ಜವಹರಲಾಲ್ ನೆಹರೂ ಕಾಂಗ್ರೆಸ್ ಪಕ್ಷಕ್ಕೆ ಬೇಡವಾದರೇ?

Date:

Advertisements
ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ದೇಶಾವರಿ ನಾಲ್ಕು ಮಾತನಾಡುವುದನ್ನು ಬಿಟ್ಟು ನೆಹರೂ ಅವರನ್ನು ಇಂದಿನ ಯುವಕ-ಯುವತಿಯರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪರಿಚಯ ಮಾಡಿಕೊಡಬೇಕು. ಅದು ಸೈದ್ಧಾಂತಿಕ ಮತ್ತು ವೈಚಾರಿಕ ಸ್ಪಷ್ಟತೆ ಇರುವ ರಾಹುಲ್ ಗಾಂಧಿ-ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲಾದರೂ ಆಗಬೇಕು. ಅದಕ್ಕಾಗಿ ಕಾಂಗ್ರೆಸ್ ಬದಲಾಗಬೇಕು. ಮರುಹುಟ್ಟು ಪಡೆಯಬೇಕು.

ಕಳೆದ ವಾರ ಜವಹರಲಾಲ್ ನೆಹರೂ ಅವರ ಹುಟ್ಟುಹಬ್ಬ, ಅಂದರೆ ಮಕ್ಕಳ ದಿನಾಚರಣೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದೂ ಪಕ್ಷದ ಕಚೇರಿಯಲ್ಲಿ ಮಾಮೂಲಿ ಕಾರ್ಯಕ್ರಮಗಳು ಎನ್ನುವ ರೀತಿ ನೆಹರೂ ಜಯಂತಿಯನ್ನು ಆಚರಿಸಲಾಗಿದೆ. ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೇನೂ ಭಿನ್ನವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ-ಇಲ್ಲದಿದ್ದಾಗ ಭೇದಭಾವ ಮಾಡದೆ ಹೀಗೆ ನೀರಸವಾಗಿಯೇ ನೆಹರೂ ಅವರನ್ನು ಸ್ಮರಿಸುತ್ತಿದೆ.
ಕಾಂಗ್ರೆಸ್ ನೆಹರೂ ಅವರ ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತದೆ ಎನ್ನುವುದು ಆ ಪಕ್ಷ ಒಟ್ಟಾರೆ ಯಾವುದೇ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನೂ ಧ್ವನಿಸುತ್ತದೆ. ನೆಹರೂ ಅವರನ್ನು ಮಾತ್ರವಲ್ಲ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಯ್ ಪಟೇಲ್, ಜ್ಯೋತಿ ಬಾಫುಲೆ ಮತ್ತಿತರ ಮಹಾನ್ ನಾಯಕರ ವಿಷಯದಲ್ಲಿ ಇಂಥಹುದೇ ನಿರಾಸಕ್ತಿ ತೋರಿ ಬಹುದೊಡ್ಡ ಬೆಲೆ ತೆತ್ತಿದೆ.

ವ್ಯಕ್ತಿಗಳು ಮಾತ್ರವಲ್ಲ, ಸಂವಿಧಾನ, ಸಮಾಜ, ಸಿದ್ಧಾಂತ, ಸ್ವಾಯತ್ತ ಸಂಸ್ಥೆಗಳ ವಿಷಯದಲ್ಲೂ ನಿರ್ದಿಷ್ಟವಾದ ದಾರಿ-ಗುರಿಗಳಿಲ್ಲದೆ ಮುಂದೆ ಸಾಗುತ್ತಿದೆ. ವೈಚಾರಿಕ ನಡತೆ ಮತ್ತು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಅಧಿಕಾರ ಹಿಡಿಯುವ ಮತ್ತು ಸಿಕ್ಕ ಅಧಿಕಾರವನ್ನು ನಡೆಸುವ ಎರಡರ ಅರಿವೂ ಇಲ್ಲದೆ ಪರಿತಪಿಸುತ್ತಿದೆ.

ನೆಹರೂ ವಿಚಾರಕ್ಕೆ ಮರಳುವುದಾದರೆ ಅವರನ್ನು ಖಳನಾಯಕನಂತೆ ಬಿಂಬಿಸುವ ಕುಕೃತ್ಯ ಹಿಂದಿನಿಂದಲೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಇತ್ತೀಚಿಗೆ ಅದು ಇನ್ನಷ್ಟು ತೀವ್ರವಾಗಿದೆ. ‘ಭಾರತ ಎದುರಿಸುತ್ತಿರುವ ಇಂದಿನ ಎಲ್ಲಾ ಸಮಸ್ಯೆಗಳಿಗೂ ನೆಹರೂ ಅವರೇ ಕಾರಣ’ ಎನ್ನುವ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ. ಚೊಚ್ಚಲ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮುತ್ಸದ್ಧಿ ನೆಹರೂ ಅವರನ್ನು ಸ್ತ್ರೀ ಲೋಲುಪ ಎನ್ನುವ ರೀತಿಯಲ್ಲಿ; ಅಸಮಾನ್ಯ ವೈಜ್ಞಾನಿಕ ಮನೋಭಾವದ ನೆಹರೂ ಅವರನ್ನು ವೈಯಕ್ತಿಕ ಹಿತಾಸಕ್ತಿಗಳ ನಾಯಕನೆಂದೂ; ಶುದ್ಧ ಪ್ರಜಾಪ್ರಭುತ್ವವಾದಿಯಾಗಿದ್ದ ನೆಹರೂ ಅವರಿಂದ ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತಿತರರಿಗೆ ಘನಘೋರ ಅನ್ಯಾಯವಾಯಿತೆಂದು ಚರಿತ್ರೆಯನ್ನು ತಿರುಚಲಾಗುತ್ತಿದೆ. ನೆಹರೂ ಅವರ ಮೇಲೆ ಇಷ್ಟೆಲ್ಲಾ ಅಕ್ರಮಣವಾಗುತ್ತಿದ್ದರೂ ಕಾಂಗ್ರೆಸ್ ಮಾತ್ರ ಮೈಮರೆತು ಕೂತಿದೆ.

Advertisements

ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕರೇ ಇತಿಹಾಸಕ್ಕೆ ಅಪಚಾರ ಎಸಗಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದಾರೆ. ಕೆಲವರು ಅರಿವಿಲ್ಲದೆ ಈ ಅಪರಾಧದ ಕೃತ್ಯದಲ್ಲಿ ತೊಡಗಿದ್ದರೆ, ಕೆಲವರು ಇತಿಹಾಸ ಗೊತ್ತಿದ್ದೂ ಪ್ರಜ್ಞಾಪೂರ್ವಕವಾಗಿ ಪಾಪಕೃತ್ಯ ಎಸಗುತ್ತಿದ್ದಾರೆ. ಕೆಲವರ ಜ್ಞಾನಕ್ಕೆ ವಾಟ್ಸಾಪ್ ಯುನಿವರ್ಸಿಟಿಯೇ ಮೂಲಾಧಾರವಾಗಿದೆ. ಒಟ್ಟಿನಲ್ಲಿ ತಲೆಮಾರುಗಳನ್ನು ಸರಿದಾರಿಯಲ್ಲಿ ನಡೆಯುವಂತೆ ರೂಪಿಸಬೇಕಾದವರೇ ಕುರೂಪಗೊಳಿಸುತ್ತಿದ್ದಾರೆ. ಅಧ್ಯಾಪಕರ ವಿಚಾರದಲ್ಲಿ ಇದಕ್ಕೆ ಅಪವಾದ ಎನ್ನುವವರು ಅಪರೂಪ ಎನ್ನುವಂತಾಗಿದೆ.

ಇದನ್ನು ಓದಿದ್ದೀರಾ?: ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್‌ ಸಿಟ್ಟು!

