ಐದು ವರ್ಷಗಳಲ್ಲಿ ತನ್ನ ಪ್ರಭಾವ ಇನ್ನಷ್ಟು ವಿಸ್ತರಿಸಿಕೊಂಡಿರುವ ವಿಶ್ವಾಸ ಬಿಜೆಪಿಯದ್ದು. ಅದಕ್ಕಾಗಿ ಎಐಎಡಿಎಂಕೆ ನೇತೃತ್ವ ಮುಖ್ಯ. ಮುಂದೊಂದು ದಿನ ಎಐಎಡಿಎಂಕೆಯನ್ನು ಬದಿಗೆ ತಳ್ಳಿ, ಬಿಜೆಪಿ ಮೇಲೇರಲೂ ಬಹುದು. ಅಷ್ಟಕ್ಕೂ ಪ್ರಭಾವ ವಿಸ್ತಾರಕ್ಕಾಗಿಯೇ ಅಲ್ಲವೇ ಬಿಜೆಪಿಯ ಈ ಮೈತ್ರಿಯಾಟ.
ತಮಿಳುನಾಡಿನಲ್ಲಿ ಮುಂದಿನ ವರ್ಷ (2026) ವಿಧಾನಸಭೆ ಚುನಾವಣೆ ನಡೆಯಲಿದ್ದು ಈಗಲೇ ತಯಾರಿ ಶುರುವಾಗಿದೆ. ತನ್ನ ಕೋಮು ರಾಜಕಾರಣದ ತಂತ್ರ ತಮಿಳುನಾಡಿನಲ್ಲಿ ಪ್ರಯೋಗಿಸಿ, ಗೆಲ್ಲಲಾಗದು ಎಂಬುದನ್ನು ಬಿಜೆಪಿ ಅರಿತಿದೆ. ಪ್ರಬಲವಾಗಿರುವ ಡಿಎಂಕೆ ಸರ್ಕಾರದಿಂದ ಅಧಿಕಾರ ಕಿತ್ತುಕೊಳ್ಳಬೇಕಾದರೆ, ಸ್ಥಳೀಯ ರಾಜಕೀಯ ಪಕ್ಷಗಳ ಬೆಂಬಲ ಬಿಜೆಪಿಗೆ ಅನಿವಾರ್ಯ. ಆ ಉಪಾಯದ ಭಾಗವೇ ಬಿಜೆಪಿ-ಎಐಡಿಎಂಕೆ ಮೈತ್ರಿ.
ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಈ ಹಿಂದಿನ ಮಿತ್ರಪಕ್ಷದೊಂದಿಗೆ ಮತ್ತೆ ಕೈಜೋಡಿಸುವುದಾಗಿ ಶುಕ್ರವಾರ ಘೋಷಿಸಿಕೊಂಡಿದ್ದಾರೆ. ಈ ಚುನಾವಣೆ ಆಟದಲ್ಲಿ ಕೆ ಅಣ್ಣಾಮಲೈ ತನ್ನ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು. ಎಐಎಡಿಎಂಕೆಯ ಬೆಂಬಲ ಪಡೆಯಲು ಬಿಜೆಪಿಯ ಹೊಸ ರಾಜ್ಯ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನು ಓದಿದ್ದೀರಾ?: ಕುತೂಹಲ ಕೆರಳಿಸದ ‘ದಳಪತಿ’ ವಿಜಯ್ ರಾಜಕೀಯ ನಡೆ
ಮೈತ್ರಿ ಆಗುವುದಕ್ಕೂ ಮುನ್ನವೇ ಬಿಜೆಪಿ ಅಧ್ಯಕ್ಷರ ಸ್ಥಾನದಿಂದ ಅಣ್ಣಾಮಲೈ ಅವರನ್ನು ತೆಗೆಯಲಾಗಿದೆ. ಎಐಎಡಿಎಂಕೆ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಅಣ್ಣಾಮಲೈ ತನ್ನ ಮಿತ್ರಪಕ್ಷದ ಪ್ರಮುಖ ಸ್ಥಾನದಲ್ಲಿರುವುದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಇತರ ನಾಯಕರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ. ಅಣ್ಣಾಮಲೈ ಹಲವು ಬಾರಿ ಆಡಳಿತಾರೂಢ ಡಿಎಂಕೆ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಜೊತೆಜೊತೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿಚಾರದಲ್ಲಿ ಡಿಎಂಕೆಯನ್ನು ಮಾತ್ರವಲ್ಲದೇ ಎಐಎಡಿಎಂಕೆಯನ್ನೂ ಕೂಡಾ ಕಠಿಣವಾಗಿ ಟೀಕಿಸಿದ್ದಾರೆ. ಈ ಮೂಲಕ ತನ್ನ ಮುಂದಿನ ಚುನಾವಣೆಗೆ ಬಿಜೆಪಿಗೆ ಮೈತ್ರಿ ಆಪತ್ತನ್ನು ತಂದೊಡ್ಡಿದ್ದಾರೆ. ಅತ್ತ ಬಿಜೆಪಿಯ ತಕ್ಕಮಟ್ಟಿನ ವರ್ಚಸ್ಸೂ ಉಳಿಯಬೇಕು, ಇತ್ತ ಮೈತ್ರಿಯೂ ಸಫಲವಾಗಬೇಕು, ಜಾತಿ ಸಮೀಕರಣವೂ ಕೆಲಸ ಮಾಡಬೇಕು ಎಂಬ ಕಾರಣಕ್ಕಾಗಿ ಅಣ್ಣಾಮಲೈ ತಮ್ಮ ಹುದ್ದೆ ತೊರೆದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ರಾಷ್ಟ್ರೀಯ ಹುದ್ದೆಯ ಆಸೆಯಲ್ಲಿ ರಾಜ್ಯ ಅಧ್ಯಕ್ಷ ಸ್ಥಾನವನ್ನು ಬಿಟ್ಟಕೊಟ್ಟಿದ್ದಾರೆ ಎಂದೂ ಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಲಿತ ಪಾಠವೇ?
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಉಭಯ ಪಕ್ಷಗಳೂ ಡಿಎಂಕೆ ವಿರೋಧಿ ಮತಗಳನ್ನು ವಿಭಜಿಸಿದೆಯೇ ಹೊರತು ಉತ್ತಮ ಸಾಧನೆಯೇನೂ ಮಾಡಿಲ್ಲ. ರಾಜ್ಯದಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪ್ರಬಲವಾದ ಮೈತ್ರಿಕೂಟ ಮುಖ್ಯ. ಬಿಜೆಪಿಯೂ ತಮಿಳುನಾಡಿನಲ್ಲಿ ನೆಲೆಗೊಳ್ಳಬೇಕಾದರೆ ಎಐಎಡಿಎಂಕೆ ಬೆಂಬಲ ಅಗತ್ಯ. ಡಿಎಂಕೆ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲು, ಉಭಯ ಪಕ್ಷಗಳು ಲಾಭ ಪಡೆದುಕೊಳ್ಳಲು ಬಲಿಯಾಗಿದ್ದು, ತ್ಯಾಗ ಮಾಡಿದ್ದು ಅಣ್ಣಾಮಲೈ.
