ಬೀದರ್ | ಔರಾದ ಶಾಸಕರ ಊರಿನಲ್ಲೇ ಇಲ್ಲ ಖಾಯಂ ಶಿಕ್ಷಕರು

Date:

ಕಾಲ ಕಾಲಕ್ಕೆ ಸರ್ಕಾರಗಳು ನೇರ ನೇಮಕಾತಿ ಮೂಲಕ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಆದರೆ, ಸಕಾಲಕ್ಕೆ ಶಿಕ್ಷಕರ ನೇಮಕಾತಿ ಆಗದಿರುವ ಪರಿಣಾಮ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿಗೆ ತಳ್ಳುವುದು ದುರಂತವೇ ಸರಿ.

ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ವರ್ಷಕ್ಕೊಂದು ವಿಭಿನ್ನ ಯೋಜನೆಗಳು ಜಾರಿಗೊಳಿಸುವುದು ಮಾಮೂಲಿ. ಆದರೆ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಬೋಧಿಸಲು ಕನಿಷ್ಠ ಶಿಕ್ಷಕರೇ ಇಲ್ಲ ಅಂದ್ಮೇಲೆ ಅದೆಷ್ಟೇ ಯೋಜನೆಗಳು ಜಾರಿಗೊಳಿಸಿದರೂ ವ್ಯರ್ಥ ಎನ್ನಬಹುದು.

ಬೀದರ್ ಮೊದಲೇ ಗಡಿ ಜಿಲ್ಲೆ, ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯೊಂದಿಗೆ ತನ್ನ ವ್ಯಾಪ್ತಿ ಹಂಚಿಕೊಂಡಿರುವ ಜಿಲ್ಲೆಗೆ, ‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿ ಇನ್ನೂ ಕಳಚಿಲ್ಲ. ಕರ್ನಾಟಕದ ನಕಾಶೆಯಲ್ಲಿ ಉತ್ತರದ ತುತ್ತ ತುದಿಯಲ್ಲಿ ಇರುವ ಜಿಲ್ಲೆ ಶೈಕ್ಷಣಿಕ ಫಲಿತಾಂಶಗಳ ಮೇಲೆ ಕಣ್ಣಾಡಿಸಿದರೆ ಕೆಳಭಾಗದಲ್ಲಿ ಕಾಣುತ್ತದೆ. ಇದು ಸಾಮಾನ್ಯ ಎನ್ನದೆ ವಿಧಿಯಿಲ್ಲ. ಆದರೆ ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯೂ ಹೌದು.

2023-24ನೇ ಶೈಕ್ಷಣಿಕ ಸಾಲಿಗೆ ಔರಾದ್ ತಾಲೂಕಿನಲ್ಲಿ 293 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 31 ಪ್ರೌಢಶಾಲೆಗಳಿವೆ. 293 ಪ್ರಾಥಮಿಕ ಶಾಲೆಗೆ 973 ಮತ್ತು ಪ್ರೌಢಶಾಲೆಗೆ 235 ಖಾಯಂ ಶಿಕ್ಷಕರಿದ್ದಾರೆ. ಇನ್ನೊಂದು ವಿಚಿತ್ರವೆಂದರೆ ಔರಾದ ತಾಲೂಕಿನಲ್ಲೇ 296 ಪ್ರಾಥಮಿಕ ಹಾಗೂ 62 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.‌ ಅಂದರೆ ಪ್ರಾಥಮಿಕ, ಪ್ರೌಢಶಾಲೆಗೆ ಒಟ್ಟು 25% ಕ್ಕಿಂತ ಹೆಚ್ಚಿನ ಶಿಕ್ಷಕರ ಕೊರತೆ ಬರೀ ಒಂದು ತಾಲೂಕಿನಲ್ಲಿದೆ.

ಅತಿಥಿ ಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳ ಉಳಿವು?

ಕಾಲ ಕಾಲಕ್ಕೆ ಸರ್ಕಾರಗಳು ನೇರ ನೇಮಕಾತಿ ಮೂಲಕ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಆದರೆ, ಸಕಾಲಕ್ಕೆ ಶಿಕ್ಷಕರ ನೇಮಕಾತಿ ಆಗದಿರುವ ಪರಿಣಾಮ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿಗೆ ತಳ್ಳುವುದು ದುರಂತವೇ ಸರಿ.

