ಈದಿನ.ಕಾಮ್ ತನಿಖಾ ವರದಿ | ಸರ್ಕಾರಿ ಸ್ವತ್ತು ಗುಳುಂ ಹಗರಣ; ಒಂದೇ ಎಫ್‌ಐಆರ್‌ನಲ್ಲಿ ಇಬ್ಬರು ‘ಸಿಎಂ’ಗಳು

Date:

Advertisements
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಹಗರಣ ಇದು. ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ! 

ನಾವು ನಾನಾ ರೀತಿಯ ಹಗರಣಗಳ ಆರೋಪ ಕೇಳಿದ್ದೇವೆ. ಕೆಲವು ಊಹಾಪೋಹಗಳ ಆಧಾರದಲ್ಲಿ ಕಟ್ಟಲ್ಪಟ್ಟಿರುತ್ತವೆ. ಮತ್ತೆ ಕೆಲವು ನಿಜವಾದ ಹಗರಣಗಳಾಗಿದ್ದರೂ ಸೂಕ್ತ ಸಾಕ್ಷ್ಯಾಧಾರ, ದಾಖಲೆಗಳು ಲಭ್ಯ ಇರೋದಿಲ್ಲ. ಆದರೆ ಇದು ಅಸಲಿ ಹಗರಣ ! ಯಾರೂ ನಿರಾಕರಿಸಲು ಸಾಧ್ಯವೇ ಇಲ್ಲದಂತಹ ಹಗರಣ. ಇಲ್ಲಿನ ಪ್ರತಿಯೊಂದು ಆರೋಪಕ್ಕೂ ಅಧಿಕೃತ ದಾಖಲೆಗಳಿವೆ.

ಈ ಒಂದೇ ಹಗರಣದಲ್ಲಿ ಒಬ್ಬರಲ್ಲಾ ಒಟ್ಟಿಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಬೇರೆಬೇರೆ ಪಕ್ಷಕ್ಕೆ ಸೇರಿದವರು, ಬೇರೆಬೇರೆ ಅವಧಿಯಲ್ಲಿ ಸಿಎಂಗಳಾಗಿದ್ದವರು. ಆದರೆ ಹಗರಣ ಒಂದೇ. FIR ಕೂಡ ಒಂದೇ. ಸರ್ಕಾರಿ ಸ್ವತ್ತನ್ನು ಗುಳುಂ ಮಾಡುವ ಒಳಸಂಚಿನಲ್ಲಿ ಇಬ್ಬರೂ ಭಾಗಿಯಾಗಿ IPC Sec 120 (B) – Criminal Conspiracy ಅಪರಾಧಿಕ ಒಳಸಂಚು ಕೇಸನ್ನು ಎದುರಿಸುತ್ತಿದ್ದಾರೆ.

ನಮ್ಮ ಈದಿನ.ಕಾಂ ತನಿಖಾ ತಂಡ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬೆನ್ನುಹತ್ತಿ ವರ್ಷಗಟ್ಟಲೆ ಪರಿಶ್ರಮ ಹಾಕಿದೆ. ನಿರಂತರ ಪ್ರಯತ್ನಗಳ ಮೂಲಕ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಈ ರೆಡ್‌ಹ್ಯಾಂಡ್‌ ಕ್ರೈಮ್‌ ನ ಕಟುವಾಸ್ತವಗಳನ್ನು Exclusive ದಾಖಲೆಗಳ ಸಮೇತ ನಿಮ್ಮ ಮುಂದೆ ಇಡುತ್ತಿದ್ದೇವೆ.

Advertisements

ಈ ವಿಶೇಷ ಹಗರಣ ಆರಂಭವಾಗಿದ್ದು 2007 ನೇ ಇಸವಿಯಲ್ಲಿ. ಕುಮಾರಸ್ವಾಮಿಯವರು ಆಗ ಮುಖ್ಯಮಂತ್ರಿ; ಯಡಿಯೂರಪ್ಪನವರು ಉಪಮುಖ್ಯಮಂತ್ರಿ. ಅದು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ. ಹೀಗಿರುವಾಗ ದಿನಾಂಕ: 22-08-2007ನೇ ತಾರೀಕು ಸಿಎಂ ಕುಮಾರಸ್ವಾಮಿಯವರ ಆಫೀಸಿಗೆ ರಾಜಶೇಖರಯ್ಯ ಅನ್ನೋ ಹೆಸರಿನಲ್ಲಿ ಒಂದು ಅರ್ಜಿ ಬರುತ್ತೆ. ʼನಮ್ಮ ಕುಟುಂಬದ ಇಂತಿಂಥಾ ಜಮೀನನ್ನು ಬಿಡಿಎ ಅಕ್ವೈರ್‌ ಮಾಡಿದೆ. ಅದನ್ನು ಡೀನೋಟಿಫಿಕೇಷನ್‌ ಮಾಡಿಕೊಡಿʼ ಅನ್ನೋದು ಆ ಅರ್ಜಿಯ ಒಕ್ಕಣೆ.  ಆ ಅರ್ಜಿ ಬಂದದ್ದೇ ತಡ ಸಿಎಂ ಕಚೇರಿ ಅಂದು ರಾಕೆಟ್‌ ಸ್ಪೀಡ್‌ನಲ್ಲಿ ಕೆಲಸ ಮಾಡಲಿಕ್ಕೆ ಶುರು ಮಾಡಿತು.

ಅದೇ ದಿನ 22-08-2007 ರಂದೇ ಮಾನ್ಯ ಮುಖ್ಯಮಂತ್ರಿಗಳು ತುರ್ತಾಗಿ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು. ಪರಿಣಾಮವಾಗಿ ಮುಖ್ಯಮಂತ್ರಿಯವರಿಗೆ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಎನ್ನುವ ಅಧಿಕಾರಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಪರವಾಗಿ ಕಳಿಸಿದ ನಿರ್ದೇಶನ ಈ ರೀತಿ ಇತ್ತು;

“ಈ ಕೆಳಕಂಡ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿ, ಶ್ರೀ ರಾಜಶೇಖರಯ್ಯ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು ಅಡಕಗಳ ಸಹಿತ ಇದರಲ್ಲಿ ಲಗ್ಗತ್ತಿಸಿದೆ. ಮನವಿಯನ್ನು ಪರಿಶೀಲಿಸಿ, ಇಲಾಖಾ ಅಭಿಪ್ರಾಯದೊಂದಿಗೆ, ಕಡತವನ್ನು ಮಾನ್ಯ ಮುಖ್ಯಮಂತ್ರಿಗಳ ಅವಗಾಹನೆ /ಆದೇಶಕ್ಕೆ ಈ ಕೂಡಲೇ ಮಂಡಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.”

ಅರ್ಜಿ ಬಂದದಿನವೇ ʼಈ ಕೂಡಲೇ ಕಡತ ಮಂಡಿಸಿʼ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ದೇಶನ ಕೊಡಲು ಕಾರಣ ಏನಿರಬಹುದು ? ಡಿನೋಟಿಫಿಕೇಷನ್‌ ಅರ್ಜಿ ಅಂದರೆ ಯಾರದೋ ತಲೆ ಹೋಗೋವಂಥಾ ತುರ್ತು ಇರೋದಿಲ್ಲ. ಅಥವಾ ಈ ಡಿನೋಟಿಫಿಕೇಷನ್‌ ರಾಜ್ಯದ ಜನರ ಹಿತಾಸಕ್ತಿ/ ಬಡವರ ಕಾಳಜಿಯ ವಿಚಾರವಂತೂ ಅಲ್ಲವೇ ಅಲ್ಲ. ಹಾಗಿದ್ದಮೇಲೆ ಇಷ್ಟು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿದ್ದರ ಹಿಂದಿನ ಒಳಗುಟ್ಟು ಏನು? 

