ನೆಂಟನ ಮೇಲೆ ನಡೆದ ಹಲ್ಲೆ ಎದೆಗೆ ಬಾಕು ತಿವಿದಂತಾಯಿತು: ಉಜ್ಜಜ್ಜಿ ರಾಜಣ್ಣ ಬರೆಹ 

ಮಾದಿಗರ ಕರೇಬಾನಿ/ ಕರೇಗುಂಡಿಯ ನೀರನ್ನು ಮದುವೆಯ ಮುಹೂರ್ತಕ್ಕೇ ಕೊಂಡೊಯ್ಯುವರೆಂದ ಮೇಲೆ ಅದಕ್ಕಿಂತ ಮೇಲಾದುದು ದೇವರ ಮನೆಯಲ್ಲಿರುವುದೇನು? “ಮೆಟ್ಟು ಕೊಟ್ಟವರು ನೆಂಟರು, ಅಂಗಾಲಿನ ನೆತ್ತರು ಸೋರದ ಹಾಗೆ ತಣ್ಣಗಿಟ್ಟುಕೊಂಡವರು” ಎಂದು ಭಾವಿಸಿದವರಿಂದ ಇಂತಹ ಅನಾಹುತಾಕಾರಿ ಘಟನೆಗಳು ನಡೆಯಬಾರದಾಗಿತ್ತು. ಮಣೆಗಾರರ ಮತಗಳೂ ನಮ್ಮ ರಾಜಕೀಯ ಬದುಕನ್ನು ಗೆಲ್ಲಿಸಿವೆ. ಬಾಗಿಲು ತೆರೆದು ಒಳಗೆ ಕರೆಯಿರಿ ಅವರು ನಮ್ಮ ಬಂಧುಗಳು. ರಾಜಕೀಯ ಫಲಾಪೇಕ್ಷಿತ ಯಾವ ಸಮುದಾಯವೂ ಇದನ್ನು ಮರೆಯಬಾರದು. ಕಾಡುಗೊಲ್ಲರ ಜನಪ್ರತಿನಿಧಿಗಳು ಇಂತಹ ಸಾಮಾಜಿಕ ಅಪದ್ದಗಳ ವಿರುದ್ದ ಎದ್ದು ಮಾತನಾಡವುದನ್ನೂ ಮರೆಯದಿರುವುದು ಎಲ್ಲಾ ಕಾಲದ ತುರ್ತು ಮತ್ತು ದರ್ದು.

ಹೋರಾಟಗಾರ ಕುಣಿಗಲ್ ನಾಗಣ್ಣ ಕೊಟ್ಟ ಸುದ್ದಿ ನಿನ್ನೆ ರಾತ್ರಿ ಸರಿ ಹೊತ್ತಿನ ತನಕ ನಿದ್ದೆಗೆಡಿಸಿತ್ತು. ಕಣ್ಣು ಜೊಂಪುತ್ತಿದ್ದವು ಅಷ್ಟರೊಳಗಾಗಲೇ ಮೊಬ್ಬರಿಯುವ ಹೊತ್ತಾಗಿ, ಬೆಳಗಾದಾಗಲೂ ನಾಗಣ್ಣ ಕೊಟ್ಟ ಸುದ್ದಿಯೇ ನೆನಪಾಗಿ ನೋವುಂಟು ಮಾಡತೊಡಗಿತು. ಇಂತಹ ಘಟನೆಗಳು ನಡೆದು ಸುದ್ದಿಗಳಾಗುತಿದ್ದರೂ ಸಮಾಜ ಅರಿತುಕೊಳ್ಳದಿದ್ದರೆ, ಕಾನೂನಿನ ಕಠಿಣ ಕ್ರಮಗಳು ಅನಿವಾರ್ಯವಾಗುತ್ತವೆ. ಸಂತ್ರಸ್ಥರ ಕುಟುಂಬಗಳು ಅತೀವ ನೋವುಪಡುತ್ತವೆ. ಹಲ್ಲೆ ಮಾಡೋರಿಗೆ ಅಳೋರ ಕಷ್ಟಗಳು ಕಾನೂನಿನ ಮೂಲಕವೇ ಅರ್ಥವಾಗಬೇಕಾಗಿವೆ.

ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು, ಗೇರುಮರಡಿ ಗೊಲ್ಲರಹಟ್ಟಿಯಲ್ಲಿ ದಲಿತಯುವಕ ಮಾರುತಿಯವರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಕಾನೂನು ಕೈಗೆತ್ತಿಕೊಳ್ಳುವ ಅಮಾನವೀಯ ಸಾಮೂಹಿಕ ಕೃತ್ಯವಿದು. ತಿಳಿಯದೆ ಮಾಡಿದೆವು ಎಂದರೆ ಕಾನೂನು ಒಪ್ಪದು, ಮಾಡಿದ್ದೀಯ ಅನುಭವಿಸು ಎನ್ನುತ್ತದೆ ಶಾಸನ. ಇಂತಹ ವಿಧ್ವಂಸಕ ಕೃತ್ಯಗಳಿಗೆ ಯಾರೂ ಕೂಡ ಮೈವೊಡ್ಡಿಕೊಳ್ಳುವುದು, ಹಲ್ಲೆಗೆ ಮನಸ್ಸು ಮಾಡುವುದು, ಮಾಡಬಾರದ ಕೆಲಸ. ಮಾನವ ಸಮಾಜಕ್ಕೇ ತೋರುವ ಕುಲಕಂಟಕತನ. ಶ್ರೇಷ್ಠತೆಯ ವ್ಯಸನಕ್ಕೀಡಾದವರ ಮಾನಸಿಕ ಅಧಃಪತನವಿದು. ನೆಲದ ಕಾನೂನುಗಳು ಎಲ್ಲರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ಬೆಂಬಲಕ್ಕಿರುವಾಗಲಾದರೂ ತಗ್ಗಿ ಬಗ್ಗಿ ನಡೆಯುವುದನ್ನು ಸಮಾಜಗಳು ಅರ್ಥಮಾಡಿಕೊಳ್ಳಬೇಕಾದ ಕಾಲವಿದು.

ಹೊಡೆಯಲು ಕೈ ಎತ್ತುವುದೇ ಮೂರ್ಖತನ ಮತ್ತು ಕೊರಳ ಕಂಟಕತನ. ಮಣೆಗಾರ ಸಮಾಜದ ಜೊತೆಯಲ್ಲಿ ಯಾವುದೇ ಸಮಾಜ ಜಾತಿಯ ಹಗೆತನ ಇಟ್ಟುಕೊಳ್ಳುವುದು, ಅವರಿಗೆ ದ್ರೋಹ ಬಗೆಯುವುದರ ಹುನ್ನಾರವೇ ಆಗಿರುತ್ತದೆ. ಹಟ್ಟಿಗೆ ಬಂದೋರನ್ನ ಹೊಡೆಯುವುದಕ್ಕೆ ನಾವು ಹೊಟ್ಟೆಗೆ ಏನು ತಿನ್ನುತ್ತೇವೆ ಎಂದು ಅರಿವಿರದಿದ್ದರೆ ಅದೆಂತಹ ಮಾನವಂತರ ಬದುಕು, ಬಾಳಾಗುತ್ತದೆ. ಅನ್ನ ತಿಂದು ಅರಿವೆ ಹೊದಿಯುವವರು ಜಾತಿಕೆಟ್ಟೆವೆಂದು ಬಾವಿಸಿ ಕೈ ಮುಂದುಮಾಡುವುದು ಹೀನ ಕೆಲಸ. ಸರೀಕ ಸಮಾಜಗಳ ಜೊತೆಯಲ್ಲಿ ಸಹಬಾಳ್ವೆ ಬಹಳ ಮುಖ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಲ್ಲೆ ನಡೆದಿದೆ ಎಂದಾದರೆ ಅದು ಅಪರಾಧವಾಗುತ್ತದೆ. ಎಸ್ಸಿ/ಎಸ್ಟಿ ದೌರ್ಜನ್ಯ ಕಾಯಿದೆಯ ಜಾರಿಯ ಮೂಲಕವೇ ಇಂತಹ ಹಲ್ಲೆಗಳನ್ನು ಹತ್ತಿಕ್ಕುವುದು ಅನಿವಾರ್ಯ. ಗೊಲ್ಲರ ಹಟ್ಟಿಗಳು ದಲಿತರ ಮೇಲಿನ ಹಲ್ಲೆಗಳನ್ನು ಎದೆಗಾಕಿಕೊಂಡು ಹೋದರೆ ಕಾನೂನಿನ ಕುಣಿಕೆಗೆ ಕೊರಳೊಡ್ಡುವುದನ್ನು ಯಾರಿಂದಲೂ ತಪ್ಪಿಸಲಾಗದು ಎಂಬ ತಿಳಿವಳಿಕೆ ಜನರಿಗೆ ಇರಬೇಕಾಗುತ್ತದೆ.

