“ರಾಜ್ಯದಲ್ಲಿ ಗೋಧ್ರಾ ರೀತಿ ದುರಂತ ಸಂಭವಿಸಬಹುದು” ಎಂದು ಹೇಳಿಕೆ ನೀಡಿದ್ದ ಬಿಕೆ ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸಿರುವ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, “ಬಿಕೆ ಹರಿಪ್ರಸಾದ್ ಅವರನ್ನು ಸರ್ಕಾರ ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ಮಂಗಳೂರಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಒಂದು ಕಡೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತ ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಗಳು ಪರಿಶೀಲನೆ ಮಾಡುತ್ತಾರೆ ಅಂತ ಹೇಳುತ್ತಾರೆ. ಕೂಡಲೇ ಬಿಕೆ ಹರಿಪ್ರಸಾದ್ ಅವರು ತಮಗೆ ಇದ್ದ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಬೇಕು ಅಥವಾ ಇವರನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು.
“ಗೋಧ್ರಾ ಘಟನೆಯ ಹಿಂದೆ ಕಾಂಗ್ರೆಸ್ ಕೂಡ ಇತ್ತು. ಅಂದು ಮೋದಿ ಸರ್ಕಾರವನ್ನ ಬೀಳಿಸಲು ಕಾಂಗ್ರೆಸ್ ಕೂಡ ಷಡ್ಯಂತ್ರ ಮಾಡಿತ್ತು. ಹಾಗಾಗಿ ಅದೇ ರೀತಿಯ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಾನು ಆರೋಪಿಸುತ್ತಿದ್ದೇನೆ. ಹಾಗಾಗಿ, ತಕ್ಷಣವೇ ಬಿಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ” ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಉತ್ತರಿಸಿದ ಕಟೀಲ್, “ಭಾರತ ಹಿಂದೂರಾಷ್ಟ್ರ. ಹಿಂದೂ ಅನ್ನುವಂತಹ ಶಬ್ದ ಜಾತ್ಯತೀತವಾದದ್ದು. ನಮ್ಮ ದೇಶದಲ್ಲಿ ರಾಮರಾಜ್ಯದ ಪರಿಕಲ್ಪನೆ ಬಿತ್ತಿದವರೇ ಮಹಾತ್ಮ ಗಾಂಧೀಜಿ. ಗಾಂಧೀಜಿ ಈ ದೇಶವನ್ನು ಜಾತ್ಯತೀತ ಮಾಡಿ ಎಂದು ಹೇಳಿರಲಿಲ್ಲ. ಬದಲಾಗಿ ರಾಮರಾಜ್ಯ ಮಾಡಿ ಎಂದಿದ್ದರು. ರಾಮರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ. ಹಾಗಾದರೆ, ಗಾಂಧೀಜಿ ಒಪ್ಪಿದ್ದ ವಿಚಾರವನ್ನು ಯತೀಂದ್ರ ಸಿದ್ದರಾಮಯ್ಯ ಒಪ್ಪುವುದಿಲ್ಲವೇ? ಇದನ್ನು ಮೊದಲು ಅವರು ಸ್ಪಷ್ಟಪಡಿಸಲಿ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಗೋಧ್ರಾ ರೀತಿ ದುರಂತ ಸಂಭವಿಸಬಹುದು: ಬಿ ಕೆ ಹರಿಪ್ರಸಾದ್ ಎಚ್ಚರಿಕೆ
“ಈ ದೇಶ ಹಿಂದೂ ರಾಷ್ಟ್ರ ಆದ ಕಾರಣದಿಂದಾಗಿ ಜಾತ್ಯತೀತತೆ ಉಳಿದಿದೆ. ಹಿಂದೂ ರಾಷ್ಟ್ರದ ಪರಿಣಾಮವಾಗಿಯೇ ಈ ದೇಶ ಚೆನ್ನಾಗಿ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತದ ವೇಳೆ ಈ ದೇಶದಲ್ಲಿ ಪಾಕಿಸ್ತಾನದ ರೀತಿಯ ಆಡಳಿತವಿತ್ತು. ಆಗ ಭಯೋತ್ಪಾದನೆ, ನಕ್ಸಲ್ ಚಟುವಟಕೆ ತಾಂಡವವಾಡುತ್ತಿತ್ತು. ಇಂದು ಅವೆಲ್ಲವೂ ನಿಂತಿದೆ. ಅದಕ್ಕೆ ಕಾರಣ ಹಿಂದೂ ರಾಷ್ಟ್ರದ ಪರಿಕಲ್ಪನೆಯೇ ಕಾರಣ. ಇದನ್ನೇ ಗಾಂಧೀಜಿ ಬಯಸಿದ್ದರು” ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ‘ರಾಮರಾಜ್ಯ’ವನ್ನು ತಮ್ಮದೇ ಶೈಲಿಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವ್ಯಾಖ್ಯಾನಿಸಿದ್ದಾರೆ.
“ಮರ್ಯಾದಾ ಪುರುಷ ರಾಮನನ್ನು ನಮ್ಮ ದೇಶ ಆದರ್ಶವನ್ನಾಗಿಸಿಕೊಂಡಿದೆ. ರಾಮನಿಗೆ ಇನ್ನೊಂದು ಹೋಲಿಕೆ ಇಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರನ್ನು ಯಾರೂ ಬೇಕಾದರೂ ಇಟ್ಟುಕೊಳ್ಳಬಹುದು. ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ರಾಮ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇದೆ. ಆದರೆ ರಾವಣನ ಗುಣ ಇದೆ” ಎಂದು ಬಿಜೆಪಿ ಕರ್ನಾಟಕ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.