ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಮುಖಂಡನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ಆಕ್ರೋಶಗೊಂಡು, ಪೊಲೀಸ್ ಠಾಣೆಗೆ ರಾತ್ರೋರಾತ್ರಿ ನುಗ್ಗಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಕಿ ಹಾಕಿದ್ದ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಶಿರಾಜ್ ಶೆಟ್ಟಿ ಎಂಬಾತನನ್ನು ರಾತ್ರಿ ಪೊಲೀಸರು ಬಂಧಿಸಿದ ಬೆನ್ನಲ್ಲಿಯೇ ಶಾಸಕ ಹರೀಶ್ ಪೂಂಜಾ ಅವರು ಬೆಂಬಲಿಗರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಹೊರತರುವ ಪ್ರಯತ್ನ ನಡೆಸಿದ್ದರು. ಠಾಣೆಯ ಮುಂದೆ ಧರಣಿ ನಡೆಸಿದ್ದರು.
ಅಕ್ರಮ ಕಲ್ಲುಕೋರೆ ನಡೆಸುತ್ತಿದ್ದ ಆರೋಪದಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದ ನೆಪದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ @HPoonja ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದಲ್ಲದೆ, ಪೊಲೀಸರಿಗೇ ಧಮ್ಕಿ ಹಾಕಿದ್ದಾರೆ.
‘ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಾ ಎಂದು ನಿಂದಿಸಿದ್ದಾರೆ. pic.twitter.com/3hVbntiGj1— eedina.com ಈ ದಿನ.ಕಾಮ್ (@eedinanews) May 19, 2024
ಈ ವೇಳೆ, ಬಿಜೆಪಿ ಶಾಸಕ ಹರೀಶ್ ಪೂಂಜಾ, “ನಮ್ಮ ಕಾರ್ಯಕರ್ತ ಕೊಲೆ, ರೇಪ್ ಮಾಡಿಲ್ಲ, ಯಾವ ಅಪರಾಧ ಮಾಡಿದ್ದಾನೆಂದು ಹೇಳಿ ರಾತ್ರಿ ವೇಳೆ ಮನೆಗೆ ನುಗ್ಗಿ ಎಳ್ಕೊಂಡು ಬಂದಿದ್ದೀರಿ? “ನೀವು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸ್ತೀರಿ, ನೀವು ಯಾರ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದೀರಿ ಅಂತ ಗೊತ್ತಿದೆ. ಎಸ್ಪಿ, ತಹಸೀಲ್ದಾರ್ ಫೋನ್ ರಿಸೀವ್ ಮಾಡ್ತಿಲ್ಲ. ಪೊಲೀಸ್ ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಲ್ಲ. ಸಾರ್ವಜನಿಕ ಆಸ್ತಿ. ನಮ್ಮ ಕಾರ್ಯಕರ್ತನನ್ನು ಬಿಡದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲಿಯೇ ಕೂರುತ್ತೇನೆ” ಎಂದು ಹೇಳಿ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮುರುಳಿಧರ್ ನಾಯ್ಕ್‌ಗೆ ಧಮ್ಕಿ ಹಾಕಿದ್ದಾರೆ.
ಈ ಎಲ್ಲ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಅಕ್ರಮ ಕಲ್ಲುಕೋರೆ: ಬಿಜೆಪಿ ಮುಖಂಡನ ಬಂಧನ; ಠಾಣೆಗೆ ನುಗ್ಗಿ ಪೊಲೀಸರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ!
ಎಫ್‌ಐಆರ್‌ನಲ್ಲಿ ಏನಿದೆ?
ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು, ಇತರ ಕೆಲವು ಜನರೊಂದಿಗೆ, ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಸಕರು ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಗೂಂಡಾ ವರ್ತನೆ ತೋರಿದ ಶಾಸಕ ಪೂಂಜಾ ವಿರುದ್ಧ ಐಪಿಸಿ ಸೆಕ್ಷನ್‌ನ ಕಲಂ:353, 504ರಂತೆ ಪ್ರಕರಣ ದಾಖಲಾಗಿದೆ.
ಹರೀಶ್ ಪೂಂಜಾ ಗೂಂಡಾ ವರ್ತನೆ ಇದೇ ಮೊದಲೇನಲ್ಲ
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸರ್ಕಾರಿ ಅಧಿಕಾರಿಗಳೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕರ್ತವ್ಯದಲ್ಲಿದ್ದ ಅರಣ್ಯಾಧಿಕಾರಿಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು.
ಸಂಸ್ಕೃತಿ, ಸಂಪ್ರದಾಯ, ಪರಂಪರೆ ಎಂದು ದೊಡ್ಡ ದೊಡ್ಡ ಪದಗಳನ್ನು ಬಳಸುವ ಬಿಜೆಪಿಯ ಅಸಲಿ ಸಂಸ್ಕೃತಿ
ಅವಾಚ್ಯ ಶಬ್ದಗಳನ್ನು ಬಳಸುತ್ತಾ, ಅಸಭ್ಯವಾಗಿ ನಡೆದುಕೊಳ್ಳುವುದು!ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ ಬೀದಿ ಪೋಕರಿಗಳಿಗಳಂತೆ ಅರಣ್ಯ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಶಾಸಕನಾದವನಿಗೆ… pic.twitter.com/opkpWWhoWV
— Karnataka Congress (@INCKarnataka) October 10, 2023
2023 ಅಕ್ಟೋಬರ್ 8ರಂದು ಚಾರ್ಮಾಡಿ ಭಾಗದ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ-ತೆರವು ಸಂಬಂಧ ಅರಣ್ಯಾಧಿಕಾರಿಗಳು-ಶಾಸಕರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್ ಎಂಬುವವರನ್ನು “ಲೋಫರ್ ನನ್ ಮಗ” ಅಂತ ಹೀಯಾಳಿಸಿ, ಅವಮಾನಿಸಿದ್ದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿತ್ತು. ಇದರಿಂದ ಅವಮಾನಗೊಂಡಿದ್ದ ಅರಣ್ಯಾಧಿಕಾರಿ ಜಯಪ್ರಕಾಶ್ ಶಾಸಕ ಪೂಂಜಾ ಹಾಗೂ ಬೆಂಬಲಿಗರ ವಿರುದ್ಧ ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಶಶಿರಾಜ್ ಶೆಟ್ಟಿಗೆ ನ್ಯಾಯಾಂಗ ಬಂಧನ
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ರೌಡಿಶೀಟರ್ ಶಶಿರಾಜ್ ಶೆಟ್ಟಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಮೇಲಂತಬೆಟ್ಟುವಿನಲ್ಲಿ ಪೊಲೀಸರ ದಾಳಿಯ ವೇಳೆ ಸ್ಥಳದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದವು. ಅಕ್ರಮ ಸ್ಪೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಶಶಿರಾಜ ಶೆಟ್ಟಿಯನ್ನು ಬಂಧಿಸಿದ್ದರು. ಆರೋಪಿಯನ್ನು ಇದೀಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಬಿಜೆಪಿ ಮುಖಂಡ ಪ್ರಮೋದ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
