ಬಿಜೆಪಿ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನಾ ಬರಹ: ಶಿವಸುಂದರ್‌

Date:

Advertisements

ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆ. ಅವರು ಹೇಳುತ್ತಿರುವುದಕ್ಕೂ ಮತ್ತು ನಡೆದುಕೊಂಡಿರುವುದಕ್ಕೂ ಹೋಲಿಕೆ ಇಲ್ಲ ಎಂದು ರಾಜಕೀಯ ವಿಶ್ಲೇಷಕರಾದ ಶಿವಸುಂದರ್‌ ಅಭಿಪ್ರಾಯಪಟ್ಟರು.

ಚಿಕ್ಕು ಕ್ರಿಯೇಷನ್ ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ “ಚಂದ್ರಪ್ರಭ ಕಠಾರಿಯವರ ‘ಕಠಾರಿ ಅಂಚಿನ ನಡಿಗೆ- ಸಮಕಾಲೀನ ವಿಡಂಬನೆಗಳ ಪುಸ್ತಕ’ ಲೋಕಾರ್ಪಣೆ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬೇಕು. ಮಾನವತೆಯು ಮಸಣ ಸೇರುವ ಹೊತ್ತಿನಲ್ಲಿ ಮಾತನಾಡುವುದೇ ಕಷ್ಟವಾಗಿದೆ. ಇಂದಿಗೆ ಬಹುದೊಡ್ಡ ವಿಡಂಬನಾತ್ಮಕ ಬರಹವೆಂದರೆ ಬಿಜೆಪಿಯ ಪ್ರಣಾಳಿಕೆ. ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್‌ ಎನ್ನುತ್ತಾರೆ; ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿರುವುದಾಗಿ ಹೇಳುತ್ತಾರೆ ಎಂದು ಟೀಕಿಸಿದರು.

Advertisements

ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತೇವೆ, ಎಲೆಕ್ಟೋರಲ್ ಬಾಂಡ್‌ ಮೂಲಕ ಪಾರದರ್ಶಕತೆ ತಂದಿದ್ದೇವೆ ಎನ್ನುತ್ತಾರೆ. ಆದರೆ ಬಾಂಡ್‌ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ನಲ್ಲಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

Shivasundar 1
ರಾಜಕೀಯ ವಿಶ್ಲೇಷಕರಾದ ಶಿವಸುಂದರ್‌ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು

‘ನಿನ್ನ ಸೇನೆಯ ಸೇನಾಧಿಪತಿಯೇ ನಿನ್ನ ಶತ್ರು’ ಎನ್ನುತ್ತಾನೆ ಕವಿ ಬ್ರೆಕ್ಟ್‌. ನೀನು ನಮ್ಮ ಶತ್ರು ಎಂದು ಹೇಳುವುದಕ್ಕೂ ಶಕ್ತಿ ಬೇಕು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅಭಿವ್ಯಕ್ತಿಯ ನಂತರ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಭೀಮಾ ಕೋರೆಂಗಾವ್‌, ಉಮರ್‌ ಖಾಲಿದ್‌, ಗೌರಿ ಲಂಕೇಶ್‌, ಎಂ.ಎಂ.ಕಲ್ಬುರ್ಗಿ- ಈ ಪ್ರಕರಣಗಳು ನಮ್ಮ ಮುಂದಿವೆ ಎಂದು ದೇಶದಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

