ಬಿಜೆಪಿ ಕೊಳಕರನ್ನು ಕಂಬಿ ಹಿಂದೆ ಕೂರಿಸಲು ಒಂದೂವರೆ ವರ್ಷ ಬೇಕಾಗಿತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ? ಕಾಂಗ್ರೆಸ್ಸಿಗರ ಸಾಫ್ಟ್ ಹಿಂದುತ್ವವೇ ಈಗ ಅವರ ಬುಡಕ್ಕೆ ಬಿಸಿ ನೀರು ಬಿಡುತ್ತಿದೆ. ಮೋದಿ ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
‘ಕರ್ನಾಟಕ ಸರ್ಕಾರ ಹಾಡಹಗಲೇ ಲೂಟಿಯಲ್ಲಿ ಮುಳುಗಿದೆ. ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪುಣೆಯಲ್ಲಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಭಾಗವಾಗಿ ಪ್ರಚಾರ ಭಾಷಣದ ವೇಳೆ ಕಾಂಗ್ರೆಸ್ ಪಕ್ಷದತ್ತ ಬಾಣ ಬಿಟ್ಟಿದ್ದಾರೆ.
ಇದು ದೇಶದಾದ್ಯಂತ- ಪ್ರಿಂಟ್, ವಿಷ್ಯುಯಲ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿದೆ.
ಪ್ರಧಾನಿ ಮೋದಿಯವರಿಗೆ ಒಂದು ಅನುಕೂಲವಿದೆ. ಅದೇನೆಂದರೆ, ಮೋದಿಯವರು ಬರುತ್ತಾರೆಂದರೆ, ಸುದ್ದಿ ಮಾಧ್ಯಮಗಳ ಪತ್ರಕರ್ತರು, ಸಕಲ ಸನ್ನದ್ಧರಾಗಿರುತ್ತಾರೆ. ಅತ್ಯಾಸಕ್ತಿಯಿಂದ ಪ್ರಧಾನಿ ಭಾಷಣವನ್ನು ಕವರ್ ಮಾಡಲು, ಎಲ್ಲರಿಗಿಂತ ಮುಂಚೆ ಹೋಗಿ ನಿಂತಿರುತ್ತಾರೆ. ನಮ್ಮ ದೇಶದ ಮಾಧ್ಯಮ ಸಂಸ್ಥೆಗಳ ಮಾಲೀಕರು ಹೆಚ್ಚಿನಪಾಲು ಹಿಂದೂಗಳು. ಅದರಲ್ಲೂ ಹಲವರು ಸಂಘ ಪರಿವಾರ ಮತ್ತು ಬಿಜೆಪಿಯ ಸಿಂಪಥೈಸರ್‌ಗಳು. ಬಿಜೆಪಿಯ ಬಿಸ್ಕೆಟ್ ಮತ್ತು ಜಾಹೀರಾತಿನಿಂದ ಬದುಕುತ್ತಿರುವವರು. ಹೀಗಾಗಿ ಮೋದಿ ಮಾತನಾಡಿದ್ದೆಲ್ಲ ಆದ್ಯತೆಯ ಮೇರೆಗೆ ಪ್ರಕಟವಾಗುತ್ತದೆ. ಮತ್ತು ಅದು ಬಿಜೆಪಿಯ ಐಟಿ ಸೆಲ್ ಎಂಬ ಅಕ್ಷೋಹಿಣಿ ಸೈನ್ಯದಿಂದ ಅರೆ ಕ್ಷಣದಲ್ಲಿ ಇಡೀ ಪ್ರಪಂಚಕ್ಕೇ ಹಂಚಿಕೆಯಾಗುತ್ತದೆ.
ಪ್ರಚಾರದ ದೃಷ್ಟಿಯಿಂದ ಮೋದಿಗೆ ಇರುವ ಈ ಅನುಕೂಲ ಸದ್ಯಕ್ಕೆ ದೇಶದ ಯಾವ ವ್ಯಕ್ತಿಗೂ ಇಲ್ಲ. ಇದರ ಬಲದಿಂದ ಮೋದಿಯವರು ಸುಳ್ಳನ್ನು ಕೂಡ ಸತ್ಯವೆಂದು ಸಾರ್ವಜನಿಕವಾಗಿ ಹೇಳಿ ದಕ್ಕಿಸಿಕೊಳ್ಳುತ್ತಲೇ ಸಾಗಿದ್ದಾರೆ. ಅಷ್ಟೇ ಅಲ್ಲ, ಆ ಸುಳ್ಳಿನ ಬಲದಿಂದಲೇ ಮೂರನೇ ಬಾರಿಗೆ ಪ್ರಧಾನಿ ಪೀಠವನ್ನೂ ಅಲಂಕರಿಸಿದ್ದಾರೆ.
