ಚುನಾವಣಾ ಬಾಂಡ್ | ಲಾಭ ಮೀರಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಕಂಪನಿಗಳು: ಯಾವ ಪಕ್ಷ ಎಷ್ಟು ಪಡೆದಿದೆ?

Date:

ಸದ್ಯ ಇಡೀ ದೇಶದಲ್ಲಿ ಚುನಾವಣಾ ಬಾಂಡ್‌ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಜನಸಾಮಾನ್ಯರಿಗೆ ಈ ಚುನಾವಣಾ ಬಾಂಡ್ ಎಂದರೆ ಏನು? ಎಂಬ ಬಗ್ಗೆ ಸರಿಯಾದ ಮಾಹಿತಿ ಕೊರತೆ ಇದೆ. ಬಹುತೇಕರಿಗೆ ಈ ಬಾಂಡ್‌ಗಳ ಪೂರ್ವಾಪರ ಗೊತ್ತಿಲ್ಲ. ಆದ್ದರಿಂದಲೇ ಈ ರಾಜಕೀಯ ಪಕ್ಷಗಳು, ಆಳುವ ಸರ್ಕಾರ ಹಾಗೂ ಬಂಡವಾಳಶಾಹಿಗಳು ಜನರ ಕಣ್ಣಿಗೆ ಮಂಕೂಬೂದಿ ಎರಚಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿವೆ.

2019-20ರ ಹಣಕಾಸು ವರ್ಷದಲ್ಲಿ ಪಶ್ಚಿಮ ಬಂಗಾಳ ಮೂಲದ ಎಫ್‌ಎಂಸಿಜಿ ಕಂಪನಿ – ಕೆವೆಂಟರ್ ಫುಡ್‌ಪಾರ್ಕ್ ಇನ್‌ಫ್ರಾ ಲಿಮಿಟೆಡ್ ತನ್ನ ಲಾಭದ 150 ಪಟ್ಟು ಹೆಚ್ಚು ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಿದೆ. ಇದಷ್ಟೇ ಅಲ್ಲದೇ, ಚುನಾವಣಾ ಬಾಂಡ್‌ನ ಗರಿಷ್ಠ ಪಾಲನ್ನು ಬಿಜೆಪಿಗೆ ನೀಡಿದೆ. ಈ ಬಗ್ಗೆ ಮಾರ್ಚ್ 21 ರಂದು ಚುನಾವಣಾ ಆಯೋಗವು ಬಹಿರಂಗಪಡಿಸಿದ ಅಂಕಿಅಂಶಗಳು ತೋರಿಸುತ್ತವೆ.

“ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ಪಡೆದಿರುವ ಬಿಜೆಪಿ, ಬೃಹತ್ ಮೊತ್ತದ ಯೋಜನೆಗಳನ್ನು ತಮಗೆ ಹಣ ನೀಡಿದ ಕಂಪನಿಗಳಿಗೆ ಕೊಟ್ಟಿದೆ. ಹಲವು ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿ, ತನಿಖಾ ಸಂಸ್ಥೆಗಳ ತನಿಖೆಯಿಂದ ತಪ್ಪಿಸಿಕೊಂಡಿದ್ದಾರೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“33 ಕಂಪನಿಗಳು ಬಿಜೆಪಿಗೆ ₹1,751 ಕೋಟಿ ದೇಣಿಗೆ ನೀಡಿ, ₹3.7 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಗುತ್ತಿಗೆ ಪಡೆದಿವೆ. ತನಿಖಾ ಸಂಸ್ಥೆಗಳ ತನಿಖೆಯಿಂದ ತಪ್ಪಿಸಿಕೊಳ್ಳಲು 41 ಕಂಪನಿಗಳು ಬಿಜೆಪಿಗೆ ₹2,471 ಕೋಟಿ ದೇಣಿಗೆ ನೀಡಿವೆ. ಈ ಹಣದಲ್ಲಿ ಅರ್ಧದಷ್ಟು ಮೊತ್ತವು ಇಡಿ/ಐಟಿ ದಾಳಿಗಳ ಬಳಿಕ ಬಿಜೆಪಿಗೆ ಬಂದಿದೆ” ಎಂದು ತಿಳಿಸಿದ್ದಾರೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಮಾರ್ಚ್ 21ರೊಳಗೆ ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಡಕ್‌ ಆಗಿ ಸೂಚನೆ ನೀಡಿತ್ತು. ಅಲ್ಲದೇ, ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಾನಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಲಿಂಕ್‌ ಮಾಡುವ ಆಲ್ಫಾನ್ಯೂಮರಿಕ್‌ ಸೀರಿಯಲ್‌ ಕೋಡ್‌ ಸಹಿತ ಚುನಾವಣಾ ಬಾಂಡ್‌ಗಳ ಕುರಿತಾದ ಎಲ್ಲ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೂಚನೆ ನೀಡಿತ್ತು.

ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಾನಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಲಿಂಕ್‌ ಮಾಡುವ ಆಲ್ಫಾನ್ಯೂಮರಿಕ್‌ ಸೀರಿಯಲ್‌ ಕೋಡ್‌ ಸಹಿತ ಸಂಪೂರ್ಣ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿದೆ.

ಕನಿಷ್ಠ 15 ಕಂಪನಿಗಳು (ದೊಡ್ಡ ಮತ್ತು ಸಣ್ಣ) ಈಗ ನಿಷೇಧಿತ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ದೇಣಿಗೆ ನೀಡಿವೆ.

ಎಮ್‌ಕೆಜೆ ಗ್ರೂಪ್

ಪಶ್ಚಿಮ ಬಂಗಾಳ ಕೋಲ್ಕತ್ತಾದ ಹೆಸರಾಂತ ಕೈಗಾರಿಕೋದ್ಯಮಿ ಮಹೇಂದ್ರ ಕುಮಾರ್ ಜಲನ್ ಅವರು ಎಮ್‌ಕೆಜಿ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಮಹೇಂದ್ರ ಕುಮಾರ್ ಜಲನ್ ನೇತೃತ್ವದಲ್ಲಿ  ಎಮ್‌ಕೆಜೆ ಗ್ರೂಪ್‌ 2019 ಮತ್ತು 2023ರ ನಡುವೆ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿಗೆ ಬರೋಬ್ಬರಿ ₹192.42 ಕೋಟಿ ದೇಣಿಗೆ ನೀಡಿದೆ.

ಆರ್ಥಿಕ ವರ್ಷ 2019ರಲ್ಲಿ ಕಂಪನಿಯು ₹5.03 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಆದರೆ, ತನಗೆ ಬಂದ ಲಾಭಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಅಂದರೆ, ಬರೋಬ್ಬರಿ ₹14.4 ಕೋಟಿಯನ್ನು ಬಿಜೆಪಿಗೆ ದೇಣಿಗೆ ನೀಡಿದೆ.

ಇನ್ನು 2022ರಲ್ಲಿ ಸಂಸ್ಥೆಯು ₹62.9 ಕೋಟಿ ಲಾಭ ಗಳಿಸಿದೆ. ಆದರೆ, ಸುಮಾರು ₹30 ಕೋಟಿ ಕಾಂಗ್ರೆಸ್‌ಗೆ ಮತ್ತು ₹20 ಕೋಟಿ ಟಿಎಂಸಿಗೆ ದೇಣಿಗೆ ನೀಡಿದೆ.

2023ರಲ್ಲಿ ಎಂಕೆಜೆ ಗ್ರೂಪ್ ₹54.1 ಕೋಟಿ ಕಾಂಗ್ರೆಸ್‌ಗೆ ದೇಣಿಗೆ ನೀಡಿದೆ. ನಂತರ ಬಿಜೆಪಿಗೆ ₹16.5 ಕೋಟಿ ದೇಣಿಗೆ ನೀಡಿದೆ.

ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್

ಕೆವೆಂಟರ್ ವೆಬ್‌ಸೈಟ್‌ನಲ್ಲಿ ಜಲನ್ ಅಧ್ಯಕ್ಷ ಎಮೆರಿಟಸ್ ಎಂದು ಪಟ್ಟಿಮಾಡಲಾಗಿದೆ. ಕೋಲ್ಕತ್ತಾ ಮೂಲದ ಈ ಕಂಪನಿಯು 2019ರಲ್ಲಿ ₹195 ಕೋಟಿ ದೇಣಿಗೆ ನೀಡಿದೆ. ಇದರಲ್ಲಿ ಸಿಂಹಪಾಲು ₹144.5 ಕೋಟಿ ಅಥವಾ ಸುಮಾರು ಮುಕ್ಕಾಲು ಭಾಗದಷ್ಟು ಬಾಂಡ್‌ಗಳನ್ನು ಬಿಜೆಪಿ ಪಡೆದಿದೆ.

ಅದೇ ಹಣಕಾಸು ವರ್ಷದಲ್ಲಿ, ಸಂಸ್ಥೆಯ ಲಾಭವು ₹12.4 ಲಕ್ಷ. ಅಂದರೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಮೊತ್ತದ 0.0006%ರಷ್ಟು ಮಾತ್ರ. ಕೆವೆಂಟರ್ ಫುಡ್ ಪಾರ್ಕ್ ಕೂಡ 2019ರಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿಗೆ ತಲಾ ₹20 ಕೋಟಿ ದೇಣಿಗೆ ನೀಡಿದೆ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿ: ಲೈಂಗಿಕ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಮನವಿ ಮಾಡಿದ ಸಿಬ್ಬಂದಿ

ಮದನಲಾಲ್‌ ಲಿಮಿಟೆಡ್

ಎಮ್‌ಕೆಜೆ ಎಂಟರ್‌ಪ್ರೈಸಸ್‌ ಕಂಪನಿ ಇರುವ ವಿಳಾಸದಲ್ಲಿಯೇ ನೋಂದಾಯಿಸಲ್ಪಟ್ಟಿರುವ ಮದನ್‌ಲಾಲ್ ಲಿಮಿಟೆಡ್, 2019ರಲ್ಲಿ ₹185 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. ಅದರಲ್ಲಿ 95%ಅನ್ನು ಬಿಜೆಪಿಗೆ ದೇಣಿಗೆ ನೀಡಿದೆ. ಉಳಿದ ಶೇ.5 ಅಂದರೆ, ₹10 ಕೋಟಿಯನ್ನು ಕಾಂಗ್ರೆಸ್‌ಗೆ ದೇಣಿಗೆ ನೀಡಿದೆ.

ಆರ್ಥಿಕ ವರ್ಷ 2019-20ಕ್ಕೆ ಆ ಕಂಪನಿಯ ಲಾಭವು ₹1.84 ಕೋಟಿ. ಅಂದರೆ, ಸಂಸ್ಥೆಯು ತನ್ನ ಲಾಭದ 100 ಪಟ್ಟು ಹೆಚ್ಚು ಹಣವನ್ನು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದೆ.

ಎಂಕೆಜೆ ಎಂಟರ್‌ಪ್ರೈಸಸ್, ಕೆವೆಂಟರ್ ಕ್ಯಾಪಿಟಲ್ ಮತ್ತು ಕೆವೆಂಟರ್ ಪ್ರಾಜೆಕ್ಟ್‌ಗಳ ನಿರ್ದೇಶಕರ ಮಂಡಳಿಯಲ್ಲಿರುವ ಸಿದ್ಧಾರ್ಥ್ ಗುಪ್ತಾ ಅವರು ಮದನ್‌ಲಾಲ್‌ನಲ್ಲಿಯೂ ನಿರ್ದೇಶಕರಾಗಿದ್ದಾರೆ.

ಸಾಸ್ಮಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್

ಮತ್ತೊಂದು ಕಂಪನಿ, ಸಾಸ್ಮಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮಂಡಳಿಯಲ್ಲಿರುವ ಮಹೇಂದ್ರ ಕುಮಾರ್ ಜಲನ್ ಅವರು ಕಾಂಗ್ರೆಸ್‌ಗೆ ₹39 ಕೋಟಿ ಮತ್ತು ಬಿಜೆಪಿಗೆ ₹5 ಕೋಟಿ ದೇಣಿಗೆ ನೀಡಿದ್ದಾರೆ.

