ಚುನಾವಣಾ ಬಾಂಡ್‌ | ಮೋದಿ ಸರ್ಕಾರ ‘ಗುಪ್ತ ದೇಣಿಗೆ’ ಬಯಸುತ್ತಿರುವುದೇಕೆ?

Date:

Advertisements

ಚುನಾವಣಾ ಬಾಂಡ್‌ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಅವುಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಚುನಾವಣಾ ಆಯೋಗ, ಆರ್‌ಬಿಐ ಸೇರಿದಂತೆ ದೇಶದ ಬಹುತೇಕ ಸಂಸ್ಥೆಗಳು, ವ್ಯಕ್ತಿಗಳು ಚುನಾವಣಾ ಬಾಂಡ್‌ಗಳನ್ನು ವಿರೋಧಿಸುತ್ತಿದ್ದರೂ, ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂದಿದ್ದ ಕೇಂದ್ರ ಸರ್ಕಾರವು, ಚುನಾವಣಾ ಬಾಂಡ್‌ ಮೂಲಕ ಪರೋಕ್ಷವಾಗಿ ಕಪ್ಪು ಹಣದ ಚಲಾವಣೆಗೆ ಕಾರಣವಾಗಿದೆ ಎನ್ನುವ ಆರೋಪ ಎದುರಿಸುತ್ತಿದೆ.

ನವೆಂಬರ್‌ನಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಚುನಾವಣಾ ಬಾಂಡ್‌ ಬಿಡುಗಡೆ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್‌ನಲ್ಲಿ ಒಟ್ಟು ರೂ 1,148.38 ಕೋಟಿ ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಅದರ ಪ್ರಕಾರ, ಅಕ್ಟೋಬರ್ 4 ರಿಂದ 14 ರವರೆಗೆ 28 ನೇ ಹಂತದ ಚುನಾವಣಾ ಬಾಂಡ್‌ಗಳು ಹೈದರಾಬಾದ್ ಶಾಖೆಯಲ್ಲಿ (ಶೇ 33) ಅತಿ ಹೆಚ್ಚು ಮಾರಾಟವಾಗಿವೆ. ಎಸ್‌ಬಿಐ ಹೈದರಾಬಾದ್ ಶಾಖೆಯು 377.63 ಕೋಟಿ ಮೊತ್ತದ ಚುನಾವಣಾ ಬಾಂಡ್‌ ಮಾರಾಟ ಮಾಡಿದೆ. ಮಾರಾಟವಾದ ಒಟ್ಟು ಬಾಂಡ್‌ಗಳ ಪೈಕಿ ಅದು ಸುಮಾರು ಶೇ. 33 ಆಗಿದೆ. ಇದರ ಪೈಕಿ ಕೇವಲ 83.63 ಕೋಟಿ ರೂಪಾಯಿ (ಶೇ.7ರಷ್ಟು) ಮಾತ್ರ ಹೈದರಾಬಾದ್‌ನಲ್ಲಿ ನಗದೀಕರಿಸಿಕೊಳ್ಳಲಾಗಿದೆ.

ಚುನಾವಣಾ ಬಾಂಡ್‌ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನವರಿ 2, 2018ರಂದು ಜಾರಿಗೊಳಿಸಿತು. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 29 ಎ ಅಡಿಯಲ್ಲಿ ನೋಂದಾಯಿಸಲಾದ, ಇತ್ತೀಚಿನ ಲೋಕಸಭಾ ಅಥವಾ ರಾಜ್ಯ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳಲ್ಲಿ ಕನಿಷ್ಠ 1% ಮತ ಪಡೆದ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಭಾರತದ ಚುನಾವಣಾ ಆಯೋಗ (ಇಸಿಐ) ಪರಿಶೀಲಿಸಿದ ಖಾತೆಯನ್ನು ಮಂಜೂರು ಮಾಡುತ್ತದೆ. ಚುನಾವಣಾ ಬಾಂಡ್‌ಗಳು ಪ್ರಾಮಿಸರಿ ನೋಟುಗಳಂತಹ ಹಣದ ಸಾಧನಗಳಾಗಿವೆ. ಇದನ್ನು ಭಾರತದಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಶಾಖೆಗಳಿಂದ ಖರೀದಿಸಬಹುದು. ಅಂತಹ ಬಾಂಡ್‌ಗಳನ್ನು ₹ 1,000, ₹ 10,000, ₹ 1 ಲಕ್ಷ, ₹ 10 ಲಕ್ಷ ಮತ್ತು ₹ 1 ಕೋಟಿಯ ಮೊತ್ತಗಳಲ್ಲಿ ಮಾರಾಟ ಮಾಡಲಾಗುತ್ತದೆ. ವ್ಯಕ್ತಿಗಳು ಮತ್ತು ಕಂಪನಿಗಳು ಅವನ್ನು ಖರೀದಿಸಬಹುದು ಮತ್ತು ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದು. ನಂತರ ಪಕ್ಷಗಳು ಅವುಗಳನ್ನು ನಗದೀಕರಿಸಿಕೊಳ್ಳುತ್ತವೆ. ದಾನಿಗಳ ಹೆಸರು ಮತ್ತು ಇತರ ವಿವರಗಳನ್ನು ಸಾಧನದಲ್ಲಿ ನಮೂದಿಸದೇ ಗುಪ್ತವಾಗಿಡಲಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ಕಂಪನಿ ಖರೀದಿಸಬಹುದಾದ ಚುನಾವಣಾ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ.