ಸಮಾಜ ನಿರ್ಮಾಣದಲ್ಲಿ ಅಧ್ಯಾಪಕರ ಪಾತ್ರ ಪ್ರಮುಖವಾದುದು ಎನ್ನುವ ಕಾರಣಕ್ಕೆ ಇದನ್ನು ಹೇಳಲಾಯಿತು. ಇದಲ್ಲದೆ ಹೊಟ್ಟೆ ತುಂಬಿರುವವರು, ವಾಟ್ಸಾಪ್ ಅಂಕಲ್-ಆಂಟಿಯರು, ಸೋಕಾಲ್ಡ್ ವಿದ್ಯಾವಂತರು, ಸೋಕಾಲ್ಡ್ ನಾಗರಿಕರು ಎಂಬ ‘ವಿಶಿಷ್ಟ ವರ್ಗ’ ಕೂಡ ಯಾರೋ ಕಟ್ಟಿದ ಹುಸಿಕಥನಗಳನ್ನು ಅಗ್ರ ಚಿಂತನೆಗಳೆನ್ನುವಂತೆ ಪ್ರತಿಪಾದಿಸತೊಡಗಿದೆ. ಇವು ನೆಹರೂ ಅವರ ವಿಷಯಕ್ಕೆ ಮಾತ್ರ ಅನ್ವಯ ಆಗುವಂಥವಲ್ಲ. ಮೇಲೆ ಸ್ಮರಿಸಿಕೊಂಡಿರುವ ಎಲ್ಲಾ ಮಹನೀಯರ ವಿಷಯದಲ್ಲೂ ನಡೆಯುತ್ತಿರುವ ದಿಕ್ಕುತಪ್ಪಿಸುವ ದುಸ್ಸಾಹಸ. ಕಾಂಗ್ರೆಸ್ ನೆಹರೂ ಅವರನ್ನು ಮಾತ್ರವಲ್ಲದೆ ತನ್ನ ಇತರೆ ಐಕಾನ್‌ಗಳ ವಿಷಯದಲ್ಲೂ ಅಕ್ಷಮ್ಯ ನಿರ್ಲ್ಯಕ್ಷ ತೋರುತ್ತಾ ಬಂದಿದೆ.

ಈಗಾಗಲೇ ತಡವಾಗಿದೆ. ಕಾಂಗ್ರೆಸ್ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ತನ್ನ ಸಿದ್ಧಾಂತವನ್ನು ಉಳಿಸಿಕೊಳ್ಳದಿದ್ದರೆ, ‘ಸಂವಿಧಾನವೇ ತನ್ನ ಸಿದ್ಧಾಂತ’ ಎಂದು ಹೇಳದಿದ್ದರೆ, ಸಂವಿಧಾನದಲ್ಲಿ ಅಡಗಿರುವ ಈ ದೇಶದ ಬಹುತ್ವ, ಸಮಾನತೆ, ಸಮಗ್ರತೆ, ಜಾತ್ಯತೀತೆಗಳೇ ತನ್ನ ಸಿದ್ದಾಂತ ಎಂದು ಬಿಡಿಬಿಡಿಸಿ ಹೇಳದಿದ್ದರೆ, ಪದೇ ಪದೇ ಗಟ್ಟಿ ದನಿಯಲ್ಲಿ ಪ್ರತಿಪಾದಿಸದಿದ್ದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಗಿ ಬಂದ ಹಾದಿಯ ಹೆಜ್ಜೆಗುರುತುಗಳು ಅಳಿಸಿ ಹೋಗದಂತೆ ನೋಡಿಕೊಳ್ಳದಿದ್ದರೆ, ಸ್ವಾತಂತ್ರೋತ್ತರದಲ್ಲಿ ಆಧುನಿಕ ಭಾರತಕ್ಕೆ ತಾನು ಬರೆದ ಮುನ್ನುಡಿ ಮರೆಯಾಗದಂತೆ ಜಾಗೃತಗೊಳ್ಳದಿದ್ದರೆ, ‘ನಾಯಕತ್ವ’ ಬೇಡುವ ಈ ದೇಶದಲ್ಲಿ ತನ್ನ ಮಹಾನ್ ನಾಯಕರನ್ನು ಹೊಸ ತಲೆಮಾರಿಗೆ ಪರಿಚಯಿಸದಿದ್ದರೆ ಇನ್ನೂ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದೆ ‘ಸಾಯುವುದೇ ಸೂಕ್ತ’ ಎನ್ನುವ ಹಂತ ತಲುಪಬಹುದು ಎಂಬುದರಲ್ಲಿ ಈಗ ಯಾವ ಅನುಮಾನಗಳು ಉಳಿದಿಲ್ಲ.

