ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯನ್ನು ಬಾನು ಅವರು ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡಕ್ಕೆ, ಕನ್ನಡ ಸಾಹಿತ್ಯ ಲೋಕಕ್ಕೆ, ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕನ್ನಡಕ್ಕೆ ಕರೆ ತಂದ ಕೀರ್ತಿಗೆ ಪಾತ್ರರಾಗಿರುವ ಬಾನು ಮುಷ್ತಾಕ್, ಹಾಸನದವರು. ಅಂತಃಕರಣವುಳ್ಳ ಅಮ್ಮನಾಗಿ ಮನೆ-ಮಕ್ಕಳನ್ನು ಪೊರೆದವರು. ದನಿ ಇಲ್ಲದವರ ದಮನಿತ ಹೆಣ್ಣುಜೀವಗಳಿಗೆ ದನಿಯಾದವರು. ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ, ರಾಜಕಾರಣಿಯಾಗಿ, ಹೋರಾಟಗಾರ್ತಿಯಾಗಿ, ಕತೆಗಾರ್ತಿಯಾಗಿ ಹೆಸರು ಮಾಡಿದವರು.
ಮಧ್ಯಮ ವರ್ಗದ ಸುಶಿಕ್ಷಿತ ಮುಸ್ಲಿಂ ಕುಟುಂಬಕ್ಕೆ ಸೇರಿದ ಬಾನು, ಹುಟ್ಟಿದ್ದು, ಬಾಲ್ಯ ಕಳೆದದ್ದು ಅರಸೀಕೆರೆಯಲ್ಲಿ. ಅಪ್ಪ ಹೆಲ್ತ್ ಇನ್ಸ್‌ಪೆಕ್ಟರ್. ಸರ್ಕಾರಿ ನೌಕರಿಯಾದ್ದರಿಂದ ವರ್ಗಾವಣೆ ಮಾಮೂಲಾಗಿತ್ತು. ಶಿವಮೊಗ್ಗಕ್ಕೆ ವರ್ಗವಾಗಿತ್ತು. ಅಪ್ಪನಿಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯವೆನಿಸಿ, ಬಾನು ಎಂಬ ಪುಟ್ಟ ಬಾಲೆಯನ್ನು ಮನೆಯ ಹತ್ತಿರದ ಕಾನ್ವೆಂಟ್‌ಗೆ ಸೇರಿಸಿದರು. ಚೂಟಿಯಾಗಿದ್ದ ಬಾನು, ಕೆಲವೇ ತಿಂಗಳಲ್ಲಿ ಕನ್ನಡ ಕಲಿತರು. ಓದುವ, ಬರೆಯುವ ಬೆರಗಿನ ಹಾದಿಗೆ ಬಿದ್ದರು. ಪದವಿ ಪಡೆದರು. ಎಲ್‌ಎಲ್‌ಬಿಯನ್ನೂ ಮುಗಿಸಿದರು. ಶಿಕ್ಷಕಿಯಾಗಿಯೂ ಕೆಲಸ ಮಾಡಿದರು.
ಬಾನು ಬೆಳೆದಂತೆಲ್ಲ ಅವರ ಓದು, ಗ್ರಹಿಕೆ ಮತ್ತು ಸಮಾಜವನ್ನು ನೋಡುವ ಬಗೆ ಬೇರೆಯಾಗಿತ್ತು. ಭಿನ್ನವಾಗಿತ್ತು. ಅದಕ್ಕೆ ತಕ್ಕಂತೆ ʼಲಂಕೇಶ್ ಪತ್ರಿಕೆʼಯ ನಿಲುವು, ಧೋರಣೆ ಇಷ್ಟವಾಗಿತ್ತು. ಅದೇ ಸಮಯಕ್ಕೆ ದೂರದ ವಿಜಯಪುರ ಜಿಲ್ಲೆಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳ ವಿರುದ್ಧ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಆ ಬಡ ಹುಡುಗಿಯ ಪರ ಯಾರೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಆಕೆಯ ಸ್ಥಿತಿಯನ್ನು ಧ್ಯಾನಿಸಿ ಬಾನು ಮುಷ್ತಾಕ್ ಅವರು, ದಿಟ್ಟವಾಗಿ ಬರೆದ ಲೇಖನ ʼಲಂಕೇಶ್ ಪತ್ರಿಕೆʼಯಲ್ಲಿ ಪ್ರಕಟವಾಯಿತು. ಅದು ಸಂಪ್ರದಾಯಬದ್ಧ ಮೌಲ್ವಿಗಳನ್ನು ಕೆರಳಿಸಿತು. ಆದರೆ, ಬಡ ಮುಸ್ಲಿಂ ಹುಡುಗಿ ಪರವಾಗಿ ಇಡೀ ಕರ್ನಾಟಕವೇ ನಿಲ್ಲುವಂತಾಗಿತ್ತು.
