ಏರುತ್ತಿರುವ ರಾಹುಲ್ ಜನಪ್ರಿಯತೆಗೆ ಮೋದಿ ಆತಂಕಗೊಂಡಿದ್ದಾರೆಯೇ? ಅಂಕಿ-ಅಂಶ ಏನು ಹೇಳುತ್ತದೆ?

Date:

ರಾಹುಲ್ ಗಾಂಧಿ ಅದಾನಿ, ಹಿಂಡನ್ ಬರ್ಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹಲವು ವೇದಿಕೆಗಳಲ್ಲಿ ಬಹು ಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಿ ಮೋದಿ ಎಮೋಷನಲ್ ಭಾಷಣ ಮಾಡಿದ್ದು ಬಿಟ್ಟರೆ ಆ ಪ್ರಶ್ನೆಗಳಿಗೆ ದಾಖಲೆಗಳ ಸಮೇತ ಜವಾಬ್ದಾರಿಯಿಂದ ಉತ್ತರ ಕೊಟ್ಟಿದ್ದೇ ಇಲ್ಲ. ಇಂಥ ಅನೇಕ ಕಾರಣಗಳಿಂದ ಮೋದಿಯ ಭಾಷಣಗಳನ್ನು ನೋಡುವ ಜನಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಅವರ ಜನಪ್ರಿಯತೆಯೂ ಕುಸಿಯುತ್ತಿದೆ 

ಮುಂದಿನ ಲೋಕಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಇದೆ. ಆದರೆ, ಕೆಲವು ತಿಂಗಳುಗಳಿಂದೀಚೆಗೆ, ಅದರಲ್ಲೂ ಭಾರತ್ ಜೋಡೋ ಯಾತ್ರೆ ಮುಗಿದ ಕ್ಷಣಗಳಿಂದೀಚೆಗೆ, ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್ ಗಾಂಧಿಯವರ ಕುರಿತಂತೆ ಹೆಚ್ಚು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಅವರ ಕೆಲವ ನಡೆಗಳನ್ನು ನೋಡಿದರೆ ಅನ್ನಿಸುತ್ತಿದೆ. ಅದಕ್ಕೆ ಕಾರಣ ಏನು ಅಂದರೆ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ಜನಸಾಮಾನ್ಯರ ಜೊತೆ ಬೆರತಿದ್ದು ಮತ್ತು ರಾಹುಲ್ ಗಾಂಧಿಯವರು ಕೇಳುತ್ತಿರುವ ಕೆಲವು ನೇರವಾದ ಪ್ರಶ್ನೆಗಳಿಗೆ ದಾಖಲೆಗಳ ಸಮೇತ ಉತ್ತರ ಕೊಡುವುದಕ್ಕೆ ಮೋದಿಯವರಿಗೆ ಆಗದೇ ಇರುವುದು; ಉತ್ತರ ಕೊಡುವುದರಿಂದ ಅವರು ತಪ್ಪಿಸಿಕೊಳ್ಳುತ್ತಿರುವುದು.

ಈ ಎಲ್ಲ ಕಾರಣಗಳನ್ನು ಒಟ್ಟಿಗೆ ಇಟ್ಟು ಮೋದಿಯವರು ರಾಹುಲ್ ಗಾಂಧಿಯವರ ಬಗ್ಗೆ ಹೆಚ್ಚು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ ಮತ್ತು ಬರಬರುತ್ತಾ ರಾಹುಲ್ ಗಾಂಧಿಯವರ ಜನಪ್ರಿಯತೆ ಮೋದಿಯವರಿಗಿಂತ ಜಾಸ್ತಿಯಾಗುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಈ ಎರಡೂ ವಿಷಯಗಳು ವಾಸ್ತವವೇ, ವಾಸ್ತವವಾಗಿದ್ದರೆ ಅದಕ್ಕೆ ಕಾರಣವೇನಿರಬಹುದು ಎನ್ನುವುದನ್ನು ಅಂಕಿ ಅಂಶಗಳ ಸಮೇತ ವಿಶ್ಲೇಷಣೆ ಮಾಡುವ ಪ್ರಯತ್ನ ಇದು.

ಇತ್ತೀಚಿಗೆ ತಾನೆ ಪಾರ್ಲಿಮೆಂಟ್‌ನಲ್ಲಿ ಮಣಿಪುರದ ಬಗ್ಗೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು ಅವಿಶ್ವಾಸ ನಿರ್ಣಯದ ಒಟ್ಟು ಚರ್ಚೆ ಏನಿತ್ತು ಅದಕ್ಕೆ ಉತ್ತರ ಕೊಡುತ್ತಾ ಪ್ರಧಾನ ಮಂತ್ರಿಯವರು ಎರಡು ಗಂಟೆಗಳಿಗೂ ಹೆಚ್ಚಿನ ಕಾಲ ಭಾಷಣ ಮಾಡಿದರು. ಅವರ ಭಾಷಣದಲ್ಲಿ 50ಕ್ಕಿಂತ ಹೆಚ್ಚಿನ ಬಾರಿ ಕಾಂಗ್ರೆಸ್ ಎನ್ನುವ ಪದವನ್ನ ಬಳಸಿದರು. ಮಣಿಪುರ ಎನ್ನುವ ಪದವನ್ನು 18 ಸಾರಿ ಬಳಸಿದರು. ಅವಿಶ್ವಾಸ್ ಅನ್ನುವ ಪದವನ್ನು 9 ಸಾರಿ ಬಳಸಿದರು. ಮೋದಿ ಅನ್ನುವ ಪದವನ್ನು 8  ಸಾರಿ ಬಳಸಿದರು. I.N.D.I.A. ಎನ್ನುವ ಪದವನ್ನು 7 ಸಾರಿ ಬಳಸಿದರು. ಪರಿವಾರವಾದ್ ಎನ್ನುವ ಪದವನ್ನು 6 ಸಾರಿ ಬಳಸಿದರು. ಗಾಂಧಿ ಎನ್ನುವ ಪದವನ್ನು 5 ಸಾರಿ ಬಳಸಿದರು. ಇನ್ನು ನೆಹರೂ ಎನ್ನುವ ಪದವನ್ನು 3 ಸಾರಿ ಬಳಸಿದರು. ಒಟ್ಟು ಅವರ ಭಾಷಣವನ್ನು ಗಮನಿಸುತ್ತಾ ಹೋದಾಗ, ಅದನ್ನು ಮನೋವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡಿದಾಗ, ಅದು ಏನು ಹೇಳುತ್ತೆ ಅಂದರೆ, ಅವರು ಕಾಂಗ್ರೆಸ್, ಪರಿವಾರವಾದ್ ಅಥವಾ I.N.D.I.A. ಎಂದು ಬಳಸಿರುವುದು- ಈ ಪದಗಳನ್ನು ಅವರು ರಾಹುಲ್ ಗಾಂಧಿ ಎನ್ನುವ ಪದವನ್ನ ಬಳಸುವ ಬದಲು ಬಳಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಧಾನಿ ತಮ್ಮ ಭಾಷಣದಲ್ಲಿ ಮಣಿಪುರ ವಿಷಯಕ್ಕೆ ನಡೆದಂತಹ ಅವಿಶ್ವಾಸ ನಿರ್ಣಯದ ಮೇಲಿನ ಭಾಷಣದಲ್ಲಿ, ಇಡೀ ಮಣಿಪುರ 3 ತಿಂಗಳಾದರೂ ಹೊತ್ತಿ ಉರಿಯುತ್ತಿರುವ ಸನ್ನಿವೇಶದಲ್ಲಿ, ಅವರು ಮಣಿಪುರ ಅನ್ನುವ ಪದ ಬಳಸಿದ್ದು ಕೇವಲ 18 ಸಾರಿ. ಆದರೆ ಕಾಂಗ್ರೆಸ್ ಎನ್ನುವ ಪದ ಬಳಸಿದ್ದು 50 ಬಾರಿ. ಇವನ್ನೆಲ್ಲ ರಾಹುಲ್ ಎನ್ನುವ ಪದಕ್ಕೆ ಬದಲು ಬಳಸಿರುವ ಹಾಗೆ ಕಾಣುತ್ತೆ ಎನ್ನುವುದು ಸ್ಪಷ್ಟವಾಗುತ್ತದೆ. ಇದು ಮೋದಿಯವರಿಗೆ ರಾಹುಲ್ ಗಾಂಧಿ ಬೆಳವಣಿಗೆ ಕುರಿತಂತೆ ಹೆಚ್ಚಾಗುತ್ತಿರುವ ಆತಂಕವನ್ನು ಸ್ಪಷ್ಟವಾಗಿ ತೋರಿಸುತ್ತೆ ಎಂದು ವಿಶ್ಲೇಷಿಸಬಹುದಾಗಿದೆ.

ಇನ್ನು ಜನಪ್ರಿಯತೆ ವಿಷಯಕ್ಕೆ ಬಂದರೆ, ಪಾರ್ಲಿಮೆಂಟ್‌ನಲ್ಲಿ ಮೊದಲು ಬಿಜೆಪಿಯವರು ಭಾಷಣ ಮಾಡಿದರು. ಅದಕ್ಕಿಂತ ಮುಂಚೆ ರಾಹುಲ್ ಗಾಂಧಿಯವರು ಭಾಷಣ ಮಾಡಿದರು. ಈ ಎರಡೂ ಭಾಷಣಗಳನ್ನು ಜನ ಎಷ್ಟರಮಟ್ಟಿಗೆ ಇಷ್ಟಪಟ್ಟಿದ್ದಾರೆ ಎಂದು ಕೆಲವರು ಸರ್ವೆ ಮಾಡಿದ್ದಾರೆ. ಈ ಸರ್ವೆ ರಿಪೋರ್ಟ್‌ಗಳು ತುಂಬಾ ಆಸಕ್ತಿಕರವಾಗಿವೆ. ಮೊದಲನೆಯದಾಗಿ ನವಾರಾ ಟೈಮ್ಸ್ ಮಾಡಿದ ಸರ್ವೆಯಲ್ಲಿ ಶೇ.90 ರಷ್ಟು ಜನ ರಾಹುಲ್ ಗಾಂಧಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದರೆ, ಕೇವಲ ಶೇ.10 ರಷ್ಟು ಜನ  ಮಾತ್ರ ಮೋದಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ಇನ್ನು ಸತ್ಯ ಹಿಂದಿ ಮಾಡಿರುವ ಸರ್ವೆಯಲ್ಲಿ ಶೇ.93 ರಷ್ಟು ಜನ ರಾಹುಲ್ ಗಾಂಧಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದರೆ, ಕೇವಲ ಶೇ.7 ರಷ್ಟು ಜನ ಮಾತ್ರ ಮೋದಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ಅದು ಬಿಟ್ಟರೆ ರುಬಿಯಾ ಲಿಯಾಕತ್ ಎನ್ನುವ ಬಿಜೆಪಿ ಪರವಾದ ಮನುಷ್ಯ ಮಾಡಿರುವಂಥ ಸರ್ವೆಯಲ್ಲಿ ಕೂಡ ಶೇ.64 ರಷ್ಟು ಜನ ರಾಹುಲ್ ಗಾಂಧಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದರೆ, ಶೇ.36 ರಷ್ಟು ಜನ ಮಾತ್ರ ಮೋದಿಯವರ ಭಾಷಣ ಚೆನ್ನಾಗಿತ್ತು ಅಂತ ಹೇಳಿದ್ದಾರೆ.

ಸರ್ವೆ ಅಂದರೆ, ಕ್ರಮೇಣ ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳುವಂಥ ಜನರ ಸಂಖ್ಯೆ ಜಾಸ್ತಿ ಆಗ್ತಾಯಿರುವುದು ಇದರಿಂದ ತಿಳಿಯುತ್ತದೆ. ಇದು ಕೇವಲ ಸರ್ವೆ; ಸರ್ವೆ ಕೆಲವು ಬಾರಿ ಪಕ್ಷಪಾತದಿಂದ ಕೂಡಿರಬಹುದು. ಕೆಲವೊಮ್ಮೆ ಸರಿಯಾಗಿ ಮಾಡಿಲ್ಲದೇ ಇರಬಹುದು ಅಂದುಕೊಂಡರೂ ಕೆಲವು ವಾಸ್ತವ ಅಂಶಗಳತ್ತ ನೋಡೋಣ.

ಸಂಸತ್ ಟಿವಿಯಲ್ಲಿ ರಾಹುಲ್ ಗಾಂಧಿಯವರ ಭಾಷಣವೂ ಬಂದಿದೆ, ಪ್ರಧಾನಿ ಮೋದಿಯವರ ಭಾಷಣವೂ ಬಂದಿದೆ. ರಾಹುಲ್ ಗಾಂಧಿಯವರ ಭಾಷಣದ ವೇಳೆ ಅರ್ಧಕ್ಕಿಂತ ಹೆಚ್ಚಿನ ವೇಳೆ ಅವರ ಮುಖವನ್ನೇ ತೋರಿಸಿಲ್ಲ. ಅವರು ಮಾತಾಡುತ್ತಿದ್ದರೆ, ಟಿವಿ ಪರದೆ ಮೇಲೆ ಕಾಣುತ್ತಿದ್ದದ್ದು ಸ್ಪೀಕರ್ ಮುಖ. ಇದರ ಬಗ್ಗೆ ಕಾಂಗ್ರೆಸ್ ಆಕ್ಷೇಪಣೆ ಕೂಡ ವ್ಯಕ್ತಪಡಿಸಿತ್ತು. ಪರಿಸ್ಥಿತಿ ಹೀಗಿದ್ದರೂ ಕೂಡ ಸಂಸತ್ ಟಿವಿಯಲ್ಲಿ ರಾಹುಲ್ ಗಾಂಧಿಯವರ ಭಾಷಣ ನೋಡಿರುವವರ ಸಂಖ್ಯೆ ಮೂರು ಲಕ್ಷದ ನಲವತ್ತು ಸಾವಿರ. ಆದರೆ, ಅದೇ ಸಂಸತ್ ಟಿವಿಯಲ್ಲಿ ಮೋದಿಯವರ ಭಾಷಣ ನೋಡಿರುವವರ ಸಂಖ್ಯೆ ಎರಡು ಲಕ್ಷದ ಮೂವತ್ತು ಸಾವಿರ ಮಾತ್ರ. ಅದೇ ರೀತಿ ಸಂಸತ್ ಟಿವಿ ಯೂ ಟ್ಯೂಬ್ ಚಾನಲ್‌ನಲ್ಲಿ ಮೋದಿಯವರ ಭಾಷಣಕ್ಕಿಂತ ಎರಡು ಪಟ್ಟು ಹೆಚ್ಚಿನ ಜನ ರಾಹುಲ್ ಗಾಂಧಿಯವರ ಭಾಷಣ ನೋಡಿದ್ದಾರೆ.

