ನಾಡಿನ ಬಹುದೊಡ್ಡ ಸಾಹಿತಿಗಳು, ಚಿಂತಕರು, ಕವಿಗಳು, ನಾಟಕಕಾರರು, ಬರಹಗಾರರ ಹೆಸರುಗಳು ಅಕಾಡೆಮಿ ಪ್ರಾಧಿಕಾರಗಳ ನೇಮಕಕ್ಕೆ ಬಂದಾಗ ”ಅವರು ಭಾಜಪ ವಿರೋಧಿಸಿಲ್ಲ, ಕಾಂಗ್ರೆಸ್ ಪರ ಮಾತನಾಡಿಲ್ಲ. ಹಾಗಾಗಿ ಅವರನ್ನು ಪರಿಗಣಿಸುವುದು ಬೇಡ” ಎಂದು ಖುದ್ದು ಸಾಹಿತಿ ಚಿಂತಕರ ಗುಂಪೇ ಕಾಂಗ್ರೆಸ್ ಪ್ರಭುತ್ವಕ್ಕೆ ಹೇಳಿದೆ.
I am not a political man and I have no political convictions. I am an individual and a believer in liberty. That is all the politics I have. On the other hand I am not a super-patriot. Super-patriotism leads to Hitlerism – and we’ve had our lesson there. I don’t want to create a revolution – I just want to create a few more films.
ಇದು ಚಾರ್ಲಿ ಚಾಪ್ಲಿನ್ ಅವರಿಗಿದ್ದ ಕ್ಲಾರಿಟಿ.
ಕನ್ನಡ ದೇಶದ ಯಾವ ಸಾಹಿತಿ, ಕಲಾವಿದರು, ಚಿಂತಕರು ಎಮರ್ಜೆನ್ಸಿ ಮತ್ತು 80-90 ರ ದಶಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ತರಲು ಹಾಡು, ಕಾವ್ಯ, ಆಟಗಳನ್ನು ಕಟ್ಟಿ ಬೀದಿ ಬೀದಿಗಳಲ್ಲಿ ಕುಣಿದರೋ ಅವರಿಗೆ ಕಳೆದ ಹತ್ತು ವರ್ಷಗಳಿಂದೀಚೆಗೆ ಕಾಂಗ್ರೆಸ್ ಪಕ್ಷವೇ ಸರಿ ಎನಿಸತೊಡಗಿತು. ಇದಕ್ಕೆ ಕಾರಣ ಕಾಂಗ್ರೆಸ್ ಮತ್ತು ಭಾಜಪ ನಡುವೆ ಕಂಪ್ಯಾರಿಜ಼ನ್. ಕಾಂಗ್ರೆಸ್ ಎಮರ್ಜೆನ್ಸಿ ಘೋಷಿಸಿತ್ತು, ಆದರೆ ಕಳೆದ ಹತ್ತು ವರ್ಷಗಳ ಭಾಜಪ ಆಡಳಿತದಲ್ಲಿ ಅಘೋಷಿತ ಎಮರ್ಜೆನ್ಸಿ ಇತ್ತು. ಈ ಕಾರಣಕ್ಕೆ ಭಾಜಪಗಿಂತ ಕಾಂಗ್ರೆಸ್ ಮೇಲು ಎಂಬ ತೀರ್ಮಾನಕ್ಕೆ ನಮ್ಮ ಸಾಹಿತಿ ಕಲಾವಿದರು ಬಂದರು.
ಇವರ ಈ ನಡೆಯಲ್ಲಿ ಅರ್ಥಮಾಡಿಕೊಳ್ಳಬೇಕಿರುವುದಿಷ್ಟೇ, ಇವರಾರಿಗೂ ಸ್ವಂತವಾಗಿ ಒಂದು ಚಳವಳಿ, ಆಂದೋಲನ ರೂಪಿಸಿ ಪರ್ಯಾಯ ರಾಜಕಾರಣ ಮಾಡುವ ಶಕ್ತಿ ಇಲ್ಲ, ಬದಲಿಗೆ ಇರುವ ಮೂರು ಪಕ್ಷಗಳಲ್ಲಿ ಆಶ್ರಯ ಕಂಡುಕೊಳ್ಳಲು ಹವಣಿಸುವ ಇವರೆಲ್ಲರೂ ಅವಕಾಶವಾದಿಗಳು ಎಂಬುದು ಯಾರಿಗಾದರೂ ಅರ್ಥವಾಗುತ್ತದೆ.
ಹೌದು. ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾದ ಅನಿವಾರ್ಯವಿತ್ತು. ಅದಕ್ಕಾಗಿ ಸಾಹಿತಿ ಚಿಂತಕರು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಹೋಗಬೇಕಿರಲಿಲ್ಲ. ಒಂದು ವೇಳೆ ಹೋಗಿದ್ದೂ ಸರಿ ಎನ್ನಿ, ಹೋದರೂ ಕಾಂಗ್ರೆಸ್‌ನವರ ಬಾಲಂಗೋಚಿಗಳಾಗಬೇಕಿಲ್ಲ.
