ಲೋಕಸಭಾ ಚುನಾವಣೆಗೆ ಬಿಜೆಪಿಯು ಇಂದು ಎರಡನೇ ಪಟ್ಟಿ ಪ್ರಕಟಿಸಿದ್ದು, ಬೊಮ್ಮಾಯಿ, ಕೋಟಾ, ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದೆ. ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿಲ್ಲ. ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ.
ಲೋಕಸಭಾ ಕ್ಷೇತ್ರ: ಅಭ್ಯರ್ಥಿ
- ಚಿಕ್ಕೋಡಿ: ಅಣ್ನಾ ಸಾಹೇಬ್ ಶಂಕರ್ ಜೊಲ್ಲೆ
- ಬಾಗಲಕೋಟೆ: ಪಿ.ಸಿ ಗದ್ದಿಗೌಡರ
- ಬಿಜಾಪುರ: ರಮೇಶ ಜಿಗಜಿಣಗಿ
- ಗುಲ್ಬರ್ಗ: ಡಾ. ಉಮೇಶ್ ಜಾಧವ್
- ಬೀದರ್: ಭಗವಂತ ಖೂಬಾ
- ಕೊಪ್ಪಳ: ಬಸವರಾಜ ಕ್ಯಾವತ್ತೂರ
- ಬಳ್ಳಾರಿ: ಶ್ರೀರಾಮುಲು
- ಹಾವೇರಿ: ಬಸವರಾಜ ಬೊಮ್ಮಾಯಿ
- ಧಾರವಾಡ: ಪ್ರಲ್ಹಾದ ಜೋಶಿ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
- ಶಿವಮೊಗ್ಗ: ಬಿ.ವೈ ರಾಘವೇಂದ್ರ
- ಉಡುಪಿ–ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್ ಚೌಟ
- ತುಮಕೂರು: ವಿ. ಸೋಮಣ್ಣ
- ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
- ಚಾಮರಾಜನಗರ: ಎಸ್. ಬಾಲರಾಜ್
- ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
- ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
- ಬೆಂಗಳೂರು ಕೇಂದ್ರ: ಪಿ.ಸಿ ಮೋಹನ್
- ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಹಗ್ಗಜಗ್ಗಾಟದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಶೋಭಾ ಕರಂದ್ಲಾಜೆ!
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಸಂಸದೆಯಾಗಿದ್ದರೂ, ಕಾರ್ಯ ವೈಖರಿಯಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಕಾರ್ಯಕರ್ತರು, ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನ ಆರಂಭಿಸಿದ್ದರು. ಈ ಅಸಮಾಧಾನದ ಬೆನ್ನಲ್ಲೇ, ಡಿ ವಿ ಸದಾನಂದ ಗೌಡ ಎರಡು ಬಾರಿ ಪ್ರತಿನಿಧಿಸುತ್ತಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಿ ಟಿ ರವಿ ಹೆಸರು ಕೇಳಿ ಬಂದಿತ್ತಾದರೂ, ಕೊನೆಗೆ ವಿಧಾನ ಪರಿಷತ್‌ನ ವಿಪಕ್ಷ ನಾಯಕ, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ. ಇದು ಅಚ್ಚರಿ ಮೂಡಿಸಿದೆ.