ಸಾವರ್ಕರ್‌ ಸಿನಿಮಾದಲ್ಲಿ ಗಾಂಧಿಯನ್ನು ಕಮ್ಮಿ ಮಾಡಿದರು; ಗಾಂಧಿ ಪಿಚ್ಚರ್‌ನಲ್ಲಿ ಸಾವರ್ಕರ್‌ ಕಮ್ಮಿಯಾದರು ಎನ್ನುವವರು ನಮ್ಮಲ್ಲಿದ್ದಾರೆ.  ಅಂಥವರು ಸಾಹಿತ್ಯ  ಶಿಖಾಮಣಿಗಳಾಗಿರುತ್ತಾರೆ. ಅವರು ಯಾವುದಕ್ಕೂ ಪ್ರಯೋಜನವಿಲ್ಲ. ಅಂಥದ್ದರಲ್ಲಿ ಕಂಡಿದ್ದದನ್ನು ಕಂಡಹಾಗೆ ಬರೆಯುವುದಕ್ಕೆ ಧೈರ್ಯ ಬೇಕು. ದೇಶ ಹೊತ್ತಿ ಉರಿಯುವಾಗ ಏನಯ್ಯ ಮಾಡುತ್ತಿದ್ದೆ? ಯಾರ ಪರವಾಗಿದ್ದೆ? ಎಂಬ ಪ್ರಶ್ನೆ ಬರುತ್ತದೆ. ಕಠಾರಿಯವರು ಒಂದು ಪುಸ್ತಕ ಬರೆದಿದ್ದಾರೆ. ಹೀಗೆ ಹೆಚ್ಚು ಹೆಚ್ಚು ಮಾತನಾಡಬೇಕಿದೆ, ಅವರ ಕಿವಿ ಮುಚ್ಚಿಹೋಗುವಷ್ಟು ಮಾತನಾಡಬೇಕಿದೆ, ಜನರಿಗೆ ಸತ್ಯಗಳನ್ನು ತಿಳಿಸಬೇಕಿದೆ. ಕಾಲದ ಕರೆಗೆ ಓಗೊಟ್ಟು ಕವಿತೆ ಬರೆಯುತ್ತಾನೋ, ಘೋಷಣೆ ಕೂಗುತ್ತಾನೋ ಮುಖ್ಯವಲ್ಲ. ಇಂದಿಗೆ ಸ್ಪಂದಿಸುತ್ತಿರುವುದು ಬಹಳ ಮುಖ್ಯ ಎಂದು ತಿಳಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, “ನಮ್ಮ ಗಾಯಗಳನ್ನು ನೆನಪಿಸುವ ಕೆಲಸವನ್ನು ತುಸು ಗಡುಸಾಗಿ, ಮುಖಕ್ಕೆ ಹೊಡೆದಂತೆ ಕಠಾರಿಯವರು ಬರೆದಿದ್ದಾರೆ. ವಿಚ್ಛಿದ್ರಕಾರಿ ಶಕ್ತಿಗಳು ನಮ್ಮ ಸುತ್ತ ಕುಣಿದಾಡುವಾಗ ನಾವು ಕೂಡ ಒರಟಾಗುವುದು ಸಾಮಾನ್ಯ. ಹೀಗಾಗಿ ಇಲ್ಲಿನ ಭಾಷೆಯೂ ಕಟುವಾಗಿದೆ” ಎಂದು ಹೇಳಿದರು.

ಬೊಮ್ಮಾಯಿ ಅವಧಿಯಲ್ಲಿನ ಘಟನೆಗಳ ಕುರಿತು ಇಲ್ಲಿನ ವಿಡಂಬನೆಗಳಿವೆ. ಹಿಜಾಬು, ಹಲಾಲು, ಹಿಂದೂ- ಮುಸ್ಲಿಂ ಹುಡುಗರ ಕೊಲೆ, ದೇವಸ್ಥಾನದ ಬಳಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಫ್ರಿಂಜ್ ಎಲಿಮೆಂಟ್ಗಳು ಮಾಡಿದ ಅಟ್ಟಹಾಸ, ಪಠ್ಯಪುಸ್ತಕಗಳ ಕೇಸರೀಕರಣ, ಅದಕ್ಕೆ ನಾಡಿನ ಪ್ರತಿರೋಧ, ಮುಸ್ಲಿಂ ಬಡಪಾಯಿಯ ಕಲ್ಲಂಗಡಿಯನ್ನು ಛಿದ್ರ ಮಾಡಿದ ಘಟನೆ, ಹಿಂದಿ ಭಾಷೆಯ ಹೇರಿಕೆ, ಕೊರೊನಾ ಸಂದರ್ಭದಲ್ಲೂ ನಿಲ್ಲದ ಮುಸ್ಲಿಂ ದ್ವೇಷ ಮತ್ತು ಮುಸ್ಲಿಂ ಸಮುದಾಯ ಮಾಡಿದ ಅಂತ್ಯಸಂಸ್ಕಾರಗಳು, ದೇಶಭಕ್ತಿಯ ಹುಸಿ ತೋರ್ಪಡಿಕೆ, ಇನ್‌ಸ್ಟಾಲ್‌ಮೆಂಟ್‌ನಲ್ಲಿ ಜನರ ಭಾವನೆಗಳ ಜೊತೆ ಆಟ, ಅಗ್ನಿಪಥ್ ಹೆಸರಲ್ಲಿ ಯುವಕರಿಗೆ ವಂಚನೆ, ಚೌಕಿದಾರನ ಅಸಲಿ ಮುಖ, ಎರಡಾಣೆ ಭಕ್ತರ ಬೈಗುಳ, ಆರ್‌ಎಸ್‌ಎಸ್‌ ಆಳಅಗಲ ಕೃತಿ ಉಂಟು ಮಾಡಿದ ಸಂಚಲನ, ಪತ್ರಕರ್ತರ ಸೋಗಿನ ಭಕ್ತಪಡೆ, ತಿನ್ನುವ ಅನ್ನದಲ್ಲಿ ರಾಜಕಾರಣ, ಅಪೌಷ್ಟಿಕತೆ ನಿವಾರಣೆಗೆ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದರೂ ವಿವಾದ, ದೇವರು, ಧರ್ಮದ ಹೆಸರಲ್ಲಿ ಮಿತಿಮೀರಿದ ರಾಜಕಾರಣ, ಬಿಜೆಪಿ ಸೃಷ್ಟಿಸಿದ ಅರ್ಬನ್ ನಕ್ಸಲ್, ಆಂದೋಲನ ಜೀವಿ ಥರದ ಕೆಟ್ಟ ಪದಗಳು- ಹೀಗೆ ಕೋಮುವಾದದ ಬೇರೆ ಬೇರೆ ಎಳೆಗಳನ್ನು ವಿಡಂಬನೆ ಮಾಡುತ್ತಾ ಸಾಗುತ್ತವೆ ಇಲ್ಲಿನ ಲೇಖನಗಳು ಎಂದು ವಿಶ್ಲೇಷಿಸಿದರು.

ಕಠಾರಿಯವರ ಬರಹ ಮುಖ್ಯವಾಗಿ ಕೋಮುವಾದದ ಬಗ್ಗೆ ಮಾತನಾಡುತ್ತದೆ. ಫ್ಯಾಸಿಸಂ ಬಗ್ಗೆ ಅವರು ಆತಂಕಗೊಂಡಿದ್ದಾರೆ. ಖಂಡಿತ ನಮ್ಮೆಲ್ಲರಿಗೂ ಅದರ ಭಯ ಇದ್ದೇ ಇದೆ. ಇಲ್ಲಿನ ವಿಡಂಬನೆಗಳಲ್ಲಿ ಜಾತಿ ಆಯಾಮಗಳ ಕುರಿತು ಇಲ್ಲದೆ ಇರುವುದು ಕೊರಗು ಹೌದು. ಆದರೆ ಹಾಗೆಂದು ಅವರು ಜಾತಿಯನ್ನು ಮರೆತಿದ್ದಾರೆ ಎಂದಲ್ಲ; ಕೋಮುವಾದವನ್ನು ನಾವು ಮಾತನಾಡುತ್ತಿದ್ದೇವೆ ಎಂದರೆ ಒಂದಲ್ಲ ಒಂದು ರೀತಿ ಸಮತಾ ಸಮಾಜ, ಅಸ್ಪೃಶ್ಯ ಮುಕ್ತ ಸಮಾಜದ ಬಗ್ಗೆ ಮಾತನಾಡುತ್ತಿದ್ದೇವೆ ಎಂದೇ ಅರ್ಥ. ಹಿಂದುತ್ವ ರಾಜಕಾರಣದ ಮೊದಲ ಮತ್ತು ಕೊನೆಯ ಅಜೆಂಡಾ ಶ್ರೇಣೀಕೃತ ಜಾತಿ ವ್ಯವಸ್ಥೆ. ಅದು ತೊಗಲಿನಲ್ಲಿ ಮುಸ್ಲಿಂ ದ್ವೇಷವನ್ನು ಹೊಂದಿದ್ದರೆ, ರಕ್ತ ಮಾಂಸವೆಲ್ಲ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಎಚ್ಚರಿಸಿದರು.

