ರೈತ ಪ್ರತಿಭಟನೆ ಕಾವು | ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾದ ರೈತರು, ಕಾರ್ಮಿಕರು

Date:

Advertisements
ಲೋಕಸಭಾ ಚುನಾವಣೆಗೆ ಕೆಲವೇ ವಾರಗಳಿರುವಾಗ ಮತ್ತೆ ದೆಹಲಿ ಗಡಿಭಾಗ ರೈತ ಪ್ರತಿಭಟನೆ ಕಾವು ಏರಿಸಿಕೊಳ್ಳುತ್ತಿದೆ. ರೈತರು ಮತ್ತು ಇತರ ವಲಯಗಳ ಕಾರ್ಮಿಕರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಾಗ ದೆಹಲಿಯ ಗಡಿಭಾಗ ಮತ್ತೆ ರೈತ ಪ್ರತಿಭಟನೆ ಕಾವು ಏರಿಸಿಕೊಳ್ಳಲು ಸಜ್ಜಾಗುತ್ತಿದೆ. ಚುನಾವಣಾ ಸಮಯದಲ್ಲಿ 200ರಷ್ಟು ರೈತ ಸಂಘಟನೆಗಳು ದೆಹಲಿಯತ್ತ ಪ್ರತಿಭಟನೆ ಸಾಗಲು ಸಿದ್ಧವಾಗುತ್ತಿವೆ. 

ಕಿಸಾನ್ ಮಜ್‌ದೂರ್ ಸಂಘರ್ಷ್‌ ಸಮಿತಿ (ಕೆಎಂಎಸ್‌ಸಿ) ಮತ್ತು ಅದರಿಂದ ವಿಭಜನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ ರಾಜಕೀಯೇತರ) ನೇತೃತ್ವದಲ್ಲಿ ಫೆಬ್ರವರಿ 13ರಿಂದ ‘ದೆಹಲಿ ಚಲೋ’ ಆಯೋಜಿಸಲಾಗಿದೆ. 

ಫೆಬ್ರವರಿ 16ರಿಂದ ‘ಗ್ರಾಮೀಣ ಭಾರತ್ ಬಂದ್‌’ಗಾಗಿ ಎಸ್‌ಕೆಎಂ ನೇತೃತ್ವದಲ್ಲಿ ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಕೃಷಿ ವಲಯಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಈ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ.

Advertisements

ರೈತ ಸಂಘಟನೆಗಳೊಂದಿಗೆ ಕೇಂದ್ರದ ಸಭೆ

“ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸದಿರುವ ವಿರುದ್ಧ ರೈತಸಂಘಟನೆಗಳು ಚಳವಳಿ ನಡೆಸಲಿವೆ. ದೆಹಲಿ ಚಲೋ ಮತ್ತು ಗ್ರಾಮೀಣ ಭಾರತ್ ಬಂದ್‌ ಯೋಜನೆಗಳಿಗೆ ರೈತರು ಸಿದ್ಧತೆ ನಡೆಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ 2020ರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ಪುನರಾವರ್ತನೆಯಾಗುವ ಸೂಚನೆ ಕಂಡುಬರುತ್ತಿದೆ” ಎಂದು ‘ದಿ ವೈರ್‌’ ವೆಬ್‌ತಾಣ ವರದಿ ಮಾಡಿದೆ.

ಗುರುವಾರ (ಫೆಬ್ರವರಿ 8) ಚಂಡೀಗಢದಲ್ಲಿ ಮೂವರು ಕೇಂದ್ರ ಸಚಿವರು ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆ ಮುಗಿದ ನಂತರ ಸಭೆಯಲ್ಲಿ ಹಾಜರಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ರಾತ್ರಿ 10 ಗಂಟೆಗೆ ಮಾಧ್ಯಮಗಳಿಗೆ ವರದಿ ನೀಡಿ, ಅನೇಕ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದ್ದರು. 2020ರ ರೈತಪ್ರತಿಭಟನೆಯ ಸಂದರ್ಭದಲ್ಲಿ ರೈತರ ಮೇಲೆ ಜಡಿಯಲಾಗಿದ್ದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಭರವಸೆಯನ್ನೂ ಕೇಂದ್ರ ಸರ್ಕಾರ ನೀಡಿದೆ ಎಂದು ಅವರು ಹೇಳಿದ್ದರು. 

”ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಸಚಿವರು ಯಾವುದೇ ಭರವಸೆ ನೀಡಿಲ್ಲ. ಆದರೆ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚಿಸುವ ಭರವಸೆ ನೀಡಿದ್ದಾರೆ” ಎಂದು ಮಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಕಿರಿಯ ಕೃಷಿ ಸಚಿವ ಅರ್ಜುನ್ ಮುಂಡಾ, ಕಿರಿಯ ಗೃಹಸಚಿವ ನಿತ್ಯಾನಂದ ರೈ ಹಾಗೂ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ರೈತರೊಂದಿಗೆ ಮಾತುಕತೆ ನಡೆಸಿದ್ದರು.

ಮತ್ತೊಂದೆಡೆ ಸಭೆಯಲ್ಲಿ ರೈತರ ಪರವಾಗಿ ಭಾಗವಹಿಸಿದ್ದ ಪ್ರಮುಖರಾದ ಜಗ್‌ಜೀತ್ ಸಿಂಗ್ ದಲ್ಲೇವಾಲ್ ಎಸ್‌ಕೆಎಂ (ರಾಜಕೀಯೇತರ) ಸಂಯೋಜಕ ‘ದೆಹಲಿ ಚಲೋ’ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ”ಸಭೆಯಲ್ಲಿ ಧನಾತ್ಮಕ ಬೆಳವಣಿಗೆಯಾಗಿದ್ದರೂ, ಫೆಬ್ರವರಿ 13ರಂದು ಆಯೋಜಿಸಲಾಗಿರುವ ‘ದೆಹಲಿ ಚಲೋ’ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ” ಎಂದು ಹೇಳಿದ್ದಾರೆ.

”ಕೇಂದ್ರ ಸಚಿವರು ಶೀಘ್ರವೇ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಫೆಬ್ರವರಿ 13ರ ಮೊದಲು ಅವರು ನಮ್ಮ ಬೇಡಿಕೆಗಳಿಗೆ ನಿಶ್ಚಿತ ಪರಿಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದಲ್ಲಿ ಪರಸ್ಪರ ಹಿತಾಸಕ್ತಿಯನ್ನು ಗಮನಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಇಲ್ಲದಿದ್ದರೆ ‘ದೆಹಲಿ ಚಲೋ’ ನಿರ್ಧಾರ ಬದಲಾಗದು” ಎಂದು ಅವರು ತಿಳಿಸಿದ್ದಾರೆ.

ರೈತರ ಈಗಿನ ಬೇಡಿಕೆಗಳು ಹಿಂದೆ ಸರ್ಕಾರ ನೀಡಿದ್ದ ಭರವಸೆಗಳೇ. ಉದಾಹರಣೆಗೆ, ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸಿದ್ದರು. 2020ರಲ್ಲಿ ರೈತ ಚಳವಳಿಯ ಭಾಗವಾದ ಚರ್ಚೆಯ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಗಡಿಭಾಗಗಳಲ್ಲಿ ಸೇರಿದ ರೈತರು

ಗುರುವಾರ ಸಂಸತ್ತಿಗೆ ಮುತ್ತಿಗೆ ಹಾಕಲು ಉತ್ತರ ಪ್ರದೇಶದ ರೈತರು ಮೆರವಣಿಗೆ ಹೊರಟು ದೆಹಲಿ ಗಡಿಭಾಗದಲ್ಲಿ ಸೇರಿದ ನಂತರ ಸಂಚಾರದಟ್ಟಣೆ ಉಂಟಾಗಿತ್ತು. ರೈತ ನಾಯಕ ರಾಕೇಶ್ ಟಿಕಾಯತ್ ಅವರು ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನಾ ನಿರತ ರೈತರ ಜೊತೆಗೂಡುವುದಾಗಿ ತಿಳಿಸಿದ್ದರು. ಅವರ ನೇತೃತ್ವದ ಭಾರತೀಯ ಕಿಸಾನ್ ಸಂಘಟನೆ (ಬಿಕೆಯು) ಕಾರ್ಯಕರ್ತರು ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನಾಕಾರರ ಜೊತೆಗಿದ್ದರು. 

