ದೇಶವನ್ನು ಇಬ್ಭಾಗ ಮಾಡುವ ಹೇಳಿಕೆ ನೀಡುವ ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ, ಬಿಜೆಪಿ ಮುಖಂಡ ಕೆ. ಎಸ್. ಈಶ್ವರಪ್ಪರ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾದ ಬಳಿಕ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಡಿ. ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ ರಾಷ್ಟ್ರದ್ರೋಹಿಗಳು. ದೇಶ ವಿಭಜನೆ ಬಗ್ಗೆ ಮಾತನಾಡುವರು ಜಿನ್ನಾ ವಂಶಸ್ಥರು. ದೇಶ ಇಬ್ಬಾಗ ಮಾಡುವವರನ್ನು ಸುಮ್ಮನೆ ಬಿಡಬಾರದು. ಗುಂಡಿಕ್ಕಿ ಕೊಲ್ಲುವಂತಹ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಬೇಕು ಎಂಬ ಒತ್ತಾಯ ಮಾಡುವುದಾಗಿ ಹೇಳಿಕೆ ನೀಡಿ, ನಾಲಗೆ ಹರಿಯಬಿಟ್ಟಿದ್ದರು.
ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಈಶ್ವರಪ್ಪರ ಹೇಳಿಕೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಎಫ್ ಐ ಆರ್ ದಾಖಲಾಗಿರುವುದನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಖಚಿತಪಡಿಸಿದ್ದಾರೆ.
ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುವ ಸಲುವಾಗಿ ಉದ್ರೇಕಕಾರಿ ಭಾಷಣ ಮಾಡಿದ್ದು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ನಿಜಲಿಂಗಪ್ಪ ಬಡಾವಣೆಯ ನಿವಾಸಿ ಹನುಮಂತ ಎಂಬುವವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಈಶ್ವರಪ್ಪರ ವಿರುದ್ಧ ಐಪಿಸಿ ಕಲಂ 505 (1)ಸಿ, 505 (2), 506ರಡಿ ಎಫ್ ಐ ಆರ್ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಗುಂಡಿಕ್ಕಿ ಕೊಲ್ಲುವ ಕಾನೂನು ತಂದರೆ ಅರ್ಧ ಬಿಜೆಪಿ ಖಾಲಿ: ಈಶ್ವರಪ್ಪಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್
ಸಚಿವರಾದ ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈಶ್ವರಪ್ಪರ ವಿರುದ್ಧ ಮುಗಿಬಿದ್ದಿದ್ದರು. ಹೆಚ್. ಕೆ. ಪಾಟೀಲ್ ಅವರು 24 ಗಂಟೆಯೊಳಗೆ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಆದರೆ, ತನ್ನ ಹೇಳಿಕೆಗೆ ಬದ್ಧ ಎಂಬ ಹೇಳಿಕೆ ನೀಡಿದ್ದ ಈಶ್ವರಪ್ಪರ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ.