ಚಂದ್ರಯಾನ 3 ಉಡಾವಣೆಗೆ ಇಸ್ರೋವನ್ನು ಶ್ಲಾಘಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಸೇರಿದಂತೆ ಎಲ್ಲ ಮಾಜಿ ಪ್ರಧಾನಿಗಳ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಚಂದ್ರಯಾನ 3 ಉಡಾವಣೆಯು ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಚಂದ್ರಯಾನ 3 ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಪ್ರಚಂಡ ಜಾಣ್ಮೆ, ಸಮರ್ಪಣೆ, ಕೌಶಲ್ಯ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
“ಈ ಅಭೂತಪೂರ್ವ ಯೋಜನೆಯು ಜನರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಸಂಖ್ಯಾತ ವಿಜ್ಞಾನಿಗಳ ಪರಿಶ್ರಮವಾಗಿದೆ. ಇದು ಭಾರತೀಯರಿಗೆ ಹೆಮ್ಮೆಯ ವಿಷಯ. ಭಾರತದ ಚಂದ್ರಯಾನ ಯೋಜನೆಯು 2008 ರಲ್ಲಿ ಚಂದ್ರಯಾನ 1 ರೊಂದಿಗೆ ಪ್ರಾರಂಭವಾಗಿ ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿತು. ಇದು ನಮ್ಮ ದೇಶದ ಐತಿಹಾಸಿಕ ಸಾಧನೆ!” ಎಂದು ತಿಳಿಸಿದ್ದಾರೆ.
“ಚಂದ್ರಯಾನ 2 ರಿಮೋಟ್ ಸೆನ್ಸಿಂಗ್ ಮೂಲಕ ಮೊದಲ ಬಾರಿಗೆ ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಸೋಡಿಯಂ ಇರುವಿಕೆಯನ್ನು ಪತ್ತೆ ಮಾಡಿದೆ. ನಮ್ಮ ವಿಜ್ಞಾನಿಗಳ ಪರಿಶ್ರಮ ವ್ಯರ್ಥವಾಗಲಿಲ್ಲ. ಇಂದು ಚಂದ್ರಯಾನದ ಯಶಸ್ವಿ ಉಡಾವಣೆಯು ಪಂಡಿತ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಪಿ ವಿ ನರಸಿಂಹರಾವ್, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ ಮನಮೋಹನ್ ಸಿಂಗ್ ಸೇರಿದಂತೆ ನಮ್ಮ ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳ ದೂರದೃಷ್ಟಿ, ಸಂಕಲ್ಪ ಮತ್ತು ಸಾಧನೆಗೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?
“ಇತಿಹಾಸದ ಸುದೀರ್ಘ ಹಾದಿಯಲ್ಲಿ ವಿಜ್ಞಾನದ ಸಾಧನೆಗಳು ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಜೀವನವನ್ನು ಕ್ರಾಂತಿಗೊಳಿಸಿವೆ ಮತ್ತು ಮತ್ತಷ್ಟು ಮತ್ತು ಹೆಚ್ಚು ಆಮೂಲಾಗ್ರ ಬದಲಾವಣೆಯ ಬಾಗಿಲುಗಳು ಮತ್ತು ಮಾರ್ಗಗಳನ್ನು ತೆರೆದಿವೆ ಎಂದು ನನಗೆ ಮನವರಿಕೆಯಾಗಿದೆ” ಎಂದು ಪಂಡಿತ್ ನೆಹರು ಹೇಳಿರುವ ಮಾತನ್ನು ಖರ್ಗೆ ಉಲ್ಲೇಖಿಸಿದ್ದಾರೆ.
ನೂರಾರು ಕೋಟಿ ಜನರು ನಮ್ಮನ್ನು ನೋಡುತ್ತಿದ್ದಾರೆ
ಇಂದು ನಮ್ಮ ಸಾಧನೆಯನ್ನು ವಿಶ್ವದ ನೂರಾರು ಕೋಟಿಗೂ ಹೆಚ್ಚು ಜನರು ನೋಡುತ್ತಿದ್ದಾರೆ. ನಾವು ಪ್ರಕಾಶಿಸುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
“1962 ರಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ವೈಜ್ಞಾನಿಕ ಸಮುದಾಯದ ದಶಕಗಳ ಶ್ರಮದ ಫಲವಾಗಿದೆ. ನಂತರದಲ್ಲಿ 1969 ರಲ್ಲಿ ಇಸ್ರೋ ರಚನೆಯಾಯಿತು. ಚಂದ್ರಯಾನ 3 ನಿಜವಾಗಿಯೂ ನಂಬಲಾಗದ ಸಾಧನೆ. ಇಸ್ರೋದಲ್ಲಿನ ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.