- ‘ಡಿಕೆಶಿ ಕೈಯಲ್ಲಿ ಅಧಿಕಾರ ಇದೆ, ಬದ್ಧತೆ ತೋರಿಸಲಿ’
- ಸ್ಟಾಲಿನ್ ಸ್ನೇಹಕ್ಕೆ ರಾಜ್ಯ ಬಲಿಯಾಗುತ್ತಿದೆ: ಟೀಕೆ
ಡಿಕೆ ಶಿವಕುಮಾರ್ ನವರಂಗಿ ಆಟ ಆಡುತ್ತಿದ್ದಾರೆ ಹೊರತು ಬಿಜೆಪಿಯಲ್ಲ. ಅವರೇ ಪಾದಯಾತ್ರೆ ಮಾಡಿ, ಅವರೇ ನೀರು ಬಿಟ್ಟಿದ್ದಾರೆ. ಆಟ ಯಾರದ್ದು ಎಂದು ಮಾಜಿ ಸಚಿವ ಸಿ ಟಿ ರವಿ ಪ್ರಶ್ನಿಸಿದರು.
ಮಂಡ್ಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಅವರ ಕೈಯಲ್ಲಿ ಅಧಿಕಾರ ಇದೆ. ಬದ್ಧತೆಯನ್ನು ನೀರು ಬಿಡುವ ಮೂಲಕ ಅಲ್ಲ ತೋರಿಸೋದು. ಇದಕ್ಕೆ ನವರಂಗಿ ಅಂತ ಕರೀತೀರೋ? ಅಥವಾ ಏನು ಕರೆಯುತ್ತೀರಿ ನೀವೇ ಹೇಳಿ. ಬಣ್ಣ ಬದಲಾಯಿಸೋದು ತಾನೆ ಇದು. ಇದಕ್ಕೆ ತಾನೇ ನವರಂಗಿ ಅಂತ ಕರೆಯಬೇಕಾಗಿರೋದು” ಎಂದು ಟೀಕಿಸಿದರು.
“ಮಂಡ್ಯದ ಜನರಿಗೆ ನೀವು ಮಾಡುತ್ತಿರುವುದು ಏನು? ಮಂಡ್ಯದಲ್ಲಿ ಜನ ನಿಮಗೆ ಹೆಚ್ವು ಸ್ಥಾನ ಕೊಟ್ಟಿದ್ದಾರೆ. ಕೋರ್ಟ್‌ಗೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಬೇಕು. ಆ ಕೆಲಸವನ್ನು ಇವರು ಮಾಡಿದ್ದಾರಾ?” ಎಂದು ವಾಗ್ದಾಳಿ ನಡೆಸಿದರು.
“ಕಾವೇರಿ ವಿವಾದ ಇವತ್ತು ನೆನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸ ಇದೆ. ಚುನಾವಣೆಗೂ ಮುಂಚೆ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ಪಾದಯಾತ್ರೆ ಮಾಡಿದರು. ರೈತರು ಅಂದರೆ ಎಲ್ಲರೂ ಒಂದೆ. ಕರ್ನಾಟಕ-ತಮಿಳುನಾಡು ಎನ್ನುವ ಭೇದಭಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರ ವ್ಯವಹಾರ ಮಾಡಬೇಕು” ಎಂದು ತಿಳಿಸಿದರು.
“ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದರೆ, ತಮಿಳುನಾಡು ನೀರು ಕೇಳುವ ಮುಂಚೆಯೇ ನೀರು ಬಿಟ್ಟಿದ್ದೀರಿ. ಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಉಳಿಯಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕದ ಮಾದರಿಯಿಂದ ಜನರ ಬದುಕು ಸಂಪನ್ನವಾಗಲಿ
ಸ್ಟಾಲಿನ್ ಸ್ನೇಹಕ್ಕೆ ರಾಜ್ಯ ಬಲಿ
I.N.D.I.A ಮೈತ್ರಿಗೋಸ್ಕರ ನೀರು ಬಿಡಲಾಗಿದೆ. ಕಾಂಗ್ರೆಸ್ ನೀತಿಯಿಂದ ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರ ಆಗಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ನಿಮ್ಮ ಸ್ಟಾಲಿನ್ ಸ್ನೇಹಕ್ಕೆ ರಾಜ್ಯ ಬಲಿಯಾಗುತ್ತಿದೆ ಎಂದು ಹರಿಹಾಯ್ದರು.
“ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡಲಾಗುತ್ತಿದೆ. ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದಾರೆ. ಅವರ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು ಹೇಗೂ ಒಂದಷ್ಟು ಜನ ಹೊಗಳುಭಟರು ಇದ್ದಾರೆ. ಅವರ ಬಳಿ ಸೀಲ್ ಹಾಕಿಸಿಕೊಳ್ಳಲು ಈ ಸಭೆ. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಈಗ ಸಭೆ ಮಾಡಿದರೆ ಏನು ಪ್ರಯೋಜನ?” ಎಂದು ಕಿಡಿಕಾರಿದರು.
ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, “ಎಸ್ ಟಿ ಸೋಮಶೇಖರ್ ಅವರನ್ನು ಕಾಂಗ್ರೆಸ್ ನವರು ಸಂಪರ್ಕ ಮಾಡಿರುವುದು ನಿಜ. ಆದರೆ, ಸೋಮಶೇಖರ್ ಅವರು ಬಿಜೆಪಿ ಬಿಡಲ್ಲ ಎಂದಿದ್ದಾರೆ. ಕಾಂಗ್ರೆಸ್‌ನವರಿಗೆ 136 ಸ್ಥಾನ ಸಿಕ್ಕರೂ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ಇದರ ಮೇಲೆ ಯೋಚನೆ ಮಾಡಿ” ಎಂದರು.