Advertisements

ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ; ಒಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎನ್ನುವ ಲಾಭರಹಿತ ಸಂಸ್ಥೆ 2017 ರಲ್ಲಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 2018 ರಲ್ಲಿ ತಕರಾರು ಅರ್ಜಿ ಸಲ್ಲಿಸಿವೆ. ಈ ಯೋಜನೆಯು ಅನಿಯಮಿತ ರಾಜಕೀಯ ದೇಣಿಗೆಗಳು ಮತ್ತು ವಿದೇಶಿ ಕಂಪನಿಗಳಿಂದ ರಾಜಕೀಯ ಪಕ್ಷಗಳಿಗೆ ಅನಾಮಧೇಯ ಧನಸಹಾಯಕ್ಕೆ ಬಾಗಿಲು ತೆರೆಯುತ್ತದೆ; ಆ ಮೂಲಕ ಚುನಾವಣಾ ಭ್ರಷ್ಟಾಚಾರವನ್ನು ದೊಡ್ಡ ಪ್ರಮಾಣದಲ್ಲಿ ಕಾನೂನುಬದ್ಧಗೊಳಿಸುತ್ತದೆ ಎಂದು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಯೋಜನೆಯ ಅನಾಮಧೇಯತೆಯು ನಾಗರಿಕರ ‘ಮಾಹಿತಿ ತಿಳಿದುಕೊಳ್ಳುವ ಹಕ್ಕನ್ನು’ ಉಲ್ಲಂಘಿಸುತ್ತದೆ ಎಂದೂ ಅರ್ಜಿಗಳಲ್ಲಿ ವಾದಿಸಲಾಗಿದೆ. ಆದರೆ, ಈ ಯೋಜನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿರುವ ಮೋದಿ ಸರ್ಕಾರವು, ಚುನಾವಣಾ ಬಾಂಡ್‌ಗಳ ಮೂಲವನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ ಎಂದು ವಾದ ಮಂಡಿಸಿದೆ.

ಮೋದಿ ಸರ್ಕಾರ ಹೀಗೆ ವಾದ ಮಂಡಿಸಲು ಕಾರಣಗಳಿವೆ, ಚುನಾವಣಾ ಬಾಂಡ್‌ಗಳ ಬಹಳ ದೊಡ್ಡ ಫಲಾನುಭವಿ ಬಿಜೆಪಿಯೇ ಆಗಿದೆ. ಬಿಜೆಪಿ ಅಂಬಾನಿ, ಅದಾನಿ ಮುಂತಾದ ಬಂಡವಾಳಶಾಹಿಗಳ ಪರ ಎನ್ನುವ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಬಿಜೆಪಿ ಮತ್ತೆ ಮತ್ತೆ ಅದನ್ನು ಪುಷ್ಟೀಕರಿಸುವಂತೆ ನಡೆದುಕೊಳ್ಳುತ್ತಿದೆ. ತನ್ನ ನೀತಿನಿಯಮಗಳಲ್ಲಿ ದೊಡ್ಡ ಬಂಡವಾಳಿಗರ ಪರವಾದ ನಿಲುವು ತೆಗೆದುಕೊಳ್ಳುತ್ತಿರುವ ಮೋದಿ ಸರ್ಕಾರವು, ಅದಕ್ಕೆ ಪ್ರತಿಯಾಗಿ ಚುನಾವಣಾ ಬಾಂಡ್‌ಗಳ ರೂಪದಲ್ಲಿ ದೊಡ್ಡ ಮಟ್ಟದಲ್ಲಿ ದೇಣಿಗೆ ಪಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಅಧಿಕೃತ ಅಂಕಿಅಂಶಗಳು ಕೂಡ ಅದನ್ನು ಪುಷ್ಟೀಕರಿಸುವಂತಿವೆ.

