- ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2016 ನಂತರ ಇದೇ ಮೊದಲ ಬಾರಿಗೆ ನೇಮಕಾತಿ
- ಒಟ್ಟು 8 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ
ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎಂಟು ವರುಷಗಳಿಂದ ಅಂದರೆ 2016ರಲ್ಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2016ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13,669 ಖಾಲಿ ಹುದ್ದೆಗಳಿದ್ದವು.
ಈ ಬಗ್ಗೆ 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಮೊದಲನೇ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಕಮ್ ಕಂಡಕ್ಟರ್-2000, ತಾಂತ್ರಿಕ ಸಿಬ್ಬಂದಿ-300, ಎನ್‌ಡಬ್ಲ್ಯೂಕೆಆರ್‌ಟಿಸಿ ಡ್ರೈವರ್ ಕಮ್ ಕಂಡಕ್ಟರ್-2000, ಬಿಎಂಟಿಸಿ ಕಂಡಕ್ಟರ್ 2500 ಹಾಗೂ ಕೆಕೆಆರ್‌ಟಿಸಿಯಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಸಂಬಂಧ ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024ರ ಕೊನೆಯಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ. ಕೆಕೆಆರ್‌ಟಿಸಿಯಲ್ಲಿ 300 ಕಂಡಕ್ಟರ್‌ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರಕಿದೆ.
ಶಕ್ತಿ ಯೋಜನೆಗೆ 5,675 ಹೊಸ ಬಸ್ ಖರೀದಿ
ಶಕ್ತಿ ಯೋಜನೆಗೆ ರಾಜ್ಯಾದ್ಯಂತ ನಿರೀಕ್ಷೆ ಮೀರಿ ಸ್ಪಂದನೆ ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಹೊಸದಾಗಿ 5,675 ಹೊಸ ಬಸ್ ಖರೀದಿಗೆ ಸೂಚನೆ ನೀಡುವ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ.