“ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ಸಾಕಷ್ಟು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸುಮಾರು 5- 6 ಕ್ಷೇತ್ರಗಳಲ್ಲಿ ನಮಗೂ ಮತ್ತು ದಳಕ್ಕೂ ನೇರಾನೇರ ಸ್ಪರ್ಧೆ ಇತ್ತು. ಆದರೆ ಈಗ ದಳ ಎಲ್ಲಿದೆ? ಎರಡೂ ಪಕ್ಷಗಳ ನಾಯಕರುಗಳು ನಮ್ಮ ವಿರುದ್ಧ ಹೋರಾಟ ಮಾಡಿದವರು. ಅವರೂ ಸಹ ಮುಂದಿನ ರಾಜಕೀಯ ಭವಿಷ್ಯವನ್ನು ನೋಡುತ್ತಾರಲ್ಲವೇ?” ಎಂದು ಕೇಳಿದರು.
“ದೇವೆಗೌಡರು ಮತ್ತು ಕುಮಾರಸ್ವಾಮಿ ಅವರ ಕುಟುಂಬವೇ ಬಿಜೆಪಿ ಸೇರುತ್ತಿದೆ. ಹೀಗಾದರೆ ನಮ್ಮ ಗತಿ ಏನು ಎಂದು ದಳದ ಕಾರ್ಯಕರ್ತರು ನಮ್ಮ ಪಕ್ಷದ ನಾಯಕರ ಸಂಪರ್ಕ ಮಾಡುತ್ತಿದ್ದಾರೆ. ನಾನು ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಾಯಕ. ನಮ್ಮ ಚುನಾವಣಾ ಅಭ್ಯರ್ಥಿಯ ಘೋಷಣೆಯೂ ಆಗಿದೆ. ನಾವು ಸಹ ತಯಾರಿ ಮಾಡಿಕೊಳ್ಳಬೇಕಲ್ಲವೇ? ಮುಂದೇನು ಮಾಡುವುದು ನಾವು ಸಹ ಚರ್ಚೆ ಮಾಡುತ್ತಿದ್ದೇವೆ” ಎಂದು ವ್ಯಂಗ್ಯವಾಡಿದರು.
ಡಿ.ಕೆ.ಸುರೇಶ್ ಅವರಿಗೆ ನಾವು ತಕ್ಕಪಾಠ ಕಲಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ “ಮೊದಲು ಅವರ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಲಿ. ದಳ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಮೊದಲು ಹೇಳಲಿ. ಆನಂತರ ಪ್ರಬಲ ಅಭ್ಯರ್ಥಿ ಬಗ್ಗೆ ಮಾತನಾಡಲಿ” ಎಂದರು.
ಇದನ್ನು ಓದಿದ್ದೀರಾ? ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ: ತನಿಖೆ ಸಿಐಡಿಗೆ ವರ್ಗಾವಣೆ
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಎಂದು ಕೇಳಿದಾಗ, “ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ” ಎಂದು ತಿಳಿಸಿದರು.
