ಲೋಕಸಭೆಯ ಭದ್ರತಾ ಲೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಲೋಕಸಭೆಯ ಒಳಗೆ ಪ್ರವೇಶಿಸಲು ಪಾಸ್ ನೀಡಿದ್ದ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ಯರು ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು, ದೇಶದ ಸಂಸತ್ ಭವನದ ಒಳಗಡೆ ದೇಶದ ಆಂತರಿಕ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸಂಸತ್ ಭವನ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟಿರುವ ಬಿಜೆಪಿಯ ಮೈಸೂರು ಸಂಸದ ಪ್ರತಾಪ್ ಸಿಂಹನನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಘೋಷಣೆ ಕೂಗಿ, ಆಗ್ರಹಿಸಿದರು.
ಲೋಕಸಭೆಯ ಭದ್ರತಾ ಲೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಲೋಕಸಭೆಯ ಒಳಗೆ ಪ್ರವೇಶಿಸಲು ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು @INCKarnataka ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿ ಇರುವ ಕಾಂಗ್ರೆಸ್ ಭವನದಲ್ಲಿ ಪ್ರತಿಭಟಿಸಿದರು. pic.twitter.com/17C02noYG1
— eedina.com (@eedinanews) December 14, 2023
“ಕೇವಲ ಪ್ರಚಾರದಲ್ಲಿ ಮುಳುಗಿರುವ ಕೇಂದ್ರ ಸರ್ಕಾರ, ದೇಶದ ಶಕ್ತಿ ಕೇಂದ್ರ ಹಾಗೂ ಸಂಸತ್ ಭವನಕ್ಕೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಇದರ ನೈತಿಕ ಹೊಣೆಯನ್ನು ದೇಶದ ಪ್ರಧಾನಿ ಹಾಗೂ ಗೃಹ ಸಚಿವರು ಹೊರಬೇಕು. ನೂತನ ಸಂಸತ್ ಭವನದಲ್ಲಿ ಸದನ ನಡೆಯುವ ವೇಳೆಯಲ್ಲಿ ದುರುಳರು ಆಗಮಿಸಿರುವುದು ಅತ್ಯಂತ ದುರದೃಷ್ಟಕರ ಹಾಗೂ ಆತಂಕಕಾರಿ ಬೆಳವಣಿಗೆ. ಈ ಘಟನೆಗೆ ಯಾರು ಹೊಣೆಗಾರರು ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು” ಎಂದು ಒತ್ತಾಯಿಸಿದರು.
“ದೇಶದ ಆಂತರಿಕ ಭಯೋತ್ಪಾದಕರು ಇಂತಹ ಹೇಯಕೃತ್ಯ ಮಾಡಿರುವುದು ದೇಶವೇ ತಲೆತಗ್ಗಿಸುವಂತಾಗಿದೆ. ದೇಶದ ನಕಲಿ ಭಕ್ತರೇ ಹಾಗೂ ಅಂಧ ಭಕ್ತರು ಈಗ ಉತ್ತರಿಸಬೇಕು. ದೇಶದ ಅಭದ್ರತೆಗೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರವೇ ಕಾರಣ ಎಂಬುದನ್ನು ಬಿಜೆಪಿ ಮುಖಂಡರು ಒಪ್ಪಿಕೊಳ್ಳಬೇಕು. ಸಂಸತ್ ದಾಳಿಗೆ ಕಾರಣವಾಗಿರುವ ಹಾಗೂ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹನನ್ನು ಕೂಡಲೇ ಬಂಧಿಸಬೇಕು. ಹೆಚ್ಚಿನ ತನಿಖೆ ಮೂಲಕ ಸತ್ಯಾಂಶ ಬಹಿರಂಗಪಡಿಸಬೇಕು” ಎಂದು ಲೋಕಸಭೆಯ ಅಧ್ಯಕ್ಷ ಓಂಪ್ರಕಾಶ್ ಬಿರ್ಲಾರವರನ್ನು ಆಗ್ರಹಿಸಿದರು.
VIDEO | Congress workers stage a protest in Bengaluru over yesterday’s Lok Sabha security breach incident. pic.twitter.com/fXaG4I4UnF
— Press Trust of India (@PTI_News) December 14, 2023
ಪಾಸ್ ನೀಡಿರುವ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸಿ, ಕೂಡಲೇ ಅನರ್ಹಗೊಳಿಸಬೇಕೆಂದು ಆಗ್ರಹಿಸಿ, ರಾಜಭವನ ಚಲೋ ಮೆರವಣಿಗೆ ನಡೆಸಲು ಹೊರಟರು. ಈ ವೇಳೆಯಲ್ಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಹಿಡಿದು, ಬಂಧಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹುಚ್ಚಪ್ಪ, ಜಿಲ್ಲಾಧ್ಯಕ್ಷರಾದ ಓ.ಮಂಜುನಾಥ್, ಕೆ.ವಿ.ಗೌತಮ್, ಜಿ. ಕೃಷ್ಣಪ್ಪ ಹಾಗೂ ಪಕ್ಷದ ಮುಖಂಡರುಗಳಾದ ಜಿ.ಜನಾರ್ದನ್, ಸುಧಾಕರ್, ಪರಿಸರ ರಾಮಕೃಷ್ಣ, ಪ್ರ ಕಾಶ್, ಹೇಮರಾಜ್, ರಘು, ಉಮೇಶ್, ಪುಟ್ಟರಾಜು, ಚಂದ್ರಶೇಖರ, ದರ್ಶನ್, ಆನಂದ್, ಚೇತನ್, ಓಬಳೇಶ್, ಚಿನ್ನಿ ಪ್ರಕಾಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.