ಇನ್ನು ಯೂ ಟ್ಯೂಬ್ ಅನಲಿಟಿಕ್ಸ್‌ಗೆ ಬಂದರೆ, ಒಂದು ವರ್ಷದಿಂದ ಈಚೆಗೆ ರಾಹುಲ್ ಗಾಂಧಿಯವರ ಪ್ರತೀ ವಿಡಿಯೋ ಸರಾಸರಿ ಮೂರು ಲಕ್ಷದ ನಲವತ್ತಾರು ಸಾವಿರ ಜನ ನೋಡಿದ್ದಾರೆ. ಅದೇ ಮೋದಿಯವರ ಭಾಷಣದ ಪ್ರತೀ ವಿಡಿಯೋ ನೋಡಿರುವವರ ಸರಾಸರಿ ಸಂಖ್ಯೆ ಕೇವಲ 56 ಸಾವಿರ ಮಾತ್ರ. ಇನ್ನು ಅದೇ ಯೂಟ್ಯೂಬ್‌ನಲ್ಲಿ ರಾಹುಲ್ ಗಾಂಧಿಯವರ ಪ್ರತೀ ವಿಡಿಯೋಗೂ ಸರಾಸರಿ ಕಾಮೆಂಟ್ಸ್ ಮಾಡಿರುವವರ ಸಂಖ್ಯೆ 1,700 ಆಗಿದ್ದರೆ, ಅದೇ ಮೋದಿಯವರ ಪ್ರತೀ ವಿಡಿಯೋಗೂ ಸರಾಸರಿ ಕಾಮೆಂಟ್ಸ್ ಮಾಡಿರುವವರ ಸಂಖ್ಯೆ ಕೇವಲ 137 ಇದೆ. ಬರಬರುತ್ತಾ ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

ಇನ್ನು, ನೀವು ಟ್ವಿಟರ್‌ಗೆ ಬಂದರೆ, ಅದರಲ್ಲಿ ರಾಹುಲ್ ಗಾಂಧಿಯವರಿಗೆ ಟ್ವಿಟರ್‌ನಲ್ಲಿ ಇರುವ ಫಾಲೋವರ್ಸ್ 2 ಕೋಟಿ 40 ಲಕ್ಷ. ಅದೇ ಮೋದಿಯವರಿಗೆ ಟ್ವಿಟರ್‌ನಲ್ಲಿ ಇರುವ ಫಾಲೋವರ್ಸ್ 9 ಕೋಟಿ. ಅಂದರೆ, ರಾಹುಲ್ ಗಾಂಧಿಯವರಿಗಿಂತ ನಾಲ್ಕು ಪಟ್ಟು ಹೆಚ್ಚು ಫಾಲೋವರ್ಸ್ ಮೋದಿಯವರಿಗೆ ಇದ್ದಾರೆ. ಕಡೆಯ ಹತ್ತು ವರ್ಷಗಳ ಲೆಕ್ಕ ತೆಗೆದುಕೊಂಡರೆ, ಇಲ್ಲಿಯವರೆಗೂ ಮೋದಿಯವರು ಮಾಡಿರುವ ಟ್ವೀಟ್‌ಗಳ ಸಂಖ್ಯೆ 32,600. ಅದೇ ರಾಹುಲ್ ಗಾಂಧಿಯವರು ಮಾಡಿರುವ ಟ್ವೀಟ್ಸ್ ಸಂಖ್ಯೆ 6,700 ಮಾತ್ರ. ಅಂದರೆ ಸರಾಸರಿಯಾಗಿ ಪ್ರತೀ ದಿನ 10 ಟ್ವೀಟ್‌ಗಳನ್ನ ಮೋದಿಯವರು ಮಾಡಿದ್ದಾರೆ. ಅದೇ ರಾಹುಲ್ ಗಾಂಧಿಯವರು ಸರಾಸರಿಯಾಗಿ ಪ್ರತೀ ದಿನ 2 ಟ್ವೀಟ್‌ಗಳನ್ನ ಮಾಡಿದ್ದಾರೆ. ಮೋದಿಯವರಿಗೆ ರಾಹುಲ್ ಗಾಂಧಿಯವರಿಗಿಂತ ನಾಲ್ಕು ಪಟ್ಟು ಹೆಚ್ಚು ಫಾಲೋವರ್ಸ್ ಇರುವುದರಿಂದ, ಅವರ ಟ್ಟೀಟ್ಸ್‌ಗೆ ಹೆಚ್ಚಿನ ಲೈಕ್ಸ್, ಹೆಚ್ಚಿನ ರೀ-ಟ್ವೀಟ್‌ಗಳು ಬರಬೇಕು. ಆದರೆ, ಇಲ್ಲಿ ಫಲಿತಾಂಶ ಬೇರೆ ಇದೆ. ಇಲ್ಲಿಯ ತನಕ ರಾಹುಲ್ ಗಾಂಧಿಯವರು ಮಾಡಿರುವ 6,700 ಟ್ವೀಟ್‌ಗಳಿಗೆ ಸಿಕ್ಕಿರುವ ಲೈಕ್ಸ್ 41,260. ಅಂದರೆ, ಪ್ರತಿ ಟ್ವೀಟ್‌ಗೆ ಸುಮಾರು 6.16 ರಷ್ಟು ಲೈಕ್ಸ್ ಸಿಕ್ಕಿವೆ. ಅದೇ ಮೋದಿಯವರು ಮಾಡಿರುವ 32,600 ಟ್ವೀಟ್‌ಗಳಿಗೆ ಸಿಕ್ಕಿರುವ ಲೈಕ್ಸ್ ಸಂಖ್ಯೆ 21,919. ಅಂದರೆ, ಪ್ರತಿ ಟ್ವೀಟ್‌ಗೆ 0.62 ರಷ್ಟು ಮಂದಿ ಮಾತ್ರ ಲೈಕ್ಸ್ ಒತ್ತಿದ್ದಾರೆ. ಮೋದಿಯವರಿಗೆ ಟ್ವಿಟರ್‌ನಲ್ಲಿ 9 ಕೋಟಿ ಫಾಲೋವರ್ಸ್ ಇದ್ದರೂ ಕೂಡ ಅಲ್ಲಿ ಸುಮಾರು ಟ್ವಿಟರ್ ಖಾತೆಗಳು ಆಕ್ಟಿವ್ ಆಗಿಲ್ಲ, ಲೈಕ್ ಮಾಡ್ತಿಲ್ಲ, ರೀ- ಟ್ವೀಟ್ ಮಾಡ್ತಿಲ್ಲ. ಬರೀ ಫಾಲೋವರ್ಸ್ ಆಗಿ ಮಾತ್ರ ಇದ್ದಾರೆ.

