“ವಿಜಯನಗರ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಅಧಿಕಾರಿಗಳಿಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. 80 ದಿನಗಳ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳಲ್ಲಿ ಜಡತ್ವ ಬೆಳೆದಿದ್ದು ಅದನ್ನು ಬಿಡಿಸುವ ಕೆಲಸ ಆಗಿದೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10ನೇ ಸ್ಥಾನದಲ್ಲಿದ್ದ ಜಿಲ್ಲೆ 27ನೇ ಸ್ಥಾನಕ್ಕೆ ಕುಸಿದಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು ಪರೀಕ್ಷಾ ಅಕ್ರಮವಾಗಿರುವುದರಿಂದ ಇಷ್ಟೊಂದು ವ್ಯತ್ಯಾಸವಾಗಲು ಕಾರಣ ಎಂದು ಹೇಳಿದರು. ಈ ಕಾರಣಕ್ಕಾಗಿ ಡಿಡಿಪಿಐ ಅವರನ್ನು ಅಮಾನತು ಗೊಳಿಸಲು ಹಾಗೂ ಬಿಇಒ ಗಳಿಗೆ ನೋಟೀಸು ಜಾರಿಮಾಡಲು ಸೂಚಿಸಲಾಗಿದೆ ಎಂದರು.
“ಶಿಕ್ಷಕರೂ ಕೂಡ ಇದಕ್ಕೆ ಕಾರಣಕರ್ತರು. ಜಿಲ್ಲಾ ಪಂಚಾಯತಿ ಸಿಇಒ ಕೂಡ ಇದಕ್ಕೆ ಜವಾಬ್ದಾರರು. ಹಾಗಾಗಿ, ಅವರಿಗೂ ನೋಟಿಸ್ ಕೊಡುವಂತೆ ಸೂಚಿಸಲಾಗಿದೆ” ಎಂದರು.

ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಇಲಾಖೆಗಳ ಪರಿಶೀಲನೆ ನಡೆಸಲಾಗಿದೆ. ಬರಗಾಲಕ್ಕೆ ಒದಗಿಸಿದ್ದ ಇನ್ ಪುಟ್ ಸಬ್ಸಿಡಿಯಲ್ಲಿ ಶೇ 100 ರಷ್ಟು ಸಾಧನೆಯನ್ನು ವಿಜಯನಗರ ಜಿಲ್ಲೆ ಮಾಡಿದೆ. ಎಲ್ಲ ರೈತರಿಗೂ ಸರ್ಕಾರದಿಂದ ನೀಡಲಾಗುವ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಸುಮಾರು 130 ಕೋಟಿ ರೂ.ಗಳನ್ನು ತಲುಪಿಸಿದ್ದಾರೆ. ಸಾಮಾನ್ಯ ಜನರನ್ನು ಕಚೇರಿಗಳಿಗೆ ಅಲೆಸುವ ಕೆಲಸ ಮಾಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ವಿಳಂಬ ಭ್ರಷ್ಟಾಚಾರಕ್ಕೆ ಸಮವಾಗಿರುವುದರಿಂದ ವಿಳಂಬ ಮಾಡದೇ ಕಾಲಮಿತಿಯೊಳಗೆ ಕೆಲಸಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಅಂಗನವಾಡಿ, ಆಸ್ಪತ್ರೆ, ಶಾಲೆ ಹಾಸ್ಟಲ್, ಸ್ಮಶಾನಗಳಿಗೆ ನೀಡಲಾಗಿರುವ ಜಮೀನನ್ನು ಬಾಕಿ ಇಡದೇ ತಲುಪಿಸಬೇಕೆಂದು ಸೂಚಿಸಲಾಗಿದೆ. ಪ್ರತಿ ತಾಲೂಕು ಕಚೇರಿಗಳಲ್ಲಿ ತಾಲೂಕಿನಲ್ಲಿನ ಸರ್ಕಾರಿ ಜಮೀನನ್ನು ಗುರುತಿಸಿ ಪ್ರದರ್ಶಿಸಬೇಕು. ಸರ್ಕಾರಿ ಜಮೀನು ಅತಿಕ್ರಮಣಕ್ಕೊಳಗಾಗಿದ್ದರೆ ಅದನ್ನು ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ತಕ್ಷಣ ಕೊಡುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಎಸಿ ಯವರಿಗೆ ಸ್ಪಷ್ಟ ಸೂಚನೆ ನಿಡಲಾಗಿದೆ ಎಂದರು.
ಕೆರೆಗಳನ್ನು ಉಳಿಸಲು ಹೂಳೆತ್ತುವ ಕೆಲಸವನ್ನು ಉದ್ಯೋಗ್ಯ ಖಾತ್ರಿ ಯೋಜನೆಯ ಮೂಲಕ ಕೈಗೊಳ್ಳಬೇಕು. ಹಿನ್ನೀರು ಪ್ರದೇಶ ಒತ್ತುವರಿಯಾಗಿದ್ದರೆ ಕೂಡಲೇ ಬಿಡಿಸಬೇಕು. ನೀರು ಸಲೀಸಾಗಿ ಕೆರೆಗಳಿಗೆ ಹೋಗಬೇಕು. ಸುತ್ತ ರಿವಿಟ್‍ಮೆಂಟ್ ಮಾಡಿ ಕಾಲುವೆ ಸ್ವಚ್ಛಗೊಳಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗಣಿಗಾರಿಕೆಗೆ ಪರವಾನಗಿ: ವರದಿ ಪಡೆದು ಸರ್ಕಾರದ ನಿಲುವು ಪ್ರಕಟ
ದೇವದಾರಿ ಗಣಿ ಕಂಪನಿಗೆ ಹೊಸದಾಗಿ ನೀಡಿರುವ ಪರವಾನಗಿಯ ಬಗ್ಗೆ ಮಾತನಾಡಿ, ಈ ಬಗ್ಗೆ ಹೊಸದಾಗಿ ಕೇಂದ್ರದ ಭಾರೀ ಕೈಗಾರಿಕಾ ಹಾಗೂ ಉಕ್ಕು ಸಚಿವರು ಹೇಳಿದ್ದು, ಇದರ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ವರದಿ ಬಂದ ನಂತರ ಸರ್ಕಾರದ ಅಭಿಪ್ರಾಯವೇನು ಎಂದು ತಿಳಿಸುವುದಾಗಿ ಹೇಳಿದರು.
ಇದನ್ನು ಓದಿದ್ದೀರಾ? ನಾಗೇಂದ್ರ ರಾಜೀನಾಮೆ ಹಿನ್ನೆಲೆ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ಝಮೀರ್ ಅಹಮದ್ ಹೆಗಲಿಗೆ
ವಿಜಯ ನಗರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಬೇಡಿಕೆ ಇರುವ ಬಗ್ಗೆ ಮಾತನಾಡಿ ಜಿಲ್ಲಾಧಿಕಾರಿಗಳ ಕಚೇರಿ, 250 ಹಾಸಿಗೆಯ ಆಸ್ಪತ್ರೆಯಿಂದ 500 ಹಾಸಿಗೆಗಳ ಆಸ್ಪತ್ರೆ ಆಗಬೇಕು ಎಂಬ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
