- ಭಾರತ ಸರ್ಕಾರವು ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ರಾಯಭಾರ ಕಚೇರಿ
- ‘ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಲಭ್ಯತೆ ಇಲ್ಲ’ ಎಂದ ಅಧಿಕಾರಿಗಳು
ಭಾರತದಲ್ಲಿ ಕಾರ್ಯಾಚರಿಸುತ್ತಿದ್ದ ಅಫ್ಘಾನಿಸ್ತಾನ ರಾಯಭಾರ ಕಚೇರಿಯು ಅ.1ರ ಭಾನುವಾರದಿಂದ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.
ಮುಚ್ಚಲು ನಿರ್ಧರಿಸಿರುವ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು, ಭಾರತ ಸರ್ಕಾರದಿಂದ ಸಾಕಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
“ಅಫ್ಘಾನಿಸ್ತಾನದ ಹಿತಾಸಕ್ತಿಗಳನ್ನು ಪೂರೈಸುವ ನಿರೀಕ್ಷೆಯನ್ನು ನಮಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರಾಯಭಾರ ಕಚೇರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಲಭ್ಯತೆ ಇಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗುವುದಕ್ಕೂ ಮುಂಚೆ ಇದ್ದ ಅಶ್ರಫ್ ಘನಿ ಸರ್ಕಾರ ನೇಮಕ ಮಾಡಿದ್ದ ರಾಯಭಾರಿ ಫರೀದ್ ಮಮುಂಡ್‌ಜಾಯ್ ನೇತೃತ್ವದಲ್ಲಿ ರಾಯಭಾರ ಕಚೇರಿಯು ಕಾರ್ಯ ನಿರ್ವಹಣೆ ಮಾಡುತ್ತಿತ್ತು. 2021ರಲ್ಲಿ ತಾಲಿಬಾನ್ ಆಳ್ವಿಕೆ ಶುರುವಾದ ಬಳಿಕವೂ ಅದನ್ನು ಮುಂದುವರಿಸಲಾಗಿತ್ತು. ಈ ನಡುವೆ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಇಂದಿನಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ದೀರ್ಘಕಾಲದ ಬಾಂಧವ್ಯ ಮತ್ತು ಸ್ನೇಹವನ್ನು ಪರಿಗಣಿಸಿ ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆಫ್ಘಾನಿಸ್ತಾನ ರಾಯಭಾರ ಕಚೇರಿ ತಿಳಿಸಿದೆ.
The Embassy of Afghanistan in New Delhi issues press statement, announces the decision to cease its operations, effective October 1, 2023. pic.twitter.com/iI4nQhq3aj
— ANI (@ANI) September 30, 2023
“ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವ ಈ ನಿರ್ಧಾರವನ್ನು ಪ್ರಕಟಿಸಲು ಆಳವಾದ ದುಃಖ, ವಿಷಾದ ಮತ್ತು ನಿರಾಶೆಯಾಗಿದೆ” ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮ ನ್ಯೂನತೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದಿರುವ ರಾಯಭಾರ ಕಚೇರಿಯು, ಭಾರತದ ಅಸಹಕಾರವಲ್ಲದೆ, ಇನ್ನಿತರ ಕೆಲವು ಅಂಶಗಳನ್ನುಕೂಡ ಪಟ್ಟಿ ಮಾಡಿದೆ.
“ಭಾರತದಲ್ಲಿ ರಾಜತಾಂತ್ರಿಕ ಬೆಂಬಲದ ಕೊರತೆ ಮತ್ತು ಕಾಬೂಲ್‌ನಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಸರ್ಕಾರದ ಅನುಪಸ್ಥಿತಿಯಿಂದಾಗಿ ಅಫ್ಘಾನಿಸ್ತಾನ ಮತ್ತು ಅದರ ನಾಗರಿಕರ ಉತ್ತಮ ಹಿತಾಸಕ್ತಿಗಳನ್ನು ಪೂರೈಸಲು ಅಗತ್ಯವಾದ ನಿರೀಕ್ಷೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವಲ್ಲಿ ನಮ್ಮ ನ್ಯೂನತೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಅಫ್ಘಾನಿಸ್ತಾನ ಹಾಗೂ ಅದರ ನಾಗರಿಕರ ಹಿತಾಸಕ್ತಿಗೆ ಅನುಗುಣವಾಗಿ ಅಗತ್ಯವಾದ ಕೆಲಸಗಳು ಹಾಗೂ ನಿರೀಕ್ಷೆಗಳನ್ನು ನಡೆಸುವುದು ನಮಗೆ ಸಾಧ್ಯವಾಗುತ್ತಿಲ್ಲ ಎಂಬ ವೈಫಲ್ಯವನ್ನು ಕೂಡ ಒಪ್ಪಿಕೊಳ್ಳುತ್ತೇವೆ” ಎಂದು ಅಫ್ಘಾನಿಸ್ತಾನ ರಾಯಭಾರ ಕಚೇರಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.