ಅಂಕಿ ಅಂಶಇನ್ನು ರೀ- ಟ್ವೀಟ್‌ಗಳ ಸಂಖ್ಯೆಗೆ ಬಂದರೆ, ರಾಹುಲ್ ಗಾಂಧಿಯವರು ಮಾಡಿರುವ 6,700 ಟ್ವೀಟ್‌ಗಳು ಇಲ್ಲಿಯತನಕ 9,941 ಬಾರಿ ರೀ-ಟ್ವೀಟ್‌ ಆಗಿವೆ; ಅಂದರೆ ಪ್ರತಿ ಟ್ವೀಟ್‌ 1.48 ರಷ್ಟು ಬಾರಿ ರೀ- ಟ್ವೀಟ್ ಆಗಿದೆ. ಅದೇ ಮೋದಿಯವರು ಮಾಡಿರುವ 32,600 ಟ್ವೀಟ್‌ಗಳಲ್ಲಿ ಇಲ್ಲಿಯತನಕ ರೀ- ಟ್ವೀಟ್ ಆಗಿರುವುದು ಕೇವಲ 4,299 ಬಾರಿ ಮಾತ್ರ. ಮೋದಿಯವರ ವಿಷಯದಲ್ಲಿ ಕೇವಲ 4,299 ಅಂದರೆ ಪ್ರತಿ ಟ್ವೀಟ್ ರೀ- ಟ್ವೀಟ್ ಆಗಿರುವುದು ಕೇವಲ ಶೇ.0.12 ರಷ್ಟು ಮಾತ್ರ.

ಯೂಟ್ಯೂಬ್‌ನಲ್ಲಾಗಲಿ, ಟ್ವಿಟರ್‌ನಲ್ಲಾಗಲಿ, ಸಂಸತ್ ಟಿವಿಯಲ್ಲಾಗಲಿ ಕ್ರಮೇಣ ಏನು ಆಗುತ್ತಿದೆ ಎಂದರೆ, ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳುವ, ರಾಹುಲ್ ಗಾಂಧಿಯವರ ಭಾಷಣ ನೋಡುವ, ಅವರ ಟ್ವೀಟ್‌ಗಳನ್ನು ಲೈಕ್ ಮಾಡುವ, ರೀ- ಟ್ವೀಟ್ ಮಾಡುವ ಜನರ ಸಂಖ್ಯೆ ಮೋದಿಯವರದ್ದಕ್ಕಿಂತ ತುಂಬಾ ಜಾಸ್ತಿಯಿದೆ.