ಇದನ್ನು ಓದಿದ್ದೀರಾದ?: ಕನ್ನಡದ ಲೇಖಕಿ ಬಾನು ಮುಷ್ತಾಕ್‌ಗೆ ಬೂಕರ್ ಗೌರವ, ಮುಖ್ಯಮಂತ್ರಿ ಸೇರಿ ಹಲವು ನಾಯಕರಿಂದ ಅಭಿನಂದನೆ
ಅದಕ್ಕೆ ಕಾರಣ ಪಿ. ಲಂಕೇಶರು. ಬಾನು ಮುಷ್ತಾಕ್ ಅವರಿಗೆ ಬರವಣಿಗೆ ಸಿದ್ಧಿಸಿತ್ತು. ಅದನ್ನು ಲಂಕೇಶ್ ಗುರುತಿಸಿದರು. ಅವರ ಅಭಿವ್ಯಕ್ತಿಗೆ ಪತ್ರಿಕೆಯನ್ನು ವೇದಿಕೆಯನ್ನಾಗಿ ಒದಗಿಸಿದರು. ಅಲ್ಲಿಂದ ಬಾನು ಅವರು ಪತ್ರಕರ್ತೆಯಾಗಿ ಹಾಸನ ಜಿಲ್ಲೆಯ ಆಗುಹೋಗುಗಳನ್ನು ಪತ್ರಿಕೆಗೆ ನಿಯಮಿತವಾಗಿ ಬರೆಯತೊಡಗಿದರು. ರಾಜಕೀಯ ವರದಿಗಳ ಜೊತೆಗೆ ಲೇಖನಗಳು ಹಾಗೂ ಕತೆಗಳನ್ನೂ ಬರೆದರು. ಅವು ದಿನಬೆಳಗಾಗುವುದರೊಳಗೆ ಬಾನು ಮುಷ್ತಾಕ್‌ರನ್ನು ಇಡೀ ನಾಡಿಗೆ ಪರಿಚಯಿಸಿದ್ದವು. ಕನ್ನಡ ಸಾಹಿತ್ಯ ಲೋಕದಲ್ಲಿ ಬರಹಗಾರ್ತಿಯಾಗಿ ನೆಲೆಯೂರುವಂತೆ ನೋಡಿಕೊಂಡಿದ್ದವು.
ಪತ್ರಕರ್ತೆಯಾಗಿದ್ದ ಬಾನು ಅವರು ರಾಜಕೀಯಕ್ಕಿಳಿದು ಹಾಸನ ನಗರಸಭೆ ಚುನಾವಣೆಗೆ ಸ್ಪರ್ಧಿಸಿದರು. ಗೆದ್ದು ಸದಸ್ಯರಾದರು. ರಾಜಕಾರಣದಿಂದ ದೂರವಿರುವವರು, ನಮಗೇಕೆ ಎಂದು ನಾಚುವವರು ಖಂಡಿತವಾಗಿಯೂ ವ್ಯವಸ್ಥೆಯನ್ನು ಪ್ರಶ್ನಿಸಲಾರರು ಎನ್ನುವುದು ಬಾನು ಅವರ ನಿಲುವಾಗಿತ್ತು. ಮನೆ, ಜನ ಮತ್ತು ಪತ್ರಿಕೆಯ ಬೆಂಬಲವಿದ್ದ ಬಾನು ಅವರಿಗೆ, ದಿಟ್ಟವಾಗಿ ಪ್ರಶ್ನಿಸುವ ಧೈರ್ಯವಿತ್ತು. 80ರ ದಶಕದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷದ ಮುಂಚೂಣಿ ನಾಯಕರಾದ ಎಚ್.ಡಿ. ದೇವೇಗೌಡರ ಕಣ್ಣಿಗೆ ಬಿದ್ದ ಬಾನು ಅವರು, ಜನತಾ ಪಕ್ಷ ಸೇರಿದರು. ಇದು ಲಂಕೇಶರಿಗೆ ಕೊಂಚ ಇರುಸುಮುರುಸುಂಟುಮಾಡಿತು. ಮುಸ್ಲಿಂ ಹೆಣ್ಣುಮಗಳೊಬ್ಬಳು ಬರಹಗಾರ್ತಿಯಾಗಿ, ರಾಜಕಾರಣಿಯಾಗಿ ಸಮಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳುವುದು, ಅದನ್ನು ಬೆಂಬಲಿಸುವುದು ಸರಿ ಎನಿಸಿದ್ದರೂ; ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು, ರಾಜಕಾರಣಿಯಾಗಿ ಪತ್ರಿಕೆಗೆ ವರದಿ ಮಾಡುವುದು ಅಷ್ಟು ಸರಿಯಲ್ಲವೆನಿಸಿತು. ಅಲ್ಲಿಗೆ ಲಂಕೇಶ್ ಪತ್ರಿಕೆ ಮತ್ತು ಬಾನು ಅವರ ಪತ್ರಕರ್ತ ವೃತ್ತಿ ಕೊನೆಗೊಂಡಿತ್ತು. ಆದರೆ ಬಾನು ಅವರ ಕತೆಗಳು ಪತ್ರಿಕೆಯಲ್ಲಿ ಆಗಾಗ ಪ್ರಕಟವಾಗುತ್ತಲೇ ಇದ್ದವು.