ನವಯುಗ ಎಂಜಿನಿಯರಿಂಗ್ ಕಂಪನಿ ಲಿ.

ನವಯುಗ ಎಂಜಿನಿಯರಿಂಗ್ ಕಂಪನಿ ನಿರ್ಮಾಣ ಗುತ್ತಿಗೆ ಪಡೆದಿದ್ದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗವು 2023ರ ನವೆಂಬರ್ 12ರಂದು ಕುಸಿದು 41 ಕಾರ್ಮಿಕರು 16 ದಿನಗಳಿಗೂ ಹೆಚ್ಚು ಕಾಲ ಸುರಂಗದ ಅವಶೇಷದೊಳಗೆ ಸಿಲುಕಿಕೊಂಡಿದ್ದರು. ಈ ಕಂಪನಿ ₹55 ಕೋಟಿ ಮೌಲ್ಯದ ತನ್ನ ಎಲ್ಲ ಚುನಾವಣಾ ಬಾಂಡ್‌ಗಳನ್ನು ಎರಡು ಹಂತಗಳಲ್ಲಿ ಬಿಜೆಪಿಗೆ ದೇಣಿಗೆ ನೀಡಿದೆ. 2019ರಲ್ಲಿ ₹45 ಕೋಟಿ ಮತ್ತು 2022ರಲ್ಲಿ ₹10 ಕೋಟಿ ದೇಣಿಗೆ ನೀಡಿದೆ. ಆದಾಗ್ಯೂ, ಕಳೆದ ನಾಲ್ಕು ವರ್ಷಗಳಲ್ಲಿ ನವಯುಗ ಎಂಜಿನಿಯರಿಂಗ್ ₹495 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ.

ಹೈದರಾಬಾದ್ ಮೂಲದ ಸಂಸ್ಥೆಯು ಅಸ್ಸಾಂನ ಬ್ರಹ್ಮಪುತ್ರ ನದಿಯ ಮೇಲೆ ಧೋಲಾ-ಸಾಡಿಯಾ ಸೇತುವೆ ಸೇರಿದಂತೆ ಹಲವು ‘ಐಕಾನಿಕ್ ಯೋಜನೆಗಳ’ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದರು.

ನವಯುಗ ಗ್ರೂಪ್‌ನ ಅಂಗಸಂಸ್ಥೆಯಾಗಿದ್ದ ಕೃಷ್ಣಪಟ್ಟಣಂ ಪೋರ್ಟ್ ಕೋ ಲಿಮಿಟೆಡ್‌ಅನ್ನು 2021ರ ಏಪ್ರಿಲ್‌ನಲ್ಲಿ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ ₹2,800 ಕೋಟಿಗೆ ಸ್ವಾಧೀನಕ್ಕೆ ಪಡೆದಿದೆ ಎಂಬುದು ಗಮನಾರ್ಹ.

ಐಎಫ್‌ಬಿ ಅಗ್ರೋ ಇಂಡಸ್ಟ್ರೀಸ್ ಲಿಮಿಟೆಡ್

ಕೋಲ್ಕತ್ತಾ ಮೂಲದ ಐಎಫ್‌ಬಿ ಆಗ್ರೋ ಇಂಡಸ್ಟ್ರೀಸ್ – ಸಮುದ್ರ ಆಹಾರ ಉತ್ಪನ್ನ (ಸೀ ಫುಡ್) ಸಂಸ್ಕರಣಾ ಸಂಸ್ಥೆಯಾಗಿದೆ. ಪಶ್ಚಿಮ ಬಂಗಾಳದಾದ್ಯಂತ ಐಎಂಐಎಲ್ ಬಾಟ್ಲಿಂಗ್ ಘಟಕಗಳನ್ನ ಹೊಂದಿದೆ. ಈ ಕಂಪನಿ 2021 ಮತ್ತು 2023ರ ನಡುವೆ ಟಿಎಂಸಿಗೆ ₹42 ಕೋಟಿ ಅಥವಾ ತಾನು ಖರೀದಿಸಿದ ಅರ್ಧದಷ್ಟು ಚುನಾವಣಾ ಬಾಂಡ್‌ಗಳನ್ನು ದೇಣಿಗೆ ನೀಡಿದೆ.

