ವಿವಾದ
ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಂಸದ ಬ್ರಿಜ್ ಭೂಷಣ್ ಆಗಮನ ರದ್ದು
ಕಂಬಳ ಸಮಿತಿ ಮುಖ್ಯಸ್ಥ, ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ#BrijBhushanSharanSingh #BengaluruKambala #ashokkumarrai @INCKarnataka @AshokRaiestate @ChekrishnaCk pic.twitter.com/9lQ7eHidSP
— eedina.com (@eedinanews) November 21, 2023
ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಕೈಸರ್ಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ ಮಾಹಿತಿ ನೀಡಿದ್ದು, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಅವರ ಆಹ್ವಾನ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಂಬಳಕ್ಕೆ ಬ್ರಿಜ್ ಭೂಷಣ್ ಅತಿಥಿ; ಸಿದ್ದಿ ಸಮುದಾಯದ ಬೇಡಿಕೆ ಎಂದ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ
ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಕುಮಾರ್ ರೈ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಕಂಬಳ ಅಂದರೆ ಕಾಂಗ್ರೆಸ್ನವರೂ ಇದ್ದಾರೆ, ಹಾಗೆ ಬಿಜೆಪಿಯವರೂ ಇದ್ದಾರೆ. ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಕಂಬಳಕ್ಕೆ ‘ಪೇಟಾ’ದಿಂದ ತೊಂದರೆ ಆದಾಗ ಸಿದ್ದರಾಮಯ್ಯನವರೇ ಹೋರಾಟಕ್ಕೆ ಸಹಾಯ ಮಾಡಿದ್ದರು’ ಎಂದು ತಿಳಿಸಿದ್ದಾರೆ.
ಬೆಂಗಳೂರು ತುಳುಕೂಟಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಬೆಂಗಳೂರು ತುಳುಕೂಟ, ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ 5ರಲ್ಲಿ 151 ಮೀ ಉದ್ದದ ಕಂಬಳದ ಕೆರೆಯಲ್ಲಿ ಕಂಬಳವನ್ನು ಆಯೋಜಿಸುತ್ತಿದೆ.