ಔರಾದ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಖಾಲಿಯಿರುವ ಹುದ್ದೆಗಳಿಗೆ ಅನುಕ್ರಮವಾಗಿ 125:42 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶಿಸಿದ್ದಾರೆ. ತಾಲೂಕಿನಲ್ಲಿ 350 ಕ್ಕಿಂತಲೂ ಹೆಚ್ಚಿನ ಶಿಕ್ಷಕರ ಅಗತ್ಯವಿದೆ. ಆದರೆ ಅರ್ಧದಷ್ಟು ಅತಿಥಿ ಶಿಕ್ಷಕರಿಂದ ಶಾಲೆಗಳು ಚಾಲ್ತಿಯಲ್ಲಿಡುವ ಅನಿವಾರ್ಯತೆ ಎದುರಾಗಿದೆ. ವಿಷಯವಾರು ಶಿಕ್ಷಕರು ಸೇರಿದಂತೆ, ಗರಿಷ್ಠ ಅತಿಥಿ ಶಿಕ್ಷಕರಿಂದಲೇ ಸರ್ಕಾರಿ ಶಾಲೆಗಳು ಮುನ್ನಡೆಸಿದರೆ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ದೊರೆಯುವುದೇ? ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವೇ ಎಂಬುದು ತಾಲೂಕಿನ ಪ್ರಜ್ಞಾವಂತರ ಪ್ರಶ್ನೆಯಾಗಿದೆ.

7 ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ:

ಔರಾದ ತಾಲೂಕಿನ ಒಟ್ಟು 293 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ ಗುಡಪಳ್ಳಿ ತಾಂಡಾ, ತುಳಜಾಪೂರ, ಖಾಸೆಂಪೂರ (ಎ), ಘಮಸುಬಾಯಿ ತಾಂಡಾ, ಖಂಡಿಕೆರಾ ತಾಂಡಾ, ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಔರಾದ (ಬಾ) ಹಾಗೂ ಬಸನಾಳ ಸೇರಿ ಒಟ್ಟು 7 ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೂನ್ಯ ಶಿಕ್ಷಕರಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮಾಹಿತಿ. ವರ್ಗಾವಣೆ, ನಿವೃತ್ತಿ ಮುಂಬಡ್ತಿ ಸೇರಿದಂತೆ ಇತರೆ ಕಾರಣಗಳಿಂದ ಖಾಲಿಯಾದ ಈ ಶಾಲೆಗಳಿಗೆ ನಿಯೋಜಿತ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರೇ ಗತಿ ಎಂಬಂತಾಗಿದೆ. ಔರಾದ ತಾಲೂಕಿನ ಶಾಸಕ ಹಾಗೂ ಮಾಜಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರ ಸ್ವಂತ ಊರು ಘುಮಸಾಬಾಯಿ ತಾಂಡಾ ದಲ್ಲಿಯೇ ಖಾಯಂ ಶಿಕ್ಷಕರಿಲ್ಲ ಎಂಬುದು ದುರ್ದೈವ.

ಸರ್ಕಾರಿ ಶಾಲೆಗಳ ಅಳಿವು – ಉಳಿವು:

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕಾಲಕಾಲಕ್ಕೆ ಅನುದಾನ ನೀಡುತ್ತದೆ. ಶಾಲೆಯ ಶೈಕ್ಷಣಿಕ ಪ್ರಗತಿಯ ಕುರಿತು ಗಂಭೀರವಾಗಿ ಪರಿಗಣಿಸದ ಸರ್ಕಾರ ಹಾಗೂ ಇಲಾಖೆ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಬರೀ 10-20, ಹಾಜರಾತಿ 8-10 ಇರುತ್ತದೆ. ಆದರೆ ವರ್ಷಕೊಮ್ಮೆ ಕೋಣೆಗಳ ಸಂಖ್ಯೆ ಏರುತ್ತಲೇ ಇರುತ್ತದೆ. ಆದರೆ ಕೆಲವು ಶಾಲೆಗಳಲ್ಲಿ ಗರಿಷ್ಠ ದಾಖಲಾತಿ ಹಾಗೂ ಹಾಜರಾತಿ ಇದ್ದರೂ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುತುವರ್ಜಿ ವಹಿಸುದಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ “ಎಲ್ಲವೂ ಇದೆ, ಈಗ ಏನೂ ಉಳಿದಿಲ್ಲ” ಎನ್ನುವಂತೆ ‌ಬಹುತೇಕ ಜನರಿಗೆ ಮನದಟ್ಟಾಗಿದೆ. ಸರ್ಕಾರಿ ಶಾಲೆಗಳ ಸುಧಾರಣೆಗೆ ಯೋಜನೆ ರೂಪಿಸುವ ಸರ್ಕಾರ ಹಾಗೂ ಇಲಾಖೆ ಟೀನ್ ಶೆಡ್ ನಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವುದು ಮಾತ್ರ ನಿಲ್ಲಿಸುವುದಿಲ್ಲ. ಈ ಮಧ್ಯೆ ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬುದು ಬಹುತೇಕ ಪ್ರಜ್ಞಾವಂತ ನಾಗರಿಕರ ಒಕ್ಕೊರಲ ದನಿ.

ಏಕೋಪಾಧ್ಯಯ ಶಾಲೆಗಳ ಸಂಖ್ಯೆ ಏರಿಕೆ:

ತಾಲೂಕಿನ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎರಡಂಕಿ, ಮೂರಂಕಿ ಹಾಜರಾತಿ ಇಲ್ಲ. ಇನ್ನು 20ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ಹಾಜರಿರುವ ಮಕ್ಕಳಿಗೆ ಏಕ ಶಿಕ್ಷಕರಿದ್ದಾರೆ ಎಂಬುದು ಇಲಾಖೆಯ ಅಧಿಕಾರಿಗಳೊಬ್ಬರು ಹೇಳುತ್ತಾರೆ. ಸರ್ಕಾರಿ ಶಾಲೆಗಳು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಪುಸ್ತಕ, ಸಮವಸ್ತ್ರ ಸೇರಿದಂತೆ ಇತರೆ ಎಲ್ಲವೂ ಉಚಿತವಾಗಿ ನೀಡುತ್ತಿದೆ. ಇಂದಿನ ಗ್ರಾಮೀಣ ಭಾಗದ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದಕ್ಕೆ ಮೂಲ ಕಾರಣ ಏನೆಂಬುದು ತುರ್ತಾಗಿ ಚರ್ಚಿಸುವ ವಿಷಯ.

