ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು ಒಂದು ರೀತಿಯ ಕುತೂಹಲದಿಂದ ಸೆಕ್ಸ್ ವಿಡಿಯೋ ನೋಡೋ ರೀತಿ ನೋಡಲಿಕ್ಕೆ ಜನ ವಿಡಿಯೋ ತರಿಸ್ಕೊಂಡ್ರು. ಆದ್ರೆ ನಂತರ ಎಲ್ರಿಗೂ ಅಸಹ್ಯ ಆಗಿದೆ.
ತಾಯಿ ವಯಸ್ಸಿನ – ತನಗೆ ಊಟವಿಕ್ಕುವ – ಮಹಿಳೆಯನ್ನು ಬಲಾತ್ಕಾರವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಾಗೆ ಮಾಡಿದ್ದಂತೂ ಅಮಾನುಷವೂ, ಕ್ರೌರ್ಯ ತುಂಬಿರುವುದೂ ಆಗಿತ್ತು. ಮನೆಕೆಲಸದ ಮಹಿಳೆಯನ್ನ ಈ ರೀತಿ ನಡೆಸಿಕೊಂಡ ವಿಕೃತಿ ಭಯಾನಕವಾದ್ದು. ಮಹಿಳೆಯರ ಪಟ್ಟಿಯಲ್ಲಿ ಹಾಸನದ ಗೌರವಸ್ಥ ಕುಟುಂಬಗಳ ಹಲವರಿದ್ದಾರೆ. ಮಾಜಿ ಜಿ.ಪಂ. ಸದಸ್ಯೆಯಿದ್ದಾರೆ. ಅಧಿಕಾರಿಯಿದ್ದಾರೆ. ಎಲ್ಲರ ಜೊತೆಗಿನ ಈತನ ಲೈಂಗಿಕ ಅಟಾಟೋಪದ ವಿಡಿಯೋ ಮಾಡಿಕೊಂಡಿದ್ದಾನೆ, ಸ್ವತಃ ತಾನೇ.
ಇವರೆಲ್ಲರನ್ನೂ ಈ ರೀತಿ ಬಗ್ಗಿಸೋಕೆ ಆತನಿಗೆ ಸಾಧ್ಯ ಆಗಿದ್ದು ಎಲ್ಲಿಂದ? ಅಧಿಕಾರದ ಮದದಿಂದ. ಆ ಅಧಿಕಾರ ಮತ್ತು ಆ ಮದ ಎಲ್ಲಿಂದ ಬಂದಿದ್ದು… ಅದನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಎಲ್ಲಿಗೂ ಹೋಗಬೇಕಿಲ್ಲ. ಎರಡು ಸಂಗತಿಗಳನ್ನ ಗಮನಿಸಿದ್ರೆ ಸಾಕು.
ಒಂದು ʼಕೋಟ್ರೂಪಾಯಿ ಕಾರಿಗೆ ಗುದ್ದಿದ್ದೀಯಲ್ಲಾ, ಯಾರು ತಂದ್ಕೊಡ್ತಾರೆ ಈ ದುಡ್ಡನ್ನ. ಸುಟ್ಟಾಕ್ರೋ ಇವನ ಗಾಡೀನ. ಮಾಡ್ರೋ ಎಫ್‌ಐಆರ್‌ನʼ ಅಂತ ಗೌಡ್ರ ಸೊಸೆ ಬೀದೀಲಿ ಸಾರ್ವಜನಿಕವಾಗಿ ಹೇಳೋ ಧೈರ್ಯ ಬಂದಿದ್ದು ಎಲ್ಲಿಂದ? ನಾವು ಒಕ್ಕಲಿಗ್ರಿರೋ ಯಾವ ಕ್ಷೇತ್ರಕ್ಕೆ ಹೋದ್ರೂ ನಮ್ಗಲ್ಲದೇ ಯಾರಿಗ್ ಓಟ್ ಹಾಕ್ತಾರೆ? ನಮ್ ಕುಟುಂಬ ಇರೋದೇ ರಾಜ್ಯ ಆಳೋಕೆ. ನಾವು ಏನ್ಮಾಡಿದ್ರೂ ನಡೀತದೆ ಅನ್ನೋದು ಎಲ್ಲಿಂದ ಬಂದಿದ್ದು?
ನಾವು ಸಿನೆಮಾಗಳಲ್ಲಿ ನೋಡೋ– ಯಾರನ್ನ ಬೇಕಾದ್ರೂ ಮಂಚಕ್ಕೆ ಕರೀತೀನಿ ಅನ್ನೋ ವಿಲನ್ನುಗಳನ್ನು ಅವರಪ್ಪ, ಅಮ್ಮ ಪ್ರೋತ್ಸಾಹ ಕೊಟ್ಟು ಬೆಳೆಸೋ– ವಿಲನ್ ಕುಟುಂಬದ ಥರಾ ಇದು. ಯಾಕಂದ್ರೆ, ಪ್ರಜ್ವಲ್ ಇಂತಹ ಲೈಂಗಿಕ ವಿಕೃತಿ ಮಾಡ್ತಾ ಇದ್ದಾನೆ ಅಂತ ಇಡೀ ಕುಟುಂಬದ ಎಲ್ಲರಿಗೂ ಗೊತ್ತಿತ್ತು. ಯಾಕಂದ್ರೆ ಆತ ಮನೆಯೊಳ್ಗೇ ಇದನ್ನ ನಡೆಸಿದ್ದಾನೆ. ದೇವರಾಜೇಗೌಡ್ರು ಪದೇ ಪದೇ ಪ್ರೆಸ್ ಮೀಟ್ ಮಾಡಿ ಹೇಳಿದ್ದಾರೆ. ಅಮಿತ್ ಶಾ ಸ್ವತಃ ಕುಮಾರಸ್ವಾಮಿ ಅವರನ್ನ ಕರೆದು ಈ ವಿಚಾರ ಹೇಳಿದ್ದಾರೆ. ಇಷ್ಟೆಲ್ಲಾ ಇದ್ದು ಇಂಥವನೊಬ್ಬ ಜನಪ್ರತಿನಿಧಿ ಆಗ್ಲಿ ಅಂತ ಕುಟುಂಬ ತೀರ್ಮಾನಿಸಿದ್ದು ಯಾಕೆ?