ಕೃತಿಯ ಲೇಖಕರಾದ ಚಂದ್ರಪ್ರಭ ಅವರು ಮಾತನಾಡಿ, “ವಾಟ್ಸಾಪ್ ಗ್ರೂಪೊಂದರಲ್ಲಿ ಪತ್ರಕರ್ತ ಮಿತ್ರರೊಬ್ಬರು ಕಾಶ್ಮೀರ್ ಫೈಲ್ಸ್‌ ಸಿನಿಮಾ ಕುರಿತು ಲೇಖನವೊಂದನ್ನು ಹಾಕಿದ್ದರು. ನೀವು ಪ್ರಕಟಿಸಿರುವ ಲೇಖನ ಹುಸಿ ವಿಚಾರಗಳಿಂದ ಕೂಡಿದೆ ಎಂದಾಗ ನೀವೊಂದು ಪ್ರತಿಕ್ರಿಯೆ ಬರೆಯಿರಿ ಎಂದರು. ಕಾಶ್ಮೀರ್‌ ಫೈಲ್ಸ್‌ ಸಿನಿಮಾದಲ್ಲಿನ ಸುಳ್ಳುಗಳನ್ನು ಬಯಲು ಮಾಡಿ ಬರೆದಾಗ ಲೇಖನ ಪ್ರಕಟಿಸಲಿಲ್ಲ. ಇದನ್ನು ಗಮನಿಸಿದ ಮಿತ್ರ ಹನುಮಂತ ಹಾಲಗೇರಿಯವರು ಲೇಖನವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ನಿರಂತರ ಬರೆಯಲು ಕೋರಿದರು. ಹಾಗೆ ಶುರುವಾಗಿ ಮೂಡಿಬಂದ ವಿಡಂಬನೆಗಳು ಇಂದು ಪುಸ್ತಕವಾಗಿ ನಿಮ್ಮ ಮುಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಬರಹಗಾರರಾದ ನಾಗರಾಜ್ ಶೆಟ್ಟಿಯವರು ಮಾತನಾಡಿ, “ಕಠಾರಿಯವರ ಬರಹದಲ್ಲಿ ಮೊಣಚಿದೆ, ಆಕ್ರೋಶವಿದೆ, ಆದರೆ ದ್ವೇಷವಿಲ್ಲ. ಮನೆಯ ಯಜಮಾನ, ತನ್ನ ಮನೆಯನ್ನು ಸರಿಪಡಿಸಲು ತಾಳುವ ಸಿಟ್ಟಿನಂತೆ ಇಲ್ಲಿನ ಬರಹಗಳಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ, ಬರಹಗಾರರಾದ ಜಿ.ಎನ್.ಮೋಹನ್, ನಾಗೇಗೌಡ ಕೀಲಾರ, ಹೋರಾಟಗಾರ ಎಚ್.ಸಿ.ಉಮೇಶ್‌, ಚಿಕ್ಕು ಕ್ರಿಯೇಷನ್ಸ್‌‌ ಪ್ರಕಾಶಕರಾದ ಸುಷ್ಮಾ ಕಠಾರಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಹಾಲಕ್ಷ್ಮಿ ಸ್ವಾಗತಿಸಿದರು, ಡಾ.ಪ್ರತಿಮಾ ವಿಜಯ್ ನಿರೂಪಣೆ ಮಾಡಿದರು, ಯುವರಾಜ್ ವಂದನಾರ್ಪಣೆ ಮಾಡಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯನವರೇ, ಸಾಮಾಜಿಕ ನ್ಯಾಯ ನಿಮ್ಮ ನುಡಿಯಲ್ಲಿದೆ, ಅದು ನಡೆಯಲ್ಲೂ ಇರಲಿ- ಪ್ರಕಾಶ್‌ ರಾಜ್‌

"ಸಾಮಾಜಿಕ ನ್ಯಾಯ ನಿಮ್ಮ ನುಡಿಯಲ್ಲಿದೆ, ಅದು ನಡೆಯಲ್ಲೂ ಇರಲಿ. ನಾಳೆ ರೈತರೊಂದಿಗೆ...

ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ರಾಜ್ಯದಲ್ಲಿ ಉದ್ಘಾಟನೆ

ಶರಾವತಿ ನದಿ ಹಿನ್ನೀರಿನ ಐತಿಹಾಸಿಕ ಸಿಗಂದೂರು ಸೇತುವೆಯನ್ನು ಕೇಂದ್ರ ಭೂ ಸಾರಿಗೆ...

ಧರ್ಮಸ್ಥಳ ಸಾವು ಪ್ರಕರಣ: ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ಸಿಎಂಗೆ ಮಹಿಳಾ ಆಯೋಗ ಪತ್ರ

ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ...

ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

ರಾಜ್ಯ ಸರ್ಕಾರದ ಶಿಕ್ಷಣ ನೀತಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣದ ಹಕ್ಕು,...

Download Eedina App Android / iOS

X