ನೈನಾರ್ ನಾಗೇಂದ್ರನ್ ಎಐಎಡಿಎಂಕೆಯ ಹಿರಿಯ ವ್ಯಕ್ತಿ. ಅದರಿಂದಾಗಿ ಈ ಮೈತ್ರಿ ಮಾಡಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿಗೆ ಸುಲಭವಾಯಿತು. ರಾಜ್ಯದ ಪಶ್ಚಿಮ ಪ್ರದೇಶಗಳಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪ್ರಬಲವಾಗಿದ್ದರೂ, ತಿರುನಲ್ವೇಲಿಯ ಮೂಲದ ಮತ್ತು ದಕ್ಷಿಣ ಪ್ರದೇಶದ ಪ್ರಬಲ ತೇವರ್ ಸಮುದಾಯಕ್ಕೆ ಸೇರಿದ ನಾಗೇಂದ್ರನ್ ದಕ್ಷಿಣದ ಮತಗಳನ್ನು ಮೈತ್ರಿಕೂಟದತ್ತ ಸೆಳೆಯುವ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ತಮಿಳುನಾಡು | ರಾಜೀನಾಮೆ ನಿರ್ಧಾರ ಪ್ರಕಟಿಸಿದ ಕೆ ಅಣ್ಣಾಮಲೈ
ಪಳನಿಸ್ವಾಮಿ ಮೈತ್ರಿಕೂಟದ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ. ಎಐಎಡಿಎಂಕೆಯ ವಿಷಯಗಳಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡಲ್ಲ, ಎರಡೂ ಕಡೆಯಿಂದ ಯಾವುದೇ ಷರತ್ತುಗಳು ಮತ್ತು ಬೇಡಿಕೆಗಳಿಲ್ಲ ಎಂದು ಅಮಿತ್ ಶಾ ಈಗಾಗಲೇ ಮೈತ್ರಿ ಘೋಷಿಸುತ್ತ ತಿಳಿಸಿದ್ದಾರೆ. ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಈ ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯವೂ ಹೌದು.
ಮುಂದಿರುವ ಸವಾಲುಗಳೇನು?
ಉಭಯ ಪಕ್ಷಕ್ಕೂ ಕೂಡಾ ಸಾಮಾನ್ಯ ರಾಜಕೀಯ ಶತ್ರು ಡಿಎಂಕೆ. ಡಿಎಂಕೆ ವಿರೋಧಿ ಮತಗಳನ್ನು ತಮ್ಮೆಡೆ ಸೆಳೆಯುವ ಜೊತೆಗೆ ಜನರಲ್ಲಿ ಡಿಎಂಕೆ ವಿರೋಧಿ ಮನೋಭಾವ ಬೆಳೆಸುವುದೂ ಬಿಜೆಪಿ-ಎಐಎಡಿಎಂಕೆ ತಂತ್ರ. ಅಲ್ಲೊಂದು ಇಲ್ಲೊಂದು ಅಧಿಕಾರ-ವಿರೋಧಿ ಅಲೆ ಇರುವಾಗ ಈ ಮೈತ್ರಿಕೂಟದ ತಂತ್ರದಿಂದ ತನ್ನನ್ನು ತಾನು ಕಾಪಾಡಿಕೊಳ್ಳುವುದು ಡಿಎಂಕೆ ಮುಂದಿರುವ ಸವಾಲು.
ಎಐಎಡಿಎಂಕೆಗೂ ಕೂಡಾ ಉಳಿವಿನ ಪ್ರಶ್ನೆ. ಈಗಾಗಲೇ ಮೈತ್ರಿಯಲ್ಲಿ ತಮ್ಮದೇ ಕೈಮೇಲಾಗುವಂತೆ ಪಳನಿಸ್ವಾಮಿ ದಾಳ ಉರುಳಿಸಿದ್ದಾರೆ. ಈಗ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು ಪಳನಿಸ್ವಾಮಿ ಮೇಲಿರುವ ಜವಾಬ್ದಾರಿ. ಜೊತೆಗೆ ಎಐಎಡಿಎಂಕೆ ಪರವಾಗಿರುವ ಬಿಜೆಪಿ ವಿರೋಧಿಗಳ ಮತವನ್ನು ಕಳೆದುಕೊಳ್ಳುವ ಆತಂಕವೂ ಪಳನಿಸ್ವಾಮಿಗಿದೆ. ಈ ಎಲ್ಲಾ ವಿಚಾರಗಳಿಂದ ಸಣ್ಣ ಪಕ್ಷಗಳು ಕೊಂಚ ಅಧಿಕ ಮತವನ್ನು ಬಾಚಿಕೊಳ್ಳುವ ನಿರೀಕ್ಷೆಯಿದೆ. ಇಲ್ಲಿ ಜಾತಿ ರಾಜಕಾರಣವನ್ನೂ ನಾವು ಬದಿಗೊತ್ತಲಾಗದು.