ಇದನ್ನು ಓದಿದ್ದೀರಾ?: ಬಿಜೆಪಿ ಸರ್ಕಾರದ ಕೋವಿಡ್ ಅಕ್ರಮ ಬಗ್ಗೆ ಪ್ರಧಾನಿ ಮೋದಿ ತುಟಿ ಬಿಚ್ಚಲಿ: ಸಿಎಂ ಸಿದ್ದರಾಮಯ್ಯ ಆಗ್ರಹ
ನಿನ್ನೆ ಪುಣೆಯಲ್ಲಿ ಹೇಳಿರುವುದನ್ನು ಗಮನಿಸುವುದಾದರೆ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೇರಿದೆ. ಆದರೆ ಕೊಟ್ಟ ಭರವಸೆಗಳನ್ನು ಈಗ ಈಡೇರಿಸಲಾಗದೆ ರಾಜ್ಯವನ್ನು ಸುಲಿಗೆ ಮಾಡುತ್ತಿದೆ’ ಎಂದಿದ್ದಾರೆ. ಅಸಲಿಗೆ ಮೋದಿಯವರು ಕೂಡ, 2014ಕ್ಕೂ ಮುಂಚೆ, ‘ವಿದೇಶದಲ್ಲಿರುವ ಕಪ್ಪು ಹಣವನ್ನು ತರುತ್ತೇನೆ, ಒಬ್ಬೊಬ್ಬರ ಅಕೌಂಟಿಗೂ 15 ಲಕ್ಷ ಹಾಕುತ್ತೇನೆ’ ಎಂದು ಹೇಳಿದ್ದರಲ್ಲವೇ? ದೇಶದ ಜನರಲ್ಲಿ ಆಸೆ ಹುಟ್ಟಿಸಿ ಇಲ್ಲಿಗೆ 10 ವರ್ಷಗಳಾದವಲ್ಲವೇ? ಮೋದಿ ಸಾರ್ವಜನಿಕವಾಗಿ ಹೇಳಿದ ಈ ‘ಸತ್ಯ’ವನ್ನು ಅವರ ಅತ್ಯಾಪ್ತ ಗೆಳೆಯ, ಗೃಹ ಸಚಿವ ಅಮಿತ್ ಶಾ, ‘ಅದೊಂದು ಎಲೆಕ್ಷನ್ ಜುಮ್ಲಾ’ ಎಂದು ಒಪ್ಪಿಕೊಂಡರಲ್ಲವೇ?
ಹಾಗಾದರೆ ಬಿಜೆಪಿ ಮಾಡುತ್ತಿರುವುದೇನು? ದೇಶದ ಜನ ಈ ಪ್ರಶ್ನೆಯನ್ನು ಮೋದಿಯವರಿಗೆ ಕೇಳಬೇಕಲ್ಲವೇ? ಕೇಳುತ್ತಾರೆ, ಆದರೆ ಉತ್ತರ ಬರುವುದಿಲ್ಲ. ಏಕೆಂದರೆ ಅವರು ಉತ್ತರಕುಮಾರರು!
ಮೊನ್ನೆ ಮುಂಬೈನಲ್ಲಿ, ‘ಮಹಾರಾಷ್ಟ್ರ ಚುನಾವಣೆ ವೆಚ್ಚಕ್ಕಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು ಬರೋಬ್ಬರಿ 700 ಕೋಟಿಯನ್ನು ಅಬಕಾರಿ ವಲಯದಿಂದ ವಸೂಲಿ ಮಾಡಿದೆ’ ಎಂದು ಮೋದಿಯವರು ಮತ್ತೊಂದು ಬಾಣ ಬಿಟ್ಟರು. ಈ ಸುದ್ದಿ ಕೂಡ ವ್ಯಾಪಕ ಪ್ರಚಾರ ಪಡೆಯಿತು. ನಡೆಯುತ್ತಿರುವುದು ಮಹಾರಾಷ್ಟ್ರ ಚುನಾವಣೆಯಾದರೂ, ಮೋದಿಯವರ ಮಾತಿನಲ್ಲಿ ಕರ್ನಾಟಕ ಮತ್ತೆ ಮತ್ತೆ ಬರುತ್ತಿದೆ. ಸೋಜಿಗದ ಸಂಗತಿ ಎಂದರೆ, ಮಹಾರಾಷ್ಟ್ರದ ಜನತೆಯ ಮುಂದೆ ಕರ್ನಾಟಕವನ್ನು ಏಕೆ ಎಳೆದು ತರುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಮೋದಿಯವರಿಗೆ ಯಾರು ಕೇಳುವುದಿಲ್ಲ. ಏಕೆಂದರೆ, ಅತ್ತ ಕಡೆಯಿಂದ ಉತ್ತರವೇ ಬರುವುದಿಲ್ಲ.
