ಬಿಜೆಪಿ ಆತ್ಮಾವಲೋಕನ : ಕೆ ಸುಧಾಕರ್ ಕುಯಿಲು, ಎಂಟಿಬಿ ಹುಯಿಲು!

Date:

Advertisements
ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆ. ಸುಧಾಕರ್ ವಿರುದ್ಧ ಕೆಂಡ ಕಾರಿದ್ದಾರೆ. ಆದರೆ, ಕೆಂಪಣ್ಣನಂಥವರು ಸುಧಾಕರ್ ಬಗ್ಗೆ ಬಹಿರಂಗವಾಗಿ ಹೇಳಿದಾಗ ಬಿಜೆಪಿಯ ಯಾರೊಬ್ಬರೂ ಕೂಡ ಪಕ್ಷದ ವೇದಿಕೆಗಳಲ್ಲಿಯಾದರೂ ಅದನ್ನು ಪ್ರಸ್ತಾಪ ಮಾಡಲಿಲ್ಲ; ಸುಧಾಕರ್‌ಗೆ ಬುದ್ಧಿ ಹೇಳುವ, ಅವರನ್ನು ತಡೆಯುವ ಕೆಲಸ ಮಾಡಲಿಲ್ಲ. ಅದೆಲ್ಲದರ ಫಲವೇ ಈ ಚುನಾವಣಾ ಸೋಲು.

ಬಿಜೆಪಿಗಿದು ಆತ್ಮಾವಲೋಕನದ ಕಾಲ. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಮುಖಂಡರು ಆತ್ಮಾವಲೋಕನದಲ್ಲಿ ತೊಡಗಿದ್ದಾರೆ. ವಿಚಿತ್ರ ಎಂದರೆ, ಆತ್ಮಾವಲೋಕನದ ಹೆಸರಿನಲ್ಲಿ ಕೆಲವು ಮುಖಂಡರು ತಮ್ಮದೇನೂ ತಪ್ಪೇ ಇಲ್ಲ ಎನ್ನುವಂತೆ ತಿಪ್ಪೆ ಸಾರಿಸುತ್ತಿದ್ದರೆ, ಕೆಲವರು ಮಾತ್ರ ಸತ್ಯ ಹೇಳುವ ಧೈರ್ಯ ತೋರುತ್ತಿದ್ದಾರೆ. ಅಂಥವರ ಪೈಕಿ ಹೊಸಕೋಟೆಯ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಕೂಡ ಒಬ್ಬರು.

ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿಯ ಬಹುತೇಕ ಹಿರಿಯ ಮುಖಂಡರು ಚುನಾವಣಾ ಸೋಲಿನಲ್ಲಿ ತಮ್ಮ ಪಕ್ಷದ್ದೇನೂ ಪಾತ್ರವೇ ಇಲ್ಲ ಎನ್ನುವಂತೆ ಮಾತನಾಡಿದ್ದಾರೆ. ಒಳಮೀಸಲಾತಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮತ್ತು ತಮ್ಮ ಸರ್ಕಾರದ ವಿರುದ್ಧದ ಅಪಪ್ರಚಾರಗಳಿಂದ ಬಿಜೆಪಿ ಸೋತಿದೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಸಭೆಯ ನಂತರ ಸಿ ಟಿ ರವಿ ಹೇಳಿದ್ದಾರೆ. ಪಕ್ಷದ ಸೋಲಿನ ಕಾರಣ ಇರಲಿ, ತಮ್ಮ ಒಂದು ಕಾಲದ ಶಿಷ್ಯನಿಂದಲೇ ಸೋತರೂ ಆ ಸೋಲಿಗೆ ನಿಜವಾದ ಕಾರಣವೇನು ಎನ್ನುವುದು ಕೂಡ ಸಿ ಟಿ ರವಿಯವರಿಗೆ ಇನ್ನೂ ಅರ್ಥವಾದಂತಿಲ್ಲ. ಸದಾ ಕಾಲ ಹಿಜಾಬ್, ಹಲಾಲ್, ದತ್ತ ಪೀಠ ಮುಂತಾದ ಅನಗತ್ಯ ವಿಚಾರಗಳನ್ನು ಕೆದಕುತ್ತಾ ಜನರನ್ನು, ಅಭಿವೃದ್ಧಿಯನ್ನು ಮರೆತದ್ದರ ಪಲವೇ ತಮ್ಮ ಸೋಲು ಎಂದು ಅವರು ನಿಜವಾದ ಅರ್ಥದಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಿದ್ದರೆ ಅರ್ಥವಾಗುತ್ತಿತ್ತು.

ಅದೇ ಸಭೆಯಲ್ಲಿ ಭಾಗವಹಿಸಿದ್ದ ಹೊಸಕೋಟೆಯ ಪರಾಜಿತ ಅಭ್ಯರ್ಥಿ ಎಂ ಟಿ ಬಿ ನಾಗರಾಜ್ ತನ್ನ ಸೋಲಿಗೆ ಆಗ ಆರೋಗ್ಯ ಸಚಿವರಾಗಿದ್ದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರೇ ಕಾರಣ ಎಂದು ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದಿದ್ದ ತಾನು ಬಿಜೆಪಿಗೆ ಬಂದ ನಂತರ ಸತತ ಎರಡು ಬಾರಿ ಸೋತೆ ಎಂದು ಎಂಟಿಬಿ ಹುಯಿಲಿಟ್ಟಿದ್ದಾರೆ. ಶತಕೋಟ್ಯಾಧಿಪತಿಯಾದ ತನ್ನನ್ನು ಮಣಿಸುವವರೇ ಇಲ್ಲ ಎಂದುಕೊಂಡಿದ್ದ ಎಂಟಿಬಿಗೆ ನಿಧಾನಕ್ಕೆ ಜ್ಞಾನೋದಯ ಆದಂತಿದೆ.

Advertisements

ಈ ಸುದ್ದಿ ಓದಿದ್ದೀರಾ: ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

ಎಂಟಿಬಿ ಹೇಳಿದ್ದರಲ್ಲಿ ಸತ್ಯವಿದೆ. ಬಿಜೆಪಿ ಸೋಲಿನಲ್ಲಿ ಡಾ.ಕೆ.ಸುಧಾಕರ್ ಪಾಲು ದೊಡ್ಡದು. ಕೋವಿಡ್ ಕಾಲದಲ್ಲಿ ಅವರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ ಮತ್ತು ಕಾಮಗಾರಿ ಗುತ್ತಿಗೆಗಳಲ್ಲಿ ಅವರು ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದ್ದ ಕಮಿಷನ್ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ. ಗುತ್ತಿಗೆದಾರರ ಸಂಘದ ಕೆಂಪಣ್ಣನಂಥವರು ಸುಧಾಕರ್ ಬಗ್ಗೆ ಬಹಿರಂಗವಾಗಿ ಹೇಳಿದಾಗ ಬಿಜೆಪಿಯ ಯಾರೊಬ್ಬರೂ ಕೂಡ ಪಕ್ಷದ ವೇದಿಕೆಗಳಲ್ಲಿಯಾದರೂ ಅದನ್ನು ಪ್ರಸ್ತಾಪ ಮಾಡಲಿಲ್ಲ; ಸುಧಾಕರ್‌ಗೆ ಬುದ್ಧಿ ಹೇಳುವ, ಅವರನ್ನು ತಡೆಯುವ ಕೆಲಸ ಮಾಡಲಿಲ್ಲ. ಬದಲಿಗೆ, ಸುಧಾಕರ್ ಅವರನ್ನು ಸಮರ್ಥಿಸಿಕೊಂಡರು; 80 ವರ್ಷದ ವಯೋವೃದ್ಧ ಕೆಂಪಣ್ಣನವರನ್ನು ಜೈಲಿಗೆ ಕಳಿಸಿದರು.

ಬಿಜೆಪಿ

ಕೊನೆಗೆ, ಸುಧಾಕರ್‌ರಂಥವರ ‘ಕುಯಿಲಿ’ನ ಬಗ್ಗೆ ಕೆಂಪಣ್ಣನವರು ಮೋದಿಗೆ ಪತ್ರ ಬರೆದರೂ ಪ್ರಧಾನಿಯೂ ಈ ಕುರಿತು ಚಕಾರ ಎತ್ತಲಿಲ್ಲ. ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ತಮ್ಮ ಕೈಯಲ್ಲಿದ್ದ ‘ಮತ’ ಎನ್ನುವ ಮಂತ್ರದಂಡ ಝಳಪಿಸಿದರು, ಸುಧಾಕರ್ ಸೇರಿದಂತೆ ಅವರಂಥ ಭ್ರಷ್ಟಾಚಾರದ ಆರೋಪ ಹೊತ್ತಿದ್ದವರನ್ನು, ಅಧಿಕಾರದ ಆಸೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎಂಟಿಬಿಯಂಥವರನ್ನು ಎಲ್ಲರನ್ನೂ ಸೋಲಿಸಿ ಮನೆಯಲ್ಲಿ ಕೂರಿಸಿದರು.       

ಎಂಟಿಬಿ ನಾಗರಾಜ್ ಅವರು ಸುಧಾಕರ್ ವಿರುದ್ಧ ಹರಿಹಾಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ತಮಗೆ ಪರೋಕ್ಷ ಕುಮ್ಮಕ್ಕು ಕೊಟ್ಟಿದ್ದರು ಎಂದು ಕೆ ಸುಧಾಕರ್ ಹೇಳಿದಾಗಲೂ ಅದಕ್ಕೆ ಎಂಟಿಬಿ ತಿರುಗೇಟು ಕೊಟ್ಟಿದ್ದರು. ಸಿದ್ದರಾಮಯ್ಯನವರಿಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಈಗ ಮತ್ತೊಮ್ಮೆ ಎಂಟಿಬಿ ಸತ್ಯಕ್ಕೆ ಹತ್ತಿರವಾದ ಮಾತುಗಳನ್ನು ಅವರದೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದಾರೆ.

ಗಮನಿಸಬೇಕಾದ ವಿಚಾರವೆಂದರೆ, ಇದೆಲ್ಲ ಗೊತ್ತಿದ್ದುದರಿಂದಲೋ ಏನೋ, ಕೆ ಸುಧಾಕರ್, ಆತ್ಮಾವಲೋಕನ ಸಭೆಗೆ ಗೈರಾಗಿದ್ದರು. ಬಂದಿದ್ದವರು ಯಡಿಯೂರಪ್ಪ ಬಣ, ಬಿ ಎಲ್ ಸಂತೋಷ್ ಬಣ ಎಂದು ಬಣಗಳಾಗಿ ಕಿತ್ತಾಡಿಕೊಂಡು ಸಭೆ ಬರಾಖಸ್ತುಗೊಳಿಸಿದ್ದಾರೆ. ಅದನ್ನು ನೋಡಿದವರು ಇದು ಆತ್ಮವಿಮರ್ಶೆ ಇಲ್ಲದ ಆತ್ಮಾವಲೋಕನ ಸಭೆ ಎಂದು ಲೇವಡಿ ಮಾಡುತ್ತಿದ್ದಾರೆ.                          

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X