ಬೀದರ್‌ | ಮತದಾರರ ಸೆಳೆಯಲು ಸಾಮಾಜಿಕ ಜಾಲತಾಣ ಪರಿಣಾಮಕಾರಿ ಬಳಕೆ

Date:

Advertisements

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಲಕ್ಷಾಂತರ ಜನರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ ಎಂಬುದು ಅಲ್ಲಗಳೆಯುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಂದೇಶವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಕಣದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 12 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12 ರಿಂದ 19ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಜರುಗಲಿದೆ. ಏ. 20 ರಂದು ನಾಮಪತ್ರ ಪರಿಶೀಲನೆ ಹಾಗೂ ಉಮೇದಾರಿಕೆ ಹಿಂಪಡೆಯಲು ಏ.22 ಕೊನೆಯ ದಿನವಾಗಿದೆ.

Advertisements

ಈ ಹಿನ್ನಲೆಯಲ್ಲಿ ಪ್ರಚಾರ ಕ್ರಮೇಣವಾಗಿ ಚುರುಕು ಪಡೆದುಕೊಳ್ಳುತ್ತಿದ್ದು ಪ್ರಸ್ತುತ ಎಲ್ಲರ ಅಚ್ಚುಮೆಚ್ಚಿನ ಸಾಮಾಜಿಕ ಜಾಲತಾಣಗಳನ್ನು ಎಲ್ಲ ಅಭ್ಯರ್ಥಿಗಳು ಪ್ರಚಾರ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.  ಅದರಲ್ಲೂ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಅವರನ್ನು ತಮ್ಮತ್ತ ಸೆಳೆಯಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ವಾಟ್ಸ್‌ಆಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದು ತಮ್ಮ ಸಾಧನೆ, ಚಿಂತನೆ, ಅಭಿವೃದ್ಧಿ ಕೆಲಸಗಳನ್ನು ಪ್ರಚುರಪಡಿಸುತ್ತಿದ್ದಾರೆ. ಬೀದರ್‌ ಲೋಕಸಭಾ ವ್ಯಾಪ್ತಿಯ ಬೀದರ್‌, ಬೀದರ್‌ ದಕ್ಷಿಣ, ಔರಾದ, ಬಸವಕಲ್ಯಾಣ, ಹುಮನಾಬಾದ್‌, ಬಸವಕಲ್ಯಾಣ, ಚಿಂಚೋಳಿ ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಮುಂದಿನ ಎರಡ್ಮೂರು ದಿನ ಎಲ್ಲಿ ಪ್ರಚಾರ ಮಾಡಲಾಗುತ್ತದೆ ಎಂಬ ವಿಷಯವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈಗಾಗಲೇ ಟಿಕೆಟ್‌ ಖಚಿತಪಡಿಸಿಕೊಂಡಿರುವ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭ, ಸಮಾವೇಶ ನಡೆಯುವ ಸ್ಥಳ, ಸಮಯ, ದಿನಾಂಕ, ಮಾರ್ಗ ಮಧ್ಯೆ ಭೇಟಿಯಾದವರ ಫೋಟೊಗಳನ್ನು ಪ್ರತಿನಿತ್ಯ ತಮ್ಮ ಸಾಮಾಜಿಕ ತಾಣದಲ್ಲಿ ಅಪ್‌ಡೆಟ್ ಮಾಡುತ್ತಿದ್ದಾರೆ. ಪ್ರಚಾರ ನಿಮಿತ್ತ ತಾವು ಭೇಟಿ ನೀಡಿದ್ದ ಓಣಿ, ಜಾತ್ರೆ, ದೇವಸ್ಥಾನ, ದರ್ಗಾ, ಮಠ, ಸಭೆ, ಉತ್ಸವಗಳಲ್ಲಿ ಭಾಗವಹಿಸಿ ಅಲ್ಲಿಯೂ ಮತಬೇಟೆ ನಡೆಸಿದ ಫೋಟೊ ಹಾಗೂ ಮಾಹಿತಿ ಹಾಕುವುದು ಸಾಮಾನ್ಯವಾಗಿದೆ.

