ಪ್ರಧಾನಿ ನರೇಂದ್ರ ಮೋದಿ ಅವರು ತಾನು ಅಧಿಕಾರಕ್ಕೆ ಬಂದ ನಂತರವೇ ಉಚಿತ ಅಕ್ಕಿ, ಧಾನ್ಯಗಳನ್ನು ಪಡಿತರ ಚೀಟಿ ಮೂಲಕ ನೀಡಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತಾನು ಎಲ್ಲೆಲ್ಲಿ ಚುನಾವಣಾ ಪ್ರಚಾರ ಮಾಡಲು ಹೋಗುತ್ತಾರೋ ಅಲ್ಲೆಲ್ಲ ಉಚಿತ ಪಡಿತರವನ್ನು ‘ಮೋದಿ ಗ್ಯಾರಂಟಿ’ ಎಂದು ಹೇಳಿಕೊಂಡು ಬರುತ್ತಿದ್ದಾರೆ.
ಆದ್ರೆ ಇದು ನಿಜವಾಗಿಯೂ ಮೋದಿ ಅವರ ಗ್ಯಾರಂಟಿಯಾ? ಪ್ರಧಾನಿ ಮೋದಿಯೇ ನಮಗೆ ಪಡಿತರದಲ್ಲಿ ಅಕ್ಕಿ, ಧಾನ್ಯ ನೀಡಲು ಆರಂಭಿಸಿದ್ದಾ? ಖಂಡಿತವಾಗಿಯೂ ಇಲ್ಲ. ನೇರವಾಗಿ ಹೇಳುವುದಾದರೆ ಇದು ಮನ್‌ಮೋಹನ್ ಸಿಂಗ್ ಗ್ಯಾರಂಟಿಯೇ ಹೊರತು ಮೋದಿ ಗ್ಯಾರಂಟಿ ಅಲ್ಲ.
ಯೋಜನೆ, ಕಾನೂನು ಬಗ್ಗೆ ವಿವರ
ಜನರಿಗೆ ಪೌಷ್ಟಿಕ ಆಹಾರವನ್ನು ನೀಡುವ ನಿಟ್ಟಿನಲ್ಲಿ ಮನ್‌ಮೋಹನ್ ಸಿಂಗ್ ಸರ್ಕಾರವು 2013ರ ಡಿಸೆಂಬರ್ 17ರಂದು ರಾಷ್ಟ್ರೀಯ ಖಾದ್ಯ ಸುರಕ್ಷಾ ಕಾನೂನು ಅಥವಾ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ (National Food Security Act) ಅನ್ನು ಜಾರಿ ಮಾಡಿದೆ. ಈ ಕಾನೂನು ಜಾರಿ ಮಾಡಿದ ಕಾರಣದಿಂದ ನಾವಿಂದು ಪಡಿತರದ ಮೂಲಕ ಅಕ್ಕಿ, ಗೋಧಿ ಪಡೆಯಲು ಸಾಧ್ಯವಾಗುತ್ತಿದೆಯೇ ಹೊರತು, ಪ್ರಧಾನಿ ಮೋದಿ ಕೃಪಕಟಾಕ್ಷದಿಂದಲ್ಲ.
ಇದನ್ನು ಓದಿದ್ದೀರಾ? ಮೋದಿ ಚಿತ್ರವುಳ್ಳ ‘ಚೀಲ’ಗಳ ಖರೀದಿಗೆ 15 ಕೋಟಿ ರೂ. ತೆತ್ತ ಕೇಂದ್ರ!
ಈ ಯೋಜನೆಯಡಿಯಲ್ಲಿ ಆರಂಭದಲ್ಲಿ ಅಕ್ಕಿ ಪ್ರತಿ ಕೆಜಿಗೆ ಮೂರು ರೂಪಾಯಿ, ಗೋಧಿ ಎರಡು ರೂಪಾಯಿ, ಇತರೆ ಧಾನ್ಯ ಒಂದು ರೂಪಾಯಿಗೆ ನೀಡಲಾಗುತ್ತಿತ್ತು. ಆದರೆ ಕ್ರಮೇಣ ಧಾನ್ಯವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ಆರಂಭಿಸಲಾಯಿತು. ಈಗ ಉಚಿತ ಇರುವುದನ್ನು ನಿಲ್ಲಿಸಿದರೂ ಕೂಡಾ ಕಾನೂನು ಪ್ರಕಾರವಾಗಿ ನಮಗೆ ಎರಡು-ಮೂರು ರೂಪಾಯಿಗೆ ಅಕ್ಕಿ ನೀಡಲೇಬೇಕಾಗುತ್ತದೆ.