ಯಾಕಂದ್ರೆ, ನಮ್ಮ ಕುಟುಂಬ ಈ ರೀತಿ ಮಾಡೋ ಅಧಿಕಾರ ಹೊಂದಿದೆ ಅನ್ನೋ ಅಹಂಕಾರ ಇರೋದ್ರಿಂದ. ಇಲ್ಲಾಂದ್ರೆ ಆತನ ತಾತನ ವಯಸ್ಸಿನ ಹಿರಿಯರನ್ನ ಏಕವಚನದಲ್ಲಿ ಮಾತಾಡ್ಸೋದು ಹೇಗೆ ಸಾಧ್ಯ? ಪ್ರಜ್ವಲ್ ಮತ್ತು ನಿಖಿಲ್ ಇಬ್ಬರೂ ತಮ್ಮ ತಂದೆಯರ ಸಮಕಾಲೀನ ಶಾಸಕರನ್ನ ಏಕವಚನದಲ್ಲಿ ಮಾತಾಡ್ತಾ ಇರೋದು ಹೇಗೆ? ಹೇಗೆಂದರೆ ಅವರವರ ಅಪ್ಪಂದಿರು ಕುಮಾರಸ್ವಾಮಿ ಮತ್ತು ರೇವಣ್ಣ ಸಹಾ ಹೀಗೇ ಮಾಡೋದ್ರಿಂದ. ಭವಾನಿ ರೇವಣ್ಣ ಯಾರನ್ನ ಬೇಕಾದ್ರೂ ಏಕವಚನದಲ್ಲಿ ಮಾತಾಡ್ಸೋದು ಹೇಗೆ ಸಾಧ್ಯ?
ಇವೆಲ್ಲಾ ಒಂದಕ್ಕೊಂದು ಸಂಬಂಧ ಇರೋ ಅಂಶಗಳು. ಇಲ್ಲಾಂತ ಅಂದಿದ್ರೆ, ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಡಾ.ಮಂಜುನಾಥ್ ಎಲ್ಲರೂ ಜೊತೆಯಲ್ಲಿ ಕೂತು– ಇಂತಹಾ ದೊಡ್ಡ ಮನುಷ್ಯನ್ನ ಹಾಸನದ ಎಂಪಿ ಅಭ್ಯರ್ಥಿ ಅಂತ ತೀರ್ಮಾನ ಮಾಡಿದ್ದು ಹೇಗೆ? ಹೇಗಂದ್ರೆ, ಕೊಡಗಿನಿಂದ ಕೋಲಾರದ ತನಕ ಹಾಸನದಿಂದ ಚಿಕ್ಕಬಳ್ಳಾಪುರದ ತನಕ ನಾವೆಲ್ಲಿ ಹೋಗಿ, ನಮ್ಮ ಕುಟುಂಬದ ಯಾರನ್ನ ನಿಲ್ಲಿಸಿದ್ರೂ ಸೈ. ನಾವು ಯಾರನ್ನ ಬೇಕಾದ್ರೂ ತುಳೀಬಹುದು. ಯಾರನ್ನ ಬೇಕಾದ್ರೂ ಕಡೆಗಳಿಗೆ ತನಕ ನೀನೇ ಅಭ್ಯರ್ಥಿ ಅಂತ ಹೇಳಿ, ಇದ್ದಕ್ಕಿದ್ದಂಗೆ ಬಂದು ನಾನೇ ಅಭ್ಯರ್ಥಿ ಅನ್ನಬಹುದು. ಯಾರನ್ನ ಬೇಕಾದ್ರೂ ಏಕವಚನದಲ್ಲಿ ಮಾತಾಡಿಸಬಹುದು. ಯಾರನ್ನ ಬೇಕಾದ್ರೂ ನಮ್ಮ ಮಕ್ಳು ಮಂಚಕ್ಕೆ ಕರೀಬಹುದು ಅಂತ ಇದ್ರೆ ಮಾತ್ರ ಈ ರೀತಿ ಮಾಡೋಕಾಗುತ್ತೆ.
ಗೌಡ್ರೇ ನೀವು 2006ರ ತನಕ ಹಿಂಗಿರಲಿಲ್ಲ. ಅಲ್ಲಿಂದಾಚೆಗೆ ಇದು ಕುಮಾರಣ್ಣನ ಸಿನೆಮಾ ಆಗಿದೆ. ಬೇಡ, ನಿಲ್ಲಿಸ್ಬಿಡಿ. ನೀವಂತೂ ಪ್ರಚಾರಕ್ಕೆ ಬರಬೇಡಿ. ಒಕ್ಕಲಿಗರ ಕುಲಕ್ಕೆ ಕಳಂಕ ತರಬೇಡಿ.
(ನಾಗರಿಕರ ಮನವಿ)