“ಅಸಮಾಧಾನಗೊಂಡ ಎಲ್ಲರನ್ನೂ ಸಮಾಧಾನ ಪಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ. ಮುಖ್ಯಮಂತ್ರಿಗಳು ರಾಜು ಕಾಗೆ ಅವರನ್ನು ಕರೆದು ಮಾತನಾಡುತ್ತಿದ್ದಾರೆ. ಅನುದಾನ ವಿಚಾರವಾಗಿ ಮುಖ್ಯಮಂತ್ರಿ ಅವರು ಹಾಗೂ ಉಪಮುಖ್ಯಮಂತ್ರಿಯವರು ಚರ್ಚೆ ಮಾಡಿ ಎಲ್ಲರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುತ್ತಾರೆ” ಎಂದು ಮಾಜಿ ಸಂಸದ, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.
ಜಲ ಸಂಪನ್ಮೂಲ ಇಲಾಖೆಯಿಂದ ನನ್ನ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎನ್ನುವ ಬಗ್ಗೆ ಶಾಸಕ ರಾಜುಕಾಗೆ ಅವರ ಅಸಮಾಧಾನದ ಬಗ್ಗೆ ಕೇಳಿದಾಗ, “ನೀರಾವರಿ ಇಲಾಖೆಯಲ್ಲಿ ಹಿಂದಿನ ಸರ್ಕಾರವೇ ಸಾಕಷ್ಟು ಕಾಮಗಾರಿ ಹಂಚಿಕೆ ಮಾಡಿತ್ತು. ಕನಿಷ್ಠ 300 ಕೋಟಿ, 500 ಕೋಟಿ, 1 ಸಾವಿರ ಕೋಟಿ ನೀಡಲಾಗುತ್ತಿದೆ. ಈ ದೃಷ್ಟಿಯಿಂದ ಎಲ್ಲರನ್ನೂ ಸಮಾಧಾನಗೊಳಿಸುವ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದರು.
ಸಚಿವ ರಾಜಣ್ಣ ಅವರು ಪವರ್ ಸೆಂಟರ್ ಗಳ ಹೆಚ್ಚಳವಾಗಿದೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ರಾಜಣ್ಣ ಅವರು ಸರ್ಕಾರದ ಒಂದು ಭಾಗ. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಅವರನ್ನೇ ಕೇಳಬೇಕೇ ಹೊರತು ಬೇರೆಯವರನ್ನಲ್ಲ” ಎಂದರು.
ವರ್ಗಾವಣೆ ಹೆಚ್ಚಾಗಿರುವ ಕಾರಣಕ್ಕೆ ಆಡಳಿತ ಹಳಿ ತಪ್ಪಿದೆ ಎನ್ನುವ ಹೇಳಿಕೆಯ ಬಗ್ಗೆ ಕೇಳಿದಾಗ, “ರಾಜಣ್ಣ ಅವರು ಹಿರಿಯ ಸಚಿವರು. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದಾರೋ ನನಗೂ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು, ಪಕ್ಷದ ವರಿಷ್ಠರು ಹಾಗೂ ರಾಜಣ್ಣ ಅವರನ್ನೇ ಕೇಳಬೇಕು” ಎಂದರು.
ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾತ್ತಿದೆ ಉತ್ತರ ಕರ್ನಾಟಕ, ತುಮಕೂರು ಭಾಗಕ್ಕೆ ನೀರಾವರಿ ಇಲಾಖೆಯ ಅನುದಾನ ತಲುಪಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಇದು ಮಾಧ್ಯಮಗಳು ಸೃಷ್ಟಿಸುತ್ತಿರುವ ವ್ಯಾಖ್ಯಾನವೇ ಹೊರತು ಶಾಸಕರು ಹೇಳುತ್ತಿರುವುದಲ್ಲ. ಕಾವೇರಿ ಜಲಾನಯನ ಪ್ರದೇಶಕ್ಕೆ ಕಳೆದ 30 ವರ್ಷಗಳಿಂದ ಅನ್ಯಾಯವಾಗಿದೆ. ಕಾವೇರಿ ಟ್ರಿಬ್ಯುನಲ್ ಕಾರಣಕ್ಕೆ ಹೆಚ್ಚಿನ ಅನುದಾನಗಳು, ನೀರಿನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ” ಎಂದು ತಿಳಿಸಿದರು.
“ರಾಮನಗರ ಬಯಲು ಸೀಮೆ ಪ್ರದೇಶಕ್ಕೆ ಸೇರಿದೆ. ಈ ಜಿಲ್ಲೆಗೆ ಯಾವುದೇ ನೀರಾವರಿ ಮೂಲ ಇಲ್ಲದೇ ಇರುವ ಕಾರಣಕ್ಕೆ ಒಂದಷ್ಟು ಸಣ್ಣ ಯೋಜನೆಗಳನ್ನು ತಗೆದುಕೊಳ್ಳಲಾಗಿದೆ ಹೊರತು ಬೃಹತ್ ಗಾತ್ರದ ಯೋಜನೆಗಳನ್ನು ತೆಗೆದುಕೊಂಡಿಲ್ಲ. ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ನೀರಿನ ಮೂಲ ಇಲ್ಲದೇ ಇರುವ ಕಾರಣಕ್ಕೆ ಯಾವುದೇ ಕಾಲದಲ್ಲೂ ಹೆಚ್ಚಿನ ಒತ್ತು ಕೊಟ್ಟಿಲ್ಲ. ಈಗ ಇರುವಂತಹ ಮೂಲಗಳನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಿದ್ದೇವೆ” ಎಂದರು.
ಇದನ್ನು ಓದಿದ್ದೀರಾ? ವಿಜಯಪುರ | 10 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಗ್ಯಾಂಗ್ ಕೊನೆಗೂ ಪೊಲೀಸರ ಬಲೆಗೆ: ಬ್ಯಾಂಕ್ನ ಮ್ಯಾನೇಜರೇ ಸೂತ್ರಧಾರ!
ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವಿನ ಬಗ್ಗೆ ಕೇಳಿದಾಗ, “ಈ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಇದು ಬಹಳ ಆಘಾತಕಾರಿ ವಿಚಾರ. ಇದು ಕಿಡಿಗೇಡಿಗಳ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಪ್ರಾಣಿ-ಮಾನವ ಸಂಘರ್ಷ ಸಾಮಾನ್ಯ. ಆದರೆ ಈ ರೀತಿಯ ಘಟನೆ ದುರದೃಷ್ಟಕರ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕು. ಅರಣ್ಯ ಅಂಚಿನ ಗ್ರಾಮಸ್ಥರಲ್ಲಿ ವಿಶ್ವಾಸ, ಅರಿವು, ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕಿದೆ” ಎಂದು ಹೇಳಿದರು.