ಬಾಂಡ್‌ಗಳನ್ನು ಪರಿಚಯಿಸಿದ ಐದು ವರ್ಷಗಳಲ್ಲಿ ಅವುಗಳ ಮೂಲಕ ನೀಡಲಾದ ನಿಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅಥವಾ 57% ಬಿಜೆಪಿಗೆ ಹೋಗಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆಯ ಪ್ರಕಾರ, 2016-17 ಮತ್ತು 2021-22ರ ನಡುವೆ, ದೇಶದ ಏಳು ರಾಷ್ಟ್ರೀಯ ಮತ್ತು 24 ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಒಟ್ಟು 9,188.35 ಕೋಟಿ ರೂ.ಗಳ ದೇಣಿಗೆಯನ್ನು ಸ್ವೀಕರಿಸಿವೆ. ಅದರಲ್ಲಿ ಬಿಜೆಪಿಯ ಪಾಲು 5,271.9751 ಕೋಟಿ ರೂಪಾಯಿ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 952.29 ಕೋಟಿ ರೂ. ಪಡೆದಿದೆ. ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ಗಳ ನಿಧಿಯ ದೊಡ್ಡ ಸ್ವೀಕೃತದಾರರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ವರ್ಷಗಳಲ್ಲಿ 767.88 ಕೋಟಿ ರೂಪಾಯಿಗಳ ದೇಣಿಗೆ ಪಡೆದಿರುವುದಾಗಿ ಘೋಷಿಸಿ, ಬಿಜೆಪಿ ಮತ್ತು ಕಾಂಗ್ರೆಸ್ ನಂತರ ಮೂರನೇ ಸ್ಥಾನದಲ್ಲಿದೆ. ಒಡಿಶಾದ ಆಡಳಿತಾರೂಢ ಬಿಜು ಜನತಾ ದಳವು 622 ಕೋಟಿ ರೂಪಾಯಿ ಪಡೆದಿದೆ. ತಮಿಳುನಾಡಿನ ಡಿಎಂಕೆ 431.50 ಕೋಟಿ ರೂಪಾಯಿ, ಎನ್‌ಸಿಪಿ 51.15 ಕೋಟಿ ರೂಪಾಯಿ, ಎಎಪಿ 48.83 ಕೋಟಿ ರೂಪಾಯಿ, ಜೆಡಿಯು 24.4 ಕೋಟಿ ರೂಪಾಯಿ ದೇಣಿಗೆ ಪಡೆದಿರುವುದಾಗಿ ತಿಳಿಸಿವೆ. ಸಿಪಿಐ, ಸಿಪಿಐ(ಎಂ), ಬಿಎಸ್‌ಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಮೇಘಾಲಯದ ಆಡಳಿತ ಪಕ್ಷ) ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಕೊಡುಗೆಯನ್ನು ಪಡೆದಿಲ್ಲ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿವೆ.

ಚುನಾವಣಾ ಬಾಂಡ್‌ ಯೋಜನೆಯನ್ನು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017 ರ ಬಜೆಟ್ ಅಧಿವೇಶನದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಇದು ‘ದೇಶದಲ್ಲಿ ರಾಜಕೀಯ ನಿಧಿಯ ವ್ಯವಸ್ಥೆಯನ್ನು ಶುದ್ಧೀಕರಿಸುವ’ ಮತ್ತು ರಾಜಕೀಯ ದೇಣಿಗೆಗಳನ್ನು ಪಾರದರ್ಶಕಗೊಳಿಸುವ ಉಪಕ್ರಮ ಎಂದಿದ್ದರು. ಆದರೆ, ಇದೇ ಅಂಶದ ಬಗ್ಗೆ ಚುನಾವಣಾ ಆಯೋಗ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ವ್ಯತಿರಿಕ್ತ ಅಭಿಪ್ರಾಯ ನೀಡಿದ್ದವು.

2019 ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಚುನಾವಣಾ ಬಾಂಡ್‌ಗಳು ರಾಜಕೀಯ ನಿಧಿಯ ಪಾರದರ್ಶಕತೆಯನ್ನು ಹಾಳುಮಾಡುತ್ತವೆ ಮತ್ತು ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಲು ವಿದೇಶಿ ಕಾರ್ಪೊರೇಟ್ ಶಕ್ತಿಗಳಿಗೆ ಅವಕಾಶ ನೀಡುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ. ಅದೇ ರೀತಿ ಭಾರತೀಯ ರಿಸರ್ವ್ ಬ್ಯಾಂಕ್, ಕಪ್ಪು ಹಣದ ಚಲಾವಣೆ, ಅಕ್ರಮ ಹಣ ವರ್ಗಾವಣೆ, ಗಡಿಯಾಚೆಗಿನ ನಕಲಿ ಮತ್ತು ಫೋರ್ಜರಿಗಳನ್ನು ಚುನಾವಣಾ ಬಾಂಡ್‌ಗಳು ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ ಎಂದು ಹಲವು ಬಾರಿ ಎಚ್ಚರಿಕೆ ನೀಡಿರುವುದರ ಬಗ್ಗೆ ಎಡಿಆರ್ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಚುನಾವಣಾ ಬಾಂಡ್‌ಗಳನ್ನು ‘ಅಪಾರದರ್ಶಕ ಹಣಕಾಸು ಸಾಧನಗಳು’ ಎಂದು ಕರೆದಿರುವ ಆರ್‌ಬಿಐ, ಬಾಂಡ್‌ಗಳು ಕರೆನ್ಸಿಯಂತೆ ಎಷ್ಟು ಬಾರಿ ಬೇಕಾದರೂ ವರ್ಗಾಯಿಸಬಹುದಾದ್ದರಿಂದ, ಅವುಗಳ ಅನಾಮಧೇಯತೆಯನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಬಹುದು ಎಂದಿದೆ. ಕಪ್ಪು ಹಣವನ್ನು ಹೊರತೆಗೆಯಲು ಔಪಚಾರಿಕ ಬ್ಯಾಂಕಿಂಗ್ ಮಾರ್ಗಗಳ ಮೂಲಕ ರಾಜಕೀಯ ಧನಸಹಾಯವನ್ನು ಒಂದು ವಿಧಾನವನ್ನಾಗಿ ಬಳಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದನ್ನು ಸಾಮಾನ್ಯ ಚೆಕ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಪಾವತಿ ವಿಧಾನ ಮೂಲಕ ಸಾಧಿಸಬಹುದು ಎಂದು ಆರ್‌ಬಿಐ ಹೇಳಿದೆ.

ಈ ಸುದ್ದಿ ಓದಿದ್ದೀರಾ: ವಿಪಕ್ಷ ನಾಯಕರ ಫೋನ್ ಹ್ಯಾಕಿಂಗ್ ಯತ್ನ; ಸರ್ಕಾರದ ವಿರುದ್ಧ ‘ಇಂಡಿಯಾ’ ನಾಯಕರ ವಾಗ್ದಾಳಿ

ಚುನಾವಣಾ ಬಾಂಡ್‌ ಬಗ್ಗೆ ವಿಪಕ್ಗಗಳಿಗೆ ಮತ್ತೊಂದು ಆತಂಕವೂ ಇದೆ. ಈ ಯೋಜನೆಯಲ್ಲಿ ದೇಣಿಗೆಯನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ನೀಡಲಾಗುತ್ತದೆ. ಹಾಗಾಗಿ ಯಾರು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದ್ದಾರೆ ಎನ್ನುವ ವಿವರಗಳನ್ನು ತಿಳಿಯುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಕೇಂದ್ರದ ಆಡಳಿತಾರೂಢ ಸರ್ಕಾರವು ಆ ಮಾಹಿತಿಯನ್ನು ಪಡೆದು, ವಿರೋಧ ಪಕ್ಷಗಳಿಗೆ ದೇಣಿಗೆ ಸಿಗದಂತೆ ಮಾಡಬಹುದು. ವಿಪಕ್ಷಗಳಿಗೆ ದೇಣಿಗೆ ನೀಡುವ ಕಂಪನಿಗಳನ್ನು, ವ್ಯಕ್ತಿಗಳನ್ನು ಐಟಿ, ಇಡಿ ಮೂಲಕ ಬೆದರಿಸಬಹುದು ಎನ್ನುವ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿವೆ.

ಎರಡು ವರ್ಷಗಳ ಅಂತರದ ನಂತರ ಇದೀಗ ಸುಪ್ರೀಂ ಕೋರ್ಟ್ ಮತ್ತೆ ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ವಿಚಾರಣೆಗೆತ್ತಿಕೊಂಡಿದೆ. ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 16 ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ. ಹೀಗಾಗಿಯೇ ಎಡಿಆರ್ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ವಿಷಯವನ್ನು ತ್ವರಿತವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X