ಕಾನೂನನ್ನು ವಿರೋಧಿಸಿದ್ದ ಮೋದಿ
“ಮನ್‌ಮೋಹನ್ ಸಿಂಗ್ ಸರ್ಕಾರ ಇದ್ದಾಗ ಅಕ್ಕಿ, ಧಾನ್ಯಗಳ ಗೋದಾಮಿಗೆ ಬೀಗ ಹಾಕಲಾಗಿತ್ತು. ವಿಪಕ್ಷದಲ್ಲಿದ್ದ ನಾವು ಜನರಿಗೆ ಅಕ್ಕಿ ಕೊಡಿ ಎಂದು ಹೇಳುತ್ತಿದ್ದೆವು. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ರೇಷನ್ ನೀಡಲೇ ಇಲ್ಲ” ಎಂದು ಪ್ರಧಾನಿ ಮೋದಿ ಅವರು ಪ್ರಸ್ತುತ ತಾನು ಹೋದಲ್ಲಿ ಬಂದಲ್ಲೆಲ್ಲ ಭಾಷಣದಲ್ಲಿ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಪ್ರಧಾನಿ ಮೋದಿ ಅವರೇ ಮನ್‌ಮೋಹನ್ ಸರ್ಕಾರದ ಈ ಕಾನೂನನ್ನು ವಿರೋಧಿಸಿದ್ದವರು.
ಹೌದು ಉಚಿತ ಧಾನ್ಯ ನೀಡುವ ಕಾನೂನನ್ನು ವಿರೋಧ ಮಾಡಿ ಮನ್‌ಮೋಹನ್ ಸಿಂಗ್ ಅವರಿಗೆ ಮೋದಿ ಪತ್ರವನ್ನು ಕೂಡಾ ಬರೆದಿದ್ದರು. 2013ರಲ್ಲಿ ಈ ಯೋಜನೆಯನ್ನು ವಿರೋಧಿಸಿದ್ದ ಮೋದಿ ಅವರು “ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಬಡವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ” ಅಂತ ಹೇಳಿದ್ದರು.
ಇದನ್ನು ಓದಿದ್ದೀರಾ? ನರೇಂದ್ರ ಮೋದಿಯ ವಾಸ್ತವ | ಭಾರತೀಯರು ಹೇಗೆ ಮೂರ್ಖರಾದರು ? Dhruv Rathee
ಆದರೆ 2014ರಲ್ಲಿ ತಾನು ಅಧಿಕಾರಕ್ಕೆ ಬಂದು ಕೆಲವು ವರ್ಷಗಳ ಬಳಿಕ ಅದೇ ಯೋಜನೆಯ ಹೆಸರನ್ನು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ’ ಎಂದು ಬದಲಾಯಿಸಿ ನಾನೇ ಈ ಯೋಜನೆಯನ್ನು ಜಾರಿ ಮಾಡಿ ಬಡವರಿಗೆ ಸಹಾಯ ಮಾಡಿದ್ದು ಎಂದು ಹೇಳಿಕೊಂಡು ಬಂದಿದ್ದಾರೆ.
ಪೌಷ್ಟಿಕಾಂಶದ ಕೊರತೆ
ಪ್ರಮುಖವಾಗಿ ಪೌಷ್ಟಿಕಾಂಶ ಆಹಾರ ನೀಡುವ ಉದ್ಧೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ ಇಂದಿಗೂ ದೇಶದಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿಯೇ ಉಳಿದಿದೆ. ಜನರಿಗೆ ಉಚಿತ ಅಕ್ಕಿ ಸಿಕ್ಕರೂ ಕೂಡಾ ಉಳಿದ ಎಲ್ಲ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿರುವ ಕಾರಣ ಅದನ್ನು ಖರೀದಿಸಿ ಪೌಷ್ಟಿಕಾಂಶ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪೌಷ್ಟಿಕಾಂಶದ ಕೊರತೆ ಇಂದಿಗೂ ದೇಶದ ಅತೀ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ. 2013ರಿಂದ ಭಾರತದ ಜಿಡಿಪಿಯಲ್ಲಿ ಶೇಕಡ 50ರಷ್ಟು ಹೆಚ್ಚಾಗಿದ್ದರೂ ಕೂಡಾ ವಿಶ್ವದ ಅಪೌಷ್ಟಿಕತೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳು ಭಾರತದಲ್ಲಿ ಇದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗೆ ಲೇವಡಿ ಯಾಕೆ?
ಇನ್ನು ಬಿಜೆಪಿಗರು ಸದಾ ಕಾಂಗ್ರೆಸ್ ಗ್ಯಾರಂಟಿಯನ್ನು ವಿರೋಧ ಮಾಡುತ್ತಾರೆ. ಬಡವರಿಗೆ ಉಚಿತ ಅಕ್ಕಿ ನೀಡಿ ಅವರನ್ನು ನೀವೇ ಆಲಸಿಗರನ್ನಾಗಿ ಮಾಡುತ್ತಿದ್ದೀರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವಾದ ಮಾಡುವ ಬಿಜೆಪಿಗರು ಇದ್ದಾರೆ. ಆದರೆ ಪ್ರಧಾನಿ ಮೋದಿ “ಪಡಿತರದ ಮೂಲಕ ಉಚಿತ ಅಕ್ಕಿ ವಿತರಣೆ ಆರಂಭಿಸಿದ್ದು ನಾನೇ” ಎಂದು ಸುಳ್ಳು ಹೇಳಿದಾಗ, “ಜನರಿಗೆ ಉಚಿತ ಅಕ್ಕಿ ನೀಡಿ ಮೋದಿ ಸಹಾಯ ಮಾಡಿದ್ದಾರೆ ನೋಡಿ” ಎಂದು ಮೋದಿಯನ್ನು ಹಾಡಿ ಹೊಗಳುತ್ತಾರೆ.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
ಪ್ರಚಾರದ ಗೀಳು ಬಿಡದ ಮೋದಿ
2013ರ ಈ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಅಡಿಯಲ್ಲಿ ಬರುವ ರಾಷ್ಟ್ರೀಯ ಖಾದ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ಎಂದಿಗೂ ಕೂಡಾ ತನ್ನ ಚಿತ್ರವನ್ನ ಪಡಿತರ ಚೀಲದಲ್ಲಿ ಹಾಕಿಸಿಲ್ಲ.
ಇನ್ನು ಸದಾ ಪ್ರಚಾರದ ಗೀಳನ್ನು ಹೊಂದಿರುವ ಪ್ರಧಾನಿ ಮೋದಿ ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಪಡಿತರ ಅಕ್ಕಿಯ ಚೀಲಗಳಲ್ಲಿ ತನ್ನ ಚಿತ್ರ ಹಾಕಿಸಿದ್ದಾರೆ. ಆದರೆ ವಾಸ್ತವವಾಗಿ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಖರ್ಚು ಕೂಡಾ ಇರುತ್ತದೆ. ಹಾಗಾಗಿ ಆಯಾ ರಾಜ್ಯದ ಮುಖ್ಯಮಂತ್ರಿಗಳ ಚಿತ್ರವನ್ನು ಕೂಡಾ ಹಾಕಲು ಪ್ರಧಾನಿ ಮೋದಿ ಒಪ್ಪಿಕೊಳ್ಳುತ್ತಾರಾ?
ಇನ್ನು ತನ್ನ ಪ್ರಚಾರಕ್ಕಾಗಿ ಪಡಿತರ ಚೀಲದಲ್ಲಿ ತನ್ನ ಚಿತ್ರವನ್ನೇನೋ ಹಾಕಿಸಿಕೊಂಡರು. ಆದರೆ ಈ ಚೀಲ ತಯಾರಿಗೆ ತಗುಲಿದ ಕೋಟ್ಯಂತರ ರೂಪಾಯಿ ಖರ್ಚಿನ ಹೊರೆಯನ್ನು ತೆರಿಗೆ ಮೂಲಕ ಮತ್ತೆ ಜನರ ಮೇಲೆಯೇ ಹೊರಿಸಲಾಗುತ್ತದೆ.
ಅಷ್ಟಕ್ಕೂ ಪಡಿತರದ ಮೂಲಕ ಅಕ್ಕಿ, ಧಾನ್ಯ ಪಡೆಯುವುದು ನಮ್ಮ ಹಕ್ಕು, ಇದು ಪ್ರಧಾನಿ ಕೃಪೆಯಲ್ಲ. ಇದು ಸಂಸತ್ತಿನಲ್ಲಿ ಜಾರಿ ಮಾಡಲಾದ ಕಾನೂನು. ಈ ಕಾನೂನಿನಿಂದಾಗಿ ನಮಗೆ ರೇಷನ್ ಸಿಗುತ್ತಿದೆಯೇ ಹೊರತು ಮೋದಿಯ ಗ್ಯಾರಂಟಿಯಿಂದಾಗಿ ಅಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.