ಹಾಲಿ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರು ತಮ್ಮ ಫೇಸ್‌ಬುಕ್‌, ಎಕ್ಸ್‌ ಖಾತೆಗಳಲ್ಲಿ ಪ್ರಚಾರದ ವಿಡಿಯೋ, ಫೋಟೊ ಹಾಗೂ ಪತ್ರಿಕಾ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ತಮ್ಮ ಎರಡು ಅವಧಿಯ ಕಾರ್ಯ ಸಾಧನೆಗಳ ಅಂಕಿಅಂಶಗಳ ವಿಡಿಯೋ, ಪೋಸ್ಟರ್‌ ಮಾಹಿತಿ ಶೇರ್‌ ಮಾಡುತ್ತಿದ್ದಾರೆ. ಜೊತೆಗೆ ʼದೇಶಕ್ಕೆ ಮೋದಿ, ಬೀದರ್‌ಗೆ ಖೂಬಾʼ ಎಂಬ ಪೋಸ್ಟರ್‌ ಶೇರ್‌ ಮಾಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ನಾಮ ಜಪಿಸುತ್ತ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಪುತ್ರ ಸಾಗರ್‌ ಖಂಡ್ರೆ‌ ರಾಜ್ಯ ಸರ್ಕಾರದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಪ ಜೊತೆಗೆ ತಾತ ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಹಾಗೂ ತಂದೆ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಜನರ ಮುಂದಿಟ್ಟಿ ‘ನನಗೂ ಒಂದು ಅವಕಾಶ ಕೊಡಿʼ ಎಂದು‌ ತಮ್ಮ ಕುಟುಂಬದ ವರ್ಚಸ್ಸು ಹಾಗೂ ಹೊಸ ಆಶ್ವಾಸನೆ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ರಾಜಕೀಯ ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ಸಾಧನೆಗಳು ಮತದಾರರಿಗೆ ಸುಲಭವಾಗಿ ತಿಳಿಸಲು ಸಾಮಾಜಿಕ ತಾಣಗಳು ಪರಿಣಾಮಕಾರಿ ಮಾಧ್ಯಮ. ಅದರಲ್ಲೂ ಯುವ ಮತದಾರರನ್ನು ಸೆಳೆಯಲು ಇವುಗಳಿಗಿಂತ ಬೇರೆ ಸೂಕ್ತ ವೇದಿಕೆ ಇಲ್ಲ. ಅದನ್ನೇ ಅರಿತು ಊರು, ಬ್ಲಾಕ್‌ ಸೇರಿದಂತೆ ವಿಧಾನಸಭಾ ಕ್ಷೇತ್ರವಾರು ವಾಟ್ಸ್‌ಆಪ್‌ ಗ್ರೂಪ್‌ಗಳನ್ನು ತೆರೆದು ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬೆಂಬಲಿಗರು ತಮ್ಮ ಪ್ರತಿದಿನದ ರಾಜಕೀಯ ಕಾರ್ಯಚಟುವಟಿಕೆಗಳು ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಜಗಜ್ಜಾಹೀರಾಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿರ ಈಶ್ವರ ಖಂಡ್ರೆ ಅವರು ಈ ಬಾರಿ ತಮ್ಮ ಮಗ ಸಾಗರ್‌ ಖಂಡ್ರೆ ಅವರನ್ನು ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ಕಣಕ್ಕೆ ಇಳಿಸಿದ್ದಾರೆ. ಈ ಬಾರಿ ಶತಾಯಗತಾಯ ಮಗನನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಕ್ಷೇತ್ರದಲ್ಲಿ ಮಗನೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಪ್ರಚಾರದ ವಿಷಯಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಲ್ಲಿಯೂ ಮತಬೇಟೆ ನಡೆಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವರಾದ ಭಗವಂತ ಖೂಬಾ 201ಕೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರು 17ಕೆ ಹಿಂಬಾಲಕರನ್ನು ಹೊಂದಿದ್ದಾರೆ. ಈ ಹಿಂದೆ ಸಾಗರ್‌ ಖಂಡ್ರೆ ಅವರ ಟ್ವಿಟರ್‌ ಹಾಗೂ ಫೇಸ್‌ಬುಕ್ ಪುಟ ಇದ್ದರೂ ಸಹ ಹೆಚ್ಚಿನ ಹಿಂಬಾಲಕರು ಹೊಂದಿರಲಿಲ್ಲ. ಆದರೆ ಲೋಕಸಭಾ ಟಿಕೆಟ್‌ ಘೋಷಣೆಯಾದ ಬಳಿಕ ತಮ್ಮ ಎಲ್ಲ ಸಾಮಾಜಿಕ ತಾಣಗಳ ಪುಟಗಳು ಫುಲ್‌ ಆಕ್ಟಿವ್‌ ಮಾಡಿದ್ದಾರೆ. ಈಗ ದಿನದಿಂದ ದಿನಕ್ಕೆ ಹಿಂಬಾಲಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ತಮ್ಮ ನಾಯಕರ ಕುರಿತು ವಾಟ್ಸ್‌ಆಪ್ , ಫೇಸ್‌ಬುಕ್ ಖಾತೆಗಳು ತೆರೆದು ದಿನನಿತ್ಯದ ರಾಜಕೀಯ ಚಟುವಟಿಕೆಗಳು ಅಪ್‌ಡೆಟ್ ಮಾಡುವ ಮೂಲಕ ಪ್ರಚಾರಕ್ಕೆ ಕೈಜೋಡಿಸಿ ಬೂತ್‌ ಮಟ್ಟದ ಕಾರ್ಯಕರ್ತರಿಗೆ ಸುದ್ದಿ ತಲುಪಿಸಲು ಸಹಕರಿಸುತ್ತಿದ್ದಾರೆ. ಸದ್ಯದ ವ್ಯವಸ್ಥೆಯಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಚುನಾವಣಾ ಪ್ರಚಾರ ಎರಡೂ ಮುಖ್ಯ. ಆಫ್‌ಲೈನ್‌ ಮೂಲಕ ಸಭೆ, ಸಮಾರಂಭ, ಬೀದಿ ಪ್ರಚಾರ ಮೂಲಕ ಎಲ್ಲ ವರ್ಗದ ಜನರನ್ನು ತಲುಪಲು ಸಾಧ್ಯ, ಆನ್‌ಲೈನ್‌ ಮೂಲಕ ಯುವ ಸಮೂಹ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಎಲ್ಲ ವರ್ಗದ ಲಕ್ಷಾಂತರ ಜನರನ್ನು ತಲುಪಬಹುದು ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಚಾರ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | ದೂರುದಾರನ ಹಿನ್ನೆಲೆ ತಿಳಿದುಕೊಂಡಿದ್ದರೆ ಸರ್ಕಾರದ ದುಡ್ಡು ಉಳೀತಿತ್ತು: ಆರ್. ಅಶೋಕ್

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ದೂರು ಕೊಟ್ಟಿದ್ದ ಸಾಕ್ಷಿ ದೂರುದಾರನನ್ನು...

ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31...

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

Download Eedina App Android / iOS

X