ಈ ರೈತ ಸಂಘಟನೆಗಳ ಜೊತೆಗೆ ಎಸ್‌ಕೆಎಂ ಸಂಘಟನೆಗಳೂ ಪ್ರತಿಭಟನೆ ಘೋಷಿಸಿರುವ ಹಿನ್ನೆಲೆಯಲ್ಲಿ, ಲೋಕಸಭಾ ಚುನಾವಣೆಗೆ ಮೊದಲು ರೈತ ಪ್ರತಿಭಟನೆಯ ಬಿಸಿ ಕಾಡುವ ಆತಂಕದಲ್ಲಿ ಕೇಂದ್ರ ಸಚಿವರು ಚಂಡೀಗಢಕ್ಕೆ ಬಂದಿಳಿದಿದ್ದಾರೆ ಎನ್ನುವ ಅಭಿಪ್ರಾಯವ್ಯಕ್ತವಾಗಿದೆ.

ಎರಡು ತಿಂಗಳ ನಂತರದ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೂ ಗೆಲುವು ಸಿಗುತ್ತದೆ ಎನ್ನುವ ಉಮೇದಿನಲ್ಲಿರುವ ಬಿಜೆಪಿಗೆ, 2020ರ ರೈತ ಹೋರಾಟದ ಬಿಸಿ ಮತ್ತೆ ತಗಲುವುದು ಬೇಕಾಗಿಲ್ಲ. ಕೇಂದ್ರ ಸರ್ಕಾರ ರೈತ ಸಂಘಟನೆಗಳೊಂದಿಗೆ ಮಾತುಕತೆ ಆರಂಭಿಸಿದ್ದರೂ, ಮುಂಜಾಗರೂಕತೆಗಳನ್ನೂ ತೆಗೆದುಕೊಳ್ಳುತ್ತಿದೆ. 

ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ದೆಹಲಿಯ ಗಡಿಭಾಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ, ‘ದೆಹಲಿ ಚಲೋ’ ಕೈಬಿಡುವಂತೆ ರೈತರ ಮನವೊಲಿಸಲು ಪ್ರಯತ್ನಿಸುವ ಜೊತೆಗೆ, ಪ್ರತಿಭಟನೆ ದೆಹಲಿಗೆ ತಲುಪದಂತೆ ಹತ್ತಿಕ್ಕಲು ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಪ್ರತಿಭಟನೆಯ ನೇತೃತ್ವವಹಿಸಿರುವ ರೈತ ನಾಯಕರ ಮೇಲೆ ಪೊಲೀಸರು ನಿಗಾ ಇಟ್ಟಿರುವುದಾಗಿ ವರದಿಯಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಸಂಘಟನೆಗಳು

ಸುಮಾರು 200 ರೈತ ಸಂಘಟನೆಗಳು ಫೆಬ್ರವರಿ 13ರ ದೆಹಲಿ ಚಲೋ ಕಾರ್ಯಕ್ರಮಕ್ಕೆ ಬೆಂಬಲ ನೀಡಿವೆ. ಅದರಲ್ಲಿ ಎಸ್‌ಕೆಎಂ (ರಾಜಕೀಯೇತರ) ಜೊತೆಗಿನ 150 ಸಂಘಟನೆಗಳು ಮತ್ತು ಕೆಎಂಎಸ್‌ಸಿ ಅಡಿಯಲ್ಲಿರುವ 76 ಸಂಘಟನೆಗಳು ‘ದೆಹಲಿಚಲೋ’ ಬೆಂಬಲಿಸಿವೆ. 

