ನರೇಗಲ್ ಹೋಬಳಿಯ ಕಳಕಾಪುರ-ಮಾರನಬಸರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಎರಡೂ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ನರೇಗಲ್, ಜಕ್ಕಲಿ, ಮಾರನಬಸರಿ ಗ್ರಾಮಗಳ ಜನರು ಇದೇ ರಸ್ತೆ ಮೂಲಕ ಕಳಕಾಪುರ, ಸೂಡಿ ಮೊದಲಾದ ಗ್ರಾಮಗಳಿಗೆ ಪ್ರಯಾಣಿಸುತ್ತಾರೆ. ಸೂಡಿ, ಇಟಗಿ ಗ್ರಾಮಗಳಿಗೆ ತೆರಳಲು ಈ ರಸ್ತೆ ಅತ್ಯಂತ ಸಮೀಪ. ಆದ್ದರಿಂದ ಹಳ್ಳ ದಾಟಿಕೊಂಡೇ ಗ್ರಾಮಸ್ಥರು ಓಡಾಡುತ್ತಾರೆ.
ಮಳೆ ಜೋರಾದರೆ, ಹಳ್ಳ ತುಂಬಿ ಹರಿಯುತ್ತದೆ. ಈ ವೇಳೆ ಗ್ರಾಮಗಳ ಮಧ್ಯ ಸಂಪರ್ಕ ಕಡಿತವಾಗುತ್ತದೆ. ಈ ರಸ್ತೆ ಸಂಪರ್ಕ ಕಡಿತವಾದರೆ ಮಾರನಬಸರಿ, ಕೊಪ್ಪದ ಕ್ರಾಸ್, ನಿಡಗುಂದಿ, ಕಳಕಾಪುರ ಮಾರ್ಗದ ಮೂಲಕ 20ಕಿ.ಮೀ. ಸುತ್ತಿ ಸಾಗಬೇಕು. ಕಳಕಾಪುರ, ಮಾರನಬಸರಿ, ಜಕ್ಕಲಿ ಗ್ರಾಮಗಳ ರೈತರ ಜಮೀನುಗಳು ಇದೇ ಮಾರ್ಗದಲ್ಲಿವೆ. ಕೃಷಿ ಚಟುವಟಿಕೆಗಳಿಗಾಗಿ ರೈತರು, ಕೃಷಿ ಕಾರ್ಮಿಕರು ನಿತ್ಯ ಓಡಾಡುತ್ತಾರೆ. ಜನರ ಅನುಕೂಲಕ್ಕಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸ ಬೇಕು ಎಂದು ಆಗ್ರಹಿಸುತ್ತಾರೆ ಗ್ರಾಮಸ್ಥರು.
ಮಾರನಬಸರಿ-ಕಳಕಾಪುರ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತುಹೋಗಿದೆ. ಕೆಲವೆಡೆ ಆಳವಾದ ತೆಗ್ಗುಗಳು ಬಿದ್ದಿವೆ. ನಾಲ್ಕೈದು ಕಡೆಗಳಿಂದ ಹರಿದುಬರುವ ಕಿರು ಹಳ್ಳಗಳಿಗೆ ಸಿಮೆಂಟ್ ಪರಸಿ ನಿರ್ಮಾಣ ಮಾಡಲಾಗಿದೆ. ಅವು ಸಹ ಬಿರುಕು ಬಿಟ್ಟಿದ್ದು, ಕೆಲವು ಕಡೆಗಳಲ್ಲಿ ಕಿತ್ತು ಹೋಗಿವೆ.
ಸಿಮೆಂಟ್ ಹಾಗೂ ಡಾಂಬರು ರಸ್ತೆ ಜೋಡಣೆ ಸರಿಯಾಗಿಲ್ಲ. ಎತ್ತರದಲ್ಲಿ ವ್ಯತ್ಯಾಸವಾಗಿ ಬೈಕ್ ಸವಾರರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು, ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಸಹ ನಡೆದಿದೆ. ರಸ್ತೆ ದುರಸ್ತಿ, ಕಿರು ಸೇತುವೆ, ವೈಜ್ಞಾನಿಕವಾಗಿ ರಸ್ತೆ ಜೋಡಣೆ ಮಾಡಬೇಕು ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಜೈಭೀಮ ಸೇನೆ ಎಚ್ಚರಿಸಿದೆ.