“ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷದಿಂದ ಅನೇಕ ಪ್ರಗತಿಪರ ಚಿಂತಕರನ್ನ ಕಠೋರ ಮತ್ತು ಅಪ್ರಜಾಪ್ರಭುತ್ವ ಕಾನೂನಾದ, ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆ ಅಡಿ ಬಂಧಿಸಿ, ಜನಪರ ಕಾಳಜಿಯುಳ್ಳವರ ಬಾಯಿ ಮುಚ್ಚಿಸುತ್ತಿದೆ” ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
2010ರಲ್ಲಿ ಮಾತನಾಡಿದಕ್ಕಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ ಅರುಂಧತಿ ಮತ್ತು ಪ್ರೊ. ಶೇಖ್ ಶೌಕತ್ ಹುಸೇನ್ ಅವರ ಮೇಲೆ ಯುಎಪಿಎ ಕಾಯ್ದೆ ಹಾಕಿದ್ದನ್ನು ಖಂಡಿಸಿ, ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
“ಕಾಶ್ಮೀರಿ ಜನರ ಸಮಸ್ಯೆಗಳ ಕುರಿತು 2010ರಲ್ಲಿ ಮಾತನಾಡಿದಕ್ಕಾಗಿ ಇಬ್ಬರ ಮೇಲೆ ಈಗ ಯುಎಪಿಎ ಅಡಿ ಕ್ರಮ ಜರುಗಿಸಬೇಕಾಗಿ ದೆಹಲಿಯ ಲೆಫ್ಟಿನೆಂಟ್ ರಾಜ್ಯಪಾಲ ವಿಕೆ. ಸಕ್ಸೇನಾ ದೆಹಲಿ ಪೋಲಿಸರಿಗೆ ಅನುಮತಿ ನೀಡಿರುವುದು ಖಂಡನೀಯ” ಎಂದು ಎಐಸಿಸಿಟಿಯು, ಎಐಪಿಡಬಲ್ಯೂಎ, ಎಐಎಸ್ ಎ, ಸಿಪಿಐಎಂಎಲ್, ಆರ್ ಐಎ ಸಂಘಟನೆಗಳು ಒಕ್ಕೊರಲ ದನಿಯಿಂದ ಗುರುವಾರ ಪ್ರತಿಭಟಿಸಿದರು.
“ಯಾವುದೇ ಕಾನೂನಿನ ಪ್ರಕ್ರಿಯೆ ಇಲ್ಲದೆ ಕೇವಲ ಪ್ರಕರಣ ದಾಖಲಾದ ತಕ್ಷಣಕ್ಕೆ ವ್ಯಕ್ತಿಗಳನ್ನ ಬಂಧಿಸುವ ಈ ಕಾಯ್ದೆಯು ಅಸಾಂವಿಧಾನಿಕವಾದ್ದದ್ದು. ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿಯುತ್ತದೆ. ದಲಿತರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿದಾರ್ಥಿಗಳ ಪರ ನಾವು ಸದಾ ದನಿ ಎತ್ತುತ್ತೇವೆ. ಅದು ನಮ್ಮ ಹಕ್ಕು. ಹತ್ತು ವರ್ಷಗಳಿಂದ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿರುವ ವಿದ್ಯಾರ್ಥಿ ನಾಯಕರು, ಹೋರಾಟಗಾರರು, ಪ್ರಗತಿಪರ ಚಿಂತಕರನ್ನ ಬಿಡುಗಡೆ ಮಾಡಬೇಕು” ಎಂದು ವಕೀಲ ಕ್ಲಿಫ್ಟನ್. ಡಿ. ರೊಜಾರಿಯೊ ಆಗ್ರಹಿಸಿದರು.
“ಭೀಮಾ ಕೊರೆಂಗಾವ್‌ನಲ್ಲಿ ಕಾರ್ಮಿಕರು ಗುತ್ತಿಗೆ ಪದ್ಧತಿ ರದ್ದಾಗಬೇಕು ಎಂದು ಪ್ರತಿಭಟಿಸಿದ್ದ ಕಾರಣಕ್ಕಾಗಿ ಅವರ ಮೇಲೆ ಯುಎಪಿಎ ಅಡಿ ಕ್ರಮ ಜರುಗಿಸಿದ್ದರು. ಜನರಿಗೆ ಸಂವಿಧಾನದ ಅಡಿಯಲ್ಲಿ ಸರ್ಕಾರ ಮತ್ತು ಅದು ರೂಪಿಸುವ ನೀತಿಗಳ ವಿರುದ್ಧ ಪ್ರಶ್ನಿಸುವ ಹಕ್ಕಿದೆ. ಆದರೆ ಎಲ್ಲ ರಾಜಕೀಯ ಪಕ್ಷಗಳು ಈ ಹಕ್ಕನ್ನು ನಾನಾ ರೂಪದಲ್ಲಿ ಕಸಿಯುತ್ತಿದೆ. ದೇವನಹಳ್ಳಿಯಲ್ಲಿ ರೈತನಿಗೆ ಅನ್ಯಾಯವಾದರೆ 25 ಕಿಲೋ ಮೀಟರ್ ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾವನಕ್ಕೆ ಬಂದು ಪ್ರತಿಭಟಿಸಬೇಕಾಗಿದೆ. ಹೀಗೆ ಪ್ರತಿಭಟಿಸುವ ಹಕ್ಕನ್ನು ಕೂಡ ಜನರಿಂದ ಕಿತ್ತುಕೊಳ್ಳಲಾಗಿದೆ” ಎಂದು ಎಐಎಸ್‌ಎ ಸದಸ್ಯ ಶರತ್ ಬೇಸರ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಷನ್ ಫಾರ್ ಜಸ್ಟೀಸ್‌ನ ಸದಸ್ಯೆ ಶಿಲ್ಪಾ, ಬಹುತ್ವ ಕರ್ನಾಟಕದ ತನ್ವೀರ್, ಅರತ್ರಿಕಾ, ನರಸಿಂಹಮೂರ್ತಿ, ವಿನಯ್ ಕುಮಾರ್ ಮತ್ತಿತರು ಹಾಜರಿದ್ದರು.