ರಾಜ್ಯದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು 9257 ಬೋಧಕ ಹುದ್ದೆ ಖಾಲಿಯಿದ್ದು, ಅದರಲ್ಲಿ 6 ಸಾವಿರ , ಅಂದರೆ ಖಾಲಿ ಹುದ್ದೆಗಳ ಒಟ್ಟು ಸಂಖ್ಯೆಯ ಶೇ 65% ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಇಲಾಖೆ ಆದೇಶಿಸಿದೆ. ಬೀದರ್ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಒಟ್ಟು 295 ಖಾಲಿ ಹುದ್ದೆಗಳ ಪೈಕಿ 191 ಅತಿಥಿ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಗೆ 681 ಶಿಕ್ಷಕರಿಗೆ ನೇಮಿಸಿಕೊಳ್ಳಲು ಇಲಾಖೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಈದಿನ.ಕಾಮ್‌‘ ಜೊತೆ ಮಾತನಾಡಿದ ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಸೂದ್ ಅಹ್ಮದ್, “ಶಿಕ್ಷಕರ ಕೊರತೆ ಇಡೀ ಕರ್ನಾಟಕ ರಾಜ್ಯದಲ್ಲೇ ಇದೆ. ಔರಾದ ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವರ್ಗಾವಣೆ, ಹೊಸ ಶಿಕ್ಷಕರ ನೇಮಕಾತಿ ಮೂಲಕ ಖಾಲಿ ಹುದ್ದೆಗಳು ಭರ್ತಿ ಮಾಡಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ಔರಾದನಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಬಹುಶಃ ಜಿಲ್ಲೆಯಲ್ಲಿ ಬಸವಕಲ್ಯಾಣ ಹೊರತುಪಡಿಸಿದರೆ ಔರಾದನಲ್ಲೇ ಹೆಚ್ಚು ಶಿಕ್ಷಕ ಹುದ್ದೆ ಖಾಲಿಯಿವೆ. ತಾಲೂಕಿನ ಮಹಾರಾಷ್ಟ್ರ , ತೆಲಂಗಾಣ ಗಡಿ ಭಾಗದ ಗ್ರಾಮಗಳಲ್ಲಿ ಮರಾಠಿ ಶಾಲೆಗಳಿವೆ, ಅಲ್ಲಿಯೂ ಕನ್ನಡ ಸೇರಿದಂತೆ ಇತರೆ ವಿಷಯ ಶಿಕ್ಷಕರಿಲ್ಲ. ಇದರಿಂದ ತಾಲೂಕು ಶೈಕ್ಷಣಿಕವಾಗಿ ಕುಂಠಿತವಾಗುತ್ತಿದೆ” ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜಾನನ ಮಳ್ಳಾ ‘ಈದಿನ.ಕಾಮ್‌‘ಗೆ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಅಂದರೆ ಬಹುತೇಕರು ಮೂಗು ಮುರಿಯುತ್ತಾರೆ. ಈ ಮಧ್ಯೆ ಕೆಲವು ಕನ್ನಡ ಸರ್ಕಾರಿ ಶಾಲೆಗಳು ಕಾನ್ವೆಂಟ್ ಗಳಿಗೆ ಮೀರಿಸಿ ಮಾದರಿ ಎನಿಸಿಕೊಂಡಿದ್ದು ಎದೆತಟ್ಟಿಕೊಳ್ಳುವ ಹೆಮ್ಮೆ ಎನಿಸಿದರೆ, ಗ್ರಾಮೀಣ ಭಾಗದ ಹಲವು ‘ನಮ್ಮೂರ ಸರ್ಕಾರಿ ಶಾಲೆ’ ಈಗ ಬರೀ ಬಡ ಮಕ್ಕಳ ಶಾಲೆಗಳಂತೆ ಕಾಣುತ್ತಿರುವುದು ಕೆಟ್ಟ ಬೆಳವಣಿಗೆ ಎನ್ನಬಹುದು.‌ ಕನ್ನಡ ಭಾಷೆ, ನಾಡು ನುಡಿ ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಶಿಕ್ಷಣ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ಮಾತನಾಡುತ್ತಲೇ ಇರುತ್ತಾರೆ. ಆದರೆ ಶಿಕ್ಷಕರ ನೇಮಕಾತಿ ಮಾಡದೇ ಖಾಲಿ ಬಿಟ್ಟರೆ ಶಾಲೆಗಳು ಸುಧಾರಣೆಯಾಗುವುದು ಹೇಗೆ, ಮಕ್ಕಳ ಭವಿಷ್ಯ ಉಜ್ವಲ ಆಗುವುದು ಯಾವಾಗ ಎಂಬುದು ಪೋಷಕರ ಪ್ರಶ್ನೆ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಜಾತಿ ನಿಂದನೆ; ನಟ ಉಪೇಂದ್ರ ಬಂಧನಕ್ಕೆ ಆಗ್ರಹ

ನಟ ಉಪೇಂದ್ರ ಅವರು, ʼಊರು ಇದ್ದಲ್ಲಿ ಹೊಲಗೇರಿʼ ಎನ್ನುವ ಮಾತನ್ನು ಹೇಳುವುದರ...

ಕಾವೇರಿ ವಿವಾದ | ಬೆಂಗಳೂರು ಬಂದ್‌ಗೆ ಎಫ್‌ಐಟಿಯು ಬೆಂಬಲ: ಅಬ್ದುಲ್ ರಹಿಮಾನ್

ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಫೆಡರೇಶನ್...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ

2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರುವುದಾಗಿ...

ಬೀದರ್‌ | ಪಡಿತರದಲ್ಲಿ ಅಕ್ರಮ; 22 ನ್ಯಾಯಬೆಲೆ ಅಂಗಡಿಗಳ ಅಮಾನತು

ಪಡಿತರ ಮಾರಾಟದಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ದರ ವಿಧಿಸುವುದು, ಇಲ್ಲವೇ ಬಯೋಮೆಟ್ರಿಕ್‌...