ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ನಡೆಸುತ್ತಿದ್ದ ಚರ್ಚೆಯ ವೇಳೆ ಅರ್ಧ ಶಾಸಕರು ವಿಪಕ್ಷ ನಾಯಕ ಆರ್. ಅಶೋಕ್ ಅವರೊಂದಿಗೆ ತೆರಳಿದರೆ, ಇನ್ನರ್ಧ ಶಾಸಕರು ವಿಜಯೇಂದ್ರರೊಂದಿಗೆ ನಿಂತ ಪ್ರಸಂಗ ನಡೆಯಿತು.
ಇತ್ತೀಚೆಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯನಾಗಿರುವ ಪೃಥ್ವಿ ಸಿಂಗ್ ಮೇಲೆ ಬೆಳಗಾವಿಯ ಜಯನಗರದ ನಿವಾಸದ ಬಳಿ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಉತ್ತರ ನೀಡುತ್ತಿದ್ದರು. ಅವರ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಶಾಸಕರು, ಆರೋಪಿಗಳನ್ನು ಬಂಧಿಸಬೇಕೆಂದು ಪಟ್ಟು ಹಿಡಿದು ಬೊಬ್ಬೆ ಹೊಡೆಯಲು ಆರಂಭಿಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು.
ಈ ವೇಳೆ ವಿಪಕ್ಷ ನಾಯಕರಾದ ಆರ್ ಅಶೋಕ್, ‘ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಈ ಸರ್ಕಾರದಿಂದ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲ” ಎಂದು ಹೇಳುತ್ತಾ ಹೊರ ನಡೆದರು. ಅವರೊಂದಿಗೆ ಅರ್ಧ ಬಿಜೆಪಿ ಶಾಸಕರು ತೆರಳಿದರು.
ಆದರೆ, ಇನ್ನರ್ಧ ಶಾಸಕರು ಕುರ್ಚಿ ಬಿಟ್ಟು ಎದ್ದೇಳಲೇ ಇಲ್ಲ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಕೆಲವು ಶಾಸಕರು ಧರಣಿ ನಡೆಸಲು ಮುಂದಾದರು. ಈ ವೇಳೆ ಶಾಸಕ ಗೋಪಾಲಯ್ಯ, ವಿಜಯೇಂದ್ರ ಅವರಿಗೆ ಸದನದ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಅಶೋಕ್ ಅವರೊಂದಿಗೆ ನಾವೂ ಕೂಡ ತೆರಳುವಂತೆ ಸೂಚಿಸುವುದು ಕಂಡು ಬಂತು. ಸದನದೊಳಗೆ ವಿಜಯೇಂದ್ರ ಅವರ ನೇತೃತ್ವದಲ್ಲಿ ಗುಂಪುಗೂಡಿ ಚರ್ಚೆ ನಡೆಸಿದ ಬಳಿಕ ಬಿಜೆಪಿ ಶಾಸಕರು ಅಲ್ಲಿಂದ ತೆರಳಿದರು.
ಈ ವೇಳೆ ಬಿಜೆಪಿಯಲ್ಲಿ ಸಮನ್ವಯತೆ, ಒಗ್ಗಟ್ಟು ಇಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತಿದ್ದು, ಬಿಜೆಪಿಯೊಳಗಿನ ಗುಂಪುಗಾರಿಕೆ ಎದ್ದು ಕಾಣುತ್ತಿತ್ತು ಎಂದು ಕಾಂಗ್ರೆಸ್ ಶಾಸಕರು ಕಿಚಾಯಿಸಿದ್ದೂ ನಡೆಯಿತು.
ಇದೇ ಸಂದರ್ಭದಲ್ಲಿ ಎದ್ದು ನಿಂತ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, “ಬಿಜೆಪಿಯವರಲ್ಲಿ ಧರಣಿ ನಡೆಸುವವರ ಒಂದು ಗುಂಪು, ವಾಕೌಟ್ ಮಾಡುವವರದ್ದು ಒಂದು ಗುಂಪು. ಸರ್ಕಾರ 110 ಕೋಟಿ ಖರ್ಚು ಮಾಡಿ ಬೆಳಗಾವಿಗೆ ಬರುವಂತೆ ಮಾಡುತ್ತೆ. ಬಿಜೆಪಿಯವರು ಸದನ ನಡೆಸುವುದಕ್ಕೆ ಅವಕಾಶ ಮಾಡಿಕೊಡುವುದನ್ನು ಬಿಟ್ಟು, ಸಣ್ಣಪುಟ್ಟ ವಿಷಯಗಳಿಗೆ ಸದನ ತೊರೆಯುವುದೇ ಆಯ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರ ವಿರುದ್ಧ ಸ್ಪೀಕರ್ ಯು ಟಿ ಖಾದರ್ ಕೂಡ, ಏನು ಪದೇ ಪದೇ ಗಲಾಟೆ ಮಾಡ್ತಿರಿ, ಬರಗಾಲದ ಬಗ್ಗೆ ಚರ್ಚೆ ಮಾಡಿ ಎಂದು ವಿನಂತಿಸಿಕೊಂಡರು.