ಅಯೋಗ್ಯರು, ಅವಿವೇಕಿಗಳು, ಕರ್ಮಟರು, ಧಾರ್ಮಿಕ ಅಡ್ಡಕಸಬಿಗಳು, ದೇವರುಗಳು ಮತ್ತು ನಂಬಿಕೆಗಳ ಹೆಸರಿನಲ್ಲಿ ಜಾತಿಗಳನ್ನು ಹುಟ್ಟಾಕಿರುತ್ತಾರೆ. ಶ್ರೇಣೀಕೃತ ಸಮಾಜದ ಅಮಾನವೀಯ ನಡೆ ಕಾಡುಗೊಲ್ಲ ಬುಡಕಟ್ಟು ಸಮಾಜದೊಳಗೆ ಸುಳಿಯಬಾರದಾಗಿತ್ತು. “ಮೆಟ್ಟು ಕೊಟ್ಟವರು ನೆಂಟರು, ಅಂಗಾಲಿನ ನೆತ್ತರು ಸೋರದ ಹಾಗೆ ತಣ್ಣಗಿಟ್ಟುಕೊಂಡವರು” ಎಂದು ಭಾವಿಸಿದವರಿಂದ ಇಂತಹ ಅನಾಹುತಾಕಾರಿ ಘಟನೆಗಳು ನಡೆಯಬಾರದಾಗಿತ್ತು.

ವೈಯಕ್ತಿಕ ನೆಲೆಯಲ್ಲಿ ಅಥವಾ ಸಾಮಾಜಿಕವಾಗಿ, ಕೋಮುದೌರ್ಜನ್ಯ ಯಾವುದೇ ಸಮಾಜ ಮಾಡುವುದು, ಕಾರ್ಯಸಾದುವೆಂದು ನಂಬುವುದಿದೆಯಲ್ಲ, ಅದು ಕಾನೂನು ಬಾಹಿರವಷ್ಟೇ ಅಲ್ಲ; ಅಂಚಿನ ಸಮುದಾಯಗಳಿಗೆ ಬಗೆಯುವ ದ್ರೋಹವಾಗುತ್ತದೆ. ಗೊಲ್ಲರ ಹಟ್ಟಿಗಳಿಗೆ ದಲಿತರು ಪ್ರವೇಶ ಮಾಡಬಾರದು ಎಂಬುದು ಮೂಢನಂಬಿಕೆಯ ನಡೆ.‌ ಅದು ಕರ್ಮಟರು ಬಿತ್ತಿರುವ ಜಾತಿಯ ವಿಷ ಬೀಜ. ದಲಿತರು ಹಟ್ಟಿಗಳಿಗೆ ಬಂದರೆ ಅದರಲ್ಲಿ ಅಪರಾಧವೇನು?

