- ವಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ದ ಮೂರನೇ ಸಭೆ ಮುಂಬೈನಲ್ಲಿ ಮುಗಿದ ಬೆನ್ನಲ್ಲೇ ಹೇಳಿಕೆ
- ನಾಗ್ಪುರ, ಗುವಾಹಟಿಯಲ್ಲಿ ಸಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಮೋಹನ್ ಭಾಗವತ್
“ಭಾರತವೆಂದರೇನೇ ಹಿಂದೂರಾಷ್ಟ್ರ, ‘ಇಂಡಿಯಾ’ ಎಂದು ಕರೆಯಬೇಡಿ, ಭಾರತೀಯರೆಲ್ಲರೂ ಹಿಂದೂಗಳೇ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ನಾಗಪುರ ಹಾಗೂ ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಪ್ರತ್ಯೇಕ ಸಮಾರಂಭದಲ್ಲಿ ಮಾತನಾಡುತ್ತಾ ಆರ್‌ಎಸ್‌ಎಸ್ ಮುಖ್ಯಸ್ಥ ಈ ಹೇಳಿಕೆ ನೀಡಿದ್ದಾರೆ.
‘ಭಾರತ ಹಿಂದೂ ರಾಷ್ಟ್ರ, ಎಲ್ಲ ಭಾರತೀಯರೂ ಹಿಂದೂಗಳೇ, ಹಿಂದೂಗಳು ದೇಶದ ಸಮಸ್ತ ಭಾರತೀಯರನ್ನೂ ಪ್ರತಿನಿಧಿಸುತ್ತಾರೆ” ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಸಮಸ್ತ ಜನರ ಬಗ್ಗೆ ಕಾಳಜಿ ಹೊಂದಿದೆ ಎಂದಿರುವ ಅವರು, ನಮ್ಮ ದೇಶದ ಹೆಸರು ಯುಗಯುಗಾಂತರಗಳಿಂದ ಭಾರತ. ಭಾಷೆ ಯಾವುದೇ ಇರಲಿ, ಹೆಸರು ಒಂದೇ ಆಗಿರುತ್ತದೆ ಎಂದು ಭಾಗವತ್ ಹೇಳಿದ್ದಾರೆ.
“ನಮ್ಮ ದೇಶ ಭಾರತ. ನಾವು ‘ಇಂಡಿಯಾ’ ಎಂಬ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಎಲ್ಲಾ ಪ್ರಾಯೋಗಿಕ ಕ್ಷೇತ್ರಗಳಲ್ಲಿ ‘ಭಾರತ್’ ಪದವನ್ನು ಬಳಸಲು ಪ್ರಾರಂಭಿಸಬೇಕು. ಆಗ ಮಾತ್ರ ಬದಲಾವಣೆ ಆಗುತ್ತದೆ. ನಾವೆಲ್ಲರೂ ನಮ್ಮ ದೇಶವನ್ನು ‘ಭಾರತ್’ ಎಂದು ಕರೆಯಬೇಕು ಮತ್ತು ಅದನ್ನು ಇತರರಿಗೆ ವಿವರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ಬಸವರಾಜು ಮೇಗಲಕೇರಿ ಆಡಿಯೊ ಅಂಕಣ | ಕೋಲೆ ಬಸವನೊಂದಿಗೆ ಬೀದಿಯಲ್ಲಿ ಬದುಕುವ ನೆಲೆ ಇಲ್ಲದ ಅಲೆಮಾರಿಗಳು
“ಭಾರತ ಅಥವಾ ಹಿಂದೂಸ್ತಾನ ಅನ್ನೋದು ಹಿಂದೂ ರಾಷ್ಟ್ರ. ಇದು ವಾಸ್ತವ ಸಂಗತಿ. ಸೈದ್ದಾಂತಿಕವಾಗಿ ಎಲ್ಲ ಭಾರತೀಯರೂ ಹಿಂದೂಗಳೇ. ಹಿಂದೂ ಎಂದರೆ ಭಾರತೀಯ ಎಂದೇ ಅರ್ಥ. ಇವತ್ತು ಭಾರತದಲ್ಲಿ ಇರುವ ಎಲ್ಲರೂ ಹಿಂದೂ ಸಂಸ್ಕೃತಿ ಜೊತೆ ನಂಟು ಹೊಂದಿದ್ದಾರೆ. ಹಿಂದೂ ಪೂರ್ವಜರು ಹಾಗೂ ಹಿಂದೂ ಭೂಮಿಯ ಜೊತೆ ಎಲ್ಲರೂ ನಂಟು ಹೊಂದಿದ್ದಾರೆ. ಇದರ ಹೊರತಾಗಿ ಮತ್ತೇನೂ ಇಲ್ಲ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿವರಿಸಿದ್ದಾರೆ.
“ಆರ್‌ಎಸ್‌ಎಸ್‌ನ ಸಿದ್ದಾಂತ ಹಾಗೂ ವಿಚಾರಧಾರೆಗಳನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ಒಪ್ಪಿದ್ದಾರೆ, ಮತ್ತೆ ಕೆಲವರು ಒಪ್ಪಿಲ್ಲ” ಎಂದಿರುವ ಮೋಹನ್ ಭಾಗವತ್, ”ನಮ್ಮ ಸಿದ್ದಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಜವಾಬ್ದಾರಿ ಸಹಜವಾಗಿಯೇ ಈ ದೇಶ, ಈ ಸಮಾಜ ಹಾಗೂ ಮಾಧ್ಯಮಕ್ಕೆ ಇದೆ” ಎಂದು ಹೇಳಿದರು.
“ಭಾರತವು ಎಲ್ಲರನ್ನೂ ಒಂದುಗೂಡಿಸುವ ದೇಶವಾಗಿದ್ದು, ಜಗತ್ತಿಗೆ ಇಂದು ಭಾರತದ ಅಗತ್ಯವಿದೆ. ಭಾರತವಿಲ್ಲದೆ ಜಗತ್ತು ಓಡಲು ಸಾಧ್ಯವಿಲ್ಲ. ನಾವು ಯೋಗದ ಮೂಲಕ ಜಗತ್ತನ್ನು ಸಂಪರ್ಕಿಸಿದ್ದೇವೆ. ಪೋಷಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಕೌಟುಂಬಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ವಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ದ ಮೂರನೇ ಸಭೆ ಮುಂಬೈನಲ್ಲಿ ಮುಗಿದ ಬೆನ್ನಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದ್ದು, ವಿವಾದಕ್ಕೂ ಎಡೆಮಾಡಿಕೊಟ್ಟಿದೆ.