ಇದರ ನಂತರ 2023 ಮತ್ತು ಜನವರಿ 2024ರ ನಡುವೆ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ₹35 ಕೋಟಿ ದೇಣಿಗೆ ನೀಡಿದೆ.

ಅಮಿತಾಭ್ ಮುಖೋಪಾಧ್ಯಾಯ ಅವರ ನೇತೃತ್ವದ ಈ ಕಂಪನಿ ಕಳೆದ ನಾಲ್ಕು ವರ್ಷಗಳಲ್ಲಿ ₹175.8 ಕೋಟಿ ನಿವ್ವಳ ಲಾಭ ಗಳಿಸಿದೆ. ಅದರ ಲಾಭದ ಅರ್ಧದಷ್ಟು ಅಂದರೆ, ₹92.3 ಕೋಟಿ ಮೌಲ್ಯದ ‘ಎಲೆಕ್ಟೋರಲ್ ಬಾಂಡ್‌’ಗಳನ್ನು ಖರೀದಿಸಿದೆ.

ಇನ್ಫೋಟೆಲ್ ಗ್ರೂಪ್

ಅಂಬಾನಿಯವರ ಹಳೆಯ ವ್ಯಾಪಾರ ಸಹವರ್ತಿ ಜೊತೆ ಸಂಪರ್ಕ ಹೊಂದಿದ್ದ ಇನ್ಫೋಟೆಲ್ ಗ್ರೂಪ್‌ ತಾನು ಖರೀದಿಸಿದ ಎಲ್ಲ ಬಾಂಡ್‌ಗಳನ್ನು ಬಿಜೆಪಿಗೆ ನೀಡಿದೆ.

ಈ ಗ್ರೂಪ್‌ನ ಅಂಗಸಂಸ್ಥೆಗಳಾದ ಇನ್ಫೋಟೆಲ್ ಆಕ್ಸೆಸ್‌ ಎಂಟರ್‌ಪ್ರೈಸಸ್‌ ಪ್ರೈವೇಟ್ ಲಿಮಿಟೆಡ್, ಇನ್ಫೋಟೆಲ್ ಬಿಸಿನೆಸ್ ಸೊಲುಶನ್ ಲಿಮಿಟೆಡ್ ಹಾಗೂ ಇನ್ಫೋಟೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು 2019ರಲ್ಲಿ ₹30 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿವೆ. ಆ ಎಲ್ಲ ಬಾಂಡ್‌ಗಳನ್ನು ಬಿಜೆಪಿಗೆ ದಾನ ಮಾಡಿವೆ.

ಇವುಗಳಲ್ಲಿ ಇನ್ಫೋಟೆಲ್ ಟೆಕ್ನಾಲಜೀಸ್ ಬಿಜೆಪಿಗೆ ₹10 ಕೋಟಿ ದೇಣಿಗೆ ನೀಡಿದ್ದು, ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ₹14.3 ಕೋಟಿ ನಿವ್ವಳ ಲಾಭ ಗಳಿಸಿದೆ. ಅಂದರೆ, ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ತನ್ನ ನಿವ್ವಳ ಲಾಭದ ಸುಮಾರು 70%ಅನ್ನು ಬಿಜೆಪಿಗೆ ದೇಣಿಗೆ ನೀಡಿದೆ.

