ಹೈಕಮಾಂಡ್ ಸೂಚನೆಯ ಮೇರೆಗೆ ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ ವಿ ಸದಾನಂದ ಗೌಡ, ‘ಯಡಿಯೂರಪ್ಪನವರ ಹೇಳಿಕೆ ಬೇಸರ ಉಂಟು ಮಾಡಿದೆ, ಅದು ಅಪ್ಪಟ ಸುಳ್ಳು’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಡಿ ವಿ ಸದಾನಂದ ಗೌಡ ರಾಜಕೀಯ ನಿವೃತ್ತಿ ಘೋಷಿಸಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ, ‘ಸದಾನಂದ ಗೌಡರು ಚುನಾವಣಾ ರಾಜಕೀಯ ಮಾತ್ರ ತೊರೆಯಲಿದ್ದಾರೆ. ಅದು ಹೈಕಮಾಂಡ್ ಕೂಡ ಸೂಚಿಸಿತ್ತು. ಆದರೆ, ಪಕ್ಷದ ಚಟುವಟಿಕೆಗಳಲ್ಲಿ ಅವರು ಇನ್ನು ಮುಂದೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯ ಬಗ್ಗೆ ಖಾಸಗಿ ಮಾಧ್ಯಮವೊಂದರ ಪ್ರತಿನಿಧಿಯ ಜೊತೆಗೆ ಮಾತನಾಡಿದ ಡಿ ವಿ ಸದಾನಂದ ಗೌಡ, ನಮ್ಮ ಪಕ್ಷದವರೇ ಆದ ಬಿ ಎಸ್ ಯಡಿಯೂರಪ್ಪ ದೊಡ್ಡ ರಾಜಕಾರಣಿ. ಅವರು ಈ ರೀತಿಯ ಸುಳ್ಳುಗಳನ್ನು ಹೇಳುವಂಥದ್ದು ಅದು ಒಳ್ಳೆಯದಲ್ಲ. ನನಗೆ ಬಹಳ ಬೇಸರವಾಗಿದೆ’ ಎಂದು ತಿಳಿಸಿದ್ದಾರೆ.
‘ನನ್ನ ನಿವೃತ್ತಿ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳ್ತೀನಿ. ಯಡಿಯೂರಪ್ಪ ಏಕಾಏಕಿಯಾಗಿ ಈ ರೀತಿ ಹೇಳಬಾರದಿತ್ತು. ಪ್ರಾಯಶಃ ಅವರಿಗೆ ಈ ಹಿಂದೆ ಹೈಕಮಾಂಡ್‌ನವರು ಈ ಹಿಂದೆ ಅವರಿಗೆ ಈ ರೀತಿಯ ಎಚ್ಚರಿಕೆ ನೀಡಿ, ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ಹೇಳಿರಬಹುದು.ಅದೇ ರೀತಿ ನನಗೂ ಹೇಳಿರಬಹುದೆಂದು ಭಾವಿಸಿ, ಹೇಳಿಕೆ ನೀಡಿರಲೂಬಹುದು. ಆದರೆ, ಅವರ ಈ ಹೇಳಿಕೆ ನನಗೆ ಬಹಳ ಬೇಸರ ಉಂಟು ಮಾಡಿದೆ.
‘ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ನನಗೆ ತಿಳಿಸಿದಾಗ ನೇರವಾಗಿ ರಾಜೀನಾಮೆ ಕೊಡಲು ಒಪ್ಪಿಕೊಂಡಿದ್ದೆ. ನಾನು ರಾಜೀನಾಮೆ ನೀಡಬಾರದು ಅಂತ ಸುಮಾರು 65 ಶಾಸಕರು ನನ್ನ ಕಾರಿಗೆ ಅಡ್ಡ ಮಲಗಿದ್ದರು. ಮನೆಯಲ್ಲಿ ಸಭೆ ಕೂಡ ಸೇರಿದ್ದರು. ನಾನು ಮುಖ್ಯಮಂತ್ರಿ ಸ್ಥಾನ ಬಿಡುವಾಗ ಕಣ್ಣೀರು ಹಾಕಿರಲಿಲ್ಲ. ನಾನು ಯಾವುದೇ ಭ್ರಷ್ಟಾಚಾರದಲ್ಲೂ ತೊಡಗಲಿಲ್ಲ. ನಾನು ಯಾವತ್ತಿಗೂ ಸ್ವಾಭಿಮಾನದ ರಾಜಕೀಯ ನಡೆಸಿದ್ದೇನೆಯೇ ಹೊರತು ಇನ್ನೊಬ್ಬನ ಕೈಗೊಂಬೆಯಾಗಿ ಕೆಲಸ ಮಾಡಲಿಲ್ಲ. ನನ್ನ ರಾಜಕೀಯ ನಿವೃತ್ತಿಗೆ ಹೈಕಮಾಂಡ್ ಸೂಚಿಸಿತ್ತು ಎನ್ನುವುದು ಅಪ್ಪಟ ಸುಳ್ಳು. ಯಡಿಯೂರಪ್ಪನವರು ಈ ರೀತಿಯ ಹೇಳಿಕೆ ನೀಡುವುದು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಕಳೆದ ವಿಧಾನಸಭೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ರಾಜ್ಯದಲ್ಲಿ ವಿಪಕ್ಷವಾಗಿರುವ ಬಿಜೆಪಿ ಇನ್ನೂ ಕೂಡ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಿಲ್ಲ. ಈ ನಡುವೆ ಮುಂಬರುವ 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿದ್ದರೂ ಪಕ್ಷದ ಹಿರಿಯ ನಾಯಕರೊಳಗಡೆಯೇ ಈ ರೀತಿಯ ಬೆಳವಣಿಗೆ ನಡೆದಿರುವುದು ವಿವಾದ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಏನೆಲ್ಲ ಬೆಳವಣಿಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.