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು, ಸಮಾಜದ ಹುಳುಕುಗಳನ್ನು, ಮುಸ್ಲಿಂ ಮೌಲ್ವಿಗಳ ಕಂದಾಚಾರಗಳನ್ನು ದಿಟ್ಟವಾಗಿ ಎದುರುಗೊಳ್ಳುತ್ತಿದ್ದ ಬಾನು ಮುಷ್ತಾಕ್ ಅವರು, ಕನ್ನಡದ ಸತ್ವಯುತ ಕತೆಗಾರ್ತಿಯಾಗಿ ಮುನ್ನಲೆಗೆ ಬಂದಿದ್ದರು. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಬಾಲ್ಯವಿವಾಹ, ವರದಕ್ಷಿಣೆ, ತಲಾಕ್, ಕಂದಾಚಾರ, ಮೌಢ್ಯ, ಶೋಷಣೆ, ದೌರ್ಜನ್ಯಗಳನ್ನೆಲ್ಲ ಕತೆಗಳಲ್ಲಿ ಕಾಣಿಸಿ, ನಾಡಿನ ಮುಂದಿಟ್ಟರು. ಆನಂತರ ಅವರು ವಕೀಲಿಕೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡರು. ಅದರಲ್ಲೂ ಹೆಚ್ಚಾಗಿ ಜಿಲ್ಲೆಯ ಯಾವುದಾದರೂ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದಾಕ್ಷಣ, ತಕ್ಷಣ ಸ್ಪಂದಿಸಿ, ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ನಿರತರಾದರು.
ಜೊತೆಗೆ, ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕಾಗಿ ತುಡಿವ ಮನಸುಗಳೊಂದಿಗೆ ಗುರುತಿಸಿಕೊಂಡರು. ಸಭೆಗಳು, ಚಳವಳಿಗಳು, ಪ್ರತಿಭಟನೆಗಳಲ್ಲಿ ಭಾಗಿಯಾದರು. ಅಂಥದ್ದೇ ಒಂದಾದ ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹೋರಾಟಗಾರರು ಬಂಧನಕ್ಕೊಳಗಾದಾಗ, ಅವರ ಪರವಾಗಿ ಬಾನು ಮುಷ್ತಾಕ್ ವಕಾಲತ್ತು ವಹಿಸಿ, ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿ ಬಂಧನದಿಂದ ಬಿಡಿಸಿದ್ದರು.
ಉರ್ದುವನ್ನು ಕಲಿಯಬೇಕು, ಪ್ರತಿನಿತ್ಯ ಕುರಾನ್ ಓದಬೇಕು ಎನ್ನುವ ಮುಸ್ಲಿಂ ಸಮುದಾಯದ ಕಟ್ಟುಪಾಡುಗಳನ್ನು ಕಿತ್ತೆಸೆದು, ಕನ್ನಡವನ್ನು ಕಲಿತರು. ಬುರ್ಕಾ ಧರಿಸಿ, ಮದುವೆ-ಮಕ್ಕಳು-ಮನೆ ಎಂಬ ನಾಲ್ಕು ಗೋಡೆಗಳೊಳಗೇ ಬದುಕು ಎನ್ನುವ ಲಕ್ಷ್ಮಣ ರೇಖೆಯನ್ನು ದಾಟಿದರು. ಬರಿ ದಾಟಿದ್ದಲ್ಲ, ಹೆಣ್ಣುಮಕ್ಕಳಿಗೆ ಮಾದರಿಯಾದರು. ಈ ನಿಟ್ಟಿನಲ್ಲಿ ಬಾನು ಅವರಿಗೆ ಬೆಂಬಲವಾಗಿ ನಿಂತವರು; ಕಷ್ಟ-ನಷ್ಟಗಳನ್ನು ಅನುಭವಿಸಿದವರು ಅವರ ಪತಿ ಮುಷ್ತಾಕ್.
ಬಾನು ಮುಷ್ತಾಕ್ ಅವರು ಬರಹವನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿ ಕಾದಂಬರಿ, ಕಥಾ ಸಂಕಲನ, ಪ್ರಬಂಧ, ಕವನಗಳನ್ನಷ್ಟೇ ಅಲ್ಲ, ಅನುವಾದವನ್ನು ಮಾಡಿದ್ದಾರೆ. ‘ಎದೆಯ ಹಣತೆʼ, ʼಹೆಜ್ಜೆ ಮೂಡಿದ ಹಾದಿʼ, ʼಬೆಂಕಿ ಮಳೆʼ, ʼಸಫೀರಾʼ, ʼಬಡವರ ಮಗಳು ಹೆಣ್ಣಲ್ಲʼ, ‘ಕುಬ್ರ’ ಮೊದಲಾದ ಕಥಾಸಂಕಲನಗಳನ್ನು; ʼಒದ್ದೆ ಕಣ್ಣಿನ ಬಾಗಿನʼ ಎಂಬ ಕವನ ಸಂಕಲನವನ್ನು; ʼಇಬ್ಬನಿಯ ಕಾವುʼ, ʼಹೂ ಕಣಿವೆಯ ಚಾರಣʼ ಲೇಖನ ಸಂಕಲನಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಫಾರ್ಸಿ ಮೂಲದ ಇತಿಹಾಸ ಗ್ರಂಥ ʼತಾರೀಖ್ -ಎ-ಫೆರಿಸ್ತಾʼವನ್ನು ಉರ್ದು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇದನ್ನು ಓದಿದ್ದೀರಾ?: ಕನ್ನಡದ ಲೇಖಕಿ ಬಾನು ಮುಷ್ತಾಕ್‌ಗೆ ಅಂತಾರಾಷ್ಟ್ರೀಯ ‘ಬೂಕರ್’ ಪ್ರಶಸ್ತಿ
ಬಾನು ಅವರ ಕಾಡುವ ಕತೆಗಳಲ್ಲಿ ಒಂದಾದ ʼಕರಿನಾಗರಗಳುʼ ಕತೆಯನ್ನು ಕನ್ನಡದ ಖ್ಯಾತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ʼಹಸೀನಾʼ ಚಿತ್ರವನ್ನಾಗಿಸಿದ್ದಾರೆ. ಈ ಚಿತ್ರದ ನಟನೆಗಾಗಿ ತಾರಾ ಅವರಿಗೆ ಮತ್ತು ಚಿತ್ರಕ್ಕೆ ಮೂರು ಪ್ರಶಸ್ತಿಗಳು ಲಭಿಸುವ ಮೂಲಕ ರಾಷ್ಟ್ರೀಯ ಪುರಸ್ಕಾರಕ್ಕೆ ಒಳಗಾಗಿದ್ದೂ ಇದೆ. ಇದರ ಜೊತೆಗೆ ಬಾನು ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ.
ಈಗ, ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯನ್ನು ಬಾನು ಅವರು ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡಕ್ಕೆ, ಕನ್ನಡ ಸಾಹಿತ್ಯ ಲೋಕಕ್ಕೆ, ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಇವರ ಕನ್ನಡದ ಕತೆಯನ್ನು ಅದರ ಬನಿ ಹಾಳಾಗದ ಹಾಗೆ ಕೊಡಗಿನ ಕನ್ನಡತಿ ದೀಪ ಭಾಸ್ತಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕನ್ನಡ ನೆಲದ ಕತೆಯೊಂದನ್ನು ದೇಶದ ಗಡಿದಾಟಿಸಿ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಕ್ಕೆ ಕಾರಣರಾದ ಇಬ್ಬರು ಕನ್ನಡದ ಹೆಣ್ಣುಜೀವಗಳಿಗೆ, ಅವರ ಸೃಜನಶೀಲತೆಗೆ ಎಲ್ಲರೂ ಅಭಿನಂದಿಸಬೇಕು. ಜೊತೆಗೆ ಪುಸ್ತಕ ಪ್ರಕಟಿಸಿದ ಪ್ರಕಾಶಕರು, ಸಂಪಾದಕವರ್ಗವನ್ನೂ ನೆನೆಯಬೇಕು.

ಲೇಖಕ, ಪತ್ರಕರ್ತ
ಸಮರ್ಪಕವಾದ ಲೇಖನ ಬಸು. ಅಭಿನಂದನೆಗಳು.