ಕಳೆದ 2013ರ ಜನವರಿಯಿಂದ ಕೇವಲ ಒಂದು ಗೂಡಂಗಡಿ ಇಡಲು ಅಲೆಡಾಡುತ್ತಿದ್ದ ಮಹಿಳೆಯೋರ್ವರಿಗೆ ಸಿಎಂ ಸಿದ್ದರಾಮಯ್ಯ ಅವರು ಜನತಾ ದರ್ಶನದ ಮೂಲಕ ಪರಿಹಾರ ಸೂಚಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯಲ್ಲಿ ಟೀ ಇಟ್ಟುಕೊಂಡು ವ್ಯಾಪಾರ ಮಾಡಲು ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಕಿರುಕುಳದ ನೀಡುತ್ತಿರುವ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಆಗುತ್ತಿರುವ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಕಿರುಕುಳದ ಬಗ್ಗೆ ಬಡ ವ್ಯಾಪಾರಿ ನಿಂಗಮ್ಮ ಅವರಿಂದ ಸಿಎಂಗೆ ದೂರು. ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ ನಿಂಗಮ್ಮ ಅವರಿಗೇ ಕಿರುಕುಳ ತಪ್ಪಿಸುವಂತೆ ಸೂಚನೆ ನೀಡಿದ ಸಿಎಂ. pic.twitter.com/Ure6MHQbFZ
— eedina.com (@eedinanews) November 27, 2023
ನನಗೆ ಗಂಡ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜೀವನ ಸಾಗಿಸಲು ಡೈರಿ ಸರ್ಕಲ್ ಬಳಿ ಗಾಡಿಯಲ್ಲಿ ಟೀ ಇಟ್ಟುಕೊಂಡು ವ್ಯಾಪಾರ ಮಡಲು ಹೊರಟಿದ್ದೆ. ಈ ಬಗ್ಗೆ 2013ರಿಂದಲೂ ಅಲೆದಾಡುತ್ತಿದ್ದೇನೆ. ಆದರೆ ಈವರೆಗೆ ನನಗೆ ಅವಕಾಶ ನೀಡಿಲ್ಲ. ಗಾಡಿ ಇಟ್ಟರೆ ಮೈಕೋ ಲೇಔಟ್ ಸಂಚಾರಿ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಬಂದು ಕಿರುಕುಳ ನೀಡುತ್ತಾರೆ. ಹಾಗಾಗಿ ದಯವಿಟ್ಟು ನನಗೆ ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿ ನಿಂಗಮ್ಮ ಅವರಿಗೇ ಕಿರುಕುಳ ನೀಡದಂತೆ ಹಾಗೂ ಚಹಾ ಅಂಗಡಿ ಇಡಲು ಅವಕಾಶ ನೀಡುವಂತೆ ಸೂಚನೆ ನೀಡುವ ಮೂಲಕ ಪರಿಹಾರ ಸೂಚಿಸಿದರು.
ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ಪೆನಾಲ್ಟಿ
ಸಿಎಂ ಅವರ ಇಂದಿನ ಜನತಾದರ್ಶನದಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರುಗಳ ಸರಮಾಲೆಯೇ ಜನರಿಂದ ಬರುತ್ತಿದೆ.
ಜನತಾ ದರ್ಶನಕ್ಕೆ ಆಗಮಿಸಿದ್ದ ವೃದ್ಧರೋರ್ವರು, “ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ಪೆನಾಲ್ಟಿ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು ಬಿಬಿಎಂಪಿಗೆ ಹೋದರೆ, ‘ನಮಗೆ ಗೊತ್ತಿಲ್ಲ ಹೋಗಿ ಸರ್ಕಾರಕ್ಕೆ ಕೇಳಿ’ ಎಂದು ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ ಎಂದು ಸಿಎಂ ಬಳಿ ದೂರಿದರು.
ಈ ಬಗ್ಗೆ ದೂರು ಸ್ವೀಕರಿಸುತ್ತಿದ್ದಂತೆಯೇ ಅಧಿಕಾರಿಗಳ ವಿರುದ್ಧ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಬಿಎಂಪಿ ಅಧಿಕಾರಿಯನ್ನು ಕರೆದು ಸದರಿ ಪ್ರಕರಣವನ್ನು ‘ಖುದ್ದಾಗಿ ಗಮನಿಸಿ ಸಂಜೆಯೊಳಗೆ ಪರಿಹಾರ ಒದಗಿಸಿ ನನಗೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಿ: ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚನೆ
ಸಿಡಾಕ್ ಸಂಸ್ಥೆಯಿಂದ ತರಬೇತಿ ಪಡೆದಿದ್ದರೂ ಎರಡು ವರ್ಷದಿಂದ ನಮಗೆ ಬಿಬಿಎಂಪಿ ನೆರವು ನೀಡಿಲ್ಲ ಎಂದು ವಿಶೇಷ ಚೇತನರು ಸಿಎಂಗೆ ದೂರು ನೀಡಿದ್ದಾರೆ. ತಮ್ಮ ಮನವಿಯಲ್ಲಿ 148 ಮಂದಿ ವಿಶೇಷ ಚೇತನರಿಂದ ಮೂರು ಚಕ್ರ ವಾಹನಕ್ಕೆ ಬೇಡಿಕೆ ಇದೆ. ಆದರೆ ಈವರೆಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತಿಳಿಸಿದರು.
‘ತರಬೇತಿ ಪಡೆದಿರುವ 98 ಮಂದಿಗೆ ಮುಂದಿನ 15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಬೇಕು. ಉಳಿದವರಿಗೆ ತ್ರಿಚಕ್ರ ವಾಹನ ಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎನ್ನುವ ಖಡಕ್ ಸೂಚನೆಯನ್ನು ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನೀಡಿದರು.
‘ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎನ್ನುವ ದೂರುಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಿಎಂ ಸೂಚಿಸಿದರು.