“ನಮ್ಮ ಕುಟುಂಬ ಮಹಿಳೆಯರ ಜೊತೆ ಗೌರವದಿಂದ ನಡೆದುಕೊಂಡಿದೆ. ನಮ್ಮ ಕುಟುಂಬ ಅಂದ್ರೆ ನಾನು ಮತ್ತು ದೇವೇಗೌಡರು. ನಾವು ಪ್ರತ್ಯೇಕವಾಗಿ ಇದ್ದೇವೆ. ಅವರು (ರೇವಣ್ಣ) ನಾಲ್ಕು ಜನ ಪ್ರತ್ಯೇಕವಾಗಿದ್ದಾರೆ”
– ಇದು ಶಿವಮೊಗ್ಗದಲ್ಲಿ ಇಂದು ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಪ್ರಜ್ವಲ್ ಪ್ರಕರಣದ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ.
ಜೆಡಿಎಸ್ ಸಂಸದ, ಮಾಜಿ ಪ್ರಧಾನಿಯ ಮೊಮ್ಮಗ ಪ್ರಜ್ವಲ್ ರೇವಣ್ಣನವರ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ತಲ್ಲಣ ಉಂಟಾಗಿದೆ.
“ಪೆನ್‌ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ. ರೇವಣ್ಣ ಕುಟುಂಬನೇ ಬೇರೆ, ನನ್ನ ಕುಟುಂಬನೇ ಬೇರೆ” ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ.
HDK: ರೇವಣ್ಣ ಕುಟುಂಬನೇ ಬೇರೆ.. ನನ್ನ ಕುಟುಂಬನೇ ಬೇರೆ.. ಅವ್ರ ಬಗ್ಗೆ ನನಗೇನು ಗೊತ್ತು! #Tv9kannada #PrajwalRevanna #HassanpendriveCase #Shivamogga #ShivamoggaPolitics #ShivamoggaBJPTicket #ByRaghavendra #Yediyurappa #EshwarappaSonKantesh #KSEshwarappa pic.twitter.com/kWntY3LWSu
— TV9 Kannada (@tv9kannada) April 29, 2024
“ಈ ಪ್ರಕರಣದಲ್ಲಿ ಎಚ್. ಡಿ. ದೇವೇಗೌಡರ ಹೆಸರು ಏಕೆ ತರುತ್ತೀರಿ? ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ ಎಂದ ಅವರು, “ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದು ನಿನ್ನೆಯೇ ಹೇಳಿದ್ದೆ” ಎಂದು ಪುನರುಚ್ಚರಿಸಿದರು.
‘ಕಾಂಗ್ರೆಸ್ ಮಹಾನುಭಾವರು ಕಳಂಕವಿಲ್ಲದೇ ಬಂದವರಾ? ಇಲ್ಲಿ ದೇವೇಗೌಡರು, ಕುಮಾರಸ್ವಾಮಿ ಹೆಸರು ಯಾಕೆ ತರುತ್ತೀರಿ. ತಪ್ಪು ಯಾರು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಬೇಕು ಎಂದು ನಾನೇ ಸ್ಪಷ್ಟಪಡಿಸಿದ್ದೇನಲ್ಲ” ಎಂದು ಪತ್ರಕರ್ತರ ನಿರಂತರ ಪ್ರಶ್ನೆಗೆ ಹರಿಹಾಯ್ದರು.
“ನಮ್ಮ ಕುಟುಂಬವೇ ಬೇರೆ. ಎಚ್.ಡಿ.ರೇವಣ್ಣ ಅವರ ಕುಟುಂಬವೇ ಬೇರೆ. ಹಾಸನದಲ್ಲಿ ಅವರು ನಾಲ್ಕು ಜನ ಪ್ರತ್ಯೇಕವಾಗಿ ವಾಸವಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಹೇಳುತ್ತಿದ್ದೇನೆ. ಇಲ್ಲಿ ಕುಟುಂಬದ ಹೆಸರು ತರಬೇಡಿ. ಇದು ವ್ಯಕ್ತಿಯ ಪ್ರಶ್ನೆಯೇ ಹೊರತು ಕುಟುಂಬದ ಪ್ರಶ್ನೆ ಅಲ್ಲ. ವ್ಯಕ್ತಿಯ ಬಗ್ಗೆ ಚರ್ಚೆ ಮಾಡಿಕೊಳ್ಳಿ. ವ್ಯಕ್ತಿಗತವಾಗಿ ಒಬ್ಬೊಬ್ಬರದ್ದು ಒಂದೊಂದು ವರ್ತನೆ ಇರುತ್ತದೆ. ಏನೇ ಮಾಡಿದರೂ ಅದು ವೈಯಕ್ತಿಕ. ಅವರು ಎಲ್ಲೆಲ್ಲಿ ಹೋಗ್ತಾರೆ, ಏನೇನು ಮಾಡ್ತಾರೆ ಅಂತ ನೋಡಿಕೊಂಡೇ ಇರೋದಕ್ಕಾಗುತ್ತಾ?” ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ತೀರ್ಥಹಳ್ಳಿಯಲ್ಲಿ @JanataDal_S @BJP4Karnataka ಮೈತ್ರಿಕೂಟದ ಅಭ್ಯರ್ಥಿ ಶ್ರೀ ಬಿ.ವೈ.ರಾಘವೇಂದ್ರ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಮಾಜಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಶ್ರೀ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್ ಸೇರಿದಂತೆ ಎರಡೂ ಪಕ್ಷಗಳ ಹಲವಾರು ಮುಖಂಡರು,… pic.twitter.com/6kbGgaNpQh