ಮಾದಿಗರ ಕರೇಬಾನಿ/ ಕರೇಗುಂಡಿಯ ನೀರನ್ನು ಮದುವೆಯ ಮುಹೂರ್ತಕ್ಕೇ ಕೊಂಡೊಯ್ಯುವರೆಂದ ಮೇಲೆ ಅದಕ್ಕಿಂತ ಮೇಲಾದುದು ದೇವರ ಮನೆಯಲ್ಲಿರುವುದೇನು? ದೇವರುಗಳ ಹೊಳೆಸೇವೆಯಲ್ಲಿ ತೆಗೆಯುವ ಚಿಲುಮೆ ನೀರಿಗಿಂತಲೂ ಪವಿತ್ರ ಮಾದಿಗರ ಮನೆಯ ಕರೆಬಾನಿಯ ನೀರು ಎಂದು ನಂಬಿರುವ ಸಮಾಜಗಳೂ ಇವೆ. ತಿಳಿವಳಿಕೆಯಿಂದ ಉತ್ತಮರಾಗದೆ ಜಾತಿದೌರ್ಜನ್ಯಗಳ ಮೂಲಕ ತೆಗವು ತೋರಿದರೆ ಕಾನೂನು ಉಲ್ಲಂಘನೆ ಆಗುತ್ತದೆ. ಮರ್ಯಾದೆಯಿಂದ ಬಾಳುವ ಯಾವ ಸಮಾಜವೂ ಇತರರ ಭಾವನೆಗಳ ಹತ್ಯೆಗೆ ಕೈಹಾಕಲಾರದು. ಜಾತಿಯಿಂದ ಕೀಳೆಂದು ಭಾವಿಸುವುದು ಹೇಸಿಗೆ ತಿನ್ನುವ ಕೆಲಸ. ಅನ್ನ ತಿನ್ನೋ ಬಾಯಿಂದ ಹೇಸಿಗೆಯ ಮೆಲುಕಾಕುವುದು ಉಂಟೇ? ಏನು ಹೇಳಬೇಕೋ ಗೊತ್ತಾಗದು.

ಮಾದಿಗರ ಮತ ಕೇಳಲು ಅವರ ಹಟ್ಟಿಗಳಿಗೆ ಹೋಗಿರುತ್ತೀರಿ. ಅವರು ನಿಮ್ಮ ಹಟ್ಟಿಗಳಿಗೆ ಬಂದರೆ ಏಕೆ ಸಿಡಿಲು ಬಡಿದಂತಾಗುವುದು. ಅವರ ಹೊಲಮನೆಗಳಲ್ಲಿ ಇವರ ಕುರಿದನಗಳು ಮೇದು ರೊಪ್ಪಗಳಿಗೆ ಹಿಂದಿರುಗುತ್ತವೆ. ಮಣೆಗಾರರ ಹೊಲಮನೆಯ ಮೇವು ಇವರ ರೊಪ್ಪದ ರಾಸುಗಳಿಗೆ ಅಜೀರ್ಣವಾಗದಿದ್ದ ಮೇಲೆ, ಅವರೂ ಇವರ ಹೊಲಮನೆಗಳಿಗೆ ಬಂದರೆ ಏನು ತಪ್ಪು. ನಿಮ್ಮ ಒಕ್ಕು ಬಳಕೆ ಅವರಿಗೆ, ಅವರ ಒಕ್ಕು ಬಳಕೆ ನಿಮಗೆ ನಿಷಿದ್ದವೇನಲ್ಲ ಪರಂಪರೆಯಿಂದಲೂ ಸಹ. ಕುಲಮೂಲ ಪರಂಪರೆಯೊಳಗೆ ರಕ್ತ ಸಂಬಂದಗಳೇ ಬೆರೆತು ಹೋಗಿವೆ.