ಉದಾಹರಣೆಗೆ ಯೂ ಟ್ಯೂಬ್‌ನಲ್ಲಿ ಮೋದಿಯವರ ಪ್ರತಿ ವಿಡಿಯೋ 56 ಸಾವಿರ ಜನ ನೋಡಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿಯವರ ಪ್ರತಿ ವಿಡಿಯೋ 3.43 ಲಕ್ಷ ಜನ- ಅಂದರೆ ಮೋದಿಯವರಿಗಿಂತ ಹೆಚ್ಚು ಕಡಿಮೆ 5 ರಿಂದ 6 ಪಟ್ಟು ಹೆಚ್ಚಿನ ಜನ- ನೋಡಿದ್ದಾರೆ. ಕಾಮೆಂಟ್‌ಗಳ ವಿಚಾರಕ್ಕೆ ಬಂದರಂತೂ ಮೋದಿಯವರ ವಿಡಿಯೋಗಳಿಗೆ ಮಾಡೋ ಕಾಮೆಂಟ್‌ಗಳಿಗಿಂತ 10 ಪಟ್ಟು ಹೆಚ್ಚಿನ ಕಾಮೆಂಟ್ಸ್ ರಾಹುಲ್ ಗಾಂಧಿಯವರ ವಿಡಿಯೋಗಳಿಗೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಅಂಕಿ ಅಂಶಗಳು ಇವನ್ನೆಲ್ಲ ನೋಡುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲೂ ರಾಹುಲ್ ಗಾಂಧಿಯವರ ಭಾಷಣಗಳನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ವಿಡಿಯೋಒಂದು ಕಾಲದಲ್ಲಿ ಮೋದಿ ಏನು ಮಾತನಾಡಿದರೂ ಜನ ನೋಡುತ್ತಿದ್ದರು, ಕೇಳುತ್ತಿದ್ದರು. ಆದರೆ, ಕ್ರಮೇಣ ಅಂಥವರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗುತ್ತಿದೆ. ಇದಕ್ಕೆ ಕಾರಣ ಏನಿರಬಹುದು ಅಂತ ನೋಡಿದರೆ ಮೋದಿಯವರ ಭಾಷಣದಲ್ಲಿ ಸಾಮಾನ್ಯವಾಗಿ ಪ್ರಧಾನವಾಗಿ ಮೂರು ಅಂಶಗಳಿರುತ್ತವೆ. ಅದರಲ್ಲಿ ಅತ್ಯಂತ ಮುಖ್ಯ ಅಂಶ ಏನೆಂದರೆ, ತಮ್ಮ ಭಾಷಣಗಳಲ್ಲಿ ಅವರು ಹೆಚ್ಚಾಗಿ ವಿರೋಧ ಪಕ್ಷಗಳನ್ನು ಗೇಲಿ ಮಾಡಿ, ಟೀಕೆ ಮಾಡುವುದು. ಮೋದಿಯವರು ಪ್ರಧಾನಿಯಾಗಿ 9 ವರ್ಷ ಆದ ನಂತರವೂ ವಿರೋಧ ಪಕ್ಷಗಳನ್ನು ಅದೇ ರೀತಿ ಟೀಕೆ, ಗೇಲಿ ಮಾಡಿ ಮಾತನಾಡುವುದರಲ್ಲಿ ಜನಕ್ಕೆ ಏನೂ ವಿಶೇಷ ಕಾಣಿಸುತ್ತಿಲ್ಲ.

ಎರಡನೇ ಕಾರಣ ಏನೆಂದರೆ, ತಾವು ಈ 9 ವರ್ಷದಲ್ಲಿ ಏನು ಸಾಧನೆ ಮಾಡಿದ್ದೇವೆ ಅನ್ನುವುದರ ಬಗ್ಗೆ ಅವರು ಆಗಾಗ ಹೇಳುತ್ತಿರುತ್ತಾರೆ, ತಮ್ಮ ಸಾಧನೆಗಳ ಪಟ್ಟಿಯನ್ನು ಕೊಡುತ್ತಿರುತ್ತಾರೆ. ಆದರೆ, ಅವರು ಏನೇ ಸಾಧನೆಗಳ ಪಟ್ಟಿಯನ್ನು ಕೊಟ್ಟರೂ ಸಹಾ ಇವತ್ತು ಈ ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗಿದೆ. ಓದಿದ ಯುವಕ-ಯುವತಿಯರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಹಾಗೆ ಉದ್ಯೋಗಗಳು ಸಿಕ್ಕುತ್ತಿಲ್ಲ. ಅದರ ಜೊತೆಗೆ ಬೆಲೆ ಏರಿಕೆ ಕೂಡ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ವಿಪರೀತ ಹೆಚ್ಚಾಗಿ, ಇದಕ್ಕೆಲ್ಲ ಯಾರು ಕಾರಣ ಎನ್ನುವುದು ಜನಗಳಿಗೆ ಅರ್ಥವಾಗಿ ಹೋಗಿದೆ. ಇವುಗಳ ಬೆಲೆ ಇಳಿಯದ ಹೊರತು ಮೋದಿಯವರ ಯಾವ ಸಾಧನೆಯೂ ಕೂಡ ನಮ್ಮ ಬದುಕನ್ನು ಉತ್ತಮಗೊಳಿಸುವುದರಲ್ಲಿ ನೆರವಾಗುವುದಿಲ್ಲ ಅನ್ನೊ ಭಾವನೆ ಜನಗಳಿಗೆ ಬಂದಿದೆ. ಹಾಗೆ ಬಂದಿರುವುದರಿಂದ ಮೋದಿಯವರು ತಮ್ಮ ಸಾಧನೆಗಳ ಬಗ್ಗೆ ಏನೇ ಕೊಚ್ಚಿಕೊಂಡರೂ, ಏನೇ ಪಟ್ಟಿ ಕೊಟ್ಟರೂ ಅದು ಜನಕ್ಕೆ ವಿಶೇಷ ಎಂದು ಅನ್ನಿಸುತ್ತಿಲ್ಲ.