ಇನ್ಫೋಟೆಲ್ ಟೆಕ್ನಾಲಜೀಸ್ ಕಂಪನಿಯು ಕಮಲ್ ಕುಮಾರ್ ಶರ್ಮಾ, ಅಖಿಲೇಶ್ ತ್ರಿಪಾಠಿ ಮತ್ತು ನಿತಿನ್ ವೇದ್ ಎಂಬ ಮೂವರು ನಿರ್ದೇಶಕರನ್ನು ಹೊಂದಿದೆ. ಕಮಲ್ ಕುಮಾರ್ ಶರ್ಮಾ ಅವರ ಮೂಲಕ ಈ ಕಂಪನಿಯು ಮುಖೇಶ್ ಅಂಬಾನಿಯವರ ಹಳೆಯ ವ್ಯಾಪಾರ ಸಹವರ್ತಿ ಸುರೇಂದ್ರ ಲೂನಿಯಾ ಅವರೊಂದಿಗೆ ಸಂಪರ್ಕ ಹೊಂದಿದೆ. ಕಮಲ್ ಕುಮಾರ್ ಅವರು ಲೂನಿಯಾದ ಇನ್ಫೋಟೆಲ್ ಗುಂಪಿನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಫ್‌ಒ ಆಗಿದ್ದಾರೆ.

ಚೆನ್ನೈ ಗ್ರೀನ್ ವುಡ್ಸ್ ಪ್ರೈ. ಲಿ.

ಹೈದರಾಬಾದ್ ಮೂಲದ ಚೆನ್ನೈ ಗ್ರೀನ್ ವುಡ್ಸ್ ಪ್ರೈ. ಲಿ. ನಿರ್ಮಾಣ ಕಂಪನಿಯು ಕಳೆದ ನಾಲ್ಕು ಆರ್ಥಿಕ ವರ್ಷಗಳಲ್ಲಿ ₹36.6 ಕೋಟಿ ಲಾಭವನ್ನು ಗಳಿಸಿದೆ. ಲಾಭ ಗಳಿಸಿದ ಸುಮಾರು ಮೂರು ಪಟ್ಟು ಮೊತ್ತವನ್ನು ಅಂದರೆ, ₹105 ಕೋಟಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.

ಈ ಸಂಸ್ಥೆಯು ರಾಮ್‌ಕಿ ಗ್ರೂಪ್‌ನ ಒಡೆತನದಲ್ಲಿದೆ. ವೈಎಸ್‌ಆರ್‌ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಅಯೋಧ್ಯಾ ರಾಮಿ ರೆಡ್ಡಿ ಈ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ವರ್ಷ 2021-22ರಲ್ಲಿ ಈ ಕಂಪನಿಯೂ ₹14.15 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.

2022 ಜನವರಿಯಲ್ಲಿ, ಕಂಪನಿಯು ₹50 ಕೋಟಿ ದೇಣಿಗೆ ನೀಡಿದೆ. ಇದು ಅದರ ಲಾಭದ 3.5 ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಈ ದೇಣಿಗೆಯನ್ನು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಗೆ ನೀಡಿದೆ.

ಅದು ಬಾಂಡ್‌ಗಳನ್ನು ಖರೀದಿಸುವ ಆರು ತಿಂಗಳ ಮುಂಚೆ, ಅಂದರೆ, ಜುಲೈ 2021ರಲ್ಲಿ ಚೆನ್ನೈ ಗ್ರೀನ್ ವುಡ್ಸ್‌ಗೆ ಸಂಬಂಧಿಸಿದ 15 ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು.

ಈ ಸಂಸ್ಥೆಯು 2022ರ ಏಪ್ರಿಲ್‌ನಲ್ಲಿ ಟಿಎಂಸಿಗೆ ₹40 ಕೋಟಿ ಹಾಗೂ ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆ ವೇಳೆ 2023 ಅಕ್ಟೋಬರ್‌ನಲ್ಲಿ ₹15 ಕೋಟಿಯನ್ನು ಕಾಂಗ್ರೆಸ್‌ಗೆ ನೀಡಿದೆ.