ಇವೆಲ್ಲವುದರ ನಡುವೆ ತಮಿಳುನಾಡು ರಾಜಕೀಯಕ್ಕೆ ಈಗ ಹೊಸ ಎಂಟ್ರಿಯಾಗಿದೆ. ಸಿನಿಮಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ವಿಜಯ್ ಈಗ ರಾಜಕಾರಣಿ. ಅವರ ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಜನರು ನೋಟಾದತ್ತ ಮುಖ ಮಾಡದಿದ್ದರೆ ಬಿಜೆಪಿ, ಡಿಎಂಕೆ, ಎಐಎಡಿಎಂಕೆ ಮತಗಳೆಲ್ಲವೂ ಟಿವಿಕೆ ಪಾಳಾಗಬಹುದು.
ಇದನ್ನು ಓದಿದ್ದೀರಾ? ತಮಿಳಿಸೈ, ಅಣ್ಣಾಮಲೈ ಬಗ್ಗೆ ಟೀಕೆ: ತಮಿಳುನಾಡಿನ ಇಬ್ಬರು ಬಿಜೆಪಿ ನಾಯಕರು ಅಮಾನತು
ಯಾವುದೇ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಬೇಕಾದರೆ ಯಾವ ಕೀಳು ಮಟ್ಟದ ರಾಜಕೀಯಕ್ಕೂ ಇಳಿಯುವ, ಯಾವುದೇ ಸಂಧಾನಕ್ಕೂ ಸಿದ್ಧವಾಗಿರುವ ಬಿಜೆಪಿ ಈಗ ತಮಿಳುನಾಡಿನಲ್ಲಿ ಮಾಡುತ್ತಿರುವುದು ಅದನ್ನೇ. ಇದು ರಾಜಕೀಯವಷ್ಟೇ ಅನ್ನಬಹುದು. ಆದರೆ ಸಮಾಜಕ್ಕಾಗುವ ಕೆಟ್ಟ ಪ್ರಭಾವ ಅಲ್ಲಗಳೆಯುವಂತಿಲ್ಲ. ಕೇರಳದಲ್ಲಿ ಬಿಜೆಪಿ ಒಂದು ಸಂಸದ ಸ್ಥಾನ ಗೆದ್ದು ಬೇರೂರಲು ಹಲವು ವರ್ಷಗಳೇ ಬೇಕಾದರೂ ಸತತ ಪ್ರಯತ್ನವನ್ನು ಕೈಬಿಟ್ಟಿಲ್ಲ. ತನ್ನ ಕೋಮು ಅಸ್ತ್ರವನ್ನೇ ಮುಂದಿಟ್ಟುಕೊಂಡು, ಎಡ ಆಡಳಿತವನ್ನು ಭಯೋತ್ಪಾದನೆಯಂತೆ ಬಿಂಬಿಸುತ್ತಾ ಮುನ್ನಡೆಯುತ್ತಿದೆ.
ಹಾಗೆಯೇ ತಮಿಳುನಾಡಿನಲ್ಲಿಯೂ ತನ್ನ ಪ್ರಭಾವ ವಿಸ್ತರಿಸುವ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ. 2021ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಭಾಗವಾಗಿದ್ದ ಬಿಜೆಪಿ 4 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅದಕ್ಕೂ ಮುನ್ನ 2016ರ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಶೂನ್ಯವಾಗಿತ್ತು. ಈಗ ಐದು ವರ್ಷಗಳಲ್ಲಿ ತನ್ನ ಪ್ರಭಾವ ಇನ್ನಷ್ಟು ವಿಸ್ತರಿಸಿಕೊಂಡಿರುವ ವಿಶ್ವಾಸ ಬಿಜೆಪಿಯದ್ದು. ಅದಕ್ಕಾಗಿ ಎಐಎಡಿಎಂಕೆ ನೇತೃತ್ವ ಮುಖ್ಯ. ಮುಂದೊಂದು ದಿನ ಎಐಎಡಿಎಂಕೆಯನ್ನು ಬದಿಗೆ ತಳ್ಳಿ, ಬಿಜೆಪಿ ಮೇಲೇರಲೂ ಬಹುದು. ಅಷ್ಟಕ್ಕೂ ಪ್ರಭಾವ ವಿಸ್ತಾರಕ್ಕಾಗಿಯೇ ಅಲ್ಲವೇ ಬಿಜೆಪಿಯ ಈ ಮೈತ್ರಿಯಾಟ.
ಅಣ್ಣಾಮಲೈ ಮುಂದಿನ ಪಾಡೇನು?
ಇವೆಲ್ಲವುದರ ನಡುವೆ ತನ್ನ ಪಕ್ಷಕ್ಕಾಗಿ, ಎಐಎಡಿಎಂಕೆ ಜೊತೆಗಿನ ಮೈತ್ರಿಗಾಗಿ ಬಲಿಯ ಕುರಿಯಾದ ಅಣ್ಣಾಮಲೈ ಮುಂದಿನ ಪಾಡೇನು? ಈಗಾಗಲೇ ಈ ಬಗ್ಗೆ ಹೇಳಿಕೆ ನೀಡಲು ಬಿಜೆಪಿ ನಾಯಕ ಅಮಿತ್ ಶಾ ಹಿಂದೇಟು ಹಾಕಿದ್ದಾರೆ. ಆದರೆ ಎಕ್ಸ್ ಪೋಸ್ಟ್‌ನಲ್ಲಿ ಅಣ್ಣಾಮಲೈಗೆ ರಾಷ್ಟ್ರೀಯ ಹುದ್ದೆಯೊಂದು ಕಾಯುತ್ತಿದೆ ಎಂಬಂತ ಸುಳಿವು ನೀಡಿದ್ದಾರೆ.
The Tamil Nadu BJP has received a nomination for the post of state president only from Shri @NainarBJP Ji.
— Amit Shah (@AmitShah) April 11, 2025
As the President of the Tamil Nadu BJP unit, Shri @annamalai_k Ji has made commendable accomplishments. Whether it is carrying the policies of PM Shri @narendramodi Ji to…
ಅದೇನೇ ಆದರೂ, ಯಾವ ನಾಯಕರ ವಿಶ್ವಾಸವನ್ನು ಕಳೆದುಕೊಂಡರೂ ಬಿಜೆಪಿಗೆ ಈಗ ಬೇಕಾಗಿರುವುದು ಅಧಿಕಾರ. ಮುಖ್ಯಮಂತ್ರಿ ಕುರ್ಚಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇರಲಿ ಅಥವಾ ಮಿತ್ರ ಪಕ್ಷದ ನಾಯಕರು ಇರಲಿ, ಸರ್ಕಾರ ರಚನೆಯಾದ ಬಳಿಕ ತನ್ನ ಪ್ರಭಾವವನ್ನು ನಿಧಾನವಾಗಿ ಹೆಚ್ಚಿಸುವ ನಂಬಿಕೆ ಕೇಸರಿಪಡೆಯದ್ದು. ಆದರೆ ಸೀಟು ಹಂಚಿಕೆ ವೇಳೆ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ನಾಟಕ ನಡೆಯುವುದು ನಿಶ್ಚಿತ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.