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 29, 2024
“ಪ್ರಜ್ವಲ್ ವಿಚಾರದಲ್ಲಿ ಮಹಿಳೆಯರೊಂದಿಗೆ ತಪ್ಪು ಆಗಿದೆ. ಆಗಬಾರದಿತ್ತು. ಸಮಾಜದಲ್ಲಿ ಇಂತಹದ್ದು ಮತ್ತೆ ನಡೆಯಬಾರದು ಎಂಬುದು ನನ್ನ ಅಭಿಪ್ರಾಯ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ, ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಲಕ್ಷಾಂತರ ಮಹಿಳೆಯರು ಕಷ್ಟ-ಸುಖ ಹೇಳಿಕೊಂಡು ನಮ್ಮ ಬಳಿಗೆ ಬಂದಿದ್ದಾರೆ. ಅವರ ಜೊತೆ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಅವರಿಗೆ ನೆರವು ಕೊಟ್ಟು ಸಂಕಷ್ಟದಿಂದ ಪಾರು ಮಾಡಿದ್ದೇವೆ” ಎಂದು ಮಾಜಿ ಸಿಎಂ ನೆನೆಪಿಸಿಕೊಂಡರು.
“ಯಾರು ತಪ್ಪು ಮಾಡಿದ್ದರೂ ಈ ನೆಲದ ಕಾನೂನಿಗೆ ತಲೆಬಾಗಲೇಬೇಕು. ಶಿಕ್ಷೆ ಅನುಭವಿಸಬೇಕು. ಹೀಗಾಗಿ ಮುಂದಿನ ವಿಷಯಗಳು ನನಗೆ ಸಂಬಂಧವಿಲ್ಲ. ಎಸ್‌ಐಟಿ ತನಿಖೆ ವಿಚಾರದಲ್ಲಿ ಯಾರ ಮೇಲೂ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರನ್ನೂ ವಹಿಸಿಕೊಳ್ಳುವುದಿಲ್ಲ. ಆದರೆ ಪಾರದರ್ಶಕವಾಗಿ ತನಿಖೆ ನಡೆಯಲಿ” ಎಂದು ಇದೇ ವೇಳೆ ತಿಳಿಸಿದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪೆನ್‌ಡ್ರೈವ್ ವಿಚಾರ ಪರಿಣಾಮ ಬೀರುವುದಿಲ್ಲವೇ ಎಂದು ಪತ್ರಕರ್ತರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪಕ್ಷದಿಂದಲೂ ಪ್ರಜ್ವಲ್ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಪೆನ್‌ಡ್ರೈವ್ ವಿಚಾರದಲ್ಲಿ ಎಲ್ಲವೂ ವೈಯಕ್ತಿಕವಾಗಿ ನಡೆದ ಸಂಗತಿಗಳು. ಮೊದಲೇ ನಮ್ಮ ಗಮನಕ್ಕೆ ಬಂದಿದ್ದರೆ ತಪ್ಪಿಸಬಹುದಿತ್ತು. ಮಕ್ಕಳು ಎಲ್ಲಿಗೆ ಹೋಗುತ್ತಾರೆ ಏನು ಮಾಡುತ್ತಾರೆ ಎಂದು ಕಾಯಲು ಆಗುತ್ತದೆಯೇ. ಅದೇ ರೀತಿ ಪ್ರಜ್ವಲ್ ವಿದೇಶಕ್ಕೆ ಹೋಗುವಾಗಲೂ ನನ್ನ ಕೇಳಿ ಹೋಗುತ್ತಾನಾ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
“ಈ ಹಗರಣದಿಂದ ನನಗಷ್ಟೇ ಮುಜುಗರವಾಗೋದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ. ಇದರಲ್ಲಿ ಯಾರನ್ನೂ ವಹಿಸಿಕೊಳ್ಳಲು ಹೋಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ” ಎಂದು ಕುಮಾರಸ್ವಾಮಿ ತಿಳಿಸಿದರು.
“ಎಫ್ ಐ ಆರ್ ಆಗಿದೆ, ಸತ್ಯಾಂಶ ಹೊರಬರಲಿ. ಎಸ್‌ಐಟಿ ತನಿಖೆ ಮಾಡಿ ವರದಿಯನ್ನು ನೀಡಲಿ. ಹಾಸನದಲ್ಲಿ ಪೆನ್‌ಡ್ರೈವ್ ಬಿಟ್ಟವರು ಯಾರು? ಪೆನ್‌ಡ್ರೈವ್ ಹಿಂದೆ ಯಾರಿದ್ದಾರೆ ಗೊತ್ತಾಗಲಿ” ಎಂದು ಅವರು ಹೇಳಿದರು.