ಇನ್ನು ಮೋದಿಯವರ ಭಾಷಣದಲ್ಲಿ ಸಾಮಾನ್ಯವಾಗಿ ಇರುವಂಥ ವಿಚಾರವೇನೆಂದರೆ, ಮುಂದಕ್ಕೆ ತಾವು ಏನು ಸಾಧನೆ ಮಾಡುತ್ತೇವೆ ಎನ್ನುವುದರ ಬಗ್ಗೆ ಅವರು ಹೇಳುತ್ತಿರುತ್ತಾರೆ. ಅದರ ಬಗ್ಗೆ ಕೂಡ ಜನರಿಗೆ ಈಗಾಗಲೇ ನಿರಾಸೆ ಬಂದಿದೆ. ಯಾಕೆಂದರೆ, ತಾವು ಅಧಿಕಾರಕ್ಕೆ ಬಂದ ಮೇಲೆ ಕಪ್ಪು ಹಣ ವಾಪಸ್ ತರುತ್ತೇವೆ ಎಂದರು. ತಾವು ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ MSP ಕೊಟ್ಟೇ ಕೊಡುತ್ತೇವೆ ಎಂದಿದ್ದರು. 2022ರ ಹೊತ್ತಿಗೆ ನಾವು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದರು. ಈ ಯಾವ ಭರವಸೆಗಳೂ ಈಡೇರದೇ ಇರುವುದರಿಂದ ಮೋದಿ ಏನೇ ಹೇಳಿದರೂ ಜನರಿಗೆ ಅದರಲ್ಲಿ ಜನರಿಗೆ ವಿಶ್ವಾಸ ಬರುತ್ತಿಲ್ಲ. ಹಾಗಾಗಿ ಮೋದಿಯವರು ಏನೇ ಮಾತನಾಡಿದರೂ ಕೂಡ ಅದರಲ್ಲಿ ಹೊಸದೇನೂ ಇಲ್ಲ ಎಂದು ಜನಕ್ಕೆ ಅನ್ನಿಸಿ, ಅವರ ಆಸಕ್ತಿ ಕಡಿಮೆಯಾಗುತ್ತಿದೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ಅದಾನಿ ಹಿಂಡನ್ ಬರ್ಗ್ ವಿಷಯದಲ್ಲಿ ಹಲವು ಪ್ರಶ್ನೆ ಎತ್ತಿದ್ದರು. ಅದಾನಿಯವರಿಗೆ 20 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದರು. ಈ ರೀತಿಯ ಹಲವು ಪ್ರಶ್ನೆಗಳಿಗೆ ಮೋದಿಯವರು ಪಾರ್ಲಿಮೆಂಟ್ ನಲ್ಲಿ ಕೂಡ ಎಮೋಷನಲ್ ಭಾಷಣ ಮಾಡಿದ್ದು ಬಿಟ್ಟರೆ ದಾಖಲೆಗಳ ಸಮೇತ ಜವಾಬ್ದಾರಿಯಿಂದ ಉತ್ತರ ಕೊಟ್ಟಿದ್ದೇ ಇಲ್ಲ. ಇವೆಲ್ಲ ಕಾರಣಗಳಿಂದ ಮೋದಿಯ ಭಾಷಣಗಳನ್ನು ನೋಡುವ ಜನಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಜನಪ್ರಿಯತೆಯೂ ಕಡಿಮೆಯಾಗುತ್ತಿದೆ.

ಇನ್ನು ರಾಹುಲ್ ಗಾಂಧಿಯವರ ವಿಷಯಕ್ಕೆ ಬಂದರೆ ಭಾರತ್ ಜೋಡೋ ಯಾತ್ರೆ ಶುರುವಾದಾಗಿನಿಂದ ಹಿಡಿದು ಇಲ್ಲಿಯ ತನಕ ನಿಧಾನಕ್ಕೆ ರಾಹುಲ್ ಗಾಂಧಿಯವರ ಇಮೇಜ್ ಬದಲಾವಣೆಯಾದಂತೆ ಕಾಣುತ್ತಿದೆ. ಏಕೆಂದರೆ, ಭಾರತ್ ಜೋಡೋ ಯಾತ್ರೆಯ ದಕ್ಷಿಣದಿಂದ ಹಿಡಿದು ಉತ್ತರದವರೆಗೂ ಇಡೀ ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಾಗಿದರು. ಅದು ಸಾಮಾನ್ಯ ಸಾಧನೆಯ ವಿಷಯವಲ್ಲ. ಹೀಗೆ ನಡೆದುಕೊಂಡು ಹೋಗುವ ಸಮಯದಲ್ಲಿ ಸಾಮಾನ್ಯರ ಜೊತೆಗೆ ಬೆರೆಯುತ್ತಾ ಬಂದರು. ಒಂದು ಕಡೆ ಮೋದಿಯವರು ಒಂದೂ ಪ್ರೆಸ್ ಮೀಟ್ ಮಾಡದೇ ಇದ್ದಾಗ ಈ ಕಡೆ ರಾಹುಲ್ ಗಾಂಧಿಯವರು ಜನಸಾಮಾನ್ಯರ ಜೊತೆ, ಮಕ್ಕಳ ಜೊತೆ, ಕಾರ್ಮಿಕರು, ರೈತರ ಜೊತೆ ಸಹಜವಾಗಿ, ಸರಳವಾಗಿ ಬೆರೆಯುತ್ತಿದ್ದರು. ಈ ರೀತಿಯ ಮನುಷ್ಯಪರವಾದ ಒಂದು ನಡವಳಿಕೆ ಜನರಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಇದ್ದ ಇಮೇಜ್ ಅನ್ನು ಬದಲಿಸಿದೆ. ಅದರ ಜೊತೆಗೆ ನಿರ್ಭಯ ಪ್ರಕರಣದಲ್ಲಿ ಅವರ ಕುಟುಂಬದಲ್ಲಿ ಅವರ ತಮ್ಮನಿಗೆ ಪೈಲಟ್ ಆಗುವಲ್ಲಿ ಸಹಾಯ ಮಾಡಿದರು. ಅದೇ ರೀತಿ ಕಲಾವತಿ ಅನ್ನುವ ಮಹಿಳೆಗೆ ಸಹಾಯ ಮಾಡಿದರು. ಸಹಾಯ ಮಾಡಿದ್ದನ್ನು ಅವರು ಎಲ್ಲೂ ಹೇಳಿಕೊಳ್ಳಲಿಲ್ಲ. ಇವೆಲ್ಲವೂ ಜನರಿಗೆ ರಾಹುಲ್ ಗಾಂಧಿಯವರ ಬಗ್ಗೆ ಈತ ಅತ್ಯಂತ ಸಹಜ ಸರಳ ಮನುಷ್ಯ ಅಂತ ಅನ್ನಿಸುವಂತೆ ಮಾಡಿವೆ. ಈ ಎಲ್ಲ ಕಾರಣಗಳಿಂದ ಮೋದಿಯವರ ಭಾಷಣ ಕೇಳುತ್ತಿರುವವರ, ವಿಡಿಯೋ ನೋಡುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ನೊಂದು ಕಡೆ ರಾಹುಲ್ ಗಾಂಧಿಯವರ ಭಾಷಣಗಳನ್ನು, ವಿಡಿಯೋಗಳನ್ನು ನೋಡುತ್ತಿರುವವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ರಾಹುಲ್ ಗಾಂಧಿಯವರ ಬಗ್ಗೆ ಮೋದಿಯವರಿಗೆ ಇರುವ ಆತಂಕವನ್ನು ದಿನೇ ದಿನೇ ಹೆಚ್ಚು ಮಾಡುತ್ತಿದೆ.

ಡಾ. ಬಿ ಸಿ ಬಸವರಾಜು
+ posts

ಮೂಲತಃ ಮಂಡ್ಯದವರು. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರು.

ಪೋಸ್ಟ್ ಹಂಚಿಕೊಳ್ಳಿ:

ಡಾ. ಬಿ ಸಿ ಬಸವರಾಜು
ಡಾ. ಬಿ ಸಿ ಬಸವರಾಜು
ಮೂಲತಃ ಮಂಡ್ಯದವರು. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರು.

1 COMMENT

  1. ಲೇಖಕರಿಗೆ ಧನ್ಯವಾದಗಳು. ಮುಖವಾಡಗಳನ್ನು ಅಂಕಿಅಂಶಗಳೊಂದಿಗೆ ಕಳಚುವ ಬಗೆ ಆಸಕ್ತಿ ಹುಟ್ಟಿಸುವಂತಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸುಳ್ಳುಗಳು: ಭಾಗ-1 | ಕಳೆದ 10 ವರ್ಷಗಳಲ್ಲಿ ವಿಶ್ವಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿದೆಯೇ? ವಾಸ್ತವ ಏನು?

ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ...

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಪಿಎಂ ಮೋದಿ ಸೂಪರ್‌ ಮ್ಯಾನ್ ಅಲ್ಲ ದುಬಾರಿ ಮ್ಯಾನ್: ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಸೂಪರ್ ಮ್ಯಾನ್ ಅಲ್ಲ ಬದಲಾಗಿ ಅವರು ದುಬಾರಿ...