ಸಂಪುಟ ಸಭೆ | ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ನಿವೃತ್ತಿ ನೀಡಲು ನಿರ್ಧಾರ

Date:

Advertisements
  • ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅನುಮೋದನೆ
  • ತಾಳೆ ಎಣ್ಣೆ ಬದಲು ಸೂರ್ಯಕಾಂತಿ ಎಣ್ಣೆ ಬಳಕೆ ನಿರ್ಧಾರ

ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 16 ವಿಷಯಗಳ ಮೇಲೆ ಚರ್ಚೆ ನಡೆದಿದ್ದು, ಲೋಕಾಯುಕ್ತ ಪ್ರಕರಣ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ ಎಂ. ಎಚ್. ನಾಗೇಶ್ ಅವರಿಗೆ ಐದು ವರ್ಷಗಳ ಶಿಕ್ಷೆ ಆಗಿರುವ ಹಿನ್ನೆಲೆ ಈ ಅನುಮೋದನೆ ಮಾಡಲಾಗಿದೆ.

ಸಚಿವ ಸಂಪುಟ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾನೂನು ಸಚಿವ ಎಚ್​ ಕೆ ಪಾಟೀಲ್, “ಹಣಕಾಸು ದುರುಪಯೋಗ ಬೇಜವಾಬ್ದಾರಿ ಬಗ್ಗೆ ಕೋರ್ಟ್​​ನಿಂದ ಶಿಕ್ಷೆ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

Advertisements

“ಲೋಕಾಯುಕ್ತ ಟ್ರ್ಯಾಪ್​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ‌. ಉಷಾ ಕದರಮಂಡಲಗಿ, ಇಂದಿರಾನಗರ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಎಸ್. ಟಿ ನಾಗಮಣಿ ಅವರಿಗೆ ಕಡ್ಡಾಯ ನಿವೃತ್ತಿ ದಂಡನೆಗೆ ಸಂಪುಟ ನಿರ್ಣಯ ಕೈಗೊಂಡಿದೆ” ಎಂದರು.

“ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎನ್ ಹಳ್ಳಿಗುಡಿ ಅವರನ್ನು ಸೇವೆಯಿಂದ ವಜಾಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ” ಎಂದು ಹೇಳಿದರು.

ಅನುದಾನ ಬಿಡುಗಡೆಗೆ ಒಪ್ಪಿಗೆ

ಎಸ್.ಸಿ. ಎಸ್.ಟಿ. ಮೀಸಲು ಕ್ಷೇತ್ರಗಳಲ್ಲಿ 20 ಸಂಚಾರಿ ಆರೋಗ್ಯ ಘಟಕಗಳ ಅನುಷ್ಠಾನಕ್ಕೆ 20.07 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಅನುಮೋದನೆ ನೀಡಿದೆ. ಏರೋ ಸ್ಪೇಸ್ ಉತ್ಪಾದನೆ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೂ ಅನುಮೋದನೆ ದೊರಕಿದೆ. ಸೈಬರ್ ಅಪರಾಧ ತಡೆಗಟ್ಟುವುದು ಸೇರಿದಂತೆ ಕ್ರಮ ತೆಗೆದುಕೊಳ್ಳಲು ಕೇಂದ್ರದ ಉಪಯೋಗ ಪಡೆಯುವುದು ಹಾಗೂ ಇದರ ಪರಿಷ್ಕೃತ ವೆಚ್ಚ 391 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅನುಮೋದನೆ

“ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023ಕ್ಕೆ ಸಂಪುಟ ಅನುಮೋದನೆ ನೀಡಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆ ಮಾಡಿ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಲು ಸಭೆ ಒಪ್ಪಿದೆ. ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡಿಸಿ ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

“ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಆಸ್ಪತ್ರೆ ಕಟ್ಟಡದ ಪರಿಷ್ಕೃತ ವೆಚ್ಚ 187.90 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ” ಎಂದರು.

ಪಿಪಿಪಿ ಮಾಡೆಲ್​ಗೆ ಕ್ಯಾಬಿನೆಟ್ ಅನುಮೋದನೆ

“ರಾಜ್ಯದ ಐದು ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, 15 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್​ಐ ಘಟಕ ಅಳವಡಿಕೆ ಮಾಡುವ ಪಿಪಿಪಿ ಮಾಡೆಲ್​ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದಕ್ಕೆ 47 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ” ಎಂದು ಹೇಳಿದರು.

ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ

“ಕೆಎಸ್​ಆರ್​ಟಿಸಿ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಕೆಗೆ 30.74 ಕೋಟಿ ರೂ. ವೆಚ್ಚದ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಕರ್ನಾಟಕ ಸಹಕಾರಿ ಕೃಷಿ ಅಭಿವೃದ್ಧಿ ಗ್ರಾಮೀಣಾಭಿವೃದ್ದಿ ಬ್ಯಾಂಕ್​ಗೆ ನಬಾರ್ಡ್ ಮೂಲಕ 1600 ಕೋಟಿ ರೂ. ಹಣ ಪಡೆಯಲು ಸರ್ಕಾರದ ಖಾತರಿ ವಿಸ್ತರಣೆಗೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಈ ಬ್ಯಾಂಕ್​ನ ಶೇ.1 ರಷ್ಟು ಗ್ಯಾರಂಟಿ ಶುಲ್ಕ ವಿಧಿಸುವುದನ್ನು ನಿರ್ಣಯಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಿ ಸಂಪುಟ ಒಪ್ಪಿಗೆ ಸೂಚಿಸಿದೆ” ಎಂದು ಮಾಹಿತಿ ಹಂಚಿಕೊಂಡರು.

ಸೂರ್ಯಕಾಂತಿ ಎಣ್ಣೆ ಬಳಕೆಗೆ ಒಪ್ಪಿಗೆ

“ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಪೌಷ್ಟಿಕ ಆಹಾರ ತಯಾರಿಕೆಗೆ ತಾಳೆ ಎಣ್ಣೆ ಬದಲು ಸೂರ್ಯಕಾಂತಿ ಎಣ್ಣೆ ಬಳಕೆಗೆ ಸಂಪುಟ ಅನುಮೋದನೆ ನೀಡಿದೆ. ತಳೆ ಎಣ್ಣೆ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಾದ ಹಿನ್ನೆಲೆ ಈ ಬದಲಾವಣೆಗೆ ನಿರ್ಣಯ ಕೈಗೊಳ್ಳಲಾಗಿದೆ” ಎಂದರು.

ಮೇಕೆದಾಟು ಪ್ರಕರಣ ವಾಪಸ್

“ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿನ 9 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್​ ಪಡೆದಿದೆ. ಅಶೋಕ್ ಪಟ್ಟಣ್ ಅರ್ಜಿಯನ್ನು ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ಇದ್ದ ಪ್ರಕರಣಗಳು ವಾಪಸ್​ ಪಡೆಯಲು ಸಂಪುಟ ಸಭೆ ನಿರ್ಧರಿಸಿದೆ” ಎಂದು ಎಚ್‌ ಕೆ ಪಾಟೀಲ್‌ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X