ರಿತ್ವಿಕ್ ಪ್ರಾಜೆಕ್ಟ್ಸ್ ಪ್ರೈವೆಟ್ ಲಿಮಿಟೆಡ್

ಹೈದರಾಬಾದ್ ಮೂಲದ ಗಣಿಗಾರಿಕೆ ಮತ್ತು ಮೂಲಸೌಕರ್ಯ ಕಂಪನಿಯಾದ ರಿಥ್ವಿಕ್ ಪ್ರಾಜೆಕ್ಟ್ಸ್ ಕಳೆದ ವರ್ಷ ₹45 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ. ಇದರಲ್ಲಿ ಮೂರನೇ ಎರಡರಷ್ಟು ಅಂದರೆ ₹30 ಕೋಟಿ ಕಾಂಗ್ರೆಸ್‌ಗೆ ನೀಡಿದ್ದರೆ, ₹10 ಕೋಟಿ ಜನತಾ ದಳಕ್ಕೆ ಮತ್ತು ₹5 ಕೋಟಿ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ನೀಡಿದೆ.

ಬಿಜೆಪಿ ರಾಜ್ಯಸಭಾ ಸಂಸದ, ಸಿ.ಎಂ.ರಮೇಶ್ ಅವರು ಸ್ಥಾಪಿಸಿದ ಕಂಪನಿಯು ಭಾರತದಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖ ಸರ್ಕಾರಿ ಗುತ್ತಿಗೆಗಳನ್ನು ಈ ಕಂಪನಿ ಪಡೆದಿದೆ.

ರಮೇಶ್ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಪ್ತ ಸಹಾಯಕ ಮತ್ತು ಟಿಡಿಪಿಯ ಸಂಸದರಾಗಿದ್ದರು. ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಕಳೆದ ವರ್ಷ ಜನವರಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ₹1,098 ಕೋಟಿ ಮೌಲ್ಯದ ಸುನ್ನಿ ಜಲವಿದ್ಯುತ್ ಯೋಜನೆಗಾಗಿ ರಿಥ್ವಿಕ್ ಪ್ರಾಜೆಕ್ಟ್ಸ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಗುತ್ತಿಗೆಗಳನ್ನು ಈ ಕಂಪನಿ ನಡೆದುಕೊಂಡಿದೆ. ಗುತ್ತಿಗೆ ಪಡೆದ ನಂತರ, ಕಂಪನಿಯು ₹5 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಈ ಬಾಂಡ್‌ಗಳನ್ನು ಟಿಡಿಪಿಗೆ ನೀಡಲಾಗಿದೆ.

2023ರ ಏಪ್ರಿಲ್‌ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಎಚ್‌ಡಿ ದೇವೇಗೌಡರ ಜೆಡಿಎಸ್‌ಗೆ ಚುನಾವಣಾ ಬಾಂಡ್‌ಗಳಲ್ಲಿ ₹10 ಕೋಟಿ ನೀಡಿರುವ ಕಂಪನಿ, ಅದೇ ಸಮಯದಲ್ಲಿ ಕಾಂಗ್ರೆಸ್‌ಗೆ ₹40 ಕೋಟಿ ದೇಣಿಗೆ ನೀಡಿದೆ.

ಬಂಡವಾಳಕ್ಕಿಂತ ಹೆಚ್ಚು ದೇಣಿಗೆ ನೀಡಿದ ಸಣ್ಣ ಕಂಪನಿಗಳು

ಹೈದರಾಬಾದ್ ಮೂಲದ ವಾಸವಿ ಅವೆನ್ಯೂಸ್ ಎಲ್‌ಎಲ್‌ಪಿ ಕಂಪನಿಯು 2023ರ ಏಪ್ರಿಲ್ 6 ರಂದು ₹10 ಲಕ್ಷ ಬಂಡವಾಳದೊಂದಿಗೆ ನೋಂದಾಯಿಸಿ ಆರಂಭಗೊಂಡಿದೆ. ಈ ಕಂಪನಿ ಪ್ರಾರಂಭವಾದ ಮೂರು ತಿಂಗಳೊಳಗೆ. ಜುಲೈ 2023ರಲ್ಲಿ ಕೆಸಿಆರ್ ಅವರ ಬಿಆರ್‌ಎಸ್‌ ಪಕ್ಷಕ್ಕೆ ₹5 ಕೋಟಿ ದೇಣಿಗೆ ನೀಡಿದೆ.