ತುಮಕೂರು: ಸೋಮಣ್ಣನವರ ಕಣ್ಣೀರಿಗೆ ಕರಗಿದ ಬಿಜೆಪಿ ಹೈಕಮಾಂಡ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ತಂತ್ರಕ್ಕೆ ಬಲಿಪಶುವಾಗಿದ್ದ ವಿ ಸೋಮಣ್ಣನವರ ಕಣ್ಣೀರಿಗೆ ಬಿಜೆಪಿ ಹೈಕಮಾಂಡ್ ಕರಗಿದ್ದು, ತುಮಕೂರಿನಿಂದ ಸ್ಪರ್ಧಿಸಲು ಅವಕಾಶ ನೀಡಿದೆ. ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಮುದ್ದಹನುಮೇಗೌಡ ಈಗಾಗಲೇ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ದೇವೇಗೌಡರ ಮನೆಗೆ ತೆರಳಿ ಅವರ ಅಶೀರ್ವಾದ ಪಡೆದಿದ್ದ ಸೋಮಣ್ಣ ಅವರಿಗೆ, ದೇವೇಗೌಡರ ಕೃಪಾಕಟಾಕ್ಷದಿಂದ ಟಿಕೆಟ್ ಲಭಿಸಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಬೊಮ್ಮಾಯಿಗೆ ದಕ್ಕಿದ ‘ಹಾವೇರಿ’
ಅಚ್ಚರಿಯ ಆಯ್ಕೆ ಎಂಬಂತೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಕ್ಷೇತ್ರಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಪುತ್ರ ಕಾಂತೇಶ್ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಹಾಗೆಯೇ, ಜಗದೀಶ್ ಶೆಟ್ಟರ್ ಹೆಸರು ಕೂಡ ಕೇಳಿಬಂದಿತ್ತು. ಅಲ್ಲದೇ, ಮಾಜಿ ಸಚಿವ, ಆಪರೇಷನ್ ಕಮಲದಲ್ಲಿ ಒಳಗಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಮಾಜಿ ಸಚಿವ ಬಿ ಸಿ ಪಾಟೀಲ್, ತನಗೆ ಟಿಕೆಟ್ ಕೊಡಿ ಎಂದು ಪಕ್ಷದ ಬೆನ್ನು ಬಿದ್ದಿದ್ದರು. ಬೊಮ್ಮಾಯಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಇಲ್ಲಿ ಬಂಡಾಯ ಬಿಸಿ ಬಿಜೆಪಿಗೆ ತಟ್ಟುವ ಸಾಧ್ಯತೆ ಇದೆ. ಕೆ ಎಸ್ ಈಶ್ವರಪ್ಪ ಅವಶ್ಯಕತೆ ಬಿದ್ದರೆ, ತಾವೇ ಬಂಡಾಯ ಅಭ್ಯರ್ಥಿಯಾಗಿ ಯಡಿಯೂರಪ್ಪ ಪುತ್ರನ ವಿರುದ್ಧ ಶಿವಮೊಗ್ಗದಲ್ಲಿ ಸ್ಪರ್ಧಿಸುವ ಸುಳಿವನ್ನು ನೀಡಿರುವುದು ಕುತೂಹಲ ಹೆಚ್ಚಿಸಿದೆ.
ಕೊಪ್ಪಳದಲ್ಲಿ ಅನಿರೀಕ್ಷಿತ ಅಭ್ಯರ್ಥಿಯ ಆಯ್ಕೆ!
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಕರ್ನಾಟಕಕ್ಕೆ ಬಿಜೆಪಿ ಹೈಕಮಾಂಡ್, ಯಾವುದೇ ಸುಳಿವು ಬಿಟ್ಟು ಕೊಡದೆ ಅಚ್ಚರಿಯ ಮೇಲೆ ಅಚ್ಚರಿ ನೀಡಿದೆ. ಕೊಪ್ಪಳ ಕ್ಷೇತ್ರಕ್ಕೆ ಚರ್ಚೆಯಲ್ಲೇ ಇರದ ಬಸವರಾಜ ಕ್ಯಾವತ್ತೂರ ಅವರ ಹೆಸರನ್ನು ಪ್ರಕಟಿಸಿದೆ. ಸಂಗಣ್ಣ ಕರಡಿಯವರ ಆಸೆಗೆ ತಣ್ಣೀರು ಎರಚಿದೆ.
ಪ್ರತಾಪ್ ಸಿಂಹನಿಗೆ ಮುಖಭಂಗ
ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಲ್ಲಿದ್ದ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹನಿಗೆ ಬಿಜೆಪಿ ಹೈಕಮಾಂಡ್ ಆಘಾತ ನೀಡಿದೆ. ಹೆಸರು ಕೇಳಿಬಂದಿದ್ದ ಮೈಸೂರು ಮಹಾರಾಜರ ಮನೆತನದ ವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
ದೇವೇಗೌಡರ ಅಳಿಯನಿಗೆ ಬಿಜೆಪಿ ಟಿಕೆಟ್!
ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ
ಡಾ ಸಿ ಎನ್ ಮಂಜುನಾಥ್ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಟಿಕೆಟ್ ನೀಡಿದೆ.
ಬಿಜೆಪಿಯ ಹಿರಿಯ ಮುಖಂಡ ಬಿ ಎಸ್ ಯಡಿಯೂರಪ್ಪ ಅವರನ್ನು ಮಂಜುನಾಥ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