ಮೋದಿಯವರು ಮಾಡಿದ್ದು ಗುರುತರ ಆರೋಪ ಎಂದು ಭಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿದ್ದರೆ ನಾನು ರಾಜಕೀಯ ಬಿಡುತ್ತೇನೆ. ನಮ್ಮ ವಿರುದ್ಧ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಬಿಡುತ್ತಾರೆಯೇ?’ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದು ಸುದ್ದಿ ಆಗಿದೆ. ಆದರೆ, ಯಾವುದೋ ಮೂಲೆಯಲ್ಲಿ, ಸಿಂಗಲ್ ಕಾಲಂ ಐಟಂ ಆಗಿದೆ. ಹತ್ತರಲ್ಲಿ ಹನ್ನೊಂದರಂತೆ ಬಿತ್ತರವಾಗಿದೆ. ಬಂದಷ್ಟೇ ವೇಗವಾಗಿ ಮರೆಯಾಗಿದೆ.
ಸೋಜಿಗವೆಂದರೆ, ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ನೂರೆಂಟು ಹಗರಣಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ. ಕೋವಿಡ್ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದರೂ ಕೇಳುವುದಿಲ್ಲ. ಆದರೆ ಚುನಾವಣಾ ಭಾಷಣಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಆಡಳಿತವನ್ನು ಟೀಕಿಸದೆ ಇರುವುದಿಲ್ಲ.
ಬಿಜೆಪಿಗೆ ಹತ್ತು ವರ್ಷ ಅಧಿಕಾರ ಸಿಕ್ಕಿದ್ದು, ಉತ್ತಮ ಆಡಳಿತ ನಡೆಸಲು, ದೇಶದ ಜನರ ಸ್ಥಿತಿಯನ್ನು ಉತ್ತಮಗೊಳಿಸಲು ಅಲ್ಲ; ಬದಲಿಗೆ ಇಡೀ ದೇಶವನ್ನೇ ಆವರಿಸಿಕೊಳ್ಳಲು. 40 ಪರ್ಸೆಂಟ್ ಕಮಿಷನ್ ಅನ್ನು ಚುನಾವಣಾ ಬಾಂಡ್ ನೆಪದಲ್ಲಿ, ಇಲ್ಲಿಯವರೆಗೆ ಯಾವ ಪಕ್ಷವೂ ಸಂಗ್ರಹಿಸದಷ್ಟು ಸಂಪತ್ತನ್ನು ಸಂಗ್ರಹಿಸಿದ್ದಾರೆ. ಉದ್ಯಮಪತಿಗಳಾದ ಗೌತಮ್ ಅದಾನಿ ಮತ್ತು ಅಂಬಾನಿಗಳನ್ನು ಎಡ-ಬಲಕ್ಕಿಟ್ಟುಕೊಂಡಿದ್ದಾರೆ. ಅವರ ಉದ್ಯಮಕ್ಕೆ ಅನುಕೂಲವಾಗುವಂತೆ ಸರ್ಕಾರದ ರೀತಿ-ನೀತಿಗಳನ್ನು ತಿದ್ದಿದ್ದಾರೆ. ಮಣಿಪುರ ಹತ್ತಿ ಉರಿದರೂ ಮಾತನಾಡದಂತಾಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಕಟುವಾಗಿ ಟೀಕಿಸುತ್ತಲೇ, ವಿರೋಧ ಪಕ್ಷದ ಭ್ರಷ್ಟರ ಮೇಲೆ ಐಟಿ, ಸಿಬಿಐ, ಇಡಿ ದಾಳಿ ಮಾಡಿಸಿ, ಪ್ರಚಾರ ಪಡೆದು, ಸ್ವಲ್ಪ ಸಮಯದ ನಂತರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಾರಾ ಖೂನ್ ಮಾಫ್ ಮಾಡಿದ್ದಾರೆ. ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಉರುಳಿಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಒಡೆದು ಛಿದ್ರ ಮಾಡಿದ್ದಾರೆ.
ಇದೆಲ್ಲವನ್ನು ಮುಚ್ಚಿಕೊಳ್ಳಲು ಐಟಿ ಸೆಲ್ ಎಂಬ ನುರಿತ ತಂತ್ರಜ್ಞರನ್ನೊಳಗೊಂಡ ಬಹುದೊಡ್ಡ ಕಾರ್ಖಾನೆಯನ್ನೇ ಸ್ಥಾಪಿಸಿದ್ದಾರೆ. ಅದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ. ಸುಳ್ಳು ಸೃಷ್ಟಿಸುವ ಆ ಕಾರ್ಖಾನೆ ಬಹುತ್ವ ಭಾರತವನ್ನು ಛಿದ್ರ ಮಾಡುವಲ್ಲಿ, ನಾವು ನಂಬಿದ ವ್ಯಕ್ತಿಗಳ ವಿಚಾರಧಾರೆಯನ್ನು ಹೊಡೆಯುವುದರಲ್ಲಿ, ಪ್ರತಿಯೊಂದನ್ನು ಬಲಪಂಥೀಯಕ್ಕೆ ಬಗ್ಗಿಸುವುದರಲ್ಲಿ, ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚುವುದರಲ್ಲಿ ನಿರತವಾಗಿದೆ. ಜೊತೆಗೆ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವಲ್ಲಿ, ನಾಯಕರ ವ್ಯಕ್ತಿತ್ವಹರಣ ಮಾಡುವುದರಲ್ಲಿ, ಹಿಂದು-ಮುಸ್ಲಿಮರ ನಡುವೆ ದ್ವೇಷಾಸೂಯೆ ಬಿತ್ತುವುದರಲ್ಲಿ, ಮತ ಬೆಳೆ ತೆಗೆಯುವುದರಲ್ಲಿ ನಿಸ್ಸೀಮರೆನಿಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಕೋವಿಡ್ ಹಗರಣ | 1.2 ಲಕ್ಷ ಜನರ ಸಾವಿನ ಮಾಹಿತಿಯನ್ನೇ ಮುಚ್ಚಿಟ್ಟಿದ್ದ ಬಿಜೆಪಿ ಸರ್ಕಾರ
ವಿರೋಧ ಪಕ್ಷಗಳಿಗೆ ಇದೆಲ್ಲ ಗೊತ್ತಿಲ್ಲವೇ? ಅವರ ಬಳಿ ಹಣ-ಅಧಿಕಾರವಿಲ್ಲವೇ? ಅವರಲ್ಲಿ ಯಾರೂ ಬುದ್ಧಿವಂತರಿಲ್ಲವೇ? ಎಲ್ಲವೂ ಇದೆ. ಆದರೆ, ಬಳಸಿಕೊಳ್ಳುವ ಜಾಣ್ಮೆ ಗೊತ್ತಿಲ್ಲ. ಗೊತ್ತಿದ್ದರೆ, ಬಿಜೆಪಿ ಕೊಳಕರನ್ನು ಕಂಬಿ ಹಿಂದೆ ಕೂರಿಸಲು ಒಂದೂವರೆ ವರ್ಷ ಬೇಕಾಗಿತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ? ಕಾಂಗ್ರೆಸ್ಸಿಗರ ಸಾಫ್ಟ್ ಹಿಂದುತ್ವವೇ ಈಗ ಅವರ ಬುಡಕ್ಕೆ ಬಿಸಿ ನೀರು ಬಿಡುತ್ತಿದೆ. ಮೋದಿ ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ಸದ್ಯಕ್ಕೆ ಉತ್ತರಕುಮಾರನ ಪೌರುಷ ಚುನಾವಣಾ ಪ್ರಚಾರ ಭಾಷಣಗಳಲ್ಲಿ, ದೇಶದ ಜನರ ಮುಂದೆ ಎಂಬಂತಾಗಿದೆ. ದೇಶದ ಜನ ಜಾಗೃತರಾದರೆ, ಉತ್ತರಕುಮಾರನಿಗೂ ಉತ್ತರ ಕೊಡುವಂತಾದರೆ, ಮೋದಿ ಕಾಲವೂ ಮುಗಿಯಲಿದೆ. ಕಾಯೋಣ…

ಲೇಖಕ, ಪತ್ರಕರ್ತ