2020ರಲ್ಲಿ ದೆಹಲಿ ಹೊರಗಿನ ರೈತಸಂಘಟನೆಗಳ ಪ್ರತಿಭಟನೆ ಸಂದರ್ಭ ಮೋದಿ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡುವಲ್ಲಿ ಎಸ್‌ಕೆಎಂ ಪ್ರಮುಖ ಪಾತ್ರವಹಿಸಿತ್ತು. 2020ರ ಪ್ರತಿಭಟನೆ ನಂತರ ಎಸ್‌ಕೆಎಂ ಜೊತೆಗಿದ್ದ ರೈತ ಸಂಘಟನೆಗಳು ವಿಭಿನ್ನ ಹಾದಿಯಲ್ಲಿ ಸಾಗಿದ್ದವು. ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಇನ್ನು ಕೆಲವರು ರಾಜಕೀಯೇತರ ಚಟುವಟಿಕೆಗಳಲ್ಲಿ ಮಾತ್ರ ಉಳಿದುಕೊಳ್ಳಲು ನಿರ್ಧರಿಸಿದ್ದರು. ಎಸ್‌ಕೆಎಂನಲ್ಲಿ ಪಂಜಾಬ್, ಹಿಮಾಚಲಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ, ಉತ್ತರಖಂಡ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳ ಸುಮಾರು 150 ರೈತ ಸಂಘಟನೆಗಳಿವೆ.

ಮತ್ತೊಂದೆಡೆ, ಸರ್ವನ್ ಸಿಂಗ್ ಪಾಂಧರ್ ನೇತೃತ್ವದ ಕೆಎಂಎಸ್‌ಸಿ 50 ರೈತ ಸಂಘಟನೆಗಳ ಬೆಂಬಲ ಹೊಂದಿದೆ. ಈ ನಡುವೆ ಡಾ ದರ್ಶನ್ ಪಾಲ್, ಯದವಿಂದ್ರ ಯಾದವ್ ಹಾಗೂ ಇನ್ನು ಕೆಲವರು ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಬಾಗವಹಿಸದಿರಲು ನಿರ್ಧರಿಸಿದ್ದಾರೆ. ಕಳೆದ ವಾರ ಎಸ್‌ಕೆಂ ನೀಡಿದ ಹೇಳಿಕೆಯಲ್ಲಿ, ”ಎಸ್‌ಕೆಎಂನ ರಾಷ್ಟ್ರೀಯ ಸಂಯೋಜನಾ ಸಮಿತಿ ಆನ್‌ಲೈನ್ ಸಭೆ ನಡೆಸಿ ‘ದೆಹಲಿ ಚಲೋ’ಗೆ ಕರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವು ಕಿಸಾನ್ ಸಂಘಟನೆಗಳು ಫೆಬ್ರವರಿ 13ರಂದು ದೆಹಲಿ ಚಲೋ ಪ್ರತಿಭಟನೆ ನಡೆಸುವುದಕ್ಕೂ ಎಸ್‌ಕೆಎಂಗೂ ಸಂಬಂಧವಿಲ್ಲ” ಎಂದು ತಿಳಿಸಿತ್ತು. ಆದರೆ, ಫೆಬ್ರವರಿ 16ರಿಂದ ರಾಷ್ಟ್ರಾದ್ಯಂತ ‘ಗ್ರಾಮೀಣ ಭಾರತ್ ಬಂದ್‌’ಗೆ ಕರೆ ನೀಡಿರುವುದಾಗಿ ಎಸ್‌ಕೆಎಂ ತಿಳಿಸಿದೆ.

ಭಾರತ್‌ ಬಂದ್‌ಗೆ ಸಿದ್ಧತೆ ನಡೆಸುತ್ತಿರುವ ಎಸ್‌ಕೆಎಂ

ವರದಿಗಳ ಪ್ರಕಾರ ಪಂಜಾಬ್‌ನ ರೈತ ಸಂಘಟನೆಗಳು ಫೆಬ್ರವರಿ 16ರಿಂದ ದೆಹಲಿ ಗಡಿಭಾಗಗಳಲ್ಲಿ ಧರಣಿ ಕುಳಿತುಕೊಳ್ಳಲು ಸಜ್ಜಾಗುತ್ತಿವೆ. ರೈತರು ಅಗತ್ಯವಿರುವ ಟ್ರ್ಯಾಕ್ಟರ್‌ಗಳು-ಟ್ರಾಲಿಗಳು ಮತ್ತು ಧರಣಿ ಕುಳಿತುಕೊಳ್ಳಲು ಅಗತ್ಯವಾಗಿರುವ ಆಹಾರ ಧಾನ್ಯಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

