- ಸರ್ವೇ, ಖಾತೆ-ಪಹಣಿ ಮಾಡಿಸಿಕೊಡಿ ಅಂತ ಜನರು ನನ್ನ ಬಳಿ ಬರಬೇಕೇನ್ರಿ?: ಸಿಎಂ ಖಡಕ್ ಪ್ರಶ್ನೆ
- ‘ಇಂದು 3500 ಸಾವಿರ ಅರ್ಜಿಗಳು ನನ್ನ ಬಳಿಗೆ ಬಂದಿದೆ’ ಎಂದ ಸಿದ್ದರಾಮಯ್ಯ
“ಜನತಾ ಸ್ಪಂದನ ಕಾರ್ಯಕ್ರಮ ನಡೆಸಿಯೂ ಕೂಡ ಅಧಿಕಾರಿಗಳು ಜನರ ಮನವಿಗೆ ಸ್ಪಂದಿಸದೇ ಹೋದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ “ಕೃಷ್ಣಾ”ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿನ ಜನತಾಸ್ಪಂದನದಲ್ಲಿ 3500 ಸಾವಿರ ಅರ್ಜಿಗಳು ನನ್ನ ಬಳಿಗೆ ಬಂದಿದೆ. ವಿಶೇಷವಾಗಿ ಅಂಗವಿಕಲರು ಉದ್ಯೋಗ ಕೊಡಿಸಿ, ತ್ರಿಚಕ್ರ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಾರೆ. 4000 ತ್ರಿಚಕ್ರ ವಾಹನ ಒದಗಿಸಲಾಗಿದೆ. ಇಂದು ಬಂದ ಅರ್ಜಿಗಳಲ್ಲಿ ಬಹುತೇಕವಾಗಿ ಕಂದಾಯ, ಪೊಲೀಸ್ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುವಿಟಿ ಇತ್ಯರ್ಥ, ವಸತಿ ಕೊಡಿ, ಉದ್ಯೋಗ ಕೊಡಿಸಿ ಎಂಬ ಮನವಿಗಳು ಬಂದಿವೆ. ಸಣ್ಣಸಣ್ಣ ಕೆಲಸಗಳಿಗೂ ಜನರು ಸಿಎಂ ಕಚೇರಿಗೆ ಬರುವಂತಾಗಿದೆ. ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸುವುದು ಕೂಡ ಭ್ರಷ್ಟಾಚಾರವಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ @siddaramaiah ಅವರು ಇಂದು ಬೆಳಿಗ್ಗೆಯಿಂದ ನಡೆದ ಜನತಾ ದರ್ಶನದಲ್ಲಿ ಪಾಲ್ಗೊಂಡು, ಜನರ ಅಹವಾಲುಗಳನ್ನು ಆಲಿಸಿ, ಮಾತನಾಡಿದರು.
ಇಂದು ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು.
ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ, ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ… pic.twitter.com/VUJ5utYqCy— CM of Karnataka (@CMofKarnataka) November 27, 2023
ಸರ್ವೇ ಮಾಡಿಸಿಕೊಡಿ, ಪೋಡಿ ಮಾಡಿ, ಖಾತೆ ಮಾಡಿ, ಪಹಣಿ ಮಾಡಿಕೊಡಲಿಕ್ಕೆ ಜನರು ನನ್ನ ಬಳಿ ಬರಬೇಕಾ? ಇದನ್ನೆಲ್ಲ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಮಟ್ಟದಲ್ಲಿಅದನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಜಿಲ್ಲಾ ಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಕೂಡದು. ಬಂದರೆ ನಿಮ್ಮ ಇಲಾಖೆಗಳ ವೈಫಲ್ಯ. ಇದನ್ನು ಸಹಿಸುವುದಿಲ್ಲ ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಖಡಕ್ ಎಚ್ಚರಿಕೆ ನೀಡಿದರು.
“ಜನ ದುಡ್ಡು ಖರ್ಚು ಮಾಡಿಕೊಂಡು ಬೆಂಗಳೂರಿನವರೆಗೂ ಬಂದರೆ ನಿಮ್ಮ ವೈಫಲ್ಯ ಎಂದರ್ಥ. ಅರ್ಜಿಗಳ ವಿಳಂಬ ಭ್ರಷ್ಟಾಚಾರದ ಮತ್ತೊಂದು ರೂಪ. ಇವತ್ತು ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ. ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಇದನ್ನು ಸಹಿಸಲ್ಲ” ಎಂದು ಮುಖ್ಯಮಂತ್ರಿ ತಿಳಿಸಿದರು.
“ಜನತಾ ಸ್ಪಂದನದಿಂದ ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗುವುದಿಲ್ಲ. ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಅರ್ಜಿಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತವೆ” ಎಂದು ತಿಳಿಸಿದರು.
“ಜನರು ಬೆಂಗಳೂರಿಗೆ ನನ್ನ ಬಳಿ ಅರ್ಜಿ ಹಿಡಿದು ಬರುವುದನ್ನು ತಪ್ಪಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್ ಠಾಣೆ, ಹಾಸ್ಟೆಲುಗಳು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆ ಬಗೆಹರಿಸಬೇಕು” ಎಂದು ಸಿಎಂ ತಿಳಿಸಿದರು.
“ವಿಳಂಬ ನೀತಿಯು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕೂಡಲೇ ಜನರಿಗೆ ಸ್ಪಂದಿಸಲು ಸೂಚಿಸಿದರು. ಕಾನೂನು ರೀತ್ಯ ಮಾಡಲು ಸಾಧ್ಯವಾಗದಿದ್ದರೆ, ಹಿಂಬರಹ ನೀಡಬೇಕು. ಇಂದು ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಹದಿನೈದು ದಿನದೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕು. ನಿಯಮಾವಳಿಗಳಡಿ ಅವಕಾಶವಿಲ್ಲದೆ ಇದ್ದರೆ, ಹಿಂಬರಹ ನೀಡಬೇಕು” ಎಂದು ಸಿಎಂ ಸೂಚನೆ ನೀಡಿದರು.
ಮೂರು ತಿಂಗಳಿಗೊಮ್ಮೆ ಜನತಾಸ್ಪಂದನ
ಕೆಳಹಂತದ ಅಧಿಕಾರಿಗಳಿಗೆ ನೀವು ಕೂಡಲೇ ಸ್ಪಂದಿಸಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ಜನತಾಸ್ಪಂದನ ಕಾರ್ಯಕ್ರಮ ಮಾಡುತ್ತೇನೆ. ಮುಂದಿನ ಬಾರಿ ಹೆಚ್ಚು ಜನ ಬಂದರೆ, ತಳಹಂತದ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಪರಿಗಣಿಸಲಾಗುವುದು ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಂದು ಮೂರೂವರೆ ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿ, ಕಾನೂನು ರೀತಿಯ ಪರಿಹಾರ ನೀಡಬೇಕು. ಸಾಧ್ಯವಾಗದಿದ್ದರೆ ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.