ಮೊದಲಿಗೆ, ಡೀನೋಟಿಫಿಕೇಷನ್‌ಗೆ ಗುರಿಮಾಡಲಾದ ಜಮೀನಿನ ವಿವರಗಳನ್ನು ನೋಡೋಣ; ಈ ಭೂಮಿ ಬೆಂಗಳೂರು ಮಹಾನಗರದ ಗಂಗಾನಗರ ಏರಿಯಾಗೆ ಸಂಬಂಧಿಸಿದ್ದು. ಹಿಂದೆ ಇದನ್ನು ಗಂಗೇನಹಳ್ಳಿ ಅಂತ ಕರೆಯಲಾಗುತ್ತಿತ್ತು. ಮೇಕ್ರಿ ಸರ್ಕಲ್‌ ದಾಟಿ ಏರ್‌ಪೋರ್ಟ್‌ ರಸ್ತೆಯಲ್ಲಿ ಹೊರಟರೆ ಬಲಗಡೆಗೆ ಸಿಬಿಐ ಆಫೀಸ್‌ ಕಾಣಿಸುತ್ತೆ ನೋಡಿ ಅದೇ ಗಂಗೇನಹಳ್ಳಿ. ಈ ಗಂಗೇನಹಳ್ಳಿ ಸರ್ವೆ ನಂ. 7/1B, 7/1C ಮತ್ತು 7/1D ಈ ಮೂರು ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದ ಒಟ್ಟು 01 ಎಕರೆ 11 ಗುಂಟೆ ಜಮೀನು ಈ ಹಗರಣದಲ್ಲಿ ಸಿಕ್ಕಿಬಿದ್ದಿದೆ. ಸುಮಾರು 55,000 ಚದರ ಅಡಿ ಭೂಮಿ. ಇದರ ಅಕ್ಕಪಕ್ಕದಲ್ಲೇ ಮಂತ್ರಿಗಳ ಮನೆಗಳಿವೆ. ಮಾಜಿ ಮುಖ್ಯಮಂತ್ರಿಗಳಾದ ಎಸ್‌ಆರ್‌ ಬೊಮ್ಮಾಯಿ, ಗುಂಡೂರಾವ್‌, ವೀರಪ್ಪ ಮೊಯಿಲಿ, ಧರಂಸಿಂಗ್‌ ಮುಂತಾದವರ ಬಂಗಲೆಗಳಿವೆ. ಎಂಎಲ್‌ಎ ಲೇಔಟ್‌ ಅಂತ ಕರೆಯಲಾಗುವ ಪ್ರತಿಷ್ಟಿತ ಬಡಾವಣೆ ಇದಕ್ಕೆ ಅಂಟಿಕೊಂಡಿದೆ. ಇದು ಆರ್‌.ಟಿ ನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನು. ಹೀಗೆ ಬೆಂಗಳೂರು ಮಹಾನಗರದ ನಟ್ಟನಡುವೆ ಬಹಳ ಪ್ರತಿಷ್ಟಿತ ಬಡಾವಣೆಯ ಮಧ್ಯೆ ಇರುವ ಈ ಜಮೀನಿನ ಮಾರ್ಕೆಟ್‌ ವ್ಯಾಲ್ಯೂ ನೂರಾರು ಕೋಟಿ!

ಮಾಧ್ಯಮಗಳಲ್ಲಿ ಈ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ ಆಗಾಗ ಒಂದು ಚುಟುಕು ಸುದ್ದಿಯಾಗಿ ಬಂದು ಹಾಗೇ ಮರೆಯಾಗಿಬಿಟ್ಟಿದೆ. ಕುಮಾರಸ್ವಾಮಿಯವರು ಡಿನೋಟಿಫಿಕೇಷನ್‌ ಕೈಗೆತ್ತಿಕೊಂಡ ಈ ಜಮೀನಿನ ವಸ್ತುಸ್ಥಿತಿ ಏನಾಗಿತ್ತು ಎಂಬುದನ್ನು ನೋಡೋಣ;

ಮೂಲತಃ ಈ ಜಮೀನು ತಿಮ್ಮಾರೆಡ್ಡಿ, ನಾಗಪ್ಪ ಅಲಿಯಾಸ್‌ ನಾಗಪ್ಪ ರೆಡ್ಡಿ ಮತ್ತು ಮುನಿಸ್ವಾಮಪ್ಪ ಎನ್ನುವವರಿಗೆ ಸೇರಿದ್ದು. ಮೂರು ಜನರಿಗೂ ಸೇರಿದ ತಲಾ 17 ಗುಂಟೆ ಪ್ರಕಾರ ಒಟ್ಟು ಒಂದು ಎಕರೆ ಹನ್ನೊಂದು ಗುಂಟೆ ಜಮೀನನ್ನು 16-03-1976 ರಲ್ಲಿ ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಪ್ರಾಥಮಿಕ ಅಧಿಸೂಚನೆ, ಜಮೀನಿನ ಸರ್ವೆ, ದಾಖಲೆಗಳ ಪರಿಶೀಲನೆ, ಭೂಮಿಗೆ ಸಂಬಂಧಿಸಿದವರ ಆಕ್ಷೇಪಣೆಗಳ ಆಲಿಕೆ, ಪರಿಹಾರ ಮೊತ್ತ ನಿಗದಿ – ಹೀಗೆ ಸುಮಾರು ಒಂದು ವರ್ಷ ಎಂಟು ತಿಂಗಳ ಪ್ರಕ್ರಿಯೆ ನಡೆದು 08-12-1977 ರ ಗೆಜೆಟ್‌ನಲ್ಲಿ ಅಂತಿಮ ಅಧಿಸೂಚನೆ ಪ್ರಕಟ ಆಗಿದೆ. ನಂತರದ ದಿನಗಳಲ್ಲಿ ಈ ಭೂಮಿಯ ಮೇಲಿನ ಹಕ್ಕಿಗಾಗಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ನಡೆದಿವೆ. ಅಂತಿಮವಾಗಿ ಹನ್ನೆರಡು ವರ್ಷಗಳ ನಂತರ 21-04-1988ರಲ್ಲಿ ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 16 (2) ರ ಅಡಿಯಲ್ಲಿ ಫೈನಲ್‌ ನೋಟಿಫಿಕೇಷನ್‌ ಪ್ರಕಟ ಆಗಿದೆ. 

ಈ ಸೆಕ್ಷನ್‌ 16(2) ಫೈನಲ್‌ ನೋಟಿಫಿಕೇಷನ್‌ ಅಂದರೆ ಯಾವುದೇ ಹಕ್ಕುಸ್ವಾಮ್ಯ ಅಥವಾ ಯಾವುದೇ ಋಣಭಾರಗಳಿಲ್ಲದೆ ಸದರಿ ಸ್ವತ್ತು ಸಂಪೂರ್ಣವಾಗಿ ಸರ್ಕಾರದ ಸ್ವಾಧೀನ ಮತ್ತು ಒಡೆತನದಲ್ಲಿದೆ ಎಂದು ಘೋಷಿಸುವ ಕಾನೂನು. ಹೀಗೆ 1988ರಲ್ಲಿ ಈ ಭೂಮಿ ಸಂಪೂರ್ಣ ಸರ್ಕಾರದ ಸ್ವತ್ತು ಅಂತ ಘೋಷಣೆಯಾದ 19 ವರ್ಷಗಳ ನಂತರ, 1976 ರಲ್ಲಿ ಪ್ರಾಥಮಿಕ ಅಧಿಸೂಚನೆಯಾದ 31 ವರ್ಷಗಳ ನಂತರ 2007 ರಲ್ಲಿ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಶೇಖರಯ್ಯ ಅನ್ನೋ ಹೆಸರಿನಲ್ಲಿ ಅರ್ಜಿ ಪಡೆದು ಈ ಡೀನೋಟಿಫಿಕೇಷನ್‌‌ ʼಫೈಲ್‌ ನಂ. ಯುಡಿಡಿ 424 ಬೆಂಭೂಸ್ವಾ 2007ʼ ಸೃಷ್ಟಿ ಮಾಡಿ, ʼಈ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ಕೊಡಿʼ ಅಂತ ಅದೇ ದಿನ ಅಧಿಕಾರಿಗಳಿಗೆ ನಿರ್ದೇಶನ ಕೊಡ್ತಾರೆ. ಈ 01 ಎಕರೆ 11 ಗುಂಟೆ ಜಮೀನಿನ ಬಗ್ಗೆ ಮಾನ್ಯ ಕುಮಾರಸ್ವಾಮಿಯವರಿಗೆ ಇಷ್ಟೊಂದು ಆಸಕ್ತಿ, ಆತುರ ಯಾಕೆ? ಅಸಲಿ ಸೀಕ್ರೆಟ್‌ ಇರೋದೇ ಇಲ್ಲಿ. ಆ ಸೀಕ್ರೆಟ್‌ ಡೀಲಿಂಗ್‌ ಏನು ಅಂತ ನೋಡೋಣ.

WhatsApp Image 2024 09 17 at 5.38.59 PM 3


10-09-2007 ರಲ್ಲಿ ರಿಜಿಸ್ಟರ್‌ ಆದ ಈ ಜಿಪಿಎ ನೋಡಿ. ಅಂದರೆ ಮಾನ್ಯ ಕುಮಾರಸ್ವಾಮಿಯವರು 22-08-2007ರಂದು ಒಂದೇ ದಿನದಲ್ಲಿ ಡಿನೋಟಿಫಿಕೇಷನ್‌ ಕಡತ ಓಪನ್‌ ಮಾಡಿದ್ದರಲ್ಲಾ, ಅದಾದ ಕೇವಲ 18 ದಿನಗಳಲ್ಲಿ ಈ ಜಿಪಿಎ ರಿಜಿಸ್ಟರ್‌ ಆಗಿದೆ. ಇದೇ 01 ಎಕರೆ 11 ಗುಂಟೆ ಜಮೀನಿನ ಮೂಲ ಮಾಲಿಕರಾದ ತಿಮ್ಮಾರೆಡ್ಡಿ, ನಾಗಪ್ಪ, ಮುನಿಸ್ವಾಮಪ್ಪ ಇವರುಗಳ ವಾರಸುದಾರರಿಂದ, ಅಂದರೆ ಅವರ ಮಕ್ಕಳು ಮೊಮ್ಮಕ್ಕಳು ಒಟ್ಟು 21 ಜನರಿಂದ ಶ್ರೀಮತಿ ವಿಮಲ ಎನ್ನುವವರು ಈ ಜಿಪಿಎ ಪಡೆದುಕೊಳ್ಳುತ್ತಾರೆ. ಅದು ಮಾಮೂಲಿ ಜಿಪಿಎ ಅಲ್ಲ; ರಿಜಿಸ್ಟರ್ಡ್‌ ಜಿಪಿಎ. ಈ ವಿಮಲ ಅನ್ನೋರು ಯಾರು ಅನ್ನೋದು ಪ್ರಶ್ನೆ. ಈ ವಿಮಲ ಬೇರೆ ಯಾರೋ ಅಲ್ಲ. ಕುಮಾರಸ್ವಾಮಿಯವರ ಸ್ವಂತ ಅತ್ತೆ. ಇವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರ ತಾಯಿ. ಕುಮಾರಸ್ವಾಮಿಯವರ ಆಸಕ್ತಿ, ಆತುರ, ವೇಗ ಇವೆಲ್ಲಾ ಯಾಕೆ ಅಂತ ಇನ್ನೂ ಬಿಡಿಸಿ ಹೇಳಬೇಕಿಲ್ಲ.

ಒಂದು ಕಡೆ ವಿಮಲ ಅತ್ತೆ ಜಿಪಿಎ ಪಡೆದುಕೊಂಡು ಆ ಜಮೀನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಇನ್ನೊಂದು ಕಡೆ ಅಳಿಯ ಸಿಎಂ ಒಂದು ಅರ್ಜಿ ತಗೊಂಡು ಡಿನೋಟಿಫಿಕೇಷನ್‌ ಕಡತ ಓಪನ್‌ ಮಾಡ್ತಾರೆ. ಹೇಗಿದೆ ಅರೇಂಜ್‌ಮೆಂಟ್‌?

ಕುಮಾರಸ್ವಾಮಿ-ಯಡಿಯೂರಪ್ಪ ಹಗರಣ
WhatsApp Image 2024 09 17 at 5.39.00 PM 7

ಈ ಡೀನೋಟಿಫಿಕೇಷನ್‌ ಅರ್ಜಿಯಲ್ಲಿ ಇನ್ನೊಂದು ಕುತೂಹಲಕರ ಅಂಶ ಇದೆ; ಕುಮಾರಸ್ವಾಮಿಯವರು ಈ ಡೀನೋಟಿಫಿಕೇಶನ್‌ ಅರ್ಜಿ ತೆಗೆದುಕೊಂಡಿದ್ದು ರಾಜಶೇಖರಯ್ಯ ಮತ್ತಿತರರು ಎಂಬ ಹೆಸರಿನಲ್ಲಿ. ಆದರೆ ಅರ್ಜಿಯ ಕೊನೆಯಲ್ಲಿ ಒಂದೇ ಸಹಿ ಇದೆ. ಮತ್ತಿತರರು ಯಾರೋ ಪತ್ತೆಯಿಲ್ಲ. ಹೋಗಲಿ, ಆ ಅರ್ಜಿಯಲ್ಲಿ ಏನಿದೆ ನೋಡೋಣ;

ʼಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್‌ ಸೋ ಅಂಡ್‌ ಸೋ ಜಮೀನು ನಮ್ಮ ಸ್ವಾಧೀನಾನುಭವದಲ್ಲಿರುತ್ತದೆ… ಸದರಿ ಜಮೀನನ್ನು ಅಭಿವೃದ್ಧಿ ಪಡಿಸಲು ನಮ್ಮ ಕುಟುಂಬದ ಸದಸ್ಯರು ಇಚ್ಚಿಸಿರುವ ಹಿನ್ನಲೆಯಲ್ಲಿ ಪ್ರಾಧಿಕಾರದ ಭೂ ಸ್ವಾಧೀನ ನಡವಳಿಯಿಂದ ಕೈಬಿಡಬೇಕೆಂದುʼ ಕೋರಲಾಗಿದೆ.

ಆದರೆ, ಈ ಜಮೀನನ್ನು ಜಿಪಿಎ ಕೊಟ್ಟಿರುವ ಆ ಜಮೀನಿನ 21 ಜನ ವಾರಸುದಾರರಲ್ಲಾಗಲಿ ಅಥವಾ ಸರ್ಕಾರದ ಇತರೆ ದಾಖಲೆಗಳಲ್ಲಾಗಲಿ ರಾಜಶೇಖರಯ್ಯ ಅನ್ನೋ ಹೆಸರೇ ಇಲ್ಲ. ಈ ರಾಜಶೇಖರಯ್ಯನಿಗೂ ಆ ಕುಟುಂಬಕ್ಕೂ ಸಂಬಂಧವೇ ಇಲ್ಲ! ಖಚಿತವಾಗಿ ಹೇಳಬಹುದು ಇದೊಂದು ಬೇನಾಮಿ ಅಪ್ಲಿಕೇಷನ್‌!! ಕುಮಾರಸ್ವಾಮಿಯವರು ಡಿನೋಟಿಫಿಕೇಷನ್‌ ಕಡತ ಸೃಷ್ಟಿ ಮಾಡಲಿಕ್ಕಾಗಿ ರಾಜಶೇಖರಯ್ಯ ಅನ್ನೋ ಹೆಸರಲ್ಲಿ ಒಂದು ಅರ್ಜಿ ಸೃಷ್ಟಿಸಿ ಈ ಹಗರಣಕ್ಕೆ ಶಂಖುಸ್ಥಾಪನೆ ಮಾಡಿದ್ದಾರೆ, ಅಷ್ಟೇ.

ಕುಮಾರಸ್ವಾಮಿಯವರೇನೋ ಬಹಳ ಅವಸರದಲ್ಲಿದ್ದರು. ಆದರೆ ಅಧಿಕಾರಿಗಳು? ಅಧಿಕಾರಿಗಳು ಕಾನೂನು ಪ್ರಕಾರವೇ ಕೆಲಸ ಮಾಡಬೇಕು. ಯಾವುದೇ ಕಡತವನ್ನು ಕಾನೂನುಬದ್ಧವಾಗಿದೆಯೋ ಇಲ್ಲವೋ ಅಂತ ಪರಿಶೀಲನೆ ಮಾಡಿಯೇ ಸಹಿ ಹಾಕಬೇಕು.  
ಅಧಿಕಾರಿಗಳು ಕಾನೂನು ಮೀರಿದರೆ ಸಿಕ್ಕಿಬಿದ್ದು, ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಮಿತಿಮೀರಿದರೆ ಜೈಲು ಪಾಲಾಗುವ ಸಂಭವ ಇರುತ್ತದೆ. ಹೀಗೆ ಮುಂದಿನ ಪರಿಣಾಮದ ಅರಿವು ಇರೋದರಿಂದ ಅಧಿಕಾರಿಗಳು ಈ ಕಡತದ ಬಗ್ಗೆ ಕಾನೂನು ಪ್ರಕಾರ ಸ್ಪಷ್ಟ ಅಭಿಪ್ರಾಯ ಕೊಟ್ಟಿದ್ದಾರೆ. 

ಆಯಕಟ್ಟಿನ ಮೇಲೆ ಕಣ್ಣುಹಾಕಿದ್ದ ಕುಮಾರಸ್ವಾಮಿಯವರು ಅಷ್ಟು ಸುಲಭಕ್ಕೆ ಬಿಟ್ಟುಕೊಟ್ಟಿಲ್ಲ. ಮತ್ತೊಮ್ಮೆ ನಿರ್ದೇಶನ ಕೊಡುತ್ತಾರೆ.

WhatsApp Image 2024 09 17 at 5.38.59 PM 1

ಅರ್ಜಿದಾರರು ಮತ್ತು ಬಿಡಿಎಗೆ ನೋಟೀಸ್‌ ಜಾರಿ ಮಾಡಿ,  ವಿಚಾರಣೆ ನಡೆಸಿ ಅಂತ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಾಕೀತು ಮಾಡುತ್ತಾರೆ. ಅಂದಿನ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಜ್ಯೋತಿ ರಾಮಲಿಂಗಂ ಎಂಬ ಅಧಿಕಾರಿ. ಅವರು ಕುಮಾರಸ್ವಾಮಿಯವರ ಒತ್ತಡಕ್ಕೆ ಸೊಪ್ಪು ಹಾಕದೆ ಬಹಳ ಸ್ಪಷ್ಟವಾದ ಮಾತುಗಳಲ್ಲಿ “…This is not a fit case for considerationಅಂತ ಬರೆದಿದ್ದಾರೆ. ʼಭೂಸ್ವಾಧೀನ ಕಾಯ್ದೆ ಸೆಕ್ಷನ್‌ 16(2) ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಸದರಿ ಜಮೀನನ್ನು ಡಿನೋಟಿಫೈ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಬರೆದಿದ್ದಾರೆ.

ಕುಮಾರಸ್ವಾಮಿ-ಯಡಿಯೂರಪ್ಪ ಹಗರಣ

‌ಜ್ಯೋತಿರಾಮಲಿಂಗಂರವರು ಈ ಕಡತದ ಮೇಲೆ ಹೀಗೆ ಖಚಿತ ಅಭಿಪ್ರಾಯ ಬರೆದದ್ದು 09-10-2007 ರಂದು. 09-10-2007 ಕುಮಾರಸ್ವಾಮಿಯವರ ಜೀವನದಲ್ಲಿ ಬಹಳ ದುಃಖದ ದಿನ. ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದವರು ಹುದ್ದೆಗೆ ರಾಜೀನಾಮೆ ಕೊಟ್ಟ ದಿನ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ಕುಮಾರಸ್ವಾಮಿಯವರು ಕೊನೇ ಘಳಿಗೆವರೆಗೂ ಈ ಡಿನೋಟಿಫಿಕೇಶನ್‌ ಫೈಲ್ ಪುಶ್‌ ಮಾಡಲಿಕ್ಕೆ ಪ್ರಯತ್ನಿಸುತ್ತಿದ್ದರು ಎಂಬುದು. ಆದರೆ ಯಶಸ್ವಿಯಾಗೋಲ್ಲ. ಪಾಪ! ಆ ದಿನವೇ ರಾಜೀನಾಮೆ ಕೊಟ್ಟು ಗದ್ದುಗೆ ಬಿಟ್ಟು ಇಳಿಯುತ್ತಾರೆ.

ರಾಜೀನಾಮೆ ಕೊಡುವುದು ಅನಿವಾರ್ಯವಾಗಿತ್ತು. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ 20 : 20 ಸರ್ಕಾರ ಮಾಡಿಕೊಂಡಿದ್ದರು. ಇವರ 20 ತಿಂಗಳು ಅಧಿಕಾರಾವಧಿ ಮುಗಿದಿತ್ತು. ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬೇಕಾಗಿತ್ತು. ಅಧಿಕಾರ ಬಿಟ್ಟುಕೊಡದೇ ಜಗ್ಗಾಡುತ್ತಿದ್ದರು. ಎರಡೂ ಪಕ್ಷಗಳ ಮಧ್ಯೆ ಅಧಿಕಾರಕ್ಕಾಗಿ ಭಾರೀ ಬೀದಿಜಗಳ ನಡೆದಿತ್ತು. ಆ ಕಚ್ಚಾಟದ ನಡುವೆಯೇ ಈ ಡಿನೋಟಿಫಿಕೇಷನ್‌ ಫೈಲ್‌ ಓಡಾಡುತ್ತಿತ್ತು. ಅಂತಿಮವಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನಕಾರ್ಯದರ್ಶಿ ಆಗಿದ್ದ ಜ್ಯೋತಿ ರಾಮಲಿಂಗಂರವರು ಸ್ಪಷ್ಟವಾಗಿ ನಿರಾಕರಣೆ ಮಾಡಿ This is NOT a fit case ಅಂತ ಮುಖದಮೇಲೆ ಹೊಡೆದಂತೆ ಹೇಳಿದ ಮೇಲೆ ಕುಮಾರಸ್ವಾಮಿಯವರಿಗೆ ಬೇರೆ ಗತ್ಯಂತರವಿರಲಿಲ್ಲ. 

20 : 20 ಸರ್ಕಾರ ಬಿದ್ದುಹೋದ ನಂತರ ಆರು ತಿಂಗಳ ಕಾಲ ರಾಜ್ಯಪಾಲರ ಆಡಳಿತ ಇತ್ತು. ಆ ಅವಧಿಯಲ್ಲಿ ಈ ಕಡತದ ಪ್ರಕ್ರಿಯೆ ಗಮನಿಸಿದರೆ ಕುಮಾರಸ್ವಾಮಿ ಸೃಷ್ಟಿ ಮಾಡಿದ್ದು ಎಂಥಾ ಫೈಲ್‌ ಎಂಬ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆ. 

ಆಗ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ರವೀಂದ್ರನಾಥ್‌ ಎಂಬ ಅಧಿಕಾರಿಯ ಟಿಪ್ಪಣಿ ನೋಡೋಣ;

“ಮುಂದುವರಿದು ಸದರಿ ಪ್ರಕರಣದಲ್ಲಿ ಈಗಾಗಲೇ ಪ್ರಾಧಿಕಾರದಿಂದ ವರದಿಯಾದಂತೆ 16(2)ರ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತು ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಕೈಬಿಡುವ ಬಗ್ಗೆ ಪರಿಶೀಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಡಿನೋಟಿಫಿಕೇಷನ್‌ ಸಮಿತಿ ಸಭೆಯಲ್ಲಿಯೂ ಕೂಡಾ 16(2) ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಕರಣಗಳನ್ನು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಹಾಗೂ 16(2) ಪ್ರಕ್ರಿಯೆ ಮುಗಿದ ನಂತರ ಪ್ರಾಯಶಃ ಮೇಲ್ಮನವಿಯನ್ನು ಪರಿಗಣಿಸಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲದ ಕಾರಣ ಈ ರೀತಿ ಪ್ರಕರಣವನ್ನು ಆಲಿಸುವುದು (Hearing) ಸಮರ್ಥನೀಯವಲ್ಲ. ಮುಂದೆ ಈ ರೀತಿಯ ಅಡಹಾಕ್‌ ವ್ಯವಸ್ಥೆಯು ಖಾಯಂ ಆಗಿ ಪರಿವರ್ತನೆಗೊಂಡು ಎಲ್ಲಾ ಪ್ರಕರಣಗಳನ್ನೂ ಈ ರೀತಿ ಹಿಯರಿಂಗ್‌ ನಡೆಸಬೇಕಾಗುವ ಸಂಭವವು ಸೃಷ್ಟಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರಸ್ತುತ ಪ್ರಕರಣದಲ್ಲಯೂ ಕೂಡಾ ಈಗಾಗಲೇ 16(2) ಪ್ರಕ್ರಿಯೆಯು ಪೂರ್ಣಗೊಂಡಿರುವುದರಿಂದ ಸದರಿ ವಿಷಯವನ್ನು ಮಾನ್ಯ ರಾಜ್ಯಪಾಲರ ಸಲಹೆಗಾರರ ಅವಗಾಹನೆಗೆ ಮಂಡಿಸಿ ಈ ವಿಷಯವನ್ನು ಮುಕ್ತಾಯಗೊಳಿಸಬಹುದು.”

ಕುಮಾರಸ್ವಾಮಿ ಸೃಷ್ಟಿ ಮಾಡಿದ ಡಿನೋಟಿಫಿಕೇಷನ್‌ ಕಡತದ ಯೋಗ್ಯತೆಯ ಬಗ್ಗೆ ಬರೆದಿರುವ ಅತ್ಯಂತ ಖಚಿತವಾದ ಅಭಿಪ್ರಾಯ ಇದು.  ರವೀಂದ್ರನಾಥ್‌ ಅವರ ಟಿಪ್ಪಣಿಯ ನಂತರದಲ್ಲಿ ಈ ಕಡತವನ್ನು ಪರಿಶೀಲಿಸಿದ ಅಧಿಕಾರಿಗಳು ಈ ಕಡತವನ್ನು ಮುಕ್ತಾಯಗೊಳಿಸಬಹುದುಎಂದು ಶಿಫಾರಸ್ಸು ಮಾಡಿರುವುದನ್ನು ದಾಖಲೆಗಳಲ್ಲಿ ಕಾಣಬಹುದು.

ಆರು ತಿಂಗಳ ರಾಜ್ಯಪಾಲರ ಆಡಳಿತದ ನಂತರ 2008 ರ ಮೇ ತಿಂಗಳಲ್ಲಿ ಯಡಿಯೂರಪ್ಪನವರ ಸರ್ಕಾರ ಬಂತು. ಆಮೇಲೆ ಈ ಕಡತ ಸಂಖ್ಯೆ. 424ರ ಕತೆ ಏನಾಯ್ತು ಅನ್ನೋದು ಕುತೂಹಲ ಮೂಡಿಸುತ್ತದೆ. ರಾಜಕೀಯ ಅನ್ನೋದು ಎಷ್ಟು ವಿಚಿತ್ರ ಕ್ಷೇತ್ರ ಅಂತ ನೋಡಿ. ಒಪ್ಪಂದದ ಪ್ರಕಾರ ಅಧಿಕಾರ ಬಿಟ್ಟುಕೊಡಲಿಲ್ಲ ಅಂತ ಬಿಜೆಪಿ ಮತ್ತು ಜೆಡಿಎಸ್‌ನವರು ಯಾವ ಮಟ್ಟದಲ್ಲಿ ಬೀದಿ ಕಚ್ಚಾಟ ನಡೆಸಿದ್ದರು ನೆನಪಿಸಿಕೊಳ್ಳಿ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪರಸ್ಪರ ಏನೇನು ಬೈದಾಡಿಕೊಂಡಿದ್ದರು ಅಂತ ನೆನಪಿಸಿಕೊಂಡರೆ ವಾಕರಿಕೆ ಬರುತ್ತೆ. ರಾಜಕೀಯ ಅಂದ್ರೆ ಹೀಗೇನಾ? ಇಷ್ಟು ಕೆಳಹಂತಕ್ಕೆ ಇಳೀತಾರಾ ಅನಿಸುತ್ತೆ.
ಇನ್ಯಾವತ್ತೂ ಇವರು ಪರಸ್ಪರ ಮುಖ ಕೊಟ್ಟು ಮಾತಾಡೋದಿಲ್ಲವೇನೋ!?
ಪರಸ್ಪರ ಹೊಡೆದಾಡ್ಕೊಳ್ತೇರೇನೊ ಅನ್ನೊ ಅಷ್ಟು ಪರಸ್ಪರ ದ್ವೇಷ, ಆಕ್ರೋಶ ಕಾಣತ್ತೆ.
ಇದೆಲ್ಲಾ ತೆರೆಯ ಮುಂದೆ ಮಾತ್ರ ! ಕೇವಲ ಪಬ್ಲಿಕ್‌ ಕನ್ಸಮ್ಷನ್‌ಗೋಸ್ಕರ!
ಆದರೆ, ತೆರೆಮರೆಯಲ್ಲಿ ಡೀಲ್‌ಗಳು ಜೊತೆ ಜೊತೆಯಲ್ಲಿ ನಡೆಯುತ್ತವೆ.
ಈ ಕೇಸಿನಲ್ಲಿ ಡೀಲು ಏನಾಯ್ತು, ಹೇಗಾಯ್ತು ಅನ್ನೋ ವಿವರಗಳು ನಮಗೆ ಗೊತ್ತಿಲ್ಲ.

ಆದರೆ, ಏನೋ ಒಂದು ಸ್ಪಷ್ಟ ವ್ಯವಹಾರ ಅಂತೂ ಇದ್ದಿರಲೇಬೇಕು. ಯಾಕೆಂದರೆ ಯಡಿಯೂರಪ್ಪನವರು ಸಿಎಂ ಆದ ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ಈ ಫೈಲ್‌ ನಂ. 424 ಗೆ ಮತ್ತೆ ಜೀವ ಬರುತ್ತೆ. ಆಗಿನ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿದ್ದ ಬಿ.ಜಿ. ನಂದಕುಮಾರ್‌ ಅವರು ದಿನಾಂಕ 27-03-2010ರಂದು ನಗರಾಭಿವೃದ್ಧಿ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳ ಪರವಾಗಿ ಹೀಗೆಂದು ನಿರ್ದೇಶನ ಕಳಿಸುತ್ತಾರೆ.

“ಕಡತ ಸಂಖ್ಯೆ. ಯುಡಿಡಿ 424 ಬೆಂಭೂಸ್ವಾ 2007 ನ್ನು ಸಂಪೂರ್ಣ ಮಾಹಿತಿ ಹಾಗೂ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾನ್ಯ ಮುಖ್ಯಮಂತ್ರಿಯವರ ಅವಗಾಹನೆಗೆ ಕಳುಹಿಸಿಕೊಡುವಂತೆ ಕೋರಲು ಆದೇಶಿತನಾಗಿದ್ದೇನೆ.”  

ಕುಮಾರಸ್ವಾಮಿ-ಯಡಿಯೂರಪ್ಪ ಹಗರಣ

ಹೀಗೆ ಯಡಿಯೂರಪ್ಪನವರ ಆದೇಶದ ಮೇರೆಗೆ ಮತ್ತೆ ಈ ಕಡತದ ಓಡಾಟ ಶುರುವಾಗುತ್ತೆ. ಆದರೆ ಯಾವೊಬ್ಬ ಅಧಿಕಾರಿಯೂ ಕೂಡ ಡಿನೋಟಿಫೈ ಮಾಡುವುದಕ್ಕೆ ಪೂರಕವಾದ ಅಭಿಪ್ರಾಯ ಕೊಟ್ಟಿಲ್ಲ. ಕೋರ್ಟ್‌ನಲ್ಲಿ ಕೇಸು ದಾಖಲಾಗಿದ್ದರ ಬಗ್ಗೆ, ಅಂತಿಮವಾಗಿ ಈ ಭೂಮಿ ಸರ್ಕಾರದ ಸ್ವತ್ತಾಗಿದ್ದರ ಬಗ್ಗೆ, ಇಂತಹ ಪ್ರಕರಣಗಳನ್ನು ಡಿನೋಟಿಫಿಕೇಷನ್‌ಗೆ ಪರಿಗಣಿಸಲು ಇರುವ ತೊಡಕುಗಳ ಬಗ್ಗೆ ಟಿಪ್ಪಣಿ ಬರೆದಿದ್ದಾರೆ. ಅಂತಿಮವಾಗಿ ಕಾನೂನಿನ ಪ್ರಕಾರ ಡಿನೋಟಿಫಿಕೇಷನ್‌ಗೆ ಅವಕಾಶ ಇಲ್ಲ ಎಂಬುದಂತೂ ಯಾವುದೇ ಅನುಮಾನಗಳಿಗೆ ಎಡೆಯಿಲ್ಲದಂತೆ ಖಚಿತಪಟ್ಟಿದೆ.

ಆದರೆ ಯಡ್ಯೂರಪ್ಪನವರು ಇದ್ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ʼನಾನು ಮುಖ್ಯಮಂತ್ರಿ, ನನಗೆ ಬೇಕಾದಹಾಗೆ ಆದೇಶ ಮಾಡ್ತೀನಿ, ನನ್ನ ಮುಂದೆ ಕಾನೂನು ಗೀನೂನು ಯಾವುದೂ ಲೆಕ್ಕಕ್ಕಿಲ್ಲʼ ಅನ್ನೋದು ಅವರ ಧೋರಣೆ ಇದ್ದಿರಬಹುದು. 

ಕುಮಾರಸ್ವಾಮಿ-ಯಡಿಯೂರಪ್ಪ ಹಗರಣ

ಮಾನ್ಯ ಯಡಿಯೂರಪ್ಪನವರು “ಭೂ ಸ್ವಾಧೀನದಿಂದ ಕೈಬಿಡಲು ಆದೇಶಿಸಿದೆ” ಎಂದು ಒಂದು ಸಾಲಿನ ಆದೇಶ ಹೊರಡಿಸ್ತಾರೆ. ಇದನ್ನು ಹುಂಬತನ ಅನ್ನಬೇಕೋ? ದಾರ್ಷ್ಟ್ಯ ಅನ್ನಬೇಕೋ? ಅಧಿಕಾರದ ಅಹಂಕಾರ/ ಮದ ಅನ್ನಬೇಕೋ? ಅಥವಾ ಈ ಎಲ್ಲದರ ಮಿಶ್ರಣ ಅನ್ನಬೇಕೋ ಓದುಗರೇ ನಿರ್ಣಯಿಸಲಿ.

ಯಡಿಯೂರಪ್ಪನವರು ಸಹಿ ಮಾಡಿದ ನಂತರ ಜೂನ್‌ 7ನೇ ತಾರೀಖಿನ ಗೆಜೆಟ್‌ನಲ್ಲಿ ಈ ಡಿನೋಟಿಫಿಕೇಷನ್‌ ಆದೇಶ ಪ್ರಕಟಣೆಯಾಗಿದೆ. ಆ ಗೆಜೆಟ್‌ ದಾಖಲೆ ನೋಡೋಣ. 

ಕುಮಾರಸ್ವಾಮಿ-ಯಡಿಯೂರಪ್ಪ ಹಗರಣ

ಇದು ತಿಮ್ಮಾರೆಡ್ಡಿ 17 ಕುಂಟೆ, ಟಿ ನಾಗಪ್ಪ 17 ಕುಂಟೆ, ಮುನಿಸ್ವಾಮಪ್ಪ 17 ಕುಂಟೆ – ಒಟ್ಟು ಒಂದು ಎಕರೆ ಹನ್ನೊಂದು ಗುಂಟೆಯನ್ನು ಈ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬುದು ಆದೇಶದಲ್ಲಿದೆ. ಅಷ್ಟು ಮಾತ್ರವಲ್ಲ. ಈ ಭೂಮಿಯನ್ನು ಯಾವ ಕಾರಣಕ್ಕಾಗಿ ನಿಗದಿಗೊಳಿಸಲಾಗಿತ್ತು ಎಂಬ ಅಂಶ ಕೂಡ ಇದರಲ್ಲಿದೆ. ಗೆಜೆಟ್‌ ಪ್ರಕಟಣೆಯ ಪ್ರಕಾರ, ಸದರಿ ಜಮೀನನ್ನು ಸಮೂಹ ವಸತಿ ಸಮುಚ್ಛಯ ನಿರ್ಮಾಣ ಮಾಡುವ ಯೋಜನೆಗಾಗಿ ನಿಗದಿ ಮಾಡಲಾಗಿತ್ತು. ಈ ಡಿನೋಟಿಫಿಕೇಷನ್‌ ಆದೇಶದ ಜೊತೆಗೆ ಸಮೂಹ ವಸತಿ ಯೋಜನೆಯನ್ನೇ ರದ್ದುಪಡಿಸಲಾಗಿದೆ. ಅಂದರೆ ಮಧ್ಯಮ, ಕೆಳಮಧ್ಯಮ ವರ್ಗದ ಜನರಿಗೆ ಲಭ್ಯವಾಗಬೇಕಿದ್ದ ವಸತಿಗೆ ಎಳ್ಳುನೀರು ಬಿಡಲಾಗಿದೆ.

ಇಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಮಾನ್ಯ ಕುಮಾರಸ್ವಾಮಿಯವರು ಮಾಧ್ಯಮಗಳ ಮುಂದೆ ನಿಂತು ʼಸತ್ತೋರ್‌ ಹೆಸ್ರಲ್ಲಿ ಡೀನೋಟಿಫಿಕೇಷನ್‌ ಮಾಡ್ತೀರಲ್ರಿ? ನಾಚಿಕೆ ಆಗೋಲ್ವಾ?ʼ  ಅಂತ ತಮ್ಮ ರಾಜಕೀಯ ವಿರೋಧಿಗಳನ್ನು ಪ್ರಶ್ನೆ ಕೇಳಿದ್ದು ವರದಿಯಾಗಿತ್ತು. ಇದು ಒಳ್ಳೆಯ ಸಾತ್ವಿಕ ಪ್ರಶ್ನೆಯೇ ಸರಿ.

ಆದರೆ ಊರಿಗೆಲ್ಲ ನೀತಿಪಾಠ ಹೇಳೋ ಕುಮಾರಸ್ವಾಮಿಯವರು ಮಾಡಿರೋದೇನು? ಈ ಡಿನೋಟಿಫಿಕೇಷನ್‌ ಆಗಿರೋದು ಯಾರ ಹೆಸರಲ್ಲಿ? ಜಿ ತಿಮ್ಮಾರೆಡ್ಡಿ, ಟಿ ನಾಗಪ್ಪ, ಮುನಿಸ್ವಾಮಪ್ಪ ಅವರುಗಳ ಹೆಸರಲ್ಲಿ. ದಯವಿಟ್ಟು ಗಮನಿಸಿ; 2007ರಲ್ಲಿ ವಿಮಲಾ ಅತ್ತೆಯವರು ಜಿಪಿಎ ರಿಜಿಸ್ಟರ್‌ ಮಾಡಿಕೊಂಡ ಸಂದರ್ಭದಲ್ಲೇ ಈ ಜಮೀನಿನ ಮೂಲ ಮಾಲೀಕರು ಯಾರೂ ಜೀವಂತವಾಗಿರಲಿಲ್ಲ. ಆ ಜಿಪಿಎ ಕೊಟ್ಟವರು ಅವರ 21 ಮಂದಿ ವಾರಸುದಾರರು. ಅವರು ತಮ್ಮ ವಿಳಾಸವನ್ನು ಸನ್‌ ಆಫ್‌ ಲೇಟ್‌ ನಾಗಪ್ಪ, ಸನ್‌ ಆಫ್‌ ಲೇಟ್‌ ಮುನಿಸ್ವಾಮಪ್ಪ ಎಂಬುದಾಗಿ ನಮೂದಿಸಿದ್ದಾರೆ. ಅಂದರೆ, ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿಕೊಂಡಿರುವುದು ಸ್ಪಷ್ಟ.

ಊರಿನೋರಿಗೆಲ್ಲ ನೀತಿ ಪಾಠ ಹೇಳೋದು, ಸಾರ್ವಜನಿಕವಾಗಿ ದೊಡ್ಡದೊಡ್ಡ ಪೋಸ್‌ ಕೊಡೋದು, ಆದರೆ ತೆರೆಮರೆಯಲ್ಲಿ “ಆಚಾರ ಹೇಳೋಕೆ – ಬದನೆಕಾಯಿ ತಿನ್ನೋಕೆ.” ಎಂಬಂತೆ ವ್ಯವಹರಿಸುವುದು. ಇದೇ ಇವತ್ತಿನ ರಾಜಕಾರಣದ ಸಾರ.

ಇಷ್ಟಕ್ಕೇ ಮುಗಿಯೋಲ್ಲ. ಇನ್ನೂ ಒಂದು ಬಹಳ ಮುಖ್ಯವಾದ ಹಂತ ಇದೆ.

ಡಿನೋಟಿಫಿಕೇಷನ್‌ ಆದ ಒಂದು ತಿಂಗಳಿನಲ್ಲಿ ಅಂದರೆ  5-7-2010ರಂದು ಒಂದು ಕ್ರಯಪತ್ರ ರಿಜಿಸ್ಟರ್‌ ಆಗಿದೆ. ಯಾರಿಂದ ಯಾರಿಗೆ? ವಿಮಲಾ ಅತ್ತೆ ಅವರಿಂದ ಡಾ. ಟಿ ಎಸ್‌ ಚನ್ನಪ್ಪ ಅವರಿಗೆ. ಡಾ.ಟಿ.ಎಸ್.‌ ಚನ್ನಪ್ಪ ಅಂದರೆ ಬೇರೆ ಯಾರೋ ಅಲ್ಲ. ವಿಮಲಾ ಅತ್ತೆಯ ಸ್ವಂತ ಮಗ. ಅನಿತಾ ಕುಮಾರಸ್ವಾಮಿಯವರ ಸ್ವಂತ ಸೋದರ.

ಸತ್ತವರ ಹೆಸರಿನಲ್ಲಿ ಡೀನೋಟಿಫಿಕೇಷನ್‌ ಆಯ್ತು. ಬದುಕಿರುವವರ ಹೆಸರಿನಲ್ಲಿ ಕ್ರಯಪತ್ರ ರಿಜಿಸ್ಟರ್‌ ಆಯ್ತು. ಅಂದರೆ ಜಿಪಿಎ ಹೋಲ್ಡರ್‌ ವಿಮಲ ಅವರು ಬದುಕಿರುವ ವಾರಸುದಾರರ ಪರವಾಗಿ ಕ್ರಯಪತ್ರ ರಿಜಿಸ್ಟರ್‌ ಮಾಡಿಸಿಕೊಟ್ಟಿದ್ದಾರೆ. ಡಿನೋಟಿಫಿಕೇಷನ್‌ ಆದ ಭೂಮಿ ಅಂತಿಮವಾಗಿ ಯಾರ ಕೈ ಸೇರಿತು? ಕುಮಾರಸ್ವಾಮಿಯವರ ಬಾಮೈದ ಡಾ.ಚನ್ನಪ್ಪ ಅವರ ಹೆಸರಿಗೆ ಬಂತು.   
ಕುಮಾರಸ್ವಾಮಿಯವರು ತ್ವರಿತಗತಿಯಲ್ಲಿ ಫೈಲ್‌ ನಂಬರ್‌ 424  ಓಪನ್‌ ಮಾಡಿದ್ದರ ಹಿಂದಿನ ಅಸಲಿ ಆಟ ಏನು ಅನ್ನೋದು ಈಗ ಸ್ಪಷ್ಟ ಆಯ್ತು.  

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ್ತೆ ಅಂತ ಗಾದೆ ಮಾತಿದೆ. ಆದರೆ, ಪ್ರಪಂಚ ಗಮನಿಸುತ್ತೆ. ಈ ಸರ್ಕಾರಿ ಸ್ವತ್ತಿನ ಕಬಳಿಕೆಯ ಅಕ್ರಮವನ್ನು ಗಮನಿಸಿದ ಜಯಕುಮಾರ್‌ ಹಿರೇಮಠ್‌ ಎಂಬ  ಸಾಮಾಜಿಕ ಕಾರ್ಯಕರ್ತ  2015 ರ ಏಪ್ರಿಲ್‌ 30 ನೇ ತಾರೀಕು ಲೋಕಾಯುಕ್ತಕ್ಕೆ ಒಂದು ದೂರು ಕೊಟ್ಟಿದ್ದಾರೆ. ಮಾಹಿತಿ ಹಕ್ಕು, ಮತ್ತಿತರ ಮಾರ್ಗಗಳಲ್ಲಿ ಕಲೆಹಾಕಿದ ಈ ದಾಖಲೆಗಳನ್ನ ಲಗತ್ತಿಸಿರುವುದಾಗಿ ಹೇಳಿಕೊಂಡಿದ್ದಾರೆ.ಒಂದು ವಾರ ಕಾಲ ಆ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಮೇಲುನೋಟಕ್ಕೆ ಸತ್ಯಾಂಶ ಇದೆ ಅಂತ ದೃಡಪಟ್ಟ ಮೇಲೆ ಕ್ರೈಂ ನಂ. 27/2015 ಎಂಬುದಾಗಿ ಒಂದು ಎಫ್‌ಐಆರ್‌  ರಿಜಿಸ್ಟರ್‌ ಆಗಿದೆ. ಈ ಎಫ್‌ಐಆರ್‌ ಪ್ರಕಾರ, ಆರೋಪಿ ನಂ.1 –  ಬಿ ಎಸ್‌ ಯಡಿಯೂರಪ್ಪ, ಆರೋಪಿ ನಂ.2 –  ಎಚ್‌ ಡಿ ಕುಮಾರಸ್ವಾಮಿ, ಆರೋಪಿ ನಂ.3 – ಶ್ರೀಮತಿ ವಿಮಲಾ, ಆರೋಪಿ ನಂ.4 – ಟಿ ಎಸ್‌ ಚನ್ನಪ್ಪ, ಆರೋಪಿ ನಂ.5 –  ರಾಜಶೇಖರಯ್ಯ.

ಭ್ರಷ್ಟಾಚಾರ ತಡೆ ಕಾಯಿದೆಯ 13 (1) (C) & (D) , 13(2) ಸೆಕ್ಷನ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕ ಹುದ್ದೆಯಲ್ಲಿದ್ದುಕೊಂಡು, ಸಾರ್ವಜನಿಕ ಸ್ವತ್ತುಗಳನ್ನ ಕಬಳಿಸುವುದು ಅಥವಾ ಪರಭಾರೆ ಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಿವು.

ಇದಲ್ಲದೇ ಐಪಿಸಿ ಸೆಕ್ಷನ್‌ಗಳಲ್ಲಿವೆ. ಐಪಿಸಿ ಸೆಕ್ಷನ್‌ 120(B) ಕ್ರಿಮಿನಲ್‌ ಕಾನ್ಸಪಿರೆಸಿ ಅಥವಾ ಅಪರಾಧಿಕ ಒಳಸಂಚು. ಅಂದರೆ ಒಂದು ಸಾರ್ವಜನಿಕ ಆಸ್ತಿಯನ್ನು ಗುಳುಂ ಮಾಡಲಿಕ್ಕೆ ಇಷ್ಟೆಲ್ಲ ಮಂದಿ ಒಟ್ಟುಗೂಡಿ ನಡೆಸಿದ ಸಂಚು.
ಐಪಿಸಿ ಸೆಕ್ಷನ್‌ 420 – ಚೀಟಿಂಗ್‌. ಸಾರ್ವಜನಿಕರನ್ನು ನಂಬಿಸಿ, ಯಾಮಾರಿಸಿದ್ದಕ್ಕಾಗಿ ಈ ಸೆಕ್ಷನ್‌.
ಐಪಿಸಿ 409 – ಕ್ರಿಮಿನಲ್‌ ಬ್ರೀಚ್‌ ಆಫ್‌ ಟ್ರಸ್ಟ್‌, ವಿಶ್ವಾಸ ದ್ರೋಹದ ಅಪರಾಧ. ಜನ ನಿಮ್ಮ ಮೇಲೆ ವಿಶ್ವಾಸವಿಟ್ಟು ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿರುತ್ತಾರೆ. ನೀವು ಅಧಿಕಾರದ ದುರ್ಬಳಕೆ ಮಾಡಿಕೊಂಡು, ಕಾನೂನು ಉಲ್ಲಂಘಿಸಿ ಸಾರ್ವಜನಿಕ ಆಸ್ತಿ ಕಬಳಿಸಿ, ವಿಶ್ವಾಸ ದ್ರೋಹ ಎಸಗಿದ್ದೀರಿ ಅನ್ನೋದು ಆ ಸೆಕ್ಷನ್‌ ಸಾರಾಂಶ. 
ಐಪಿಸಿ 418 – ರಕ್ಷಣೆ ಮಾಡಬೇಕಾದವರೇ ಭಕ್ಷಣೆ ಮಾಡಿದ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್‌. ಬೇಲಿಯೇ ಎದ್ದು ಹೊಲ ಮೇಯ್ತು ಅಂತಾರಲ್ಲಾ ಅಂಥಾ ಅಕ್ರಮಕ್ಕೆ ಸಂಬಂಧಿಸಿದ್ದು.  

ಇಲ್ಲಿಯವರೆಗೆ ಒಂದು ರೀತಿಯಾದರೆ ಲೋಕಾಯುಕ್ತ ಎಫ್‌ಐಆರ್‌ ಆದಮೇಲೆ ಮತ್ತೊಂದು ರೀತಿಯ ದುರಂತ. ಇಂಥಾ ರೆಡ್‌ ಹ್ಯಾಂಡೆಡ್‌ ಕೇಸು ರಿಜಿಸ್ಟರ್‌ ಆಗಿ 9 ವರ್ಷ 4 ತಿಂಗಳು ಕಳೆದಿದೆ. ಈ ಕೇಸು ಮತ್ತು ಅದರ ಫೈಲುಗಳು ಧೂಳು ತಿನ್ನುತ್ತಾ ಕೂತಿವೆ. ನೆನಪಿಡಿ, ಕೇಸು ದಾಖಲಾಗಿ ಇದು ಹತ್ತನೇ ವರ್ಷ.

ಮಾನ್ಯ ಲೋಕಾಯುಕ್ತ ಸಾಹೇಬರಿಗೆ ರಾಜ್ಯದ ಜನತೆಯ ಪರವಾಗಿ ಒಂದೆರಡು ಪ್ರಶ್ನೆಗಳು;

ಲೋಕಾಯುಕ್ತ ದಾಳಿ

ಮಹಾಶಯರೆ, ಒಂಬತ್ತು ವರ್ಷ ನಾಲ್ಕು ತಿಂಗಳು ಈ ಕೇಸನ್ನು ಯಾಕೆ ಮೂಲೆಗೆ ಸರಿಸಿದ್ದೀರಿ? ಈ ಕೇಸಿನ ಬಗ್ಗೆ ಏನು ತನಿಖೆ ಮಾಡಿದ್ದೀರಿ? ಈ ಇಬ್ಬರು ಸಿಎಂ ಗಳಿಗಾಗಲಿ, ಅವರ ಹೈಪ್ರೊಫೈಲ್‌ ಬಂಧುಗಳಿಗಾಗಲಿ ಕನಿಷ್ಟಪಕ್ಷ ಒಂದು ನೋಟೀಸನ್ನಾದರೂ ಕೊಟ್ಟಿದ್ದೀರಾ? ಏನಾದರೂ ವಿಚಾರಣೆ ನಡೆಸಿದ್ದೀರಾ? ಡಿನೋಟಿಫಿಕೇಷನ್‌ ಕಡತದಲ್ಲಿ ನೋಟ್‌ ಬರೆದಿರೋ ಅಷ್ಟೆಲ್ಲಾ ಅಧಿಕಾರಿಗಳಿದ್ದಾರಲ್ಲಾ… ಅವರ ಹೇಳಿಕೆ  ದಾಖಲಿಸಿದ್ದೀರಾ? ಅವೆಲ್ಲವೂ ಪ್ರಮುಖ ಸಾಕ್ಷಿ ಅಲ್ಲವಾ?
ಲೋಕಾಯುಕ್ತ ಸಂಸ್ಥೆ ಇರೋದು ಭ್ರಷ್ಟರನ್ನು ವಿಚಾರಣೆ ಮಾಡಲಿಕ್ಕೋ ರಕ್ಷಣೆ ಮಾಡಲಿಕ್ಕೋ ಅನ್ನೋ ಅನುಮಾನ ಸಾರ್ವಜನಿಕರಿಗೆ ಮೂಡಿದರೆ ಅದಕ್ಕೆ ನೀವೇ ಹೊಣೆ ಅಲ್ಲವೆ?
ನಿಮ್ಮ ಸಂಸ್ಥೆ ಹೈಪ್ರೊಫೈಲ್‌ ಅಪರಾಧಿಗಳನ್ನು ಬಚಾವ್‌ ಮಾಡಿ, ಕೆಳ ಹಂತದ ನೌಕರರ ಮೇಲೆ ಮಾತ್ರ ತಮ್ಮ ಪ್ರತಾಪ ತೋರಿಸೋದಾ?
ಲೋಕಾಯುಕ್ತದ ಇಂಥಾ ಅದಕ್ಷತೆ, ನಿರ್ಲಕ್ಷ್ಯ ಕಂಡು ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎನ್ನುವ ಪರಿಜ್ಙಾನ ಇದ್ದಲ್ಲಿ ಇಷ್ಟು ವರ್ಷ ಕೈಕಟ್ಟಿ ಕೂರುತ್ತಿರಲಿಲ್ಲ ಅಲ್ಲವೆ?
ದಯಮಾಡಿ ರಾಜ್ಯದ ಜನತೆಗೆ ಉತ್ತರ ಕೊಡಿ.

ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ನೇರಾನೇರ ಪ್ರಶ್ನೆ

ಸಿದ್ದರಾಮಯ್ಯ (9)

ಸ್ವಾಮಿ, ಚುನಾವಣೆಯ ಸಂದರ್ಭದಲ್ಲಿ ನೀವು ಜನರಿಗೆ ಕೊಟ್ಟಿದ್ದ ಭರವಸೆ ಏನು?
ಭ್ರಷ್ಟಾಚಾರಗಳನ್ನು ಬಯಲಿಗೆಳೆದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಆಶ್ವಾಸನೆ ಕೊಟ್ಟಿದ್ದನ್ನು ಮರೆತೇಬಿಟ್ಟರಾ?  ಮರೆತಿಲ್ಲವಾದರೆ ಯಾಕೆ ಕೈಕಟ್ಟಿಕೊಂಡು ಕೂತಿದ್ದೀರಿ?  
ನೀವೂ ಕೂಡ ಇದರಲ್ಲಿ ಶಾಮೀಲಾಗಿದ್ದೀರಾ? ಅಥವಾ ನಿಮ್ಮ ಯಾವುದಾದರೂ ಅಕ್ರಮಗಳನ್ನು ಅವರು ಹೊರತೆಗೆಯುತ್ತಾರೆ ಅಂತ ಭಯವೋ??  ಬಿಜೆಪಿ-ಜೆಡಿಎಸ್‌ ಪಕ್ಷಗಳನ್ನು ಬಿಟ್ಟು ಜನ ನಿಮಗ್ಯಾಕೆ ಓಟು ಹಾಕಬೇಕಿತ್ತು? 135 ಸೀಟು ಯಾಕೆ ಕೊಡಬೇಕಿತ್ತು? ದಯಮಾಡಿ ಉತ್ತರಿಸಿ.
ನಿಮ್ಮ ಮಾತಿನ ಮೇಲೆ ಭರವಸೆ ಉಳಿಸಿಕೊಳ್ಳಲಿಕ್ಕಾದರೂ ಸ್ವಲ್ಪ ಕೆಲಸ ಮಾಡಿ.

ಎಚ್‌ಡಿಕೆ

ಮಾನ್ಯ ಕುಮಾರಸ್ವಾಮಿಯವರೇ, ನೀವು ಸಾರ್ವಜನಿಕವಾಗಿ ಪರಿಶುದ್ಧ ಎಂಬಂತೆ ಸ್ವಯಂ ಸರ್ಟಿಫಿಕೇಟ್‌ ಕೊಟ್ಟುಕೊಂಡು ಮಾತಾಡ್ತೀರಿ. ಬೇರೆಯವರಿಗೆ ನೈತಿಕತೆಯ ಪಾಠ ಮಾಡುತ್ತೀರಿ. ದಯಮಾಡಿ ರಾಜ್ಯದ ಜನತೆಗೆ ಈ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಿ.

ಪ್ರಶ್ನೆ – 1)  ರಾಜಶೇಖರಯ್ಯ ಅನ್ನೋ ಹೆಸರಿನಲ್ಲಿ ಒಂದು ಬೇನಾಮಿ ಅರ್ಜಿ ತೆಗೆದುಕೊಂಡು ಡಿನೋಟಿಫಿಕೇಷನ್‌ ಕಡತ ಸೃಷ್ಟಿ ಮಾಡಿದ್ದು ನಿಜವೋ ಸುಳ್ಳೋ?
ಪ್ರಶ್ನೆ – 2) ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಅಂತ ಹಲವು ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರವೂ ಡಿನೋಟಿಫಿಕೇಷನ್‌ ಕಡತವನ್ನು ಪುಷ್‌ ಮಾಡಿದ್ರಲ್ಲಾ, ಯಾಕೆ?
ಪ್ರಶ್ನೆ – 3) ನಿಮ್ಮ ಅತ್ತೆ ಶ್ರೀಮತಿ ವಿಮಲಾ ಹೆಸರಿನಲ್ಲಿ ಜಿಪಿಎ ಪಡೆದುಕೊಂಡಿದ್ದು ಸುಳ್ಳೇ?
ಪ್ರಶ್ನೆ- 4) ಯಡಿಯೂರಪ್ಪ ಸರ್ಕಾರ ಬಂದಮೇಲೆ ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿಸಿಕೊಂಡಿದ್ದು ಸುಳ್ಳೇ?
ಪ್ರಶ್ನೆ – 5) ಅಂತಿಮವಾಗಿ ಸರ್ಕಾರಕ್ಕೆ ಸೇರಿದ್ದ ಆ ಆಸ್ತಿಯನ್ನು ನಿಮ್ಮ ಬಾಮೈದ ಚನ್ನಪ್ಪ ಅವರ ಹೆಸರಿಗೆ ಕ್ರಯಪತ್ರ ನೋಂದಣಿ ಮಾಡಿಸಿರೋದು ಸುಳ್ಳೇ?

ನೀವು ಸಾರ್ವಜನಿಕ ಸ್ಪಷ್ಟೀಕರಣ ಕೊಟ್ಟರೆ ಉತ್ತಮ. ಅಥವಾ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿದ್ದರೆ ನಿಮ್ಮ ಅನುಕೂಲದ ಸ್ಥಳಕ್ಕೇ ನಾವು ಕ್ಯಾಮರಾದೊಂದಿಗೆ ಬರುತ್ತೇವೆ. ಜನರಿಗೆ ಸತ್ಯಾಸತ್ಯತೆ ತಿಳಿಯಲಿ. ದಯಮಾಡಿ ಪ್ರತಿಕ್ರಿಯಿಸಿ.  

ಯಡಿಯೂರಪ್ಪ

ಮಾನ್ಯ ಯಡಿಯೂರಪ್ಪನವರೆ, ಮುಖ್ಯಮಂತ್ರಿ ಸ್ಥಾನದ ಅಧಿಕಾರ ಎಂದರೆ ಸಾರ್ವಜನಿಕ ಸ್ವತ್ತುಗಳನ್ನು ಮನಸೋ ಇಚ್ಚೆ ಪರಭಾರೆ ಮಾಡುವ ಅಧಿಕಾರ ಎಂದುಕೊಂಡಿದ್ದೀರಾ? ಈ ಡಿನೋಟಿಫಿಕೇಷನ್‌ ಅಕ್ರಮದಲ್ಲಿ ನೀವು ಕುಮಾರಸ್ವಾಮಿಯವರ ಜೊತೆ ಶಾಮೀಲಾಗಿರುವುದು ಸುಳ್ಳೇ? ಈ ಅಕ್ರಮ ಡಿನೋಟಿಫಿಕೇಷನ್‌ಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸಾಲುಸಾಲಾಗಿ ಅಧಿಕಾರಿಗಳು ಪದೇಪದೇ ಸ್ಪಷ್ಟವಾಗಿ ಬರೆದ ನಂತರವೂ ಕೂಡ ನೀವು ಅಧಿಕಾರವನ್ನು ದುರ್ಬಳಕೆ ಮಾಡಿ ಡಿನೋಟಿಫಿಕೇಷನ್‌ ಆದೇಶ ಹೊರಡಿಸಿದ್ದು ಯಾಕೆ? ಯಾವ ಲಾಭ ಪಡೆದುಕೊಳ್ಳಲಿಕ್ಕಾಗಿ ಈ ಅಕ್ರಮಕ್ಕೆ ನೀವು ಕೈ ಹಾಕಿದಿರಿ?
ಅಧಿಕಾರ ಕೈಗೆ ಸಿಕ್ಕ ಕೂಡಲೆ ಕಾನೂನನ್ನು ಕಾಲಕಸ ಮಾಡುವ ನಿಮ್ಮಂಥ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದಲೇ ದೂರ ಉಳಿಯುವುದು ನಾಡಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲವೆ?

ಕೊನೆಯದಾಗಿ,
ಆತ್ಮೀಯ ಓದುಗರೇ…
ನಮ್ಮ ಈದಿನ.ಕಾಂ ಸಂಸ್ಥೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ತನಿಖಾ ವರದಿಗಳನ್ನು ನಿಮ್ಮ ಮುಂದಿಟ್ಟಿದೆ. ಇಲ್ಲಿ ನಾವು ಪ್ರತಿಪಾದಿಸಿರುವ ಎಲ್ಲಾ ವಿಚಾರಗಳು ಅಧಿಕೃತ ದಾಖಲೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಕಟು ವಾಸ್ತವಗಳನ್ನು ಆಧರಿಸಿದ್ದು. ಊಹಾಪೋಹಗಳನ್ನಾಧರಿಸಿ  ಕಟ್ಟುಕತೆಗಳನ್ನು ಕಟ್ಟುವ ವಿಧಾನವನ್ನು ನಾವು ಅನುಸರಿಸುವುದಿಲ್ಲ. ಯಾರಿಗಾದರೂ ಈ ವರದಿ ರೋಚಕತೆಯೆನಿಸಿದರೆ ಅದು ನಮ್ಮ ತಪ್ಪಲ್ಲ; ಈ ಅಕ್ರಮದ ಒಳಸುಳಿಗಳು ಇರುವುದೇ ಹಾಗೆ ಎಂಬುದನ್ನು ತಾವು ಮನಗಾಣಬೇಕೆಂದು ವಿನಮ್ರವಾಗಿ ಅರಿಕೆ ಮಾಡುತ್ತೇವೆ. 
 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X