”ಎಲ್ಲಾ ಪ್ರಮುಖ ರಾಜ್ಯಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆಗಳನ್ನು ನಡೆಸಲಿದ್ದೇವೆ. ನಿತ್ಯವೂ ಹಾಲು ಮತ್ತು ತರಕಾರಿಗಳನ್ನು ಸರಬರಾಜು ಮಾಡುವಂತೆ ರೈತರನ್ನು ಕೇಳಿಕೊಂಡಿದ್ದೇವೆ. ರಾಜ್ಯ ಬಸ್‌ಗಳು ಮತ್ತು ಟ್ರಕ್‌ಗಳು ಹೆದ್ದಾರಿಯಿಂದ ಹೊರಗುಳಿಯಲಿವೆ. ರೈಲ್ವೇ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಇದೊಂದು ರೀತಿಯಲ್ಲಿ ಭಾರತ್ ಬಂದ್ ತರಹದ ಪ್ರತಿಭಟನೆ” ಎಂದು ಎಸ್‌ಕೆಎಂನ ರಾಷ್ಟ್ರೀಯ ಸಂಯೋಜನಾ ಸಮಿತಿ ಸದಸ್ಯ ರಮಿಂದರ್ ಸಿಂಗ್ ಪಟಿಯಾಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರೈತರ ಜೊತೆಗೂಡಲಿರುವ ಇತರ ವಲಯಗಳ ಕಾರ್ಮಿಕರು

ವ್ಯಾಪಾರಿ ಸಂಘಟನೆಗಳು, ಸಾರಿಗೆ ಸಂಘಟನೆಗಳು, ಟ್ರಕ್ ಸಂಘಟನೆಗಳು, ಔದ್ಯಮಿಕ ಕಾರ್ಮಿಕರು ಹಾಗೂ ಸರ್ಕಾರಿ ಉದ್ಯೋಗಿ ಸಂಘಟನೆಗಳು ಎಸ್‌ಕೆಎಂನ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆಗೆ ಜೊತೆಗೂಡಲಿದ್ದಾರೆ. ಈ ಸಂಘಟನೆಗಳು ತಮ್ಮದೇ ಬೇಡಿಕೆಗಳನ್ನು ಮುಂದಿಡಲಿವೆ. ಕಾರ್ಮಿಕರ ಕನಿಷ್ಠ ವೇತನವನ್ನು ರೂ 26,000ಕ್ಕೆ ನಿಗದಿಪಡಿಸುವುದು, ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವುದು, ಉದ್ಯೋಗ ಖಾತರಿ ಮೂಲಭೂತ ಹಕ್ಕು, ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ ಮಾಡಬಾರದು, ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬಾರದು, ಖಾಯಂ ಉದ್ಯೋಗವನ್ನು ರದ್ದುಮಾಡದಿರುವುದು, ಮನ್‌ರೇಗಾದ ಕೂಲಿ ಅವಧಿಯನ್ನುವಾರ್ಷಿಕ 200 ದಿನಗಳಿಗೆ ಏರಿಸುವುದು ಮತ್ತು ದಿನಗೂಲಿಯನ್ನು ರೂ 600ಕ್ಕೆ ನಿಗದಿಪಡಿಸುವುದು, ಹಳೇ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸುವುದು, ಸಂಘಟಿತ ಮತ್ತು ಅಸಂಘಟಿತ ವಲಯಗಳೆರಡಕ್ಕೂ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಒದಗಿಸುವಂತಹ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಡಲಿದ್ದಾರೆ.

ಹೀಗಾಗಿ ದೆಹಲಿ ಗಡಿಭಾಗ ಚಳವಳಿಗಳ ತಾಣವಾಗಲಿದೆ. ಪ್ರತಿಭಟನಾಕಾರರ ಜಮಾಣೆಯಿಂದ ಕಾವೇರಲಿದೆ.  400 ಸೀಟು ಗೆಲ್ಲುವ ವಿಶ್ವಾಸದಲ್ಲಿರುವ, ಅದಕ್ಕೆ ಬೇಕಾದ ಚುನಾವಣಾ ತಯಾರಿ ನಡೆಸುತ್ತಿರುವ ಬಿಜೆಪಿಗೆ ಇದು ನುಂಗಲಾರದ ತುತ್ತಾಗಿಯೂ ಪರಿಣಮಿಸಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X