ತೆಲಂಗಾಣ ಮೂಲದ ರಿಯಲ್ ಎಸ್ಟೇಟ್ ಕಂಪನಿ ಟಿಶರ್ಕ್ಸ್‌ ಇನ್ಫ್ರಾ ಡೆವೆಲಪ್ಮೆಂಟ್‌ ಪ್ರೈ. ಲಿ.ಅನ್ನು ಮಾರ್ಚ್ 2023 ರಲ್ಲಿ ₹1 ಲಕ್ಷ ಬಂಡವಾಳದೊಂದಿಗೆ ಸ್ಥಾಪಿಸಲಾಗಿದೆ. ಕಂಪನಿ ಆರಂಭವಾದ ನಾಲ್ಕು ತಿಂಗಳೊಳಗೆ ಅಂದರೆ, ಜುಲೈ 2023ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಬಿಆರ್‌ಎಸ್‌ ಪಕ್ಷಕ್ಕೆ ₹3.5 ಕೋಟಿ ದೇಣಿಗೆ ನೀಡಿದೆ.

ಅದೇ ಕಂಪನಿಯ ವಿಳಾಸದ ಅಡಿಯಲ್ಲೇ ನೋಂದಣಿಯಾಗಿರುವ ಟಿಶಾರ್ಕ್ಸ್‌ ಓವರ್‌ಸೀಸ್ ಎಜುಕೇಷನ್ ಕನ್ಸಲ್ಟೆನ್ಸಿ ಪ್ರೈ. ಲಿ.ಅನ್ನು ನೋಂದಾಯಿಸಲಾಗಿದೆ. 2023ರ ಮೇನಲ್ಲಿ ₹1 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಈ ಕಂಪನಿ, 2023ರ ಜುಲೈನಲ್ಲಿ ಬಿಆರ್‌ಎಸ್‌ಗೆ ₹4 ಕೋಟಿ ಮೌಲ್ಯದ ಬಾಂಡ್‌ಗಳನ್ನು ದಾನ ಮಾಡಿದೆ.

ಹೈದರಾಬಾದ್ ಮೂಲದ ನಿರ್ಮಾಣ ಸಂಸ್ಥೆ ಅಪರ್ಣಾ ಫಾರ್ಮ್ಸ್ ಮತ್ತು ಎಸ್ಟೇಟ್ಸ್ ಎಲ್‌ಎಲ್‌ಪಿ ಸಂಸ್ಥೆಯು 2020ರ ಆಗಸ್ಟ್ 18 ರಂದು ₹5 ಲಕ್ಷ ಬಂಡವಾಳದೊಂದಿಗೆ ನೋಂದಾಯಿಸಿಕೊಂಡಿದೆ. ಸುಬ್ರಹ್ಮಣ್ಯಂ ರೆಡ್ಡಿ, ಸಣ್ಣಾರೆಡ್ಡಿ ಮತ್ತು ವೆಂಕಟೇಶ್ವರ ರೆಡ್ಡಿ ಚೆನ್ನೂರು ಒಡೆತನದ ಈ ಕಂಪನಿಯು ತೆಲಂಗಾಣ ಅಸೆಂಬ್ಲಿ ಚುನಾವಣೆ ವೇಳೆ 2023ರ ಅಕ್ಟೋಬರ್-ನವೆಂಬರ್ ನಡುವೆ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗೆ ತಲಾ ₹15 ಕೋಟಿ ದೇಣಿಗೆ ನೀಡಿದೆ.

ಮಾಹಿತಿ ಮೂಲ: ದಿ ಕ್ವಿಂಟ್‌

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...

‘ಬರ ಪರಿಹಾರ ಸಾಕು’ ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ: ಡಿಸಿಎಂ ಡಿಕೆಶಿ ವಾಗ್ದಾಳಿ

"ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು...

ಹಿಂದುಳಿದ ಸಮುದಾಯಗಳೇ ಎಚ್ಚರ, ಮೋದಿ ನಿಮ್ಮ ಹಾದಿ ತಪ್ಪಿಸುತ್ತಿದ್ದಾರೆ: ಘರ್ಜಿಸಿದ ಸಿದ್ದರಾಮಯ್ಯ

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ...