ಬೆಂಗಳೂರಿನಲ್ಲಿ ಡಿ.10ರಂದು ಈಡಿಗ ಸಂಘದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಈ ಸಮಾವೇಶದ ಬಗ್ಗೆ ಮಾತನಾಡಿರುವ ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, “ನನಗೂ ಆಹ್ವಾನ ಬಂದಿದೆ. ಆದರೆ ನಾನು ಭಾಗವಹಿಸಲ್ಲ. ಈ ಸಮಾವೇಶ ರಾಜಕೀಯ ಪ್ರೇರಿತ ಮತ್ತು ಕುತಂತ್ರದ್ದು” ಎಂದು ತಿಳಿಸಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ” ರಾಜಕೀಯ ಕುತಂತ್ರದಿಂದ ಈಡಿಗರ ಸಮಾವೇಶ ಆಯೋಜನೆ ಮಾಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭಾಗಿಯಾಗುತ್ತಿದ್ದಾರೆ. ಆದರೆ ನಾನು ಈ ಸಮಾವೇಶಕ್ಕೆ ಹೋಗುತ್ತಿಲ್ಲ. ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವೆ. ಈಡಿಗ ಸಮಾಜದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಇದೆ. ಆದರೆ ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ ಮಾತ್ರ” ಎಂದು ಅವರು ತಿಳಿಸಿದ್ದಾರೆ.
“ಸಂಘದ 75 ವರ್ಷಗಳ ಅಮೃತ ಮಹೋತ್ಸವ ಅಂತ ಸಂಘಟಕರು ಹೇಳುತ್ತಿದ್ದಾರೆ. ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಯಾವಾಗ ಮಾಡಿದ್ದರು ಎಂದು ಯಾರಿಗೂ ಗೊತ್ತಿಲ್ಲ. ಸೇಂದಿ, ಸಾರಾಯಿ ರಾಜ್ಯದಲ್ಲಿ ನಿಷೇಧ ಆದಾಗ ಈ ಸಂಘದಲ್ಲಿ ಇದ್ದವರು ಏನು ಮಾಡಲಿಲ್ಲ. ನಮ್ಮ ಸಮಾಜದ ಆರು ಸ್ವಾಮೀಜಿಗಳಿದ್ದಾರೆ. ಈ ಪೈಕಿ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಥರದ ಯಾವುದೋ ಒಂದು ರಾಜಕೀಯ ಸಮಾವೇಶಗಳಾದಾಗ ನಾವು ಕೂಡ ಎಚ್ಚರ ವಹಿಸಬೇಕಿದೆ. ಸಮಾರಂಭಕ್ಕೆ ನಾನು ಶುಭ ಹಾರೈಸುತ್ತೇನೆಯೇ ಹೊರತು ನಾನು ಭಾಗವಹಿಸುವುದಿಲ್ಲ. ನಾನು ಕೂಡ ಆ ಸಮಾಜದ ನಾಯಕನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸಮಾಜಕ್ಕೆ ಒಳ್ಳೆಯ ಕೆಲಸ ಆಗುವುದಿದ್ದರೆ ಭಾಗವಹಿಸಬಹುದಿತ್ತು. ನನಗೆ ಭಿನ್ನಾಭಿಪ್ರಾಯ ಇಲ್ಲ. ಸಂಘಕ್ಕೂ ಸಮಾಜಕ್ಕೂ ಬಹಳ ವ್ಯತ್ಯಾಸವಿದೆ.” ಎಂದು ಬಿ.ಕೆ.ಹರಿಪ್ರಸಾದ್ ನೇರವಾಗಿ ತಿಳಿಸಿದ್ದಾರೆ.
ಜಾತಿ ಜನಗಣತಿ ವರದಿ ಅಂಗೀಕಾರಕ್ಕೆ ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಜಾತಿ ಜನಗಣತಿಗೆ ಹಿಂದಿನಿಂದಲೂ ಪ್ರಬಲ ಜಾತಿಗಳು ವಿರೋಧ ಮಾಡುತ್ತಲೇ ಬಂದಿವೆ. ಹಾವನೂರು ಆಯೋಗದ ವರದಿ ಬಂದಾಗ ಶಾಸಕರೊಬ್ಬರು ಅದರ ಪ್ರತಿಯನ್ನು ಸುಟ್ಟು ಹಾಕಿದ್ದರು. ಆದರೆ, ಅಂದು ಮುಖ್ಯಮಂತ್ರಿ ದೇವರಾಜ ಅರಸು ವರದಿ ಜಾರಿಗೆ ತಂದಿದ್ದರು ಎಂದರು. ಹಿಂದುಳಿದ ವರ್ಗದಲ್ಲಿ ಎಷ್ಟೋ ಜಾತಿಗಳಿವೆ. ಆದರೆ ಮೀಸಲಾತಿ ಲಾಭ ಪಡೆಯುತ್ತಿರುವುದು ಮಾತ್ರ ಕೆಲವೇ ಜಾತಿಗಳು. ಹೀಗಾಗಿ ಅರಸು ಮಾದರಿಯಲ್ಲಿ ರಾಜ್ಯ ಸರ್ಕಾರ ಜಾತಿ ಜನಗಣತಿ ವರದಿ ಅಂಗೀಕರಿಸಬೇಕು” ಎಂದು ಹರಿಪ್ರಸಾದ್ ಆಗ್ರಹಿಸಿದರು.
‘ಪಕ್ಷದಲ್ಲಿ ಎಲ್ಲೋ ಒಂದು ಕಡೆ ತಮ್ಮನ್ನು ತುಳಿಯಲಾಗುತ್ತಿದೆ ಅಂತ ನಿಮಗನಿಸುತ್ತಿದೆಯಾ?’ ಎಂದು ಕೇಳಿದ್ದಕ್ಕೆ ಉತ್ತರಿಸಿದ ಬಿ ಕೆ ಹರಿಪ್ರಸಾದ್, “ನಾನು ಬಾಲ್ ಇದ್ದಂತೆ. ತುಳಿದಷ್ಟು ಮೇಲೆ ಪುಟಿದೇಳುತ್ತೇನೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ” ಎಂದ ಅವರು, “ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರು ತೀರ್ಮಾನಿಸುತ್ತಾರೆ. ನಾನು ಸರ್ಟಿಫಿಕೇಟ್ ಕೊಡುವ ಸ್ಥಾನದಲ್ಲಿ ಇಲ್ಲ” ಎಂದು ಇದೇ ವೇಳೆ ತಿಳಿಸಿದರು.