ಇದನ್ನು ಓದಿದ್ದೀರಾ?: ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ

ಮಣೆಗಾರರು ಬಾಡಿನ ಹಬ್ಬ ಮಾಡಿದರೆ ಅವರ ಕಟ್ಟೇ ಮನೆಗಳಲ್ಲಿ ಕಾಡುಗೊಲ್ಲರಿಗೊಂದು ಬಾಡಿನ ಪಾಲು ಮೀಸಲಿಡುವ ನಡೆಯನ್ನು ಮೂಢನಂಬಿಕೆ ಎನ್ನುವುದೋ? ಸೋದರ ಸಂಬಂಧ ಎಂದು ಭಾವಿಸುವುದೋ? ಕಾಡುಗೊಲ್ಲರ ಕಟ್ಟೇ ಮನೆಗಳು ಯೋಚಿಸಬೇಕು. ಈ ಪಾರಂಪರಿಕ ಬಾಂಧವ್ಯ ಪತನವಾಗದ ಹಾಗೆ ನಿಗಾ ವಹಿಸಬೇಕಾಗುತ್ತದೆ. ಹಸಿವಿಗೆ ಆಹಾರ ಹಂಚಿ ಸಮಾಜವೊಂದನ್ನು ಉಳಿಸಿಕೊಂಡ ಅನ್ನದ ಋಣಬಾಂಧವ್ಯವಿದು. ಯಗಡೇರು, ಕುರಿಯೋರು ಮಣೆಗಾರರಲ್ಲೂ ಇದ್ದಾರೆ. ಯಗಡೇರು, ಕುರಿಯೋರು ಗೊಲ್ಲರೊಳಗೂ ಇದ್ದಾರೆ. ಯಗಡೇರು ಮತ್ತು ಕುರಿಯೋರು ಮಣೆಗಾರರೊಳಗೂ ಅಣ್ಣತಮ್ಮಂದಿರು. ಹಾಗೆಯೇ ಯಗಡೇರು, ಕುರಿಯೋರು ಕಾಡುಗೊಲ್ಲರೊಳಗೂ ಅಣ್ಣತಮ್ಮಂದಿರು. ಇಂತಹ ಅನ್ನ ನೀರಿನ ಅನನ್ಯವಾದ ಋಣ ಸಂಬಂಧ ಇದ್ದುದರಿಂದಲೇ ತಾನೆ ಮಣೆಗಾರರು, ಅವರ ಹಬ್ಬಗಳಲ್ಲಿ ಕಾಡುಗೊಲ್ಲರಿಗೆ ಒಂದು ಬಾಡಿನ ಪಾಲು ಮೀಸಲಿಡವುದು. ಮಣೆಗಾರರ ವಿರುದ್ದ ಜಾತೀಯತೆ ಮಾಡುವ ಮನೆಯಾಳುತನಕ್ಕೆ ಯಾರೂ ಕೈ ಹಾಕಬಾರದು ಅದು ನೀಚತನವಾಗುವುದು. “ಬಿದ್ದ ಬೀಳಿನ ಒಂದು ತೊಳೆಯ ಅನ್ನದ ಅಗುಳನ್ನು ಜೊತೆಗಾರ ಸಮುದಾಯದ ಹಸಿವಿಗೆ ಎತ್ತಿಟ್ಟ ಮಣೆಗಾರ”. ತಮ್ಮನೋ ಅಣ್ಣನೋ ಕರುವಿನ ಕಾಲು ತಿಂದ ಎಂಬ ನ್ಯಾಯ ಒಂದಿದೆಯಲ್ಲ ಗೊಲ್ಲರೊಳಗೆ. ಎರಡೂ ಮಾಂಸಾಹಾರಿ ಸಮುದಾಯಗಳೇ. ಕುಲ ಪರಂಪರೆಯೊಳಗೆ ಎರಡೂ ಸಮುದಾಯಗಳ ಮಧ್ಯೆ ಹಾಸುಬಂಡೆಯ ಹಾಗೆ ಗಟ್ಟಿಯಾಗಿವೆ ಮಾನವೀಯ ‘ಕರುಳು ಬೆನ್ನಿನ’ ಸಂಬಂದಗಳು.

