ಜಾತಿಗಣತಿ ವರದಿ ರಾಜಕೀಯ ಪ್ರೇರಿತ. ಹಾಗಾಗಿ ಅದಕ್ಕೆ ನಮ್ಮ ಸಂಪೂರ್ಣ ವಿರೋಧ ಇದೆ ಎಂದು ಮಲ್ಲೇಶ್ವರಂ ಬಿಜೆಪಿ ಶಾಸಕ, ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ(ನ.22)ದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸರ್ಕಾರ ಜನರಿಗೆ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಕುಡಿಯುವ ನೀರಿನಿಂದ ಹಿಡಿದು ಎಲ್ಲ ಮೂಲಭೂತ ಸೌಕರ್ಯವನ್ನು ನೀಡುತ್ತಿಲ್ಲ. ಈ ಯಾವುದಕ್ಕೂ ಸಿಎಂ ಸಿದ್ದರಾಮಯ್ಯನವರಲ್ಲಿ ಉತ್ತರವಿಲ್ಲ. ಕಾಂತರಾಜ್ ವರದಿಯ ಮೂಲಕ ಬರೀ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಸದುದ್ದೇಶದಿಂದ ಜಾತಿಗಣತಿ ವರದಿ ಪಡೆಯುತ್ತಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ರಾಜಕೀಯ ಮಾಡುತ್ತಿದ್ದಾರೆ. ಈ ಸಮೀಕ್ಷೆ ಸರಿಯಾಗಿ ಆಗಿಲ್ಲ ಅಂತ ಪ್ರತಿಯೊಬ್ಬರೂ ಆರೋಪಿಸುತ್ತಿದ್ದಾರೆ. ಜಾತಿ ಗಣತಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಸರ್ಕಾರ ಈವರೆಗೆ ಒಂದೂ ಭರವಸೆದಾಯಕ ಕೆಲಸ ಮಾಡಿಲ್ಲ. ರಾಹುಲ್ ಹೇಳಿದರೆಂದು ವರದಿ ಮೇಲೆ ರಾಜಕೀಯ ಮಾಡ್ತಿದ್ದಾರೆ. ಸರ್ಕಾರದ ನಿಲುವು ನೋಡಿಕೊಂಡು ನಾವು ಮುಂದುವರಿಯುತ್ತೇವೆ ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಕಾಂತರಾಜ್ ವರದಿ ಸಮೀಕ್ಷೆ ಅಂತ ಹೇಳುತ್ತಿದ್ದಾರೆ. ಇದಕ್ಕೆ ಕಾನೂನಾತ್ಮಕವಾಗಿ ಅವಕಾಶವಿಲ್ಲ. ಸರ್ವರಿಗೂ ಸಮಪಾಲು, ಸಮಪಾಲು ಎಂಬುದು ನಮ್ಮ ಸದುದ್ದೇಶ ಎಂದು ಸಿಎಂ ಹೇಳುತ್ತಿದ್ದಾರೆ. ಆದರೆ ಅದು ಹೇಳಿಕೆಗೆ ಮಾತ್ರ. ನಿಮಗೆ ಯಾವುದೇ ಸದುದ್ದೇಶವಿಲ್ಲ. ಎಲ್ಲವೂ ಸ್ವಾರ್ಥ. ಕುಟುಂಬ ಆಧಾರಿತವಾಗಿ ಕೆಲಸ ಮಾಡುತ್ತಿದ್ದೀರಾ. ಜನಗಳ ಬಗ್ಗೆ ನಿಮಗೆ ಎಳ್ಳಷ್ಟೂ ಕಾಳಜಿ ಇಲ್ಲ. ನಿಮ್ಮ ಎಲ್ಲ ನಡೆಗಳು ರಾಜಕೀಯ ಪ್ರೇರಿತವಾದುದು ಎಂದು ತಿಳಿಸಿದರು.
ನ.24ಕ್ಕೆ ಜಯಪ್ರಕಾಶ್ ಹೆಗಡೆ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ ಮಾಡುವ ಬಗ್ಗೆ ಮಾತನಾಡಿದ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ, ‘ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಸರ್ಕಾರದ ನಡೆಯನ್ನು ನೋಡಿಕೊಂಡು ನಮ್ಮ ನಿಲುವನ್ನು ಕೂಡ ತಿಳಿಸುತ್ತೇವೆ. ನಮ್ಮ ಸಂಪೂರ್ಣ ವಿರೋಧ ಇದೆ’ ಎಂದು ತಿಳಿಸಿದರು.