ಬಹಳ ಕಾಲದಿಂದ ನನಗೊಂದು ಪ್ರಶ್ನೆ ಉಳಿದೇ ಬಿಟ್ಟಿದೆ. ಇವರೆಲ್ಲಾ ಲಂಕೇಶ್, ಎಂಡಿಎನ್, ತೇಜಸ್ವಿ ಕುರಿತು ಅಪಾರ ಅಭಿಮಾನದ ಮಾತುಗಳನ್ನಾಡುತ್ತಾರೆ. ಆದರೆ ಇವರಾರೂ ಈ ಮೂವರು ರಾಜಕೀಯ ಪಕ್ಷಗಳಿಂದ ಉಳಿಸಿಕೊಂಡಿದ್ದ ಅಂತರವನ್ನು ಆದರ್ಶವಾಗಿ ತೆಗೆದುಕೊಳ್ಳಲೇ ಇಲ್ಲ. ಉಳಿಸಿಕೊಳ್ಳುವ ಮಾತಿರಲಿ, ಪಕ್ಷದ ಕಾರ್ಯಕರ್ತರಿಗಿಂತ ಹೆಚ್ಚಿನದಾಗಿ ಜಿಂದಾಬಾದ್ ಕಮಿಟಿ ಸದಸ್ಯರಂತೆ ವರ್ತಿಸಿದ ಪ್ರಸಂಗಗಳೆಷ್ಟೋ! ಅದೆಲ್ಲದರ ಪರಿಣಾಮವೇ ಮೊನ್ನೆ ಸಾಂಸ್ಕೃತಿಕ ಅಕಾಡೆಮಿ ಪ್ರಾಧಿಕಾರಗಳ ನೇಮಕಾತಿಗೆ ನಿಗದಿ ಮಾಡಿಕೊಂಡ ಮಾನದಂಡ- ಭಾಜಪ ವಿರೋಧಿಸಿದವರು ಮತ್ತು ಕಾಂಗ್ರೆಸ್ ಪಕ್ಷ ಬೆಂಬಲಿಸಿದ ಸಾಹಿತಿ ಕಲಾವಿದರಿಗೆ ಸ್ಥಾನ ಮಾನ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?
ಈ ನಾಡಿನ ಬಹುದೊಡ್ಡ ಸಾಹಿತಿಗಳು, ಚಿಂತಕರು, ಕವಿಗಳು, ನಾಟಕಕಾರರು, ಬರಹಗಾರರ ಹೆಸರುಗಳು ಅಕಾಡೆಮಿ ಪ್ರಾಧಿಕಾರಗಳ ನೇಮಕಕ್ಕೆ ಬಂದಾಗ ”ಅವರು ಭಾಜಪ ವಿರೋಧಿಸಿಲ್ಲ, ಕಾಂಗ್ರೆಸ್ ಪರ ಮಾತನಾಡಿಲ್ಲ. ಹಾಗಾಗಿ ಅವರನ್ನು ಪರಿಗಣಿಸುವುದು ಬೇಡ” ಎಂದು ಖುದ್ದು ಸಾಹಿತಿ ಚಿಂತಕರ ಗುಂಪೇ ಕಾಂಗ್ರೆಸ್ ಪ್ರಭುತ್ವಕ್ಕೆ ಹೇಳಿದೆ.
ಅಷ್ಟರಮಟ್ಟಿಗೆ ಇವರು ಕಾಂಗ್ರೆಸ್ ಪಕ್ಷದ ಬಾಲಂಗೋಚಿಗಳಾದರು. ಮುಂದುವರೆದು ಅದೇ ಮಾನದಂಡ ಫಿಕ್ಸ್ ಮಾಡಿಕೊಂಡು ನೇಮಕ ಮಾಡಿಯೂ ಆಯಿತು. ಅಂದ ಮೇಲೆ ಈಗ ನೇಮಕವಾಗಿರುವವರು ಕಾಂಗ್ರೆಸ್ ಬೆಂಬಲಕ್ಕಿದ್ದ ಮತ್ತು ಬೆಂಬಲಕ್ಕಿರುವ ಸಾಹಿತಿ ಕಲಾವಿದರು ಎಂದು ತಾವೇ ಒಪ್ಪಿ ಬರೆದು ಕೊಟ್ಟ ಅಗ್ರಿಮೆಂಟ್‌ನಂತಾಯಿತು.
ಅಂದ ಮೇಲೆ ಈ ಅವಧಿಯಲ್ಲಿ ಎಲ್ಲಾ ಅಕಾಡೆಮಿ ಪ್ರಾಧಿಕಾರಕ್ಕೆ ನೇಮಕಗೊಂಡವರು ಡಿ.ಕೆ. ಶಿವಕುಮಾರ್ ಅವರು ಹೇಳಿದಂತೆ ರಾಜಕಾರಣಿಗಳೇ ಅಥವಾ ಕಾಂಗ್ರೆಸ್ ಕಾರ್ಯಕರ್ತರೇ ಎಂಬುದನ್ನು ಒಪ್ಪಿಕೊಳ್ಳದೆ ಬೇರೆ ವಿಧಿ ಇಲ್ಲ. ಒಪ್ಪಿಕೊಳ್ಳಲು ಇಷ್ಟವಿಲ್ಲದವರು ಡಿಕೆ ಹೇಳಿದಂತೆ ”ಮುಂದೆ ಪೆನ್ನು ಪೇಪರ್ರು ಇಂಕು ಇಟ್ಟುಕೊಳ್ಳಲಿ…” ನೋಡೋಣ.

ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