ಚಿಕ್ಕನಾಯ್ಕನಹಳ್ಳಿ, ಅರಸೀಕೆರೆ, ತಿಪಟೂರು ತಾಲ್ಲೂಕುಗಳಲ್ಲಿ ಚಿತ್ರದೇವರು ಮಣೆಗಾರರ ಆರಾಧ್ಯದೈವ. ಆಂಧ್ರ ಗಡಿ ನಿಡುಗಲ್ಲು ‘ನೀಲಾವತಿ ಪಟ್ಟಣ’ದಿಂದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ‘ನಾಗಪುರಿ’ಯವರೆವಿಗೂ ಚಿತ್ರದೇವರು ಮತ್ತು ಗಂಗೆ ಮಾಳಿ ಕಾವ್ಯ ಬೆಳೆದಿದೆ. ಮಣೆಗಾರರು ಮತ್ತು ಕಾಡುಗೊಲ್ಲ ಆರಾದ್ಯದೈವ ಜುಂಜಪ್ಪ ಮತ್ತು ಚಿತ್ರದೇವರ ನೆಲೆಗಳು ಚಿಕ್ಕಮಗಳೂರು ಜಿಲ್ಲೆಗಳ ತನಕವೂ ಇವೆ. ಈ ನಡುವೆ ಬರುವ ಮಣೆಗಾರರ ಹಟ್ಟಿಗಳಲ್ಲಿ “ಚಿತ್ರದೇವರ” ನೆಲೆಗಳೂ ಇವೆ. ಇಂತಹ ಕುಲಮೂಲ ಜಾಡಿ ಪರಂಪರೆಯ ಸಂಬಂಧಗಳಿದ್ದಾಗ್ಯೂ, ಮಣೆಗಾರ ಮಾರುತಿಯ ಮೇಲಾಗಿರಯವ ಹಲ್ಲೆಯನ್ನು ಜುಂಜಪ್ಪ ಮತ್ತು ಚಿತ್ರದೇವನೂ ಒಪ್ಪಲಾರರು. ಎರಡೂ ಸಮುದಾಯಗಳ ಜನಾಂಗೀಯ ನಡೆಗಳು ‘ಒಪ್ಪೋವರ್ಣ’ದಿಂದಿವೆ. ಆಡಿನ ಮೊಲೆ ಎರಡರ ಹಾಗೆ ಎರಡೂ ಸಮಾಜಗಳ ನಡುವೆ ಮಾವ ಬಾವರ ನಂಟಸ್ಥಿಕೆಯ ನಡೆಗಳು ಅಭಯಾರಣ್ಯವೊಂದರಷ್ಟೇ ದಟ್ಟವಾಗಿ ಬೆಸೆದುಕೊಂಡಿವೆ. ಅಪನಂಬಿಕೆಗಳ ತಿಕ್ಕಲುತನಗಳಿಂದ ಹೊರಬಂದು ನೋಡಿಕೊಂಡಾಗ ಸಂಬಂಧಗಳ ಬೇರುಬೊಡ್ಡೆಗಳು ಅರ್ಥವಾಗುವವಲ್ಲವೇ? ‘ತಲೆಕೆಟ್ಟ ಕುರಿಗೆ ನೆಲಬೇವಿನ ಔಸ್ಥಿ, ಕಾನೂನಿಗೆ ಕೆಟ್ಟದ್ದು ಬಗೆದರೆ ಕತ್ತಲು ಕೋಣೆಯೇ ಶಾಸ್ತಿ’. ತಿಳಿಯದಿದ್ದರೆ ಕಷ್ಟ ಐತೆ. ಸಹ ಮಾನವರ ಮೇಲೆ ಹಲ್ಲೆಗೆ ಮುಂದಾಗುವವರ ಆಯ್ಕೆ ಅವರಿಗೆ ಸೇರಿದ್ದು.

