ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಮಂಗಳೂರಿನಲ್ಲಿ ನಡೆದಿದೆ. ನೂತನ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿಯ ಹಲವಾರು ನಾಯಕರು ಹಿಂದುತ್ವದ ಭಾಷಣ ಮಾಡಿದ್ದಾರೆ. ಆದರೆ, ಸಮಾರಂಭದಲ್ಲಿ ಯಾರೊಬ್ಬರೂ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಪ್ರಸ್ತಾಪಿಸಿಲ್ಲ. ಜಿಲ್ಲೆಯಲ್ಲಿ ಅವರ ಸಾಧನೆಗಳ ಬಗ್ಗೆ ಮಾತನಾಡಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಬಗ್ಗೆಯೂ ಯಾರೂ ತುಟಿಬಿಚ್ಚಿಲ್ಲ. ಇದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡ ಕಟೀಲ್, ಸಂಸತ್ ಟಿಕೆಟ್‌ಅನ್ನೂ ಕಳೆದುಕೊಳ್ಳಬಹುದೆಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆ ಅದ್ದೂರಿ ಕಾರ್ಯಕ್ರಮ ಮಾಡಿದ್ದಾರೆ. ಚುನಾವಣೆ ಸಿದ್ದತೆ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ, ಕಟೀಲ್ ಮತ್ತೆ ಅಭ್ಯರ್ಥಿಯಾಗುತ್ತಾರೆಯೇ ಎಂಬ ಬಗ್ಗೆ ಯಾರೊಬ್ಬರೂ ಚಕಾರ ಎತ್ತಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಂತೂ ಅಪ್ಪಿತಪ್ಪಿಯೂ ನಳಿನ್ ಕುಮಾರ್ ಕಟೀಲ್ ಅವರ ಹೆಸರನ್ನು ಚುನಾವಣೆಯೊಂದಿಗೆ ತಳುಕು ಹಾಕಿ ಮಾತನಾಡಲಿಲ್ಲ. ಸಾಂಭವ್ಯ ಅಭ್ಯರ್ಥಿ ಎಂದೂ ಹೇಳದೆ ಭಾಷಣ ಮುಗಿಸಿದರು. ಅವರು ಉದ್ದೇಶಪೂರ್ವಕವಾಗಿಯೇ ಕಟೀಲ್ ಹೆಸರು ಹೇಳಲಿಲ್ಲವೆಂಬುದು ಅವರ ಮಾತಿನ ದಾಟಿಯಲ್ಲಿ ಕಾಣಿಸುತ್ತಿತ್ತು.
ಭಾಷಣ ಮಾಡಿದ ಮುಖಂಡರೆಲ್ಲರೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಹೆಸರು ಉಲ್ಲೇಖಿಸಿದಾಗೆಲ್ಲ ಭಾರೀ ಶಿಳ್ಳೆ, ಚಪ್ಪಾಳೆ ಕೇಳಿ ಬರುತ್ತಿತ್ತು. ಇನ್ನು, ಸ್ವತಃ ನಳಿನ್ ಕುಮಾರ್ ಅವರೇ ಭಾಷಣ ಮಾಡಿದಾಗ, ಶಿಳ್ಳೆ, ಚಪ್ಪಾಳೆಗಳು ಮಾಯವಾಗಿದ್ದವು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರುಕೋಟಾ ಶ್ರೀನಿವಾಸ್ ಪೂಜಾರಿಯೇ ತನ್ನ ರಾಜಕೀಯ ಗುರುವೆಂದು ಬಹಿರಂಗವಾಗಿ ಘೋಷಿಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ 3 ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲ್ಲತ್ತದೆ ಎಂದರು. ಆದರೆ, ನಳಿನ್ ಅಭ್ಯರ್ಥಿಯಾಗುತ್ತಾರೆಂದು ಎಲ್ಲಿಯೂ ಹೇಳಲಿಲ್ಲ. ಬದಲಾಗಿ, ಅಭ್ಯರ್ಥಿಯನ್ನು ಗೆಲ್ಲಿಸುವುದೇ ನನ್ನ ಗುರಿಯೆಂದು ಹೇಳಿ ಮಾತು ಮುಗಿಸಿದರು.
ಎಲ್ಲರೂ ಮೋದಿ, ರಾಮ, ರಾಮಮಂದಿರ ಗುಣಗಾನ ಮಾಡಿದರು. ಯಾರೊಬ್ಬರೂ ನಳಿನ್ ಕುಮಾರ್ ಅವರ ಒಂದಿಂಚು ಸಾಧನೆಯ ಬಗ್ಗೆಯೂ ಸೊಲ್ಲೆತ್ತಲಿಲ್ಲ.