ಕಾಂಗ್ರೆಸ್ ಸಾಯಬೇಕು, ಹೊಸದು ಹುಟ್ಟಬೇಕು ಎನ್ನುವ ಭಾವನೆ ದೇಶವಾಸಿಗಳಲ್ಲಿ ಒಳಗೊಳಗೆ ಬೆಳೆಯುತ್ತಿದೆ ಎಂಬ ಸುಳಿವು ಹಿಂದೆಯೇ ಸಿಕ್ಕಿತ್ತು. 2014ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕವೂ ಪಕ್ಷದ ಸುಧಾರಣೆಗೆ, ಸಂಘಟನೆಗೆ ಏನೊಂದು ಕ್ರಮಗಳನ್ನು ಕೈಗೊಳ್ಳದೆ, ಪಟ್ಟಭದ್ರ ಹಿತಾಸಕ್ತಿಗಳು ಸೈದ್ಧಾಂತಿಕವಾಗಿ ದೇಶದ ನಾಗರಿಕ ಜೀವಾಳಕ್ಕೆ ಕೊಳ್ಳಿ ಇಡುತ್ತಿದ್ದರೂ ನಿಷ್ಕ್ರಿಯವಾಗಿದ್ದುಕೊಂಡು 2019ರ ಚುನಾವಣೆಯನ್ನೂ ಹೀನಾಯವಾಗಿ ಸೋತಾಗಲೇ ದೇಶದ ಪ್ರಮುಖ ರಾಜಕೀಯ ವಿಶ್ಲೇಷಕ (ಈಗ ಅವರು ಕಾಂಗ್ರೆಸ್ ಸಿಂಪಥೈಸರ್ ಕೂಡ) ಯೋಗೇಂದ್ರ ಯಾದವ್ ‘ಕಾಂಗ್ರೆಸ್ ಸಾಯಬೇಕು'(Congress Must Die) ಎಂದು ಹೇಳಿದ್ದರು. ಅವರ ಹೇಳಿಕೆಗೆ ಅನೇಕರಿಂದ ಮೌನಸಮ್ಮತಿ ದೊರೆತಿತ್ತು ಎನ್ನುವುದನ್ನೂ ಕಾಂಗ್ರೆಸ್ ಮರೆಯಬಾರದು.

ನೆಹರೂ ಅವರ ವೈಚಾರಿಕತೆ, ಹೃದಯ ವೈಶಾಲ್ಯತೆ, ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯನ್ನು ಮರೆತದ್ದರಿಂದಲೇ ಇಂದಿರಾ ಗಾಂಧಿ ಅವನತಿಯಾಗಿದ್ದು. ಇಲ್ಲದಿದ್ದರೆ ಇಂದಿಗೂ ಅವರು ಅಟಲ್ ಬಿಹಾರಿ ವಾಜಪೇಯಿ ಬಣ್ಣಿಸಿದಂತೆ ‘ದುರ್ಗೆಯೇ’ ಆಗಿರುತ್ತಿದ್ದರು. ನಂತರ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳನ್ನು ಮುನ್ನಡೆಸಿದ ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಪಿವಿ ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಹಿನ್ನೆಲೆಗಳು ಬೇರೆ ರೀತಿಯಲ್ಲಿ ಇದ್ದ ಕಾರಣಕ್ಕೆ ಅವರಿಂದ ಏನನ್ನೂ ನಿರೀಕ್ಷೆ ಮಾಡುವಂತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಆಗ ಅಂಥ ದೈನೇಸಿ ಸ್ಥಿತಿ ಬಂದೊದಗಿರಲಿಲ್ಲ. ಆದರೀಗ ಕಾಂಗ್ರೆಸ್ ಮುನ್ನಡೆಸುತ್ತಿರುವ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ನಿರೀಕ್ಷೆ ಮಾಡಬಹುದು ಎನಿಸುತ್ತದೆ. ಇಬ್ಬರೂ ನಾಯಕರು ನಿರಂತರವಾಗಿ ಸಂವಿಧಾನವನ್ನು ಉಳಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರ ಮಾತುಗಳಲ್ಲೂ ಸೈದ್ಧಾಂತಿಕ ಸ್ಪಷ್ಟತೆ ಧ್ವನಿಸುತ್ತಿದೆ. ರಾಹುಲ್ ಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶ ಸುತ್ತುತ್ತಿದ್ದಾರೆ. ದೇಶ ಎಂದರೆ ಜನ, ದೇಶದ ಎಲ್ಲರೂ, ಎಲ್ಲದರಲ್ಲೂ ಒಳಗೊಳ್ಳುವಂತಹ ವ್ಯವಸ್ಥೆ ಜಾರಿಗೆ ಬರಬೇಕೆಂದು ಪ್ರತಿಪಾದಿಸುತ್ತಿದ್ದಾರೆ.

nehru

ಹೀಗೆ ಸೈದ್ಧಾಂತಿಕ ಮತ್ತು ವೈಚಾರಿಕ ಸ್ಪಷ್ಟತೆ ಇರುವ ರಾಹುಲ್ ಗಾಂಧಿ-ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲಾದರೂ ಕಾಂಗ್ರೆಸ್ ಬದಲಾಗಬೇಕು. ಮರುಹುಟ್ಟು ಪಡೆಯಬೇಕು. ಅದಕ್ಕಾಗಿ ಸ್ವಾತಂತ್ರೋತ್ತರದಲ್ಲಿ ಕಾಂಗ್ರೆಸ್ ಅನ್ನು ಉಳಿಸಿದ ಜವಹರಲಾಲ್ ನೆಹರೂ ಅವರನ್ನು ಈಗ ಆ ಪಕ್ಷ ಉಳಿಸಿಕೊಳ್ಳಬೇಕು. ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ದೇಶವಾರಿ ನಾಲ್ಕು ಮಾತನಾಡುವುದನ್ನು ಬಿಟ್ಟು ನೆಹರೂ ಅವರನ್ನು ಇಂದಿನ ಯುವಕ-ಯುವತಿಯರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪರಿಚಯ ಮಾಡಿಕೊಡಬೇಕು. ಬ್ರಿಟಿಷರು ಬಿಟ್ಟು ಹೋದಾಗ ದೇಶದ ಪರಿಸ್ಥಿತಿ ಹೇಗಿತ್ತು? ಈ ದೇಶ ತನ್ನ ಕಾಲಮೇಲೆ ತಾನು ನಿಂತುಕೊಳ್ಳುವಂತಾಗಲು ನೆಹರೂ ಏನೇನೆಲ್ಲಾ ಮಾಡಿದರು? ಈ ದೇಶದ ಹಸಿದ ಹೊಟ್ಟೆಗಳನ್ನು ತುಂಬಿಸಲು, ಉದ್ಯೋಗ ಸೃಷ್ಟಿಸಲು, ಬಡತನ ನಿರ್ಮೂಲನೆ ಮಾಡಲು ಏನೇನೆಲ್ಲಾ ಮಾಡಿದರು ಎನ್ನುವುದನ್ನು ಸ್ವಾತಂತ್ರ್ಯ ಸಂಗ್ರಾಮವನ್ನು ಕಂಡಿರದ, ದೇಶ ಜಾಗತೀಕರಣಕ್ಕೆ ಒಡ್ಡಿಕೊಂಡ ನಂತರ ಬಡತನವನ್ನು ಒಂದು ಮಟ್ಟಿಗಾದರೂ ಮೆಟ್ಟಿ ನಿಂತಿರುವ ಈಗಿನ ಜನಕ್ಕೆ ಅರ್ಥ ಮಾಡಿಸಬೇಕು. ನೆಹರೂ ಸೇರಿದಂತೆ ಈ ದೇಶ ಕಟ್ಟಲು ಶ್ರಮಿಸಿದ ಎಲ್ಲಾ ಮಹಾನ್ ನಾಯಕರ ಇತಿಹಾಸವನ್ನು ಸರಿಯಾಗಿ ತಿಳಿಸುವ ಕೆಲಸ ಮಾಡಬೇಕು. ಸಭೆ, ಸಂವಾದ, ವಿಚಾರ ಸಂಕಿರಣ, ತರಬೇತಿ ಶಿಬಿರ, ಕಮ್ಮಟ, ಮೇಳಗಳ ಹೆಸರಿನಲ್ಲಿ ಇವು ನಿತ್ಯ ನಡೆಯಬೇಕಾದ ಕೆಲಸಗಳು. ಕಡೆಯಪಕ್ಷ ನಾಯಕರ ಜಯಂತಿ-ಪುಣ್ಯತಿಥಿಗಳ ಸಂದರ್ಭದಲ್ಲಾದರೂ ಅವರನ್ನು ಹೊಸ ತಲೆಮಾರಿಗೆ ದಾಟಿಸದಿದ್ದರೆ ಹೇಗೆ? ಜವಹರಲಾಲ್ ನೆಹರೂ ಕಾಂಗ್ರೆಸ್ ಪಕ್ಷಕ್ಕೆ ಬೇಡವಾದರೇ?

ಕೃಪೆ: ವಾರ್ತಾಭಾರತಿ

ಧರಣೀಶ್ ಬೂಕನಕೆರೆ 1
ಧರಣೀಶ್ ಬೂಕನಕೆರೆ
+ posts

ಪತ್ರಕರ್ತ, ರಾಜಕೀಯ ವಿಶ್ಲೇಷಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
ಪತ್ರಕರ್ತ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X