ಪಾವು ರಕ್ತ ಪಾಲು ಮಾಡಿಕೊಂಡು ತಾಯೊಟ್ಟೆಯೊಳಗೆ ಹುಟ್ಟಿರುವ ಸಮುದಾಯಗಳಿವು. ಕಾಡುಗೊಲ್ಲರು, ಮಾದಿಗರು, ಸುಡುಗಾಡು ಸಿದ್ದರು, ಹಂದಿಜೋಗೇರು, ಹೊಲೆಯರು, ನಾಯಕರು- ಇವರೆಲ್ಲರೂ ಕರ್ನಾಟಕದಲ್ಲಿ ಸಾಮಾನ್ಯವಾಗಿ ‘ಕಟ್ಟೇಮನೆ ಸಂಸ್ಕೃತಿ’ಯ ಹಿನ್ನಲೆಯುಳ್ಳವರು. ರೇಪಲ್ಲಿ- ಮಾಪಲ್ಲಿಯಿಂದ ಕರೇಬನಹಳ್ಳಿ, ತಾಳುವಟ್ಟಿ, ರಾಮನಹಳ್ಳಿ ಕಟ್ಟೇ ಮನೆಗಳವರೆಗೂ ದೂರದೃಷ್ಟಿಯುಳ್ಳವರಾಗಿ ನೋಡಿದಾಗ ಚಾರಿತ್ರಿಕ ನಡೆಗಳು ಅನುರಣಿಸತೊಡಗುವವು.

ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ಅವರ ಓಟುಗಳನ್ನು ಪಡೆದು ಗೊಲ್ಲರ ಹಟ್ಟಿಗಳ ನಾಯಕರು ಗೆದ್ದಿದ್ದಾರೆ. ಮಣೆಗಾರರ ಪ್ರತಿನಿಧಿಗಳು ಕೈ ಎತ್ತಿದ್ದರಿಂದಲೇ ನಿಮ್ಮ ಅಧಿಕಾರಗಳು ಕಲ್ಪವೃಕ್ಷಗಳಾಗಿವೆ ಹಲವಾರುಕಡೆ. ಕುರಿಗೂಡಿನಲ್ಲಿದ್ದವರಿಗೆ ಪಂಚಾಯ್ತಿ ಒಳಗೊಂದು ಕುರ್ಚಿ ದೊರೆಯಲು ರಾಜ್ಯದ ಸಾವಿರಾರು ಪಂಚಾಯ್ತಿಗಳಲ್ಲಿ ಮಣೆಗಾರರು ಕೈ ಎತ್ತಿರುವುದನ್ನು ಮರೆಯಬಾರದಲ್ಲವೇ. “ಉಪ್ಪುಕೊಟ್ಟವರನ್ನು ಮುಪ್ಪಾಗುವವರೆವಿಗೂ ಮರೆಯಬಾರದು”.

ತಾಲ್ಲೂಕು, ಜಿಲ್ಲೆ, ಗ್ರಾಮಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾಗಲು ಮಣೆಗಾರರು ಅನೇಕ ಕಡೆ ಕೈ ಎತ್ತಿದ್ದಾರೆ ಕಾಡುಗೊಲ್ಲರ ಪರವಾಗಿ. ಉಳಿದವರ ಓಟುಗಳಷ್ಟೇ ನಮಗೆ ಅಧಿಕಾರ ಒದಗಿಸಿ ಕೊಟ್ಟಿಲ್ಲ. ಮಣೆಗಾರರ ಮತಗಳೂ ನಮ್ಮ ರಾಜಕೀಯ ಬದುಕನ್ನು ಗೆಲ್ಲಿಸಿವೆ. ಬಾಗಿಲು ತೆರೆದು ಒಳಗೆ ಕರೆಯಿರಿ ಅವರು ನಮ್ಮ ಬಂಧುಗಳು. ರಾಜಕೀಯ ಫಲಾಪೇಕ್ಷಿತ ಯಾವ ಸಮುದಾಯವೂ ಇದನ್ನು ಮರೆಯಬಾರದು. ಕಾಡುಗೊಲ್ಲರ ಜನಪ್ರತಿನಿಧಿಗಳು ಇಂತಹ ಸಾಮಾಜಿಕ ಅಪದ್ದಗಳ ವಿರುದ್ದ ಎದ್ದು ಮಾತನಾಡವುದನ್ನೂ ಮರೆಯದಿರುವುದು ಎಲ್ಲಾ ಕಾಲದ ತುರ್ತು ಮತ್ತು ದರ್ದು.

LEAVE